ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಗಜಲ್
(ಅರುಣಾ ಮೇಡಂ ಅವರ ಗಜಲ್ ನಿಂದ ಪ್ರೇರಿತ )
ಅಂತರವಿದ್ದರೂ ಅಂತರಂಗ ಸೇರುವ ನಿನ್ನ ಕಲೆಗೆ ಏನೆನ್ನಲಿ
ಇರುಳಾದರೆ ಕಣ್ಣ ಸೇರಿ ಕನಸಾಗುವ ಪರಿಗೆ ಏನೆನ್ನಲಿ
ನಾ ನೋಡಿದರೇ, ನಾನೇ ಕಾಣಿಸಬೇಕಲ್ಲವೇ ಸಾಕಿ
ದರ್ಪಣದಿ ನೀ, ನನ್ನ ಪ್ರತಿಬಿಂಬವಾಗುವ ಪ್ರೀತಿಗೆ ಏನೆನ್ನಲಿ
ಮೌನವೂ,ಪದಗಳಾಗಿ ಮನ ಸೇರಲು ಹಪಹಪಿಸುವವೇ
ನನ್ನ ಏಕಾಂತಕೆ,ನೀ ದನಿಯಾಗುವ ನಡೆಗೆ ಏನೆನ್ನಲಿ
ಪ್ರತಿ ನೋವಿಗೂ ಹಕೀಮನಲ್ಲಿ ಔಷಧಿಯಿರುವುದಿಲ್ಲ ನಿಜ
ನೀ ಕಾಣದ ಗಾಯಗಳನೂ ಮಾಯಿಸುವ ಮೋಡಿಗೆ ಏನೆನ್ನಲಿ
ಬಿಸಿಲಿಗೆ ವಾಣಿ ನಿಂತರೇ,ನೀ ಬೆವರುವೆಯಾ ಗೆಳೆಯ
ದೂರವಿದ್ದು ಹೀಗೆ ಸನಿಹವಾಗುವ ಸನ್ನೆಗೆ ಏನೆನ್ನಲಿ
ವಾಣಿ ಯಡಹಳ್ಳಿಮಠ



