ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅದೆಷ್ಟೇ ಮನಸ್ಸು ಕ್ಷೋಭೆಗೊಳಗಾಗಿರಲಿ ಆತಂಕಿತ ವಾಗಿರಲಿ ಸಂಗೀತದ ನಾದ ತರಂಗಕ್ಕೆ ಮನದ ನೋವು ನಿವಾರಿಸುವ ಶಕ್ತಿ ಇದೆ. ಮನಸ್ಸನ್ನು ಸಮಾಧಾನಗೊಳಿಸುವ, ಆಳವಾದ ನೆಮ್ಮದಿಯನ್ನು ನೀಡುವ ಮನಸ್ಸನ್ನು ಅದ್ವಿತೀಯ ವಿಶ್ರಾಂತ ಸ್ಥಿತಿಗೆ ಕರೆದೊಯ್ಯುವ ಶಕ್ತಿ ಇದೆ…. ಸಂಗೀತ ನಮ್ಮನ್ನು ನಾವಿರುವ ಭಾವದಿಂದ ತನ್ನದೇ ಆದ ಲೋಕಕ್ಕೆ ಕರೆದೊಯ್ಯುತ್ತದೆ.
ಲಲಿತ ಕಲೆಗಳಲ್ಲಿ ಒಂದಾದ ಸಂಗೀತವು ಮಕ್ಕಳಲ್ಲಿ ರಾಗ, ತಾಳ, ಲಯಗಳ ಜ್ಞಾನದ ಜೊತೆಗೆ ಹತ್ತು ಹಲವು ವಿಭಿನ್ನ ಸಂಗತಿಗಳಲ್ಲಿ ಹೆಚ್ಚಿನ ಕಲಿಕೆಯನ್ನು ನೀಡುತ್ತದೆ.
ವ್ಯಕ್ತಿಯ ಬೌದ್ಧಿಕ ಭಾವನಾತ್ಮಕ, ಸಾಮಾಜಿಕ  ಹಾಗೂ ಸಾಂಸ್ಕೃತಿಕ ಬದುಕಿಗೆ ಒಳ್ಳೆಯ ಬುನಾದಿಯನ್ನು ಹಾಕುತ್ತದೆ. ಆದ್ದರಿಂದಲೇ ಮಕ್ಕಳನ್ನು ಚಿಕ್ಕಂದಿನಲ್ಲಿಯೇ ಸಂಗೀತ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆಟ ಪಾಠಗಳಂತೆ ಲಲಿತ ಕಲೆಗಳಲ್ಲಿ ಒಂದಾದ ಸಂಗೀತವೂ ಕೂಡ ಅತ್ಯವಶ್ಯಕ ಎಂಬುದನ್ನು ಮನಗಂಡಿರುವ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಪ್ರತಿ ವಾರಕ್ಕೆ ಎರಡರಿಂದ ಮೂರು ಅವಧಿಯಲ್ಲಿ ಸಂಗೀತ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆ ಮಾಡಿದೆ. ಪರಿಣಾಮವಾಗಿ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದೆ ಹೋದರೂ ಕೂಡ ತಕ್ಕಮಟ್ಟಿಗೆ ಸಂಗೀತದ ಜ್ಞಾನ ಮಕ್ಕಳಿಗೆ ದೊರೆಯುತ್ತದೆ.
 ಸಂಗೀತ ಕಲೆ…. ಕೇವಲ ಕಲೆಯಲ್ಲ..ಅದು ಜೀವನವನ್ನು ಅರಿಯುವ ಮಾರ್ಗ. ಸಂಗೀತವನ್ನು   ಕಲಿಯುವ ಮಕ್ಕಳಲ್ಲಿ ಗಮನಾರ್ಹ ಬದಲಾವಣೆಯನ್ನು ನಾವು ಕಾಣಬಹುದು. ಸೂಕ್ಷ್ಮವಾದ ಹಾಗೂ ಅತ್ಯುತ್ತಮವಾದ ಗ್ರಹಿಕೆಯ ಶಕ್ತಿ ಮಕ್ಕಳದಾಗುತ್ತದೆ. ಸ್ಮರಣಶಕ್ತಿ ಕೂಡ ಹೆಚ್ಚುತ್ತದೆ. ಚಿಕ್ಕ ಪುಟ್ಟ ಬದಲಾವಣೆಗಳಿಂದ ಉಂಟಾಗುವ ವ್ಯತ್ಯಾಸಗಳ ಅರಿವು ಮೂಡುತ್ತದೆ…. ಇದರ ಪರಿಣಾಮವಾಗಿ ಮಕ್ಕಳು ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಬದುಕಿನ ಎಲ್ಲಾ ಹಂತಗಳಲ್ಲಿ ತಮ್ಮ ಗ್ರಹಣ ಶಕ್ತಿಯ ಸೂಕ್ಷ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ.
 ಸಂಗೀತ ಶಿಕ್ಷಣವು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ. ಸಂಗೀತದ ಮೂಲಕ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವಂತೆ ಮಕ್ಕಳನ್ನು ಕ್ರಿಯಾಶೀಲಗೊಳಿಸುತ್ತದೆ. ಮಕ್ಕಳ ಸೃಜನಶೀಲತೆ ಅರಳುವುದು ಇಂತಹ ಕ್ರಿಯಾಶೀಲ ಅಭಿವ್ಯಕ್ತಿಗಳಿಂದ ಮಾತ್ರ. ಹೊಸ ವಿಚಾರಗಳನ್ನು ಅರಿಯಲು, ಹೊಸ ವಿಷಯಗಳನ್ನು ಪ್ರಸ್ತುತಪಡಿಸಲು ಸಂಗೀತವು ಅವರಿಗೆ ಸೂಕ್ಷ್ಮವಾದ ಕಲಿಕಾ ಕೌಶಲ್ಯವನ್ನು ನೀಡುತ್ತದೆ.
ಸಂಗೀತದಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರೆ ಅಚ್ಚರಿ ಪಡದಿರಿ. ನಿರಂತರವಾಗಿ ಸಂಗೀತದ ಅಭ್ಯಾಸವನ್ನು ಮಾಡುವುದರಿಂದ ಹಾಗೂ ಒಳ್ಳೆಯ ಸುಮಧುರವಾದ ಸಂಗೀತವನ್ನು ಕೇಳುವ ಮೂಲಕ ಉದ್ರಿಕ ನರಗಳನ್ನು  
ಶಾಂತಗೊಳಿಸಬಹುದು. ಮೈ-ಮನಗಳಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ತರುವ ಸಂಗೀತದ ನಾದ ತರಂಗಗಳು ಮನಸ್ಸಿನ ಬೇಗುದಿಯನ್ನು ತೊಡೆದು ಹಾಕುವ ಮೂಲಕ ಶಾಂತ ಮನಸ್ಥಿತಿಗೆ ಕಾರಣವಾಗುತ್ತದೆ.
 ಸಂಗೀತವು ವ್ಯಕ್ತಿಯ ಆತ್ಮವಿಶ್ವಾಸ ವೃದ್ದಿಗೆ ಸಾಧನ…. ನಿರಂತರವಾದ ತರಬೇತಿಯ ಮೂಲಕ ಕಲಿಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಿದರೆ, ವೇದಿಕೆಯನ್ನು ಏರಿ ಕಲಿತ ವಿದ್ಯೆಯನ್ನು ಪ್ರಸ್ತುತಪಡಿಸಲು ಅತ್ಯವಶ್ಯಕವಾದ ಧೈರ್ಯವನ್ನು ಸಂಗೀತವು ನೀಡುತ್ತದೆ. ಆತ್ಮವಿಶ್ವಾಸ ವೃದ್ಧಿಗೆ ಇದಕ್ಕಿಂತ ಇನ್ನೇನು ಬೇಕು ? ಸಾರ್ವಜನಿಕರೊಂದಿಗೆ ಸಂವಹನ ಸಾಧ್ಯವಾಗುತ್ತದೆ. ಮತ್ತಷ್ಟು ಮಗದಷ್ಟು ಕಲಿಕಾ ಆಸಕ್ತಿ ಹೆಚ್ಚುತ್ತದೆ.
ಸಾಂಸ್ಕೃತಿಕ ಮೌಲ್ಯಗಳ ಪರಿಚಯ ಮಾಡಿಕೊಡುವ ಸಂಗೀತವು ನಮ್ಮ ದೇಶದ ಮಹೋನ್ನತ ಸಂಗೀತ ಪರಂಪರೆಯ ಅರಿವನ್ನು ಮೂಡಿಸುತ್ತದೆ. ವಿವಿಧ ರಾಗ ತಾಳ ಲಯಗಳ ಜ್ಞಾನವನ್ನು ನಮಗೆ ಪ್ರಚುರಪಡಿಸುತ್ತದೆ. ಸಂಗೀತದ ವೈವಿಧ್ಯಗಳ ಕುರಿತು ಹೊಸ ಕುತೂಹಲವನ್ನು ಮೂಡಿಸುತ್ತದೆ. ವಿವಿಧ ಶೈಲಿಗಳ, ತಾಳ ವಾದ್ಯಗಳ ಅರಿವನ್ನು ಮೂಡಿಸಿ ನಮ್ಮ ಮಹೋನ್ನತ ಗುರು ಪರಂಪರೆಯ ಕುರಿತು ಕೃತಜ್ಞತಾ ಭಾವವನ್ನು ಮೂಡಿಸುತ್ತದೆ.
 ಸಂಗೀತ ಕಲಿಕೆಯು ನಮ್ಮ ಬದುಕಿನಲ್ಲಿ ಶಿಸ್ತಿನ ಪಾಲನೆಗೆ ಕಾರಣವಾಗುತ್ತದೆ… ಪ್ರತಿದಿನವೂ ಸಂಗೀತವನ್ನು ಕಲಿಯುವ ನಿಟ್ಟಿನಲ್ಲಿ ತರಬೇತಿ ಹೊಂದುವ ಪ್ರತಿ ಮಗುವು ಕೂಡ ತಮ್ಮದೇ ಆದ ಕೆಲ ಪದ್ಧತಿಗಳನ್ನು ರೂಡಿಸಿಕೊಳ್ಳುತ್ತಾರೆ. ತಮಗೆ ಒಗ್ಗುವ ಊಟೋಪಚಾರ, ಆಹಾರ ವಿಹಾರಗಳನ್ನು ಪಾಲಿಸುತ್ತಾರೆ ಇದು ಅವರಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಿಸ್ತಿನ ಪರಿಪಾಲನೆಗೆ ಸಹಕಾರಿಯಾಗುತ್ತದೆ. ನಿಯಮ ಹಾಗೂ ಸಮಯ ಪಾಲನೆಯ ಕಾರಣದಿಂದಾಗಿ ಒಂದು ಬಗೆಯ ಶಿಸ್ತು ಅವರಲ್ಲಿ ಉಂಟಾಗುತ್ತದೆ.
 ಗುಂಪಿನಲ್ಲಿ ಹಾಡುವ ಮೂಲಕ ಸಾಮಾಜಿಕ ಸಾಂಗತ್ಯದ ಸಾಮರ್ಥ್ಯ ಬೆಳೆಯುತ್ತದೆ ವಿಭಿನ್ನತೆಯಲ್ಲಿಯೂ ಏಕತೆಯನ್ನು ಕಾಣುವ ಶಕ್ತಿ ಸಂಗೀತಕ್ಕಿದೆ. ಇತರರಲ್ಲಿರುವ ವಿಭಿನ್ನ ಗ್ರಹಿಕೆಯ ಶಕ್ತಿ,, ಕಲಿಕಾ ಸಾಮರ್ಥ್ಯ, ಸಮಯ ಪಾಲನೆ, ಶ್ರದ್ಧೆ,ಕಾರ್ಯ ತತ್ವರತೆಗಳು ನಮ್ಮನ್ನು ಪ್ರೇರೇಪಿಸುತ್ತವೆ. ಸಂಗೀತವು ಸ್ನೇಹ ಭಾವವನ್ನು ಹಾಗೂ ಗೌರವವನ್ನು ವೃದ್ಧಿಸುತ್ತದೆ.
 ನಮ್ಮ ಮನದಾಳದ ಮಾತುಗಳನ್ನು ನಮಗರಿವಿಲ್ಲದೆ
 ಸಂಗೀತದ ಮೂಲಕ  ಹೊರಹಾಕುವ ಪ್ರತಿ ವ್ಯಕ್ತಿಯು ಇನ್ನಿಲ್ಲದ ನಿರುಮ್ಮಳತೆಯನ್ನು ಅನುಭವಿಸುತ್ತಾರೆ….
ಆದ್ದರಿಂದ ತರಗತಿಯ ಕೋಣೆಯಲ್ಲಿ ಕಡ್ಡಾಯವಾಗಿ ದೊರೆಯುವ ಸಂಗೀತ ಶಿಕ್ಷಣದಿಂದ ನಿಮ್ಮ ಮಕ್ಕಳನ್ನು ವಂಚಿತಗೊಳಿಸದಿರಿ.


About The Author

Leave a Reply

You cannot copy content of this page

Scroll to Top