ಜೀವನ ಸಂಗಾತಿ
ವೀಣಾ ಹೇಮಂತ್ ಗೌಡಪಾಟೀಲ
“ಅತಿ ಅವಸರ ಸಲ್ಲದು”


ಪುಟ್ಟ ಬಾಲಕ ಶಾಮ ಯಾವತ್ತೂ ಅವಸರದಲ್ಲಿಯೇ ಇರುತ್ತಿದ್ದ ಆತನಿಗೆ ಪ್ರತಿಯೊಂದು ವಿಷಯವು ತರಾತುರಿಯಲ್ಲಿ ಆಗಿಬಿಡಬೇಕು. ಅತ್ಯಂತ ವೇಗವಾದ ಇಂಟರ್ನೆಟ್ ಸೇವೆಯನ್ನು ಬಯಸುತ್ತಿದ್ದ ಆತ ಹೊಸ ಹೊಸ ಆಟದ ಸಾಮಾನುಗಳಿಗಾಗಿ ಆಶಿಸುತ್ತಿದ್ದ… ಆತನ ಅವಸರವನ್ನು ನೋಡಿದರೆ ಎಲ್ ಕೆ ಜಿ ಇರುವಾಗಲೇ ಒಂದನೇ ತರಗತಿಗೆ, 5ನೇ ತರಗತಿ ಇರಬೇಕಾದ ವ್ಯಕ್ತಿ ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಏರಬೇಕು ಎಂದು ತಮಾಷೆ ಮಾಡುವಷ್ಟು ಇರುತ್ತಿತ್ತು.
ಯಾವುದೇ ವಿಷಯಕ್ಕೂ ವ್ಯವಧಾನ ಎಂಬ ಪದದ ಅರಿವೇ ಇರಲಿಲ್ಲ ಬಹುಶಹ ಆತನ ನಿಘಂಟಿನಲ್ಲಿ ತಾಳ್ಮೆ ಎಂಬ ಪದಕ್ಕೆ ಅರ್ಥವೇ ಇರಲಿಲ್ಲ
ಅದೊಂದು ದಿನ ಸಾಯಂಕಾಲ ಆತ ತನ್ನ ಅಜ್ಜ ಮನೆಯ ವರಾಂಡದಲ್ಲಿ ಒಂದು ಹಳೆಯದಾದ ಆದರೆ ಅತ್ಯಂತ ಕಲಾತ್ಮಕವಾದ ಕೆತ್ತನೆಯನ್ನು ಹೊಂದಿದ ಸುಂದರವಾದ
ಪುಟ್ಟ ಪೆಟ್ಟಿಗೆಯನ್ನು ಮುಂದಿಟ್ಟುಕೊಂಡು ಕುಳಿತಿರುವುದನ್ನು ನೋಡಿದ. ಅದೊಂದು ಸಂಪೂರ್ಣ ಖಾಲಿಯಾದ ಪೆಟ್ಟಿಗೆಯಾಗಿತ್ತು. ಅಜ್ಜ ಆ ರೀತಿ ಪೆಟ್ಟಿಗೆಯ ಮುಂದೆ ಸುಮ್ಮನೆ ಕುಳಿತಿರುವುದನ್ನು ನೋಡಿ ಆತನಿಗೆ ಸೋಜಿಗವಾಯಿತು.
ಅಂತೆಯೇ ತನ್ನ ಅಜ್ಜನನ್ನು ಕುರಿತು ಅಜ್ಜ… ಅದೇಕೆ ಹಾಗೆ ಖಾಲಿ ಪೆಟ್ಟಿಗೆಯ ಮುಂದೆ ಕುಳಿತು ಅದನ್ನು ನೋಡುತ್ತಿರುವಿರಿ… ಎಷ್ಟೊಂದು ಸಮಯ ಹಾಳಾಯಿತು ಅಲ್ಲವೇ? ಎಂದು ಕೇಳಿದ.
ಮೊಮ್ಮಗನ ಮಾತನ್ನು ಕೇಳಿದ ಅಜ್ಜ ನಸುನಗುತ್ತ ನುಡಿದ ಇದೊಂದು ಹಳೆಯ ಖಾಲಿ ಪೆಟ್ಟಿಗೆ ಎಂದು ನೀನು ಭಾವಿಸಿರುವೆ ಅಲ್ಲವೇ ?…. ಖಂಡಿತವಾಗಿಯೂ ಇದು ಖಾಲಿ ಪೆಟ್ಟಿಗೆಯಲ್ಲ ಇದರಲ್ಲಿ ನಾನು ನನ್ನ ಚಿನ್ನದ ಟಿಕೆಟ್ಗಳನ್ನು ಇಡುತ್ತೇನೆ ಎಂದು ಹೇಳಿದ.
ಪೆಟ್ಟಿಗೆಯ ಒಳಭಾಗವನ್ನು ನಿರುಕಸಿ ನೋಡಿದ ಶಾಮ ‘ಆದರೆ ಅಜ್ಜ ಇದರಲ್ಲಿ ಏನೂ ಇಲ್ಲ’ ಎಂದು ಲಗು ಬಗೆಯಿಂದ ಹೇಳಿದ.
‘ನಿನಗೆ ಪೆಟ್ಟಿಗೆ ಖಾಲಿಯಾಗಿ ಕಾಣುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ, ಕಾರಣ ನೀನು ನಿನ್ನ ಕಣ್ಣಿನಿಂದ ಪೆಟ್ಟಿಗೆಯನ್ನು ನೋಡುತ್ತಿರುವೆಯೇ ಹೊರತು ಮನಸ್ಸು ಹಾಗೂ ಹೃದಯದಿಂದ ಅಲ್ಲ ‘ ಎಂದು ಅಜ್ಜ ಒತ್ತಿ ಹೇಳಿದ.
ಮತ್ತೆ ಮೊಮ್ಮಗನನ್ನು ‘ಇಲ್ಲಿ ಕುಳಿತುಕೋ ನಾನು ನಿಮಗೆ ನನ್ನ ಕೊನೆಯ ಟಿಕೆಟ್ ಅನ್ನು ನೀಡುತ್ತೇನೆ’ ಎಂದು ಅಜ್ಜ ಹೇಳಿದ
ಆಶ್ಚರ್ಯವಾದರೂ ಮರು ಮಾತನಾಡದೆ ಅಜ್ಜ ತೋರಿದ ಸ್ಥಳದಲ್ಲಿ ಶ್ಯಾಮ ಕುಳಿತುಕೊಂಡ. ಮುಂದಿನ ಐದು ನಿಮಿಷಗಳ ಕಾಲ ಅಜ್ಜ ಏನನ್ನೂ ಹೇಳಲಿಲ್ಲ ಹಾಗೂ ಮೊಮ್ಮಗ ಏನನ್ನು ಕೇಳಲಿಲ್ಲ. ಐದು ನಿಮಿಷ ಒಂದು ಯುಗದಂತೆ ಭಾಸವಾಯಿತು ಶಾಮನಿಗೆ… ಆದರೆ ಆ ಸಮಯದಲ್ಲಿ ಆತ ಅನಿವಾರ್ಯವಾಗಿ ಅಜ್ಜನ ಜೊತೆ ಕುಳಿತು ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳಿಸಿಕೊಂಡ. ಎಲ್ಲಿಂದಲೂ ಬೀಸಿದ ತಂಗಾಳಿಗೆ ಆತನ ಮೈಯನ್ನು ಸೋಕಿ ಮೈಮನಗಳಿಗೆ ಅತ್ಯದ್ಭುತವಾದ ಸಮಾಧಾನವನ್ನು ನೀಡಿತು. ದೂರದಿಂದ ಹಾರಿ ಬಂದ ಚಿಟ್ಟೆಯೊಂದು ಹೂವಿನ ಮಕರಂದವನ್ನು ಹೀರುವುದನ್ನು ಆತ ಗಮನಿಸಿದ. ಮೊದಲು ಮೊದಲು ಆ ರೀತಿ ಸುಮ್ಮನೆ ಕುಳಿತುಕೊಳ್ಳುವುದು ಶಾಮನಿಗೆ ಹಿಂಸೆಯೆನಿಸಿತು. ತನ್ನ ಜೇಬಲ್ಲಿರುವ ಮೊಬೈಲ್ ಫೋನನ್ನು ತೆಗೆದು ನೋಡಲೇ ಎಂದು ಒಂದು ಬಾರಿ ಯೋಚಿಸಿದ ಕೂಡ… ಆದರೆ ಅಜ್ಜನ ಮುಂದೆ ಹಾಗೆ ಮಾಡಲಾರದೆ ಸುಮ್ಮನೆ ಚಡಪಡಿಸುತ್ತಾ ಕುಳಿತುಕೊಂಡ. ಅನಿವಾರ್ಯವಾಗಿಯಾದರೂ ಒಂದೆರಡು ನಿಮಿಷಗಳ ನಂತರ ಆತನ ಮನಸ್ಸು ತನ್ನಂತಾನೆ ತಹಬಂದಿಗೆ ಬಂತು. ಆತನ ಮನಸ್ಸನ್ನು ಒಂದು ಬಗೆಯ ನಿರಾಳತೆ ಆವರಿಸಿತು.
ತಲೆಯೆತ್ತಿ ನೋಡಿದಾಗ ನೀಲಿ ಆಕಾಶ ಆತನ ಗಮನ ಸೆಳೆಯಿತು.
ತನ್ನ ಗಮನ ಸೆಳೆದ ಆಕಾಶದತ್ತ ಕೈ ಮಾಡಿದ ಶಾಮ ಅಚ್ಚನಿಗೆ ಅದೇನು? ಎಂದು ಕೇಳಿದ….. ಅದು ಕೂಡ ಚಿನ್ನದ ಟಿಕೆಟ್ ಎಂದು ಅಜ್ಜ ಹೇಳಿದ. ಈಗ ಅವಾಕ್ಕಾಗುವ ಸರದಿ ಶಾಮನದಾಗಿತ್ತು
ನಿಜ ಶಾಮ…. ಕೆಲ ನಿಮಿಷಗಳ, ಕ್ಷಣಗಳ ಮಟ್ಟಿಗಾದರೂ ನೀನು ನೀನಾಗಿಯೇ ಇರುವ ಗಳಿಗೆ… ಅದು ನಿನ್ನ ಬದುಕಿನ ಅತ್ಯಮೂಲ್ಯವಾದ ಟಿಕೆಟ್ ಇದ್ದಂತೆ. ಬಹಳಷ್ಟು ಜನ ಸದಾ ಓಡುತ್ತಲೇ ಇರುತ್ತಾರೆ. ಓದುವುದು, ಓದು ಮುಗಿದ ಕೂಡಲೇ ನೌಕರಿ, ನೌಕರಿ ಮುಗಿದ ಕೂಡಲೇ ಮನೆ, ಮನೆಯಿಂದ ಆಫೀಸ್ ಮತ್ತೆ ವೀಕೆಂಡ್ಗಳು, ಪ್ರಮೋಷನ್ಗಳು ಮದುವೆ ಮಕ್ಕಳು ಯಶಸ್ಸು ಹೀಗೆ ಒಂದರ ಹಿಂದೆ ಒಂದರಂತೆ ಸದಾ ಓಡುತ್ತದೆ. ಈ ಓಡುವಿಕೆಯಲ್ಲಿ ಅವರು ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ಅವರ ಗಮ್ಯ ಅವರ ಕೈಗೆ ಸಿಗುವ ಮುನ್ನವೇ ಅವರು ಮತ್ತೊಂದು ಗಮ್ಯವನ್ನು ಅರಸಿ ಮುಂದೆ ಸಾಗುತ್ತಾರೆ… ಮುಂದೆ ಅವರ ಓಟಕ್ಕೆ ಯಾವುದೇ ಅರ್ಥ ಉಳಿಯುವುದಿಲ್ಲ.
ಆದರೆ ಅಜ್ಜ… ಯಶಸ್ಸಿನ ಹಿಂದೆ ಓಡುವುದು ತಪ್ಪೇ ? ಸಂತೋಷವಾಗಿರಲು ಯಾವುದೇ ಯಶಸ್ಸಿನ ಅವಶ್ಯಕತೆ ಇಲ್ಲವೇ ? ಎಂದು ಶ್ಯಾಮ ಕೇಳಿದ
ಸಣ್ಣಗೆ ನಸು ನಕ್ಕು ತಲೆಯಾಡಿಸಿದ ಅಜ್ಜ ಹೀಗೆ ಹೇಳಿದ… ಸಂತೋಷವಾಗಿರಲು ಯಶಸ್ಸು ಬೇಕಾಗಿಲ್ಲ. ಅಷ್ಟಕ್ಕೂ ಯಶಸ್ಸು ಎಂಬುದು ಕೇವಲ ನೆರಳಿನಂತೆ. ಅದನ್ನು ನೀನೆಂದಿಗೂ ಹಿಡಿಯಲು ಆಗದು.
ಈಗ ನನ್ನನ್ನೇ ನೋಡು. ಇದೀಗ ನನಗೆ ನಾನು ಓವರ್ ಟೈಮ್ ಮಾಡಿದ ದಿನಗಳು ನೆನಪಾಗುವುದಿಲ್ಲ. ಯಾವಾಗ ಕಾರು ಖರೀದಿಸಿದೆ ಎಂಬುದು ಕೂಡ ನೆನಪಿಲ್ಲ. ಆದರೆ ನಿನ್ನ ಅಜ್ಜಿ ಮಾಡಿದ ಸವಿರುಚಿ ಇನ್ನೂ ನನ್ನ ನಾಲಿಗೆಯಲ್ಲಿದೆ. ನಿನ್ನ ಅಜ್ಜಿಯೊಂದಿಗೆ ಒಡನಾಡಿದ ಪ್ರತಿಯೊಂದು ಮಾತುಗಳು ನನ್ನ ಮನದ ಆಳದಲ್ಲಿದೆ. ನಿನ್ನ ಅಪ್ಪ ನನ್ನ ಮಡಿಲಲ್ಲಿ ನಗುತ್ತಾ ಮಲಗಿದ ನೆನಪು ಈಗ ತಾನೇ ಎಂಬಂತೆ ಹಚ್ಚ ಹಸಿರಾಗಿದೆ.
ಈ ಭೂಮಿಯ ಮೇಲೆ ಮಳೆ ಬಿದ್ದಾಗ ಅದರ ವಾಸನೆಗೆ ಮನ ಮುದಗೊಂಡಾಗ ನೆನಪುಗಳು ದಾಳಿ ಇಡುತ್ತವೆ.
ಆದ್ದರಿಂದ ನಮ್ಮ ಬದುಕು ಧಾವಂತದಿಂದ ಓಡುವುದರಲ್ಲಿ ಇಲ್ಲ… ನಮ್ಮ ಬದುಕು ಇರುವುದು ನಾವು ಪ್ರಸ್ತುತ ಇರುವ ಗಳಿಗೆಯನ್ನು ನೆಮ್ಮದಿಯಿಂದ ಸವಿಯುವುದರಲ್ಲಿ ಎಂದು ಹೇಳಿ ದೀರ್ಘವಾಗಿ ನಿಟ್ಟುಸಿರಿಟ್ಟ.
ತನ್ನ ಕೈಯಲ್ಲಿರುವ ಪುಟ್ಟ ಕಲಾತ್ಮಕ ಪೆಟ್ಟಿಗೆಯನ್ನು ಶಾಮನ ಕೈಯಲ್ಲಿ ಇಡುತ್ತಾ ಅಜ್ಜ ಹೇಳಿದ… ಮಗು ಶಾಮ ಈ ಜಗತ್ತು ನಿನಗೆ ಸಾವಿರಾರು ವಸ್ತುಗಳನ್ನು ಮಾರಲು ಪ್ರಯತ್ನಿಸುತ್ತದೆ. ಅವುಗಳನ್ನು ಖರೀದಿಸಿದರೆ ಮಾತ್ರ ನೀನು ಸಂತೋಷವಾಗಿರುವೆ ಎಂಬ ನಂಬಿಕೆಯನ್ನು ನಿನ್ನಲ್ಲಿ ಹುಟ್ಟಿಸುತ್ತದೆ. ಆದರೆ.. ನಿಜ ಹೇಳಬೇಕೆಂದರೆ ನೀನು ಭೂತದ ನೆನಪಿನಲ್ಲಿ ಭವಿಷ್ಯದ ಭಯದಲ್ಲಿ ನಿನ್ನ ಬದುಕನ್ನು ಕಳೆಯಬೇಡ. ನಿನ್ನ ವರ್ತಮಾನದಲ್ಲಿಯೇ ನಿನ್ನ ಬದುಕಿದೆ ಈ ಘಳಿಗೆ ಮಾತ್ರ ನಿನ್ನದು. ಮುಂದೆಂದೂ ಸಿಗಬಹುದಾದ ಸುಖಕ್ಕೆ ನಿನ್ನ ಈ ದಿನವನ್ನು ಕಳೆದುಕೊಳ್ಳಬೇಡ. ನಿನ್ನ ಬದುಕಿನ ಪೆಟ್ಟಿಗೆಯನ್ನು ಅತ್ಯುತ್ತಮ ನೆನಪುಗಳೊಂದಿಗೆ ತುಂಬು ಉಸಿರುಗಟ್ಟುವಂತೆ ಓಡುವುದು ಖಂಡಿತ ಬೇಡ. ದೀರ್ಘವಾದ ಉಸಿರನ್ನು ನಿನ್ನ ಎದೆಯಾಳದಲ್ಲಿ ತುಂಬಿಕೊಂಡು ಅದನ್ನು ನಿಧಾನವಾಗಿ ಹೊರ ಹಾಕುತ್ತಾ ಜೀವನದ ಪ್ರತಿಯೊಂದು ಗಳಿಗೆಯನ್ನು ನಿನ್ನದಾಗಿಸಿಕೋ ಅದರ ಮಧುರವಾದ ಸವಿಯನ್ನು ಆಸ್ವಾದಿಸು ಆಗ ಬದುಕು ನಿನಗೆ ಸದಾ ಸುಂದರವಾಗಿ ಕಾಣುತ್ತದೆ ಎಂದು ಅಜ್ಜ ಹೇಳಿದ.
ಅಜ್ಜನ ಕೈಯಲ್ಲಿನ ಪೆಟ್ಟಿಗೆ ಇದೀಗ ಶಾಮನ ಕೈಗೆ ಹಸ್ತಾಂತರವಾಗಿದ್ದು ಇದೀಗ ಆತನ ಕಣ್ಣಿಗೆ ಅದು ಖಾಲಿ ಪೆಟ್ಟಿಗೆಯಾಗಿ ತೋರಲಿಲ್ಲ… ಅದು ನನಗಿರುವ ಬದುಕಿನ ಅವಕಾಶಗಳನ್ನು ತೋರುವ ಜಾದು ಪೆಟ್ಟಿಗೆಯಾಗಿ ಕಾಣಿಸಿತು.
ನೋಡಿದಿರಾ ಸ್ನೇಹಿತರೆ ! ಈ ಕಥೆಯಿಂದ ನಮಗೆ ಅರಿವಾಗುವುದು ನಮ್ಮ ಬದುಕಿನಲ್ಲಿ ನಾವು ಬೆಲೆ ಕೊಡಬೇಕಾಗಿರುವುದು ಅತ್ಯುತ್ತಮ ವಸ್ತುಗಳಿಗೆ ಅಲ್ಲ… ವ್ಯಕ್ತಿಗಳಿಗೆ ಮತ್ತು ವ್ಯಕ್ತಿಗತ ಭಾವನೆಗಳಿಗೆ. ಬದುಕಿನ ಅದೆಷ್ಟೋ ಸಮಯವನ್ನು ನಾವು ಭೂತದ ಕನವರಿಕೆಯಲ್ಲಿ ಇಲ್ಲವೇ ಭವಿಷ್ಯದ ಚಿಂತೆಯಲ್ಲಿ ಕಳೆಯುತ್ತೇವೆ… ಈ ದಿನವನ್ನು ಜೀವಿಸಲು ಮರೆತುಬಿಡುತ್ತೇವೆ. ಎಲ್ಲರಿಗೂ ಇರುವಂತೆ ನಮಗೂ ಕೂಡ ದಿನಕ್ಕೆ 24 ಗಂಟೆಗಳು ಮಾತ್ರವೇ ಇರುತ್ತವೆ. ಶ್ರೀಮಂತನಾಗಿದ್ದ ಮಾತ್ರಕ್ಕೆ ಸಂತೋಷವಾಗಿರಲು ಸಾಧ್ಯವಿಲ್ಲ, ಎಲ್ಲಾ ಐಷಾರಾಮಗಳನ್ನು ಹೊಂದಿದ್ದವರು ಮಾತ್ರ ನೆಮ್ಮದಿಯ ನಿದ್ರೆಯನ್ನು ಮಾಡಲು ಸಾಧ್ಯವಿಲ್ಲ. ಸುಂದರವಾದ ಬದುಕನ್ನು ಸಾಗಿಸಲು ನಾವು ಮಹತ್ತರವಾದದನ್ನು ಸಾಧಿಸಬೇಕಾಗಿಲ್ಲ… ಕೇವಲ ವರ್ತಮಾನದಲ್ಲಿ ಜೀವಿಸುವುದನ್ನು ರೂಢಿಸಿಕೊಳ್ಳಬೇಕು. ಅತ್ಯಂತ ಸರಳವಾದ ಆಹಾರ ವಿಹಾರವನ್ನು ನಮ್ಮದಾಗಿಸಿಕೊಳ್ಳಬೇಕು. ಒಬ್ಬನೇ ಕುಳಿತು ಐಷಾರಾಮಿ ಹೋಟೆಲ್ ನಲ್ಲಿ ಭೂರೀ ಭೋಜನ ಸವಿಯುವುದು ಮನುಷ್ಯನಿಗೆ ಬೇಕಾಗಿಲ್ಲ…. ಬದಲಾಗಿ ನಿಮ್ಮನ್ನು ಅರ್ಥ ಮಾಡಿಕೊಂಡ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸರಳವಾದ ಊಟ ಮಾಡಿದರೆ ಸಾಕು. ನಿಮ್ಮನ್ನು ಒತ್ತಡಕ್ಕೆ ಈಡು ಮಾಡುವ ಓಟದ ಸ್ಪರ್ಧೆಗಿಂತ ಸ್ನೇಹಿತರೊಂದಿಗೆ ಒಂದು ಪುಟ್ಟ ನಡಿಗೆ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಡಬಲ್ಲದು.
ಸಂತೋಷ ಎನ್ನುವುದು ನೀವು ಅಂತಿಮವಾಗಿ ತಲುಪುವ ಗುರಿಯಲ್ಲ… ಅದು ನೀವು ನಡೆಯುವ ಹಾದಿಯಲ್ಲಿ ಕಂಡು ಬರುವ ಎಲ್ಲಾ ಚಿಕ್ಕ ಪುಟ್ಟ ವಿಷಯಗಳನ್ನು ಆಸ್ವಾದಿಸುತ್ತಾ ಮುಂದೆ ಸಾಗುವ ಮನಸ್ಥಿತಿ. ನಿಮ್ಮ ಆಯ್ಕೆಯ ಹೆದ್ದಾರಿ ನಿಮ್ಮದಾಗಲಿ…ಏನಂತೀರಾ?
ವೀಣಾ ಹೇಮಂತ್ ಗೌಡ ಪಾಟೀಲ್
́



