ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ ನನಗೆ
ಜಗತ್ತನ್ನೇ ಮರೆಯುವ ಆಸೆ ಎನಗೆ
ಮೂಲೆ ಮೂಲೆಯಲ್ಲಿ ಪುಸ್ತಕಗಳ ರಾಶಿ
ಅದರ ನಡುವೆ ನನ್ನದೇ ಒಂದು ಪ್ರಪಂಚ ಸೃಷ್ಟಿ.

ಬೆರಳುಗಳು ಸೋಕಿದ ಪುಟಗಳ ಗಂಧ
ಅದೆಷ್ಟೋ ಲೇಖಕರ ಉಸಿರಿನ ಸ್ಪಂದ
ಕೆಲವು ಪುಟಗಳಲ್ಲಿ ಪ್ರೀತಿಯ ಕಥೆ
ಕೆಲವುಗಳಲ್ಲಿ ಅದೆಷ್ಟೋ ಯುದ್ಧದ ವ್ಯಥೆ.

ಕಿಟಕಿಯಿಂದ ಬೀಳುವ ಸಂಜೆಯ ಬೆಳಕು
ಧೂಳಿನ ಕಣಗಳಲ್ಲಿ ತೇಲುವ ಸಾಲು ಸಾಲು
ಸದ್ದು ಮಾಡದ ಮೌನದ ಮಾತುಗಳು
ಪುಸ್ತಕಗಳು ಆಡುವ ನಿಶ್ಯಬ್ದದ ಸವಿಗನಸುಗಳು.

ಯಾರೂ ಹುಡುಕದ ಹಾಗೆ ಕಳೆದು ಹೋಗಬೇಕು
ನನಗೆ ನಾನೇ ಮತ್ತೆ ಸಿಗುವವರೆಗೆ ಹುಡುಕದಿರಿ ನನ್ನನು
ಒಂದು ಕವನದಿಂದ ಇನ್ನೊಂದು ಕವನಕ್ಕೆ
ಒಂದು ಜೀವನದಿಂದ ಇನ್ನೊಂದು ಜೀವನಕ್ಕೆ.

ಸಮಯ ಇಲ್ಲದ ಜಾಗ ಅದು
ಮುಚ್ಚಿದರೂ ತೆರೆದಿರುವ ಬಾಗಿಲದು
ಹೊರಗಿನ ಜಗತ್ತು ಕಾಯಲಿ ಸ್ವಲ್ಪ ಹೊತ್ತು
ನಾನು ಇಲ್ಲೇ ಇರ್ತೀನಿ ಈ ಅಕ್ಷರಗಳೆ ನನ್ನ ಸ್ವತ್ತು.

ನಾವಾಗಿಯೇ ಕಳೆದು ಹೋಗಬೇಕಿದೆ
ಮನಸ್ಸಿನಿಂದ ಮನೆಯೊಂದ ಮಾಡಬೇಕಿದೆ
ನೀವು ಎಷ್ಟೊತ್ತಾದ್ರೂ ಇರಬಹುದು ಇಲ್ಲಿ
ಪ್ರತಿ ಪುಸ್ತಕದಲ್ಲೂ ನಿಮ್ಮನ್ನು ನೀವು ಕಾಣಬಹುದು ಇಲ್ಲಿ.

ನನಗೆ ಅತಿ ಇಷ್ಟದ ತಾನವಿದು
ಮನೆಯೊಳಗೊಂದು ಗ್ರಂಥಾಲಯ ಮಾಡುವುದು
ನನ್ನ ಬದುಕಿನ ಮಹದಾಸೆಯದು
ಮನ ನಿತ್ಯವೂ ಕಳೆದು ಹೋಗೆಂದಿಹುದು..


About The Author

1 thought on ““ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ”

Leave a Reply

You cannot copy content of this page

Scroll to Top