ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಮೌನದ
ಮನಸು,
ಕಣ್ಣೊಳ ಅರಳಿದ
ಕನಸು;
ನೆನಪಾಗಿ ಉಳಿದ
ಸವಿಗನಸು,
ಎಂದಾಗುವುದೋ
ನನಸು!

ಮಾತೆತ್ತಿದರೆ ಮುಳ್ಳು,
ಮೌನವಾದರೆ ಬೇಲಿ;
ಒಂದೇ ಮನೆಯೊಳಗಿದ್ದರೂ,
ಮನಸು ದೂರದ ಹಳ್ಳಿ!

ಹುಬ್ಬಿನಲಿ ಭರತನಾಟ್ಯ,
ಬೆರಳುಗಳಲಿ ತಾಳ;
ಮುನಿಸಿನ ರಂಗದಲಿ,
ನಾನೊಬ್ಬ ಮೂಕ ಪ್ರೇಕ್ಷಕ!

‘ನಾನೇ ಸರಿ’
ಎನ್ನುವ ನಿನ್ನ ಹಠ;
‘ನನ್ನನ್ನೂ ಕೇಳು’
ಎನ್ನುವ ನನ್ನ ಮೊರೆ!

ಹಾಲು ಉಕ್ಕಿತು
ಒಲೆಯ ಮೇಲೆ;
ಹೇಳದ ಮಾತು
ಒಳಗೆ ಹೆಪ್ಪುಗಟ್ಟಿತು!

ಬಾಳಿನ ನೊಗ,
ಬಳಲಿದ ಹೆಗಲು;
ನಿನ್ನ ದಣಿವನ್ನು
ನಾನೂ ಕಾಣಲಿಲ್ಲ!

ಅಂಗಳದ ಮಲ್ಲಿಗೆ
ಮುಡಿಗೇರದೆ ಬಾಡಿತು;
ಬಾಗಿಲ ದೀಪ
ನೆರಳಿಗೆ ಕಾದಿತು!

ನೀಳಜಡೆಯ ಹೆಣಿಗೆ,
ನೆನಪುಗಳ ಗಂಟು;
ಎಳೆಯೆಳೆಯ ನಡುವೆ
ಮಲಗಿವೆ ಕನಸು!

ಜಡೆಯ ಗಂಟನ್ನು
ಬಿಚ್ಚುವೆ ನೀನು;
ಮನದ ಗಂಟನ್ನು
ಬಿಡಿಸುವವರಾರು?

ಹಠದ ಜಾತ್ರೆ
ಹಗಲಿಡೀ ನಡೆಯಿತು;
ರಾತ್ರಿಯ ಮೌನ
ನಿಟ್ಟುಸಿರು ನುಂಗಿತು!

ನೀನು ಗೆದ್ದೆ,
ನಾನು ಸೋತೆ;
ನಮ್ಮಿಬ್ಬರ ನಡುವೆ
ಒಲವೇ ಸೋತಿತು!

ನಿನ್ನ ನೋವನ್ನು
ಓದದೆ ಹೋದೆ;
ನನ್ನ ಪ್ರೀತಿಯನ್ನು
ಹೇಳದೆ ಉಳಿದೆ!

ಮುನಿಸಿನ ಮುಳ್ಳನ್ನು
ಮೆಲ್ಲಗೆ ಕೀಳೋಣ;
ಮಮತೆಯ ಮಣ್ಣಲ್ಲಿ
ಮಲ್ಲಿಗೆ ನೆಡೋಣ!

ಬೆನ್ನು ನೋಡಿದ್ದೇ
ಜಾಸ್ತಿ ನನಗೆ;
ಬೆನ್ನಿನ ಬಾಗಿನೊಳಗೆ
ಬದುಕನ್ನೇ ಕಂಡೆ!
ಡಾ. ಹೆಚ್. ನಟರಾಜ್ ಆರ್ಯ

About The Author

Leave a Reply

You cannot copy content of this page

Scroll to Top