ಪ್ರೀತಿ ಸಂಗಾತಿ
ವನಜಾ ಮಹಾಲಿಂಗಯ್ಯ
“ಪ್ರೀತಿ ವಿವಾಹದ ನೆರಳು”


ಪ್ರೀತಿ ಅಂದ್ರೆ ಕನಸು. ಮದುವೆ ಅಂದ್ರೆ ವಾಸ್ತವ. ಕನಸು ಕಾಣೋದು ತುಂಬಾ ಸುಂದರ. ಆದ್ರೆ ಆ ಕನಸನ್ನೇ ಮನೆ ಮಾಡ್ಕೊಂಡು ವಾಸ್ತವದ ನೆಲದ ಮೇಲೆ ಕಾಲೂರದೆ ಬದುಕೋಕೆ ಹೊರಟಾಗ, ಬದುಕು ಕಚ್ಚೋಕೆ ಶುರು ಮಾಡುತ್ತೆ. ಅದೇ ಪ್ರೀತಿ ವಿವಾಹದ ನೋವು.
ಪ್ರೀತಿ ಮಾಡುವ ದಿನಗಳಲ್ಲಿ ಜಗತ್ತೇ ಬೇರೆ. ಫೋನ್ ಕರೆ, ಮೆಸೇಜ್, ಸಣ್ಣ ನಗು, ಸಣ್ಣ ಕೋಪ, ಎಲ್ಲವೂ ಸಿಹಿ. ಆಗ ನಾವು ಇಬ್ಬರೇ ಜಗತ್ತು. ಬೇರೆ ಯಾರೂ ಬೇಕಿಲ್ಲ ಅನಿಸುತ್ತೆ. ಕುಟುಂಬ, ಸಮಾಜ, ಜಾತಿ, ಹಣ, ಭವಿಷ್ಯ – ಯಾವುದೂ ಕಣ್ಣಿಗೆ ಕಾಣಲ್ಲ. ಕಾಣೋದು ಕೇವಲ ಅವನು ಅಥವಾ ಅವಳು. ಆ ಭಾವನೆಯ ಜೋಶಲ್ಲಿ ಕೈ ಹಿಡಿದು ಮದುವೆ ಮಂಟಪದ ಕಡೆ ನಡೆಯುತ್ತೇವೆ.
ಆದ್ರೆ ಮಂಟಪದಿಂದ ಹೊರಗೆ ಬಂದ ಕೂಡಲೇ ಹೊಸ ಜಗತ್ತು ಶುರುವಾಗುತ್ತೆ. ಇಲ್ಲಿಯವರೆಗೆ ಇಬ್ಬರ ಜಗತ್ತಾಗಿದ್ದ ಬದುಕು, ಈಗ ಮನೆ, ಕುಟುಂಬ, ಜವಾಬ್ದಾರಿ, ಬಿಲ್, ಕೆಲಸದ ಒತ್ತಡಗಳಿಂದ ತುಂಬಿರುತ್ತೆ. ಪ್ರೀತಿ ಮಾತಾಡುವಾಗ ಟೈಮೇ ಸಿಗದಷ್ಟು ಕೆಲಸ ಇರುತ್ತೆ. ಮೊನ್ನೆ ಮೊನ್ನೆ “ನೀನೇ ನನ್ನ ಉಸಿರು” ಅಂದವನು, ಇವತ್ತು “Office ಕೆಲಸ ಇದೆ, ಮಾತಾಡೋಕೆ ಆಗಲ್ಲ” ಅಂತಾನೆ. ನಿನ್ನೆ “ನಿನ್ನ ನಗು ಸಾಕು” ಅಂದವಳು, ಇವತ್ತು “ಮನೆ ಬಾಡಿಗೆ ಕಟ್ಟಿದ್ದೀಯಾ?” ಅಂತ ಕೇಳ್ತಾಳೆ. ಆಗ ಮನಸ್ಸು ಮೊದಲೇ ಹೀಗಿರಲಿಲ್ಲವಲ್ಲ ಅಂತ ಕೊರಗುತ್ತೆ. ಪ್ರೀತಿ ಕಡಿಮೆ ಆಗಿಲ್ಲ, ಜವಾಬ್ದಾರಿ ಜಾಸ್ತಿ ಆಗಿದೆ ಅನ್ನೋದನ್ನ ಅರ್ಥ ಮಾಡ್ಕೊಳ್ಳೋ ತಾಳ್ಮೆ ನಮ್ಮಲ್ಲಿ ಇರಲ್ಲ.
ಪ್ರೀತಿ ವಿವಾಹದ ದೊಡ್ಡ ನೆರಳು ಕುಟುಂಬ. ಅಜ್ಜ-ಅಜ್ಜಿ ನೋಡಿ ಮಾಡೋ ಮದುವೆಯಲ್ಲಿ ಎರಡು ಮನೆ ಒಂದಾಗುತ್ತೆ. ಪ್ರೀತಿ ವಿವಾಹದಲ್ಲಿ ಕೆಲವೊಮ್ಮೆ ಎರಡು ಮನೆ ಎದುರಿಗೆ ನಿಲ್ಲುತ್ತೆ. “ನಮ್ಮ ಮನೆತನಕ್ಕೆ ತಕ್ಕವಳಲ್ಲ”, “ನಮ್ಮ ಹುಡುಗನಿಗೆ ಯೋಗ್ಯನಲ್ಲ” ಅನ್ನೋ ಮಾತುಗಳು ಚೂರಿ ತರ ಇರುತ್ತೆ. ತಾಯಿ-ತಂದೆಯ ಆಶೀರ್ವಾದ ಇಲ್ಲದ ಮದುವೆ, ಎಷ್ಟು ಸಂತೋಷವಾಗಿದ್ದರೂ ಮನಸ್ಸಿನ ಒಂದು ಮೂಲೆಯಲ್ಲಿ ಸದಾ ಕೊರೆಯುತ್ತಿರುತ್ತೆ. ಹಬ್ಬ, ಹರಿದಿನ, ಮನೆ ಕಾರ್ಯ – ಎಲ್ಲಾ ಕಡೆ “ಅವರ ಮನೆಯವರು ಬರಲಿಲ್ಲ” ಅನ್ನೋ ಕೊರತೆ ಕಾಡುತ್ತೆ. ಆ ನೋವನ್ನ ಹುಡುಗ-ಹುಡುಗಿ ಒಬ್ಬರ ಮೇಲೆ ಒಬ್ಬರು ತೀರಿಸ್ಕೊಳ್ಳೋದು ಶುರು.
ಮತ್ತೊಂದು ವಿಷಯ ಹಣ. ಪ್ರೀತಿ ಮಾಡುವಾಗ “ನೀನು ಇದ್ರೆ ಸಾಕು, ಕಾಡಲ್ಲಿ ಆದ್ರೂ ಇರ್ತೀನಿ” ಅಂತೀವಿ. ಆದ್ರೆ ಮದುವೆ ಆದ ಮೇಲೆ ಕಾಡು ಬೇಡ, ಒಂದು ಚಿಕ್ಕ ಮನೆ ಬಾಡಿಗೆ ಕಟ್ಟೋಕೂ ಆಗಲ್ಲ. ಸಾಲ, EMI, ಮೆಡಿಕಲ್ ಖರ್ಚು, ಮಕ್ಕಳ ಶಾಲೆ – ಲೆಕ್ಕಗಳು ಬರೋಕೆ ಶುರುವಾಗುತ್ತವೆ. ದಾರಿದ್ರ್ಯ ಬಾಗಿಲು ತಟ್ಟಿದಾಗ ಪ್ರೀತಿ ಕಿಟಕಿಯಿಂದ ಜಾರಿ ಹೋಗುತ್ತೆ ಅಂತ ಹಿರಿಯರು ಸುಮ್ನೆ ಹೇಳಿಲ್ಲ. ಹಣಕಾಸಿನ ಜಗಳ, ಪ್ರೀತಿಯ ಬುನಾದಿಯನ್ನೇ ಅಲುಗಾಡಿಸಿಬಿಡುತ್ತೆ.
ಇದಕ್ಕೆಲ್ಲಾ ಕಾರಣ ನಾವು ಪ್ರೀತಿನೇ ದೇವರು ಅಂತ ಪೂಜೆ ಮಾಡೋದು. ಪ್ರೀತಿ ದೇವರು ಅಲ್ಲ , ಪ್ರೀತಿ ಒಂದು ಭಾವನೆ. ಮದುವೆ ಅಂದ್ರೆ ಆ ಭಾವನೆಯ ಜೊತೆಗೆ ಹೊಂದಾಣಿಕೆ, ತ್ಯಾಗ, ಕ್ಷಮೆ, ಸಂಭಾಷಣೆ ಇವೆಲ್ಲಾ ಬೆರೆಸಿ ಮಾಡೋ ಅಡುಗೆ. ಉಪ್ಪು ಕಡಿಮೆ ಆದ್ರೆ ಊಟ ರುಚಿ ಇರಲ್ಲ. ಹೊಂದಾಣಿಕೆ ಕಡಿಮೆ ಆದ್ರೆ ಸಂಸಾರ ರುಚಿ ಇರಲ್ಲ.
ಪ್ರೀತಿ ವಿವಾಹದವರು ಒಂದು ತಪ್ಪು ಮಾಡ್ತಾರೆ. “ನಾನೇ ಆಯ್ಕೆ ಮಾಡಿಕೊಂಡಿದ್ದು, ನನಗೆ ಗೊತ್ತು” ಅನ್ನೋ ಗರ್ವ. ಹಾಗಾಗಿ ಸಣ್ಣ ಜಗಳ ಆದ ಕೂಡಲೇ “ಬೇಡ ಬಿಡು” ಅಂತ ಮಾತು ಬರುತ್ತೆ. ಹೊಂದಾಣಿಕೆ ಮಾಡಿಕೊಳ್ಳೋ ಬದಲು ಬೇರ್ಪಡೋದು ಸುಲಭ ಅನಿಸುತ್ತೆ. Arranged Marriage ನಲ್ಲಿ “ಮಾಡಿದ್ದೇ ಆಯ್ತು, ನಿಭಾಯಿಸೋಣ” ಅನ್ನೋ ಭಾವ ಇರುತ್ತೆ. ಇಲ್ಲಿ ಆ ಭಾವ ಇರಲ್ಲ.
ಪ್ರೀತಿ ವಿವಾಹ ತಪ್ಪು ಅಲ್ಲ. ಆದ್ರೆ ಅದು ಮಕ್ಕಳಾಟ ಅಲ್ಲ. ಕಣ್ಣು ಮುಚ್ಚಿ ಆಡೋ ಜೂಜು ಅಲ್ಲ. ಕಣ್ಣು ತೆರೆದು, ಕುಟುಂಬವನ್ನ ಒಪ್ಪಿಸಿ, ಆರ್ಥಿಕವಾಗಿ ಸದೃಢರಾಗಿ, “ನಾನು ಬದಲಾಗ್ತೀನಿ, ನೀನೂ ಬದಲಾಗು” ಅಂತ ಪ್ರಾಮಿಸ್ ಮಾಡ್ಕೊಂಡು ಮಾಡೋ ಒಪ್ಪಂದ. ಇಲ್ಲ ಅಂದ್ರೆ ಆ ಪ್ರೀತಿ ಮದುವೆ ಮಂಟಪದವರೆಗೆ ಮಾತ್ರ. ಆಚೆ ಬದುಕಿನ ಬಿಸಿಲಿಗೆ ಬಾಡಿ ಹೋಗುತ್ತೆ.
ಪ್ರೀತಿ ಮಾಡಿ. ಮನಸಾರೆ ಮಾಡಿ. ಆದ್ರೆ ಮದುವೆ ಅಂದ್ರೆ ಕೇವಲ ಪ್ರೀತಿ ಅಲ್ಲ, ಅದು ಬದುಕು ಅನ್ನೋದನ್ನ ಮರೆಯಬೇಡಿ. ಬದುಕನ್ನ ನಿಭಾಯಿಸೋ ಶಕ್ತಿ ಇದ್ರೆ ಮಾತ್ರ ಪ್ರೀತಿಮಾಡಿ ಮದುವೆ ಮಾಡಿಕೊಳ್ಳಿ. ಇಲ್ಲದೆ ಹೋದರೆ ಹಿರಿಯರಿಗೆ ಬಿಡಿ ಅವರು ನಿಮಗೆ ಅನ್ಯಾಯ ಮಾಡಲ್ಲ.
ವನಜಾ ಮಹಾಲಿಂಗಯ್ಯ



