ಕಾವ್ಯ ಸಂಗಾತಿ
ನಿರಂಜನ ಕೇಶವ ನಾಯಕ
“ಇಂಗದ ಬಾಯಾರಿಕೆ”


ಬಿಸಿಲ ಶಲಾಕೆ
ಇಳಿದು ಚುಚ್ಚಿದೆ
ಹೃದಯದಟ್ಟದ ಆಳಕೆ;
ಬತ್ತಿಸಿ ಪ್ರಾಣದ ಒರತೆಯ
ಉಳಿದಿದೆ— ಇಂಗದ ಬಾಯಾರಿಕೆ.
ಅರಿಯದ ನೋವು
ಅಸ್ಥಿ-ಮಾಂಸವ ಕೊರೆಯಲು;
ಬೆವರಿನ ನದಿಯಲಿ
ಹುಡುಕುವ ಹಾದಿಯೇ
ಬಸವಳಿದ ಮನಕೆ ಕಿರು ಆಸರೆ.
ಹೆಜ್ಜೆಗಳು ಭಾರವಾಗಿ,
ಬೆಳಕೇ ಬೆಂಕಿಯ ಮಳೆಯಾಗಿ;
ದಿಗಂತದಲಿ ನಿಂತು
ಜೀವ ಹಿಂಡುವಾಗ—
ಸೋಲೊಪ್ಪದೆ ವಿಧಿಯಿಲ್ಲವೇ?
ನಿರಂಜನ ಕೇಶವ ನಾಯಕ



