ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾಳಿಗಿ ಬಸೋಜಂತಿ ಅದರೀ ಮನಿ ತೊಳಿಬೇಕು , ಅಂತ ಬಾಜು ಮನಿ ಅಕ್ಕೋರು ಅಂದಾಗ ನಮ್ಮ ಜಗಜ್ಯೋತಿ ಬಸವಣ್ಣನೂ ಒಬ್ಬ ದೇವರಾಗಿ ಕುಂತ ಅಂತನಸ್ತು.ಅವನೆಲ್ಲಿ ದೇವರಾದ , ನಾವು ದೇವ್ರು ಮಾಡಿಬಿಟ್ಟೆವು.ಅವನಿಗೊಂದು ಗುಡಿ ಕಟ್ಟಿ ಅದರೊಳಗ ಕೂಡ್ಸಿ ಕುಂಕುಮ ಅರಶಿಣದಿಂದ ಪೂಜಾ ಮಾಡಿ ಹೋಳಿಗಿ ನೌದಿ ತೋರಿಸಿ ಹಬ್ಬ ಮುಗಸತೀವಿ.

ಬ್ಯಾಸಗಿದಾಗ ಬರೊ ಈ ಬಸೊಜಂತಿ ನಾವು ಸಣ್ಣವರಿದ್ದಾಗ ಹೋಳಗಿ ಮಾನಕಾಯಿ ರಸ ನೆನಪಿಸತಿತ್ತು.ಅವತ್ತು ಎಲ್ಲರ ಮನ್ಯಾಗ ಹೂರಣದ ಹೋಳಗಿ ಮಾನಕಾಯಿ ಸಿಕರಣಿ. ಬಸವಜಯಂತಿ ಅಂದ್ರ ಇದರ ಹೊರತಾಗಿ ಮತ್ತಾವದೂ ತಿಳಿದಿರಲಿಲ್ಲ.ವಚನ ಸಾಹಿತ್ಯ ಓದಿ ತಿಳಿದ ಮ್ಯಾಲ ಗೊತ್ತಾಗಿದ್ದು ಬಸವಣ್ಣ ನಮ್ಮಂಗ ಒಬ್ಬ ಮನುಷ್ಯ, ಆದ್ರಾ ಅವನ ವಿಚಾರಗಳಿಂದ ಅವನೊಬ್ಬ ಅಸಾಮಾನ್ಯ ಮಾನವನೆನೆಸಿಕೊಂಡ.ಅವನಂತೆ ಅವನ ಜೊತೆಗೆ ಎಳನೂರರ ಮ್ಯಾಲ ಶರಣರು ಇದ್ದರು , ಎಲ್ಲರೂ ಮನುಷ್ಯ ರೆ. ಆದ್ರ ಈಗ ಅವ್ರೆಲ್ಲರಿಗೂ ನಮ್ಮ ಸಮಾಜ ದೇವ್ರು ಮಾಡಿ ಕೂಡಿಸಿ ಬಿಟ್ಟಾರ.ಒಂದೊಂದು ಕಾಯಕಕ್ಕ ಒಂದೊಂದು ಜಾತಿ ಹೆಸರು ಕೊಟ್ಟು ಆಯಾ ಕಾಯಕದ ಒಬ್ಬೊಬ್ಬ ಶರಣರನ್ನ ತಮ್ಮ ಜಾತಿಯ ರಾಯಭಾರಿ ಮಾಡಿಕೊಂಡು ವರ್ಷಕ್ಕೊಮ್ಮೆ ಜಯಂತಿ ಮಾಡ್ತಾರ.

ಜಯಂತಿ ಆಚರಣೆ ಮಾಡೋದು ತಪ್ಪಂತ ಹೇಳಲ್ಲ.ಅವರ ಜೀವನ ಚರಿತ್ರೆ , ಅವರ ಸಾಧನೆ , ಅವರು ಸಮಾಜಕ್ಕೆ ಕೊಟ್ಟ ಮಾರ್ಗದರ್ಶನ , ಇವೆಲ್ಲ ಮುಂದಿನ ಪಿಳಿಗಿಗಿ ನೆನಪಿರಬೇಕಾದ್ರ ಮಾಹಾ ನಾಯಕರ ಹುಟ್ಟು ಸಾವಿನ ಕುರಿತು ಪ್ರತಿಯೊಬ್ಬರಿಗೂ ತಿಳದಿರಬೇಕು , ಮತ್ತೊಬ್ಬರಿಗೆ ತಿಳಿಸಿ ಹೇಳಬೇಕು. ಇಂತಹ ಜಯಂತಿಗಳ ಆಚರಣೆಯಿಂದ ಮುಂದಿನ ಪೀಳಿಗೆ ಗಳಿಗೆ ನಾವು ಅವರು ಸಮಾಜದ ಉದ್ದಾರಕ್ಕಾಗಿ ಎನೇನು ಮಾಡಿದರು ಅನ್ನೊದು ತಿಳಿಸಿ ಹೆಳತಿಬೇಕು.

ಆದ್ರ ಈಗೀನ ಮಹಾನಾಯಕರ ಜಯಂತಿ ಗಳೆಲ್ಲ ಆಯಾ ಜನಾಂಗಗಳ ಜನಬಲ ತೋರಿಸಿಕೊಳ್ಳಕ್ಕೆ ಸೀಮಿತ ಆಗತಿದ್ದಾವ.ಮಡಿವಾಳ ಮಾಚೀದೇವನ ಜಯಂತಿ ಕ್ಕಿಂತ ಅಂಬಿಗರ ಚೌಡಯ್ಯ ನ ಜಯಂತಿ ದೊಡ್ಡ ದಾಗಿ ಮಾಡಬೇಕು.ಬಸವಣ್ಣನ ಜಯಂತಿಗಿಂತ ಅಂಬೇಡ್ಕರ್ ಜಯಂತಿ ಭಾರಿ ಮಾಬೇಕು.ಅವ್ರು ಅಷ್ಟೇ ಜನ ಇದ್ರು.ನಾವು ಅವರಿಗಿಂತ ಹೆಚ್ಚು ಜನ ಸೇರಬೇಕು.ಅವರು ಹಾಕಿದ್ದ ಟೆಂಟ್ ಸಣ್ಣದಿತ್ತು.ನಾವು ಹಾಕೋ ಟೆಂಟ್ ನೋಡಿ ಜನ ದಂಗಾಗಬೇಕು.

ಇದಕ್ಕೆಲ್ಲ ರೊಕ್ಕ ..! ಚಂದಾ ಎತ್ತಿದ್ರಾಯ್ತು.ತಮ್ಮ ತಮ್ಮ ಜಾತಿ ಬಲ ತೋರಸಿಕೊಳ್ಳಕ ಯಾರು ಹಿಂದ ಬಿಳಲ್ಲ.ಇನ್ನೂ ಸರ್ಕಾರಿ ಅಧಿಕಾರಿಗಳು ಯಾತಕ್ಕ ಇರತಾರ , ಅಂಜಿಸಿಯಾದ್ರೂ ಜಯಂತಿ ಗಳಿಗಿ ದುಡ್ಡು ವಸೂಲಿ ಮಾಡೋದೇ , ಇವೆಲ್ಲದರ ಮುಂದಾಳತ್ವ ವಹಿಸುವವರು ಎಷ್ಟು ಬಸವಣ್ಣನ ತತ್ವಗಳನ್ನು ಅರಿತಿರತಾರ…!ಎಷ್ಟು ಅಂಬೇಡ್ಕರ್ ಅವರ ಬಗ್ಗೆ ತಿಳಿದಿರತಾರ..!

ಚಂದಾ ವಸೂಲಿ ಮಾಡಿ ಈ ಜಯಂತಿ ಗಳಲ್ಲಿ ಕುಣಿಯುವವರು ಹೆಚ್ಚಾಗಿ ಯುವಕರು.ಕುಡಿದು ಡಿ ಜೆ  ಸದ್ದಿಗೆ ಎರ್ರಾಬಿರ್ರಿ ಕುಣಿಯುತ್ತ ಅದರ ಅವಾಜಕ್ಕ ಉರವರೆಲ್ಲ ಹೈರಾಣ ಆಗಬೇಕು. ಅದಕ್ಕ ಜಯಂತಿ ಅಂತಾರ.ನಮ್ಮ ನಡೆ ನುಡಿ ಆಚರಣೆಗಳಲ್ಲಿ ಶರಣರ ಮಹಾನಾಯಕರ ಆದರ್ಶ ಆಳವಡಿಸಿಕೊಳ್ಳುವದಕ್ಕ ಜಯಂತಿ ಅನ್ನಲ್ಲ ಅಂತ ಇಂತವರ ವಾದ ಇರಬಹುದು.

ಅಷ್ಟಕ್ಕೂ ಸಾರ್ವಜನಿಕ ವಾಗಿ ಜಯಂತಿ ಆಚರಿಸುವ ಅವಶ್ಯಕತೆ ಅಷ್ಟು ಇದೆಯಾ..! ಸ್ಕೂಲ್ ಕಾಲೇಜ್ ಗಳಲ್ಲಿ ಆಚರಿಸಿದರೆ ಮಕ್ಕಳಿಗೆ ಅವರ ಬಗ್ಗೆ ತಿಳಿತದ.ಪಠ್ಯ ಪುಸ್ತಕಗಳದಾಗ ಅವ್ರ ಜೀವನ ಚರಿತ್ರೆಗಳು ಇರಲಿ. ಶಾಲಾ ಕಾಲೇಜುಗಳು ಮಕ್ಕಳಲ್ಲಿ ವೈಚಾರಿಕ ನಡೆಗಳ ಮಹತ್ವ ತಿಳಿಸಲಿ.ಎಲ್ಲರೂ ತಮ್ಮ ತಮ್ಮ ಜಾತಿಯ ನಾಯಕರ ಜಯಂತಿ ಆಚರಿಸ್ತಾರ , ಟಿಪ್ಪು ಸುಲ್ತಾನ ನ ಜಯಂತಿಗೆ ಯಾಕ ವಿರೋಧಿಸಬೇಕು..! ಇತಿಹಾಸ ತಮ್ಮ ಮನಸ್ಸಿಗಿ ಬಂದಂಗ ತಿರುಚಿ ತಮ್ಮ ವಾದಕ್ಕೆ ಕಟ್ಟುಬಿಳುವದರಿಂದ ಸತ್ಯ ಸುಳ್ಳಾಗಲ್ಲ , ಸುಳ್ಳು ಸತ್ಯ ಆಗಲ್ಲ.ಟಿಪ್ಪು ಸುಲ್ತಾನ್ ಕೂಡ ನಮ್ಮ ದೇಶದ ಸ್ವತಂತ್ರ ಕ್ಕಾಗಿ ಬ್ರಿಟಿಷ್ ರೊಂದಿಗೆ ಹೊರಾಡಿದವನೆ , ಇಷ್ಟು ಸಾಕು ಅವನನ್ನು ನೆನಪಿಸಿಕೊಳ್ಳುವದಕ್ಕ.

ಬಸವಾದಿ ಶರಣರ ಆಶಯಗಳು , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು , ಇವೆಲ್ಲ ನಾವು ಅವ್ರ ಪೋಟಕ್ಕ ಹೂವಿನ ಹಾರ ಹಾಕಿ ತೆಂಗು ಒಡೆದು ಮೆರವಣಿಗೆ ಮಾಡ್ಕೊಂತ ಕುಣ್ಣಕೊಂತ ಹೋಗಿದ್ರಿಂದ ನಮ್ಮಲ್ಲಿ ಆಳವಡಿಸಿಕೊಳ್ಳಕ್ಕ ಆಗುವದಿಲ್ಲ.ತನು ಶುಧ , ಮನ ಶುಧ್ದ ಎಂಬ ನಿಲುವು ನಮ್ಮಲ್ಲಿ ಬರಬೇಕಾದ್ರ ಮೊದಲು ಶರಣರ ನ್ನು ಅರಿಬೇಕು.ಅವರ ನಿಲುವುಗಳನ್ನು ನಮ್ಮ ಜೀವನದಾಗ ಆಳವಡಿಸಿಕೊಳ್ಳಬೇಕು. ಮೈಕ್ ನಲ್ಲಿ ಜೋರಾಗಿ ಭಾಷಣ ಮಾಡ್ತ ಅವರು ನಮ್ಮ ಜಾತಿಗಿ ಹಂಗ ಮಾಡಿದ್ರು ಹಿಂಗ್ ಮಾಡುದ್ರೂ ಅಂತ ಅರಚಾಡುವದು ಬಿಟ್ಟು ಈಗ ಅವರು ಹಾಕಿದ ಮಾರ್ಗದರ್ಶನ ದಾಗ ನಾವು ಹ್ಯಾಂಗ್ ಬದುಕಬೇಕು ಅನ್ನೊದು ತಿಳಕೋಬೇಕು.ಅದು ನಮ್ಮ ಜೀವನದಾಗ ಅಳವಡಿಸಿಕೊಳ್ಳಬೇಕು.

ಶಾಲೆಗಳಲ್ಲಿ ಮಕ್ಕಳಿಗೆ ವಚನಗಳ ಸಾರ , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು ತಿಳಿಸುವ ಪ್ರಯತ್ನಕ್ಕೆ ಶಿಕ್ಷಕರು ಹೆಚ್ಚಿನ ಮಹತ್ವ ಕೊಡಬೇಕು. ಬಸವಣ್ಣ ಲಿಂಗಾಯತರಿಗೆ ಮಾತ್ರ ಸೀಮಿತ , ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತ ಎಂಬ ಸಿದ್ದಾಂತ ಕ್ಕೆ ಯುವಜನ ಒಳಪಡುತಿರೋದು ಶೋಚನೀಯ.

ಇನ್ನೂ ಒಂದು ಮುಖ್ಯ ವಿಷಯ. ದಲಿತರು ಬಸವಣ್ಣ ನನ್ನು ಒಪ್ಪಿಕೊಂಡಷ್ಟು ದಲಿತೇತರು ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿದ್ದೆವಾ..! ದಲಿತರು ಅಂಬೇಡ್ಕರ್ ಭಾವ ಚಿತ್ರದ ಜೊತೆ ಬಸವಣ್ಣ ಬುದ್ಧನ ಭಾವಚಿತ್ರ ಗಳಿಗೆ ಪೂಜಿಸೋದು ನೋಡಿದ್ದೆವೆ.ಎಷ್ಟು ಜನ ದಲಿತೇತರು ಲಿಂಗಾಯತರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜಿಸ್ತೆವೆ..!ಪೂಜೆ ಅನ್ನೊದು ಒಂದು ಆಚರಣೆ ಅಷ್ಟೆ. ಗೌರವದಿಂದ ಒಪ್ಪಿಕೊಳ್ಳುವದು ಮುಖ್ಯ. ಶರಣರ ತತ್ವ ಗಳು , ಅಂಬೇಡ್ಕರ್  ರ ಆಶಯಗಳು ಎಂದಿಗೂ ಪ್ರಸ್ತುತ.

ಬಸವೇಶ್ವರ ಅಂಬೇಡ್ಕರ್ ಇನ್ನೂ ಅನೇಕ ಮಹಾನಾಯಕರು ಮನುಕುಲದ ಉದ್ದಾರಕ್ಕಾಗಿ ಜೀವ ತೇದವರು.ಅವರೂ ಮನುಷ್ಯರೆ.ಅವ್ರಲ್ಲೂ ಪರಿಪೂರ್ಣ ತೆ ಹುಡುಕುವ ಕೆಲಸ ನಾವು ಮಾಡಬಾರದು.ಆದ್ರ ಅವರ ಮಾರ್ಗದರ್ಶನ ನಮ್ಮ ಜೀವನ ಮಟ್ಟ ಎಷ್ಟು ಬದಲಾಯಿಸ್ತದ ಅನ್ನುವದು ಅವರ ದಾರಿಯಲ್ಲಿ ಸಾಗಿದಾಗ ಮಾತ್ರ ತಿಳಿತದ.

ಶರಣರ ಮಹಾನಾಯಕರ ಜಯಂತಿ ಗಳು ಸರ್ಕಾರಿ ಕಚೇರಿಗಳಲ್ಲಿ ಕಾಟಾಚಾರಕ್ಕಾಗಿ ಆಚರಿಸುವದನ್ನು ನೋಡ್ತೆವೆ.ಒಂದು ಪೋಟೋ ಇಟ್ಟು ಹೂವಿನ ಸರ ಹಾಕಿ ತೆಂಗಿನ ಕಾಯಿ ಒಡೆದು ಇಟ್ರ ಜಯಂತಿ ಮುಗಿತು.ಕಚೇರಿ ಮುಚ್ಚಿ ಮನಿಗಿ ಹೋದ್ರ ಆಯ್ತು . ಇನ್ನೂ ಡಿ ಜೆ ಹಚ್ಚಿ ಕುಣಿಯುವವರು ಪಟಾಕಿ ಹಚ್ಚೊರು ,  ಉರಾಗೆಲ್ಲ ಮೆರವಣಿಗಿ ಮಾಡೊರ ಹಾವಳಿ ಶುರು ಆಗತದ.

ಇದರಿಂದ ನಮ್ಮ ಮುಂದಿನ ಪೀಳಿಗೆ ಏನು ಕಲಿತಾರ..! ನಮ್ಮ ನಮ್ಮ ಜಾತಿ ಅಥವಾ ಜನ ಬೆಂಬಲ ತೊರಿಸಬೇಕಾದ್ರ ಅದ್ದೂರಿ ಜಯಂತಿಗಳು ಆಚರಿಸಬೇಕು.ಅಂತ.
ಇದರಿಂದಾಗುವ ಉಪಯೋಗ ಅನುಪಯೋಗ ಯಾರಿಗೂ ಬೇಕಾಗಿಲ್ಲ.ವಚನ ಸಾಹಿತ್ಯ ವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಶರಣರ ಸಮಬಾಳು ಸಮಪಾಲು ಆಶಯಗಳು , ಕಾಯಕದ ಮಹಿಮೆ , ಬಹುತ್ವ ಆಚರಣೆಗಳನ್ನು ಗೌರವಿಸುವದು , ದಯೆ ಕರುಣೆಗಳ ಸಾರ , ಎಲ್ಲರನ್ನೂ ಒಳಗೊಂಡ ಸರ್ವಜನಾಂಗಗಳ ಸಾಮರಸ್ಯ..ಇವೆಲ್ಲವೂ ಬರಿ ಬಸವಣ್ಣಗ ಅಂಬೇಡ್ಕರ್ ಅವರಿಗೆ ಮೆರೆಸಿದರಾಗಲಿ , ವಚನ ಸಾಹಿತ್ಯ ತಲೆ ಮೇಲೆ ಹೊತ್ತು ತಿರುಗಿದರಾಗಲಿ ಸಿಗಬಹುದೇ..! ಇಲ್ಲ. ಆದರೂ ಮೆರವಣಿಗೆಯಂತ ಆಚರಣೆಗಳು ಅದ್ದೂರಿಯಾಗಿ ಯಾಕ ಜರುಗತಾವ.ಉತ್ತರ ಒಂದೇ , ಬರಿ ಪ್ರತಿಷ್ಟೆಗಾಗಿ ಮಾತ್ರ.
ಪ್ರತಿಷ್ಟೆ ನಮಗ ವಿಕಾಸದ ದಾರಿಗೆ ಒಯ್ಯುವದಿಲ್ಲ.ಅಧಪತನದೆಡೆ ಒಯ್ಯುತ್ತದೆ.
ಜಯಂತಿಯ ಆಚರಣೆಗಳು ಬರಿ ಪ್ರತಿಷ್ಟೆಗಳಾಗದೆ ಸರ್ವಜನರ ಮಾನಸಿಕ ವಿಕಾಸಕ್ಕಾಗಿ ಆಚರಿಸಲ್ಪಡಬೇಕು.


About The Author

Leave a Reply

You cannot copy content of this page

Scroll to Top