ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಸಂತೃಪ್ತಿ”


ಅರವತ್ತೆಪ್ಪತ್ತರ ಅಜ್ಜಿ
ತಲೆಮೇಲೆ ಬಿಳಿ ಹೆರಳು
ಬಾಯಲ್ಲಿ ಹಳದಿ ಹಲ್ಲು
ತುಟಿಯಂಚಿನಿಂದ ಸೋರುವ ಮೆಲ್ಲು
ಈ ಕಿವಿಯಿಂದ ಆ ಕಿವಿಯ ತನಕ ನಗು ನಗುವ ಸೆಲೆ
ಬಂದ ವಿದೇಶಿ ಯಾತ್ರಿಕನಿಗೆ ಕೇಳುವಳು ಮಾರ್ಗದರ್ಶಿಯಾಗಿ
ಹಲೋ ಸರ್ ಹೌ ಡು ಯು ಡು
ಮತ್ತು ವಾಟ್ ಕ್ಯಾನ್ ಐ ಡು!
ನಗುತ ಹೇಳುವಳು ನಮಗೆ
ಇದು ನನ್ನ ದಿನ ನಿತ್ಯದ ಕಾಯ!
ಯಾವ ಗೀತೆಯೂ ಬೇಡ ನನಗೆ
ಯಾವ ಭೂಲೋಕದೈಸಿರಿಯೂ ಬೇಡ
ದಿನ ಪೂರ್ತಿ ಹೃದಯ ತಣಿಯುವ ಈ ದುಡಿಮೆಯೇ ಸಾಕು
ವಿರಾಮದಲ್ಲಿ ನನ್ನ ಐಚ್ಛಿಕದ ತಿನಿಸು ಬೇಕು
ಕಂಡವರೊಡನೆ ಮನ ಬಿಚ್ಚಿ ಮಾತನಾಡ ಬೇಕು.
ರಾತ್ರಿ ಮಲಗುವ ಸಮಯ
ಮೇಲಕ್ಕೆ ಹೋಗಿರುವ ಗಂಡ
ನೆಲಕ್ಕಿಳಿದು ತನ್ನ
ಮನದಾಳ ತಣಿಸುವ ಸಮಯ.
ದೂರದಲ್ಲಿಯ ಮಕ್ಕಳು
ಜೀವಿಸಲಿ ಅವರದ್ದೇ ಜೀವನ
ಅವರವರಿಗೆ
ನನಗ್ಯಾಕೆ ಅವರ ಚಿಂತೆ.
ಬಂದಾಗ ಮೊಮ್ಮಕ್ಕಳು ತಾ
ಪ್ರೀತಿ ಹರಿಬಿಡುವ ಸಮಯ
ಬೆಳದಿಂಗಳು ಚೆಲ್ಲಾಡುವ ಸಮಯ
ಪಾಟಿ ಪಾಟಿ ಎಂದು ಮುದ್ದಾಡುವ ಸಮಯ
ಇಂದು ಇಂದಿಗೆ
ನಾಳೆ ನಾಳೆಗೆ
ಕಲಿಯಲಿಕ್ಕೇನಿಲ್ಲ ಈಕೆಗೆ
ಮುದ್ದುಕ್ಕಿ ಬರುವುದು ಈಕೆಯ
ಜೀವನ ಸಂಗೀತಕ್ಕೆ,
ಜೀವನ ಪ್ರೀತಿಗೆ ,
ಈಕೆಯ ಜೀವನ ಛಾತಿಗೆ.
ಹಾರೈಕೆಯಿಷ್ಟೇ
ಇಂಥ ಆತ್ಮೋನ್ನತಿ ನಮ್ಮೆಲ್ಲರಿಗೂ ಸಿಗಲೆಂದು ,
ಅವಳ ಹೃದಯ ಪೂರ್ವಕ ನಗು
ನಮಗೂ ಬರಲೆಂದು!!
ಕರುಣಿಸಲಿ ಆತ ಸದ್ಗತಿ ಈಕೆಗೆ
ಅವಳದ್ದೇ ದಿನದಂದು
ಅವಳದ್ದೇ ಬಯಕೆಯಂತೆ
ಡಾ ಡೋ ನಾ ವೆಂಕಟೇಶ



