ಅತ್ತರಿನ ಭರಣಿ- ಪುಸ್ತಕ ಅವಲೋಕನ

ಪುಸ್ತಕ ಸಂಗಾತಿ

ಅತ್ತರಿನ ಭರಣಿ

ಅತ್ತರಿನ ಭರಣಿ ತೆಗೆದು ಪರಿಮಳವ ಆಘ್ರಾಣಿಸಿದಾಗ.

ಇದು ಜ್ಯೋತಿ.ಬಿ.ದೇವಣಗಾವ್ ಸುರಪುರ ಅವರ ಚೊಚ್ಚಲ ಗಜಲ್ ಸಂಕಲನ. ಮಹಾಕವಿ ಲಕ್ಷ್ಮೀಶ ಪ್ರಕಾಶನ, ಕನ್ನಡ ಸಾಹಿತ್ಯ ಸಂಘ ಸುರಪುರ.

ನನಗೆ ಬೆಲೆ ತುಸು ಹೆಚ್ಚೆನ್ನಿಸಿತು, ಆದರೂ ಸುರಪುರ ಕನ್ನಡ ಸಂಘ ಎಂದ ಮೇಲೆ ಅದಕ್ಕೆ ಬೆಲೆ ಕಟ್ಟುವುದುಂಟೆ! ಅಂತ ತಪ್ಪು ಮಾಡಲಾರೆ.

ಸುರಪುರದವರದ್ದು ಎಲ್ಲದರಲೂ ವಿಶೇಷವೇ, ಅದು ಈ ಸಂಕಲನದಲೂ ಕಂಡಿತು. ನನ್ನ ಓದು ಸ್ವಲ್ಪವಾದರೂ ನಾನು ಕೊಂಡು ತರಿಸಿಹ ಗಜಲ ಸಂಕಲನದ ಏಕತಾನತೆಯ ಮುನ್ನುಡಿ ಇದರಲಿ ಇಲ್ಲದಾಗಿ, ಬದಲಿಗೆ ಜನಾಬ್ ಅಬ್ದುಲ್  ರಬ್ ರವರ “ಚಿಜ್ಯೋತಿಕಿ ಗಜಲೇಂ” ಎಂಬ ಶುದ್ದ ಉರ್ದವಿನ ಹಿಂದಿ ಅಕ್ಷರದ ಪ್ರಸ್ತಾವನೆ, ಉರ್ದವಿನ ಅಭ್ಯಾಸವಿಲ್ಲದ ನನ್ನಂತ ಸಾಮಾನ್ಯ ಓದುಗನ ಬುದ್ಧಿಗೆ ಎಟುಕಲೆಂದು ಜನಾಬ್ ಇಕ್ಬಾಲ್ ರಾಹಿ ತಿಮ್ಮಾಪುರಿ ಅವರ ಮುನ್ನುಡಿಯ ತರ್ಜಿಮೆ ನನ್ನ ಮನಕೆ ಹಿತ ನೀಡಿತು.

ಮೂಲ ಲೇಖಕರು ಉಲ್ಲೇಖಿಸಿರುವ ಶಾಯರಿ/ಕವಿತೆ/ ದ್ವಿಪದಿಗಳು ನನ್ನ ಮಟ್ಟಿಗೆ ಹೊಸದಾಗಿದ್ದು ಅವುಗಳ ಕನ್ನಡೀಕರಣವೂ ಸೊಗಸಾಗಿದೆ.

ಈಗಾಗಲೆ 23 ಕೃತಿಗಳತಂದು ಗಳಿಸಿಹ ಘನತೆ/ ಗೌರವ ಗಳಿಗೆ ಚ್ಯುತಿಬಾರದಂತೆ ಹೊರತರಲಾಗಿದೆ.

ಮುಖ ಪರಿಚಯ ಇಲ್ಲದಿದ್ದರೂ ಮುಖ ಪುಟದ/ ಸಾಹಿತ್ಯದ ಗುಂಪಿನ ಸಹಾಯದಿ ದಿನವೂ ಕಂಡು ಮಾತನಾಡಿಸುವಂತಾಗಿರುವ

ಮಾನ್ಯ ಬಸವರಾಜ ಜಮದ್ರಖಾನಿ ಸಾರ್, ರಾಥೋಡ ಸಾರ್ , ಜೆ॥ಅಗಷ್ಟಿನ್ ಸಾರ್, ಕಿಗ್ಗಲ್ಲ ಸುರೇಶ್(ಭಾಮಿನಿ ಷಟ್ಪದಿ) ಮುಂತಾದವರ ಬಗ್ಗೆ ಇರುವ ವಿಶ್ವಾಸವೂ ಸಹ ನನ್ನ ಈ ಅನಿಸಿಕೆಗೆ ಕಾರಣ ಎಂದರೆ, ಇಲ್ಲವೆನ್ನದೆ ಮೌನಿಯಾಗುವೆ.

ಇಂತಹ ದಿಗ್ಗಜರ ಹೂದೊಟದಿ ಅರಳಿದ ಗುಲಾಬಿ ಆದ ಜ್ಯೋತಿಯವರ ಗಜಲುಗಳೂ ಚನ್ನಾಗಿಯೇ ಮೂಡಿದೆ. ಇವರು ಇರಿಸಿಕೊಂಡ ತಖಲ್ಲೂಸ್ ” ಚಿಜ್ಯೋತಿ” ಎಲ್ಲಾ ಗಜಲನ್ನು ಪುಟ್ಟ ಜ್ಯೋತಿಯಂತೆಯೇ ಬೆಳಗಿಸಿದೆ. ಕುಶಾಲಿಗೆ ಒಬ್ಬ ಕನ್ನಡ ಎಂ .ಎ ಮಾಡುವ ವಿದ್ಯಾರ್ಥಿಗೆ ಅದರ ಅರ್ಥ ಕೇಳಿದೆ ಆತ “ಚಿಕ್ಕಜ್ಯೋತಿ ಸಾರ್” ಎಂದ. ಸರಿಯಲ್ಲವೇ?

ಕೃತಿಯ ಕೊನೆಯ ಗಜಲ್-80 ರ ಮೊದಲ ದ್ವಿಪದಿ ಓದಿದೊಡನೆ ಮಾನ್ಯ ರವೀಂದ್ರ ಹಂದಿಗನೂರು ಹಾಡಿರುವ” ಕರೆಯಬೇಡ ಕೋಗಿಲೆ, ನನ್ನ ನಲ್ಲೆಯಾ” ನೆನಪಾಯಿತು.ಅದು ನನ್ನ ಮೆಚ್ಚಿನ ಹಾಡು/ಗಜಲ್.

(ಮೊದಲಿಗೆ ಕೊನೆಯ ಗಜಲ್ ಓದುವುದು ಮೊದಲ ಗಜಲಿಗೆ ತಾಳೆ ಹಾಕುವುದು ನನಗೊಂದು ಖಯಾಲಿ)

ಓಟ್ಟು 118 ಪುಟದಲಿ ಜ್ಯೋತಿಯವರ ಗಜಲ್ 81 ಪುಟ ಮಾತ್ರ. ಪ್ರಾರಂಭಿಕ ಗಜಲ್ ಭಕ್ತೆ ಮೀರಾ, ಶರಣೆ ಅಕ್ಕ, ಬಯಲ ಅಲ್ಲಮ ಮೂವರೂ ಸಹ ಸ್ಮೃತಿ ಪಠಲದ ಮೇಲೆ ಬಂದು ಹೋದಂತಾಗುತ್ತದೆ.

ಗಜಲ್-2 “ಆಳನೋಡುವ ಮುನ್ನ ಬದುಕು ಬರಿದಾಯಿತು” ವಾಕ್ಯ ನಿಮ್ಮನ್ನು ಗಂಭೀರತೆಗೆ ಸೆಳೆಯುತ್ತದೆ.

ಗಜಲ್-3 ಕೊನೆಯ ದ್ವಿಪದಿ ” ಸಹನೆ ವಜ್ರದ ಕವಚ” ಎನ್ನವ ಮಾನ್ಯ ಡಿ.ವಿ.ಜಿ ಯ ವರ ಮಾತು ನೆನಪಿಸುತ್ತದೆ.

ಗಜಲ್-4 ಜೋಳಿಗೆಯನು ಜಾಲಾಡಿಸಿ, ಬರಿದಾಗಿಸುವ ಬಗೆಗಿನ ಅನುಭಾವದ ಕಡೆಗೆ ಓಯ್ಯುತ್ತದೆ.

ಗಜಲ್-7 ರ,

” ಕೆಂಡವಾದರೂ ಸರಿ ಇದ್ದಿಲಾಗು, ಉರಿದು ಹೋಗಬೇಡ ಸಶಕ್ತ ಮತ್ಲಾ ಆಗಿದೆ.

ಗಜಲ್-9 ಕೆ, ಮುನ್ನುಡಿ ಕಾರರು ಹೇಳಿದಂತೆ ಸಖಿ ಗಿಂತ ಸಾಕಿ ರಧೀಪ್

ಚನ್ನವಿತ್ತೆಂದು ನನಗೂ ಅನಿಸಿತು.

ಗಜಲ್-11,

ಗಜಲ ಪ್ರಮುಖ ಗುಣ ದ್ವಿಪದಿ ಗಳಂತೆ ಸರಿಯಾಗಿ ಮುದ್ರಿತವಾಗಿಲ್ಲ ,ಅಂತಿಮ ಪ್ರತಿ ನೋಡಿದವರು ಗಮನಿಸಬೇಕಿತ್ತು,ಆದರೂ ಸಹ ಸಹನೀಯವಾದ ಕುಂದೇ ದೊಡ್ಡ ಗಾತ್ರದಲ್ಲಾ.

ಗಜಲ್-10ರ 7 ನೇ ದ್ವಿಪದಿಯಲಿ ಪ್ರಸ್ತಾಪಿಸಿದ ಧಾರಣಾ ಸಾಮರ್ಥ್ಯ ಮೇಲಿನ ಕುಂದನ್ನು ನುಂಗಬಲ್ಲದು.

ಗಜಲ್-12ರ ನಾಮ್ಕೆವಾಸ್ತೆ ಇಂಗ್ಲಿಷ್ನ for the name sake” ನೆನಪಿಸುವ ಒಳ್ಳೆ ಪದಗುಚ್ಛವಾಗಿದೆ.

ಗಜಲ್-13 ರ 2ನೇ ದ್ವಿಪದಿ

ನನ್ನ ಈ 70ರ ಯುವತನದಲಿ  ಅರಿತೋ ಅರಿಯದೆಯೋ ತಪ್ಪುಮಾಡೆದರೆ ಏನು ಗತಿ? ಎಂದು ಯೋಚನೆಗೀಡು ಮಾಡಿ ಎಚ್ಚರದಿ ಇರಲು ಹೇಳಿದಂತಿತ್ತು.

ಗಜಲ್-17, ನನ್ನ ಮನ್ನಿಸಲು ಕೇಳುತ್ತಾ,;

“ಹೋಗಬೇಕು” ರಧೀಫ್” ಬದಲಿಗೆ ” ಇರಬೇಕು, ಮೌನಿಯಾಗಬೇಕು, ಬಾಳಬೇಕು, ಸ್ಥಿರಗೊಳ್ಳಬೇಕು, ಹೋಗಬೇಕು, ನಡೆಯಬೇಕು” ಎಂಬುವ ಅಥವಾ ಇವುಗಳಂತ ಪದಗಳಿಂದ ಜುಲ್ಕಾಫಿಯಾ ಮಾಡುವ ಅವಕಾಶ ವಿತ್ತೆಂದು ನನ್ನ ವಿನೀತ ಅನಿಸಿಕೆ.(ವಿಮರ್ಶೆ ಅಲ್ಲ)

ಗಜಲ್- 18 ರಲಿ ಮೂಡಿಸುವ ಭರವಸೆಯ ಅಂಶ ಮುಂದಿನ ದಿನಗಳಲಿ ಈ ನಿಟ್ಟಿಗೆ ಸೆಳೆಯಬಹುದು.(3-5 ದ್ವಿಪದಿ)

ಗಜಲ್-33 ರ ಮತ್ಲಾ ಚಂದವಿದೆ. ಹೇಳುತ್ತಾ ಹೋದರೆ ಇನ್ನೂ ಇದೆ

ಗಜಲ್ಗಾರ್ತಿಯ ಒಂದು ಚಂದದ ಮಕ್ತಾ

” ಸಂತೆಯ ಮುಗಿಯುತಿದೆ ಚಿಜ್ಯೋತಿ, ಮರಳಿ ಹೋಗಲೆ ಬೇಕು ವಿಧಿ ಇಲ್ಲದೇ”  ಅಕ್ಕನವರ ಸಂತೆಯಲಿ ಮನೆ ಮಾಡಿ, ಶಿಶುನಾಳರ ಹುಲಗೂರ ಸಂತಿಯ ಬಿದ್ದೀಯಬ್ಬೇ ಸಾಲುಗಳ ನಿಮಗೆಲ್ಲಾ ನೆನಪಿಸುತ, ನಾನೂ ನೆನೆಯುತ/ಮನನಮಾಡುತ ವಿರಮಿಸುವೆ ವಂದನೆ.


 ಬಾಗೇಪಲ್ಲಿ

One thought on “ಅತ್ತರಿನ ಭರಣಿ- ಪುಸ್ತಕ ಅವಲೋಕನ

Leave a Reply

Back To Top