ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

   ಜೀವನ ಎನ್ನುವುದು ಒಂದೇ ರೀತಿಯಾಗಿ ಇರುವುದಿಲ್ಲ ಸುಖದ ಹಿಂದೆ ದುಃಖ; ದುಃಖದ ಹಿಂದೆ ಸುಖ ಎನ್ನುವುದು ಸರ್ವೇ ಸಾಮಾನ್ಯ. ವ್ಯಕ್ತಿ ಈ ಘಳಿಗೆಯಲ್ಲಿ ಸುಖ, ಶಾಂತಿ, ನೆಮ್ಮದಿಗಳಿಂದ ಇದ್ದಾನೆ ಎಂದರೆ ಆ ಸುಖವು ಶಾಶ್ವತವಾಗಿ ಇರಬೇಕೆಂದಿಲ್ಲ. ಆ ವ್ಯಕ್ತಿಯು ಯಾವುದಾದರೂ ಒಂದು ಕಾರಣಕ್ಕೆ ತನ್ನ ಜೀವನದಲ್ಲಿ ಅತೀವ ದುಃಖಕ್ಕೆ ಒಳಗಾಗಿರುತ್ತಾನೆ. ಎಂತಹ ಪ್ರಭಾವಿ ವ್ಯಕ್ತಿಯೂ; ಎಂತಹ ಆಗರ್ಭ ಶ್ರೀಮಂತನಾಗಿದ್ದರೂ ಅವನು ಸಂಪೂರ್ಣವಾಗಿ ಸುಖಿಯಾಗಿರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಆ ವ್ಯಕ್ತಿಗೆ ಜೀವನದಲ್ಲಿ ಯಾವುದಾದರೂ ಒಂದು ದುಃಖ ಖಂಡಿತಾ ಇರುತ್ತದೆ. ಹಾಗೆಯೇ ಜೀವನದಲ್ಲಿ ಕಷ್ಟಗಳನ್ನೇ ಕಂಡ ಹಲವಾರು ವ್ಯಕ್ತಿಗಳು ಒಮ್ಮೆ ಸುಖವನ್ನು ಕಂಡಿರುತ್ತಾನೆ. “ಒಳ್ಳೆಯ ದಿನಗಳು ಬರಬೇಕೆಂದರೆ ಸ್ವಲ್ಪ ಕೆಟ್ಟ ದಿನಗಳ ಜೊತೆ ಕಾಲ ಕಳೆಯಬೇಕು” ಎನ್ನುವ ಜೀವನದ ಸತ್ಯವನ್ನು ಅರ್ಥಮಾಡಿಕೊಂಡು ಕಷ್ಟವನ್ನು ನುಂಗಿ ಸುಖದ ನಿರೀಕ್ಷೆಯೊಂದಿಗೆ ಬದುಕನ್ನು ನಡೆಸುತ್ತಿರುತ್ತಾನೆ.
    ನಾವು ರಾಜಾ ಹರಿಶ್ಚಂದ್ರನು ಸತ್ಯ ಹರಿಶ್ಚಂದ್ರನಾದ ಕಥೆಯನ್ನು ನೋಡಿದರೆ,  ಹರಿಶ್ಚಂದ್ರನು ಸತ್ಯಕ್ಕಾಗಿ ಅಪಾರ ಕಷ್ಟವನ್ನು ಅನುಭವಿಸುತ್ತಾನೆ. ತನ್ನ ರಾಜ್ಯದಲ್ಲಿ ದಕ್ಷ ಆಡಳಿತ ಮಾಡುತ್ತಿದ್ದಲ್ಲದೇ, ಪ್ರಜಾನುರಾಗಿಯಾಗಿ, ಪ್ರಜೆಗಳಿಗಾಗಿ ಅತ್ಯುತ್ಕೃಷ್ಟ  ಕಾರ್ಯಗಳನ್ನು ಮಾಡುತ್ತಾ ಬದುಕಿದ್ದ ಹರಿಶ್ಚಂದ್ರನಿಗೂ ಒಮ್ಮೆ ರಾಜ್ಯ, ಕುಟುಂಬ , ಗೌರವ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ ಒದಗಿಬರಲಿಲ್ಲವೇ? ಆದರೆ ಅವನು ಎಂದಿಗೂ ಧೃತಿಗೆಡದೆ ಬಂದದ್ದನ್ನು ಸ್ವೀಕರಿಸುತ್ತಾ, ಸತ್ಯಮಾರ್ಗವನ್ನು ಬಿಡದೆಯೇ ನಡೆದುಕೊಂಡ ಈ ಕಾರಣಕ್ಕಾಗಿ ಅಂತಿಮವಾಗಿ ಅವನ ಸತ್ಯನಿಷ್ಠೆಗೆ ಫಲವಾಗಿ ಮತ್ತೆ ಸುಖ, ರಾಜ್ಯ ಮತ್ತು ತನ್ನ ಕುಟುಂಬ, ಗೌರವ ಎಲ್ಲವನ್ನೂ ಮರಳಿ ಪಡೆದುಕೊಂಡ. ಕಷ್ಟದ ಸಂದರ್ಭದಲ್ಲಿ ಹರಿಶ್ಚಂದ್ರನೇನಾದರೂ ಸ್ಥೈರ್ಯಗೆಟ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ಇಂದು ಕಲಿಯುಗದಲ್ಲಿ ಸತ್ಯಕ್ಕೆ ಹೆಸರಾಗಿ ಉಳಿದಿರುವ ಹರಿಶ್ಚಂದ್ರ ಹೇಳ ಹೆಸರಿಲ್ಲದಂತೆ ಆಗುತ್ತಿದ್ದ.
 ಹಾಗೆಯೇ ರಾಮಾಯಣದಲ್ಲಿ  ಶ್ರೀರಾಮನ ವನವಾಸದ ಕಥೆ; ಶ್ರೀರಾಮ ಸುಖದಲ್ಲಿ ಇದ್ದಾಗಲೇ ಇನ್ನೇನು ರಾಜ್ಯ ಪಟ್ಟಾಭಿಷೇಕ ಆಗುತ್ತದೆ ಎನ್ನುವ ಕಾಲಕ್ಕೆ ವನವಾಸ ಪ್ರಾಪ್ತವಾಗುತ್ತದೆ. ಅನೇಕ ಸಂಕಷ್ಟಗಳು ಒದಗಿಬರುತ್ತವೆ. ಕೊನೆಯಲ್ಲಿ ಅಯೋಧ್ಯೆಗೆ ಮರಳಿ ರಾಜನಾಗುತ್ತಾನೆ.
  ಮಹಾಭಾರತದ ಪಾಂಡವರ ಕಥೆಯೂ ಹಾಗೆಯೇ. ಪಾಂಡವರು ಅನೇಕ ಕಷ್ಟಗಳು, ವನವಾಸ-ಅಜ್ಞಾತವಾಸ, ಅವಮಾನಗಳನ್ನು ಅನುಭಸಿದ್ದರೂ ನ್ಯಾಯಕ್ಕಾಗಿ ಹೋರಾಡಿ ವಿಜಯ ಪಡೆಯುತ್ತಾರೆ.
  ದುಃಖ ಎನ್ನುವುದು ಶಾಶ್ವತವಲ್ಲ ಧೈರ್ಯದಿಂದ ಇದ್ದರೆ ಸುಖ ಬಂದೇ ಬರುತ್ತದೆ.
ಒಂದು ಹಳ್ಳಿಯಲ್ಲಿ ಒಬ್ಬ ವೃದ್ಧ ರೈತ ವಾಸಿಸುತ್ತಿದ್ದ. ಅವನ ಬಳಿ ಒಂದು ಸುಂದರ ಕುದುರೆ ಇತ್ತು ಆ ಕುದುರೆಯೇ ಅವನ ಜೀವನೋಪಾಯ. ಒಂದು ದಿನ ಆ ಕುದುರೆ ದಾರಿ ತಪ್ಪಿ ಕಾಡಿಗೆ ಹೊರಟುಹೊಯಿತು. ಆ ವೃದ್ಧನಿಗೆ ಅದೃಷ್ಟದಂತಿದ್ದ ಕುದುರೆ ಕಾಣದಾದಾಗ, ಆ ಹಳ್ಳಿಯ ಜನರು ವೃದ್ಧನನ್ನು ಕುರಿತು “ನಿನ್ನ ಅದೃಷ್ಟವೇ ಕೆಟ್ಟು ಹೋಯಿತು , ಆ ದೇವರು ನಿಮಗೆ ಇಷ್ಟು ದುಃಖವನ್ನು ಕೊಡಬಾರದಿತ್ತು” ಎಂದರು. ಆಗ ಆ ವೃದ್ಧನು “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದನು.
 ಕೆಲವು ದಿನಗಳು ಹೀಗೇ ಕಳೆಯಿತು. ಒಂದು ದಿನ ಆ ಕುದುರೆ ಮರಳಿ ಬಂದಿತು. ಅದರೊಂದಿಗೆ ಇನ್ನೂ ಮೂರು ಕಾಡು ಕುದುರೆಗಳೂ ಬಂದವು. ಹಳ್ಳಿಯವರಿಗೆ ಆಶ್ಚರ್ಯವೋ ಆಶ್ಚರ್ಯ. ಹಳ್ಳಿಯವರು ರೈತನನ್ನು ಕುರಿತು “ನಿಮ್ಮ ಅದೃಷ್ಟ ನಿಜಕ್ಕೂ ತುಂಬಾ ಚೆನ್ನಾಗಿದೆ!” ಎಂದರು. ರೈತ ಮತ್ತೆ “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದನು.
 ಒಂದು ದಿನ ಆ ರೈತನ ಮಗ ಆ ಕಾಡು ಕುದುರೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ. ಆದರೆ ಕುದುರೆಯಿಂದ ಬಿದ್ದು ಅವನ ಕಾಲು ಮುರಿದು ಹೋಯಿತು. ಹಳ್ಳಿಯವರು ದುಃಖದಿಂದ “ಅಯ್ಯೋ! ತುಂಬಾ ಕೆಟ್ಟ ದ್ದಾಯಿತು” ಎಂದರು. ಆದರೆ ಆ ರೈತ ಮಾತ್ರ ಆಗಲೂ ಮತ್ತದೇ ಮಾತನ್ನು ಆಡಿದ “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದ. ಕೆಲವು ದಿನಗಳ ಬಳಿಕ ರಾಜ್ಯದಲ್ಲಿ ಯುದ್ಧ ಆರಂಭವಾಯಿತು. ಹಳ್ಳಿಯ ಎಲ್ಲಾ ಯುವಕರನ್ನೂ ಸೈನ್ಯಕ್ಕೆ ಕರೆದುಕೊಂಡು ಹೋದರು. ಆದರೆ ರೈತನ ಮಗನ ಕಾಲು ಮುರಿದುದ್ದರಿಂದ ಅವನನ್ನು ಕರೆದೊಯ್ಯಲಿಲ್ಲ. ಯುದ್ಧಕ್ಕೆ ಹೋದ ಅನೇಕರು ಮರಳಿ ಬರಲಿಲ್ಲ.
  ಆಗ ಹಳ್ಳಿಯವರು ಬಂದು “ ನಿಜವಾಗಿಯೂ ಇದು ಒಳ್ಳೆಯದ್ದೇ ಆಯಿತು” ಎಂದರು.
 ಆಗ ಆ ರೈತ ನಕ್ಕು “ಜೀವನದಲ್ಲಿ ಯಾವುದು ಸುಖ ಯಾವುದು ದುಃಖ ಎಂದು ತಕ್ಷಣ ನಿರ್ಧರಿಸಲಾಗುವುದಿಲ್ಲ” ಎಂದು ಹೇಳಿದ.
  ಯಾವ ಘಟನೆಯು ನಮಗೆ ಒಳ್ಳೆಯದ್ದನ್ನು ಮಾಡುತ್ತದೆ; ಯಾವುದು ಕೆಟ್ಟದ್ದನ್ನು ಮಾಡುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಬಂದದ್ದನ್ನೆಲ್ಲಾ ಸ್ವೀಕರಿಸುತ್ತಾ, ಒಳ್ಳೆಯ ಆಲೋಚನೆಗಳನ್ನು ಮಾಡುತ್ತಾ ನಮ್ಮ ಕರ್ತವ್ಯವನ್ನು ಮಾಡುತ್ತಾ ಸಾಗಬೇಕು.
ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದ ೧೪ನೇ ಶ್ಲೋಕದಲ್ಲಿ ಹೇಳುವಂತೆ,
ಮಾತ್ರಾ ಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ ।
ಆಗಮಾಪಾಯಿನೋऽನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ|

ಭಗವಂತನು ಅರ್ಜುನನಿಗೆ ಹೇಳುತ್ತಾನೆ “ಇಂದ್ರಿಯಗಳ ಮೂಲಕ ಹೊರ ಪ್ರಪಂಚದಿಂದ ಉಂಟಾಗುವ ಶೀತ ಮತ್ತು ಉಷ್ಣ, ನಲಿವು ಮತ್ತು ನೊವುಗಳನ್ನು ಆದಿ ಮತ್ತು ಅಂತ್ಯವನ್ನು ಹೊಂದಿವೆ. ಅವುಗಳು ಅನಿತ್ಯ; ಅವುಗಳನ್ನು ಸಹಿಸು ಎನ್ನುತ್ತಾನೆ. ಅದರಂತೆಯೇ ಅದೇ ಅಧ್ಯಾಯದ ೩೮ ನೇ ಶ್ಲೋಕದಲ್ಲಿ ಹೇಳುವಂತೆ

ಸುಖದುಃಖೇ ಸಮೇಕೃತ್ವಾ
ಲಾಭಾಲಾಭೌ ಜಯಾಜಯೌ|
ತತೋ ಯುದ್ಧಾಯ ಯುಜ್ಯಸ್ವ
ನೈವಂ ಪಾಪಮವಾಪ್ಸ್ಯಸಿ||

ಅಂದರೆ ಸುಖ-ದುಃಖ, ಲಾಭ-ನಷ್ಟ ಮತ್ತು ಗೆಲುವು- ಸೋಲುಗಳನ್ನು ಸಮವಾಗಿ ಭಾವಿಸಿಕೊಂಡು ಯುದ್ಧಕ್ಕೆ ಅನುವಾಗು ಆಗ ನೀನು ಪಾಪವನ್ನು ಗಳಿಸುವುದಿಲ್ಲ.
  ಭಗವಂತನ ಈ ಮಾತುಗಳೆಲ್ಲವು ಕೂಡ ಸುಖ- ದುಃಖಗಳ ಬಗೆಗೆ ಚಿಂತಿಸದೇ ನಾವು ನಮ್ಮ ಕಾರ್ಯವನ್ನು ಮಾಡಬೇಕು ಎಂದು ತಿಳಿಸುತ್ತವೆ.

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|
ಗುರುತಿಸೊಳಿತಿರುವುದನು ಕೇಡುಗಳ ನಡುವೆ||
ಇರುವ ಭಾಗ್ಯವ ನೆನೆದು ಬಾರದೆಂಬುದನು ಬಿಡು|
ಹರುಷಕಿದೆ ದಾರಿಯೆಲೊ-ಮಂಕುತಿಮ್ಮ||

ಡಿ ವಿ ಜಿ ಯವರ ಮಕುತಿಮ್ಮನ ಕಗ್ಗದ ಸಾಲುಗಳಿವು ಜೀವನದಲ್ಲಿ ನಮಗೆ ದೊರೆತಿರುವ ಪುಣ್ಯವನ್ನು ಹಾಗೂ ಅದರ ಒಳ್ಳೆಯ ಫಲವನ್ನು ಅನುಭವಿಸದೇ ಬಾರದಿರುವುದರ ಬಗ್ಗೆ ನಾವು ಚಿಂತಿಸುತ್ತೇವೆ. ಆ ಬಾರದಿರುವುದು ಸುಖವೂ ಆಗಿರಬಹುದು ಅಥವಾ ಹಲವಾರು ಕಾರಣಗಳಿಂದ ಮುಂದೆ ಬರಬಹುದಾದ ದುಃಖವೂ ಆಗಿರಬಹುದು. ನಾವು ಮುಂದಿನ ದುಃಖದ ಬಗೆಗೆ ಹೆಚ್ಚು ಆಲೋಚಿಸಿದರೆ ಇಂದು ನಮ್ಮ ಪಾಲಿಗೆ ಒದಗಿರುವ ಸುಖವನ್ನು ಅನುಭವಿಸದೇ ಅದನ್ನೂ ಕೂಡ ದುಃಖವನ್ನಾಗಿಸಿಕೊಂಡು ನಮ್ಮ ಕೈಯ್ಯಲ್ಲಿಯೇ ನಮ್ಮ ಜೀವನದ ರಸ ನಿಮಿಷವನ್ನು ಹಾಳುಮಾಡಿಕೊಳ್ಳುತ್ತೇವೆ. ಅದನ್ನು ಹೊರತುಪಡಿಸಿ ನಾವು ಪ್ರತಿಕ್ಷಣವನ್ನು ಜೀವಿಸಬೇಕು. ತೃಪ್ತಿಕರವಾಗಿ ಅನುಭವಿಸಬೇಕು. ಬರದಿರುವುದರ ಬಗ್ಗೆ ಆಲೋಚಿಸಿ, ಈಗಿರುವ ಒಳ್ಳೆಯದ್ದನ್ನು ಮರೆಯಬಾರದು. ಕಷ್ಟಗಳ ನಡುವೆಯೂ ಕಿಂಚಿತ್ತಾದರೂ ಸುಖ ಎನ್ನುವುದು ಇರುತ್ತದೆ. ಆ ಸಂತೋಷವನ್ನು ನಾವು ಹುಡುಕಿ ತೆಗೆದು ಬದುಕಬೇಕು. ಇರುವ ಭಾಗ್ಯವ ನೆನೆದು ಬದುಕಿದರೆ ಮನಸ್ಸಿಗೆ ಹರುಷವು ಸಿಗುತ್ತದೆ. ಎನ್ನುವ ಹಿರಿಯರ ಅನುಭವಜನ್ಯವಾದ ಮಾತು ಎಲ್ಲರಿಗೂ ಬದುಕುವ ಭರವಸೆಯನ್ನು ನೀಡುತ್ತದೆ.
 ನಾವು ಯಾವುದೇ ಯಶಸ್ವೀ ವ್ಯಕ್ತಿಗಳ ಜೀವನವನ್ನು ತೆಗೆದುಕೊಂಡರೂ ಆ ಯಶಸ್ಸಿನ ಹಿಂದೆ ಅವರ ದೊಡ್ಡ ಶ್ರಮ, ಸಂಕಷ್ಟಗಳು ಇರುತ್ತವೆ. ಬೆಂದು ಬೇಂದ್ರೆಯದ ದ.ರಾ.ಬೇಂದ್ರೆಯವರು, ಡಿವಿಜಿಯವರು, ಡಾ||ರಾಜ್ ಕುಮಾರ್, ಅಬ್ದುಲ್ ಕಲಾಂ, ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿಗಳು, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು, ನಮ್ಮ ರಾಷ್ಟ್ರದ ಪ್ರಥಮ ಪ್ರಜೆಯಾಗಿರುವ ದ್ರೌಪದಿ ಮುರ್ಮು ಅವರು,  ಇನ್ನೂ ಅನೇಕ ವ್ಯಕ್ತಿಗಳು. ಇವು ಬೆರಳೆಣಿಕೆಯಷ್ಟೇ ಹೆಸರುಗಳು ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ಕಾಣಬಹುದು. ಇವರೆಲ್ಲಾ ಇಂದು ಇಷ್ಟು ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರೆ ಅವರ ಜೀವನದ ಹಾದಿಯೇನೂ ಹೂವಿನ ಹಾಸಿಗೆಯಾಗಿ ಇರಲಿಲ್ಲ. ಅವರುಗಳು ಅನುಭವಿಸಿದ ಸಂಕಷ್ಟಗಳೇನೂ ಕಡಿಮೆಯಲ್ಲ. ಆದರೆ ಅವರ್ಯಾರೂ ಕಷ್ಟಗಳಿಗೆ ಕುಗ್ಗಲಿಲ್ಲ. ಅವುಗಳನ್ನು ಹಿಮ್ಮೆಟ್ಟಿಸಿ ಬೆಳೆದವರು. ಸಂಕಲ್ಪತೊಟ್ಟು ಗುರಿಸಾಧಿಸಿದವರು.
  ಸೂರ್ಯೋದಯದ  ಮೊದಲು ಕತ್ತಲೆ ಗಾಢವಾಗಿ ಇರುತ್ತದೆ; ಹಾಗೆಯೇ ಸುಖದ ಮೊದಲು ದುಃಖವೂ ಇರುತ್ತದೆ. ಕತ್ತಲಾಯಿತೆಂದು ನಾವು ತಲೆಯ ಮೇಲೆ ಕೈಹೊತ್ತು ಕುಳಿತರೆ ಚಂದ್ರನ ಬೆಳದಿಂಗಳಿನ ಸುಖವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಬದಲಾವಣೆ ಎನ್ನುವುದು ಜಗದ ನಿಯಮ.
 ಬದುಕಲ್ಲಿ ಲಾಭವನ್ನೇ ಕಂಡವನು ನಷ್ಟಕ್ಕೆ ಹೆದರಿ ಜೀವ ಕಳೆದುಕೊಳ್ಳಬಾರದು. ಇಂದು ಅದೆಷ್ಟೋ ವ್ಯಕ್ತಿಗಳು, ಮಹಿಳೆಯರು, ವಿದ್ಯಾರ್ಥಿಗಳು, ಕುಟುಂಬಗಳು ಜೀವನದಲ್ಲಿ ಬಂದ ತಾತ್ಕಾಲಿಕವಾದ ಕಷ್ಟಗಳಿಗೆ ಹೆದರಿ ಜೀವವನ್ನು ಕಳೆದುಕೊಂಡ ಅನೇಕ ಸುದ್ದಿಗಳು ಪ್ರತಿದಿನವೂ ಕೂಡ ಸುದ್ದಿವಾಹಿನಿಗಳಲ್ಲಿ, ವಾರ್ತಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. ಒಮ್ಮೆ ಕಳೆದುಹೋದ ಜೀವನವನ್ನು ಮತ್ತೆ ನಾವು ಪಡೆಯಲು ಸಾಧ್ಯವಿಲ್ಲ. ಈ ಜೀವವು ನಾವು ಬೇಡಿ ಬಂದದ್ದಲ್ಲ. ಅದು ಪರಮಾತ್ಮನ ಕರುಣೆಯಿಂದ ಸೃಷ್ಟಿಯಾದದ್ದು. ಹೀಗಿರುವಾಗ ಈ ಜೀವದ ಅಂತ್ಯವೂ ಅವನ ಕೈಯಿಂದಲೇ ಆಗಬೇಕು. ಅಲ್ಲಿಯವರೆಗೂ ಬದುಕನ್ನು ಎದುರಿಸಿ ಮುನ್ನಡೆಯಲೇಬೇಕು. ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ ಎನ್ನುವ ವಾಕ್ಯವನ್ನು ನಾವು ಸದಾ ನೆನಪಿನಲ್ಲಿ ಇಡಬೇಕು.


ಶೋಭಾ ಬಿ
ಕಾವ್ಯನಾಮ: ಶೋಭಾ ನಾಗಭೂಷಣ
ಶಿಕಕ್ಷಿ , ಕವಯತ್ರಿ ಹಾಗೂ ನಿರೂಪಕಿ
ಪ್ರಧಾನ ಕಾರ್ಯದರ್ಶಿ
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ನೋಂ)

About The Author

1 thought on ““ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ” ಶೋಭಾ ನಾಗಭೂಷಣ”

  1. ಅರ್ಥಪೂರ್ಣವಾದ, ಪ್ರಸ್ತುತ ದಿನಕ್ಕೆ ಅಗತ್ಯವಾದ ಲೇಖನ

    ಚೆನ್ನಾಗಿದೆ

    ಅಭಿನಂದನೆಗಳು ಮೇಡಂ

Leave a Reply

You cannot copy content of this page

Scroll to Top