ಕಾವ್ಯ ಸಂಗಾತಿ
ಡಾ.ಕೆ ಎಸ್ ಗಂಗಾಧರ
ಮಾಪನ
ತೋಟದ ತುಂಬಾ ನಳನಳಿಸುವ ಗಿಡಮರಗಳು.
ಪಸೆಯ ನುಂಗಿ ಸೊಂಪಾಗಿ
ಪಸೆಯನುಗುಳಿ ತಂಪಾಗಿಸುವ ಮರಗಳು.
ಇಂಗಾಲವ ಕುಡಿದು ಬಾಷ್ಪೀಭವಿಸಿ
ಪ್ರಾಣವಾಯುವ ಸೂಸುವ ಹರಿತ್ತಿನ ಗಣಗಳು.
ನಡುವೆ ಕರಾಮತ್ತಿನಿಂದ ನುಸುಳಿ
ಕಳೆಯಾಗಿ ಕೊಳೆಯಾಗಿ ಪ್ರಚ್ಛನ್ನವಾಗಿ ಬೆಳೆದು
ಗೀರುಗಾಯವ ಮಾಡುವ ಮುಳ್ಳುಗಂಟಿಗಳು.
ವಿಧವಿಧದ ಪ್ರಕಾರದ ಸಸ್ಯಗಳಿಗೆ
ವಿಶಿಷ್ಟವಾದ ಗುಣಮತ್ಸರಗಳು.
ನೋಟಕ್ಕೆ ಸಿಗುವ ಎತ್ತರದ ಜೊತೆಗೆ
ಬದುಕಿಗುತ್ತರ ನೀಡುವ ಸಂಕುಲ.
ಸ್ವಯಂ ಆವಾಹಿಸಿಕೊಂಡ ಅನುಭೂತಿಯಿಂದ
ಪ್ರತಿಯೊಂದು ಸಸ್ಯಕ್ಕೂ ಪ್ರತ್ಯೇಕ ಸ್ಥಾನ.
ವಿನೂತನ ಹುಚ್ಚು ಹಿಡಿದಿದೆಯೆನಗೆ;
ಮಾಪನದ ಹುಚ್ಚು ಹತ್ತಿದೆ.
ಗಿಡಮರಗಳ ಎತ್ತರದೊಡನೆ
ಅರಿವಿಗೆ ಬಂದವರ ಬೆಡಗಿನೆತ್ತರವ ಹೋಲಿಸಿ
ಮಾಪನ ಶ್ರೇಣಿ ನೀಡುವ ಭ್ರಮೆ ಹುಟ್ಟಿದೆ.
ಸಪೂರವಾಗಿ ಬೆಳೆದು ಸಿರಿ ತರುವ
ಅಡಿಕೆಯ ಎತ್ತರದ ಮಂದಿಯೇ ಸಿಕ್ಕಿಲ್ಲ.
ತನ್ನಿಡೀ ದೇಹವ ಬಹುಪಯೋಗಿಯಾಗಿಸಿಹ
ತೆಂಗೆಂಬ ಕಲ್ಪವೃಕ್ಷದ ಎತ್ತರದ ಸಾಟಿಗೆ
ಮನುಷ್ಯನನ್ನು ನಿರೀಕ್ಷಿಸುವುದೇ ತಪ್ಪು.
ಬಿಚ್ಚು ಬಿಸಿಲಿಗೆ ನೊಚ್ಚು ತಂಪು ಸುರಿಸುವ
ಹೊಂಗೆಯ ನೆರಳಿನ ಮನಸಿದೆತ್ತರದ
ಜನರಾರೂ ಸದ್ಯಕ್ಕೆ ದೊರೆತಿಲ್ಲ.
ಸ್ವಾದಿಷ್ಠ ಬಾಳೆಯ ಗೊನೆಗಳ ತೂಗಿಸಿ
ಸವಿಯೂಟಕ್ಕೆ ಹಸಿರೆಲೆಯ ಸಮರ್ಪಿಸುವ
ಕದಳೀ ಸಮೂಹ ಅಷ್ಟೇನೂ ಎತ್ತರವಿಲ್ಲದಿದ್ದರೂ
ಅದಕಿಂತ ಮೇರಿನ ವ್ಯಕ್ತಿಗಳಾರೂ ಅರಿವಲ್ಲಿಲ್ಲ.
ಚಿಗುರಿನ ಮಾವು;ಹಬ್ಬದ ಬೇವು
ಹಸಿವ ತಣಿಸುವ ಹಲಸು
ಸಾಗುವಾನಿ ಮತ್ತಿ ಬೀಟೆ-
ಮುಂತಾದ ಮರಗಳ ಎತ್ತರ ಮೀರಿದ
ಜನರಾರೂ ಕಣ್ಣಿಗೆ ಕಂಡಿಲ್ಲ.
ನನಗೆ ತಿಳಿದ ಕೆಲವರು
ಪಾಪಾಸುಕಳ್ಳಿಯ ಎತ್ತರಕ್ಕೆ,
ಮತ್ತೆ ಹಲವರು
ಜಾಲಿ ಗಿಡದ ಎತ್ತರಕ್ಕೆ ಇದ್ದಂತಿದೆ.
ಅನೇಕರು, ತೋಟದ ಯಾವ ಗಿಡದ
ಎತ್ತರವನ್ನೂ ಮುಟ್ಟಲಾರರು ಎಂಬುದು
ಮಾಪನ ವರದಿಯ ಅಂತಿಮ ಸಾಲು.