ಅನುವಾದ ಸಂಗಾತಿ
ಕಿರು ಬೆರಳ ನೃತ್ಯ
ತೆಲುಗು ಮೂಲ : ಗೀತಾಂಜಲಿ (ಡಾ|| ಭಾರತಿ)
ಕನ್ನಡಾನುವಾದ : ಧನಪಾಲ ನಾಗರಾಜಪ್ಪ
ಐದು ಬೆರಳುಗಳಲ್ಲಿ
ಎಲ್ಲಕ್ಕಿಂತಲೂ ಚಿಕ್ಕ ಬೆರಳು
ನನ್ನ ಚೌಕ ಬಾರದಲ್ಲೂ
ಕಡ್ಡಿಯಾಟ, ಕಬಡ್ಡಿಯಲ್ಲೂ
ಓಟದ ಸ್ಪರ್ಧೆಯಲ್ಲೂ
ಕಠಿಣವಾದ ಗಣಿತ ಸೂತ್ರಗಳನು ಬಿಡಿಸುವಲ್ಲೂ
ಉಳಿದ ನಾಲ್ಕೂ ಬೆರಳುಗಳನು ಕೂಡಿಸಿಕೊಂಡು
ಆತ್ಮವಿಶ್ವಾಸದ ಮುಷ್ಠಿಯಾಗಿ ಮಾರ್ಪಡಿಸಿದ
ನನ್ನ ಕಿರು ಬೆರಳು!
ಕೊನೆಗೆ…
ಚಳುವಳಿಯ ನಾಯಕಿಯಾದರೂ
ರಾಜಕೀಯದ ಅಧಿನೇತ್ರಿಯಾದರೂ
ಮುಷ್ಠಿಯಿಂದ ಹೊಡೆಯುವನನ್ನೋ
ಆಸಿಡ್ ಹಾಕಬೇಕೆಂದುಕೊಳ್ಳುವನನ್ನೋ
ತೋರು ಬೆರಳಿನಿಂದ ಬೆದರಿಸಬೇಕೆಂದರೂ
ತಡೆದು ನಿಲ್ಲಿಸಬೇಕೆಂದರೂ
ಉಳಿದ ನಾಲ್ಕು ಬೆರಳುಗಳಿಗೂ ಬಲ ನೀಡುವ
ಕಿರು ಬೆರಳು!
ಹಾಡೋ, ಕವಿತೆಯೋ
ಕತೆಯೋ, ಆರೋಪವೋ ಬರೆದಾಗಲೆಲ್ಲಾ
ಲೇಖನಿಯನ್ನು ದೃಢವಾಗಿ ಹಿಡಿಯಲು
ನಾಲ್ಕು ಬೆರಳುಗಳಿಗೆ ಬುನಾದಿಯ ಬೆರಳಾಗಿ
ನಿಂತು ಬಿಗಿ ನೀಡುವ ಕಿರು ಬೆರಳು!
ಹೆಮ್ಮೆಯಿಂದ ತಲೆಯೆತ್ತಿ ನಿಲ್ಲುವ ಕಿರು ಬೆರಳು!
ಆದರೆ…
ನಾಲ್ಕು ದಾರಿಗಳು ಕೂಡುವಲ್ಲಿ
ನನ್ನ ದೇಹದಲ್ಲಿನ ಒಂದು ಸಣ್ಣ ದ್ರವದ ಚೀಲ
ಉಂಟುಮಾಡುವ ಒತ್ತಡಕ್ಕೆ ತಲೆ ತಗ್ಗಿಸುವುದು!
ನಾಲ್ಕು ಬೆರಳುಗಳ ಅಪ್ಪುಗೆಯಲ್ಲಿ
ಶರಣಾಗುವಂತೆ ಒರಗಿಕೊಂಡು ಬಗ್ಗಿಹೋಗುತ್ತದೆ!
ಭರಿಸಲಾಗದೆ ಬಿಗಿದ ಮುಷ್ಠಿಯೂ ಕೂಡ
ಆತ್ಮವಿಶ್ವಾಸದ ಪ್ರತೀಕವಾಗದೆ ಅಂಜಿ ಮುದುಡಿಕೊಳ್ಳುವುದು!
ನನ್ನ ಚಿಕ್ಕಂದಿನಲ್ಲಿ ಶಾಲೆಗೆ ಹೋಗುವಾಗ
ದೇಹದಲ್ಲಿ ಕೆರಳಿದ ಸುನಾಮಿಯನು ಹೇಳಲಾಗದೆ
ಮರೆಯೋ ಪೊದೆಯೋ ಸಿಗದೆ ಮುದುಡಿಕೊಂಡಾಗ
ಒತ್ತಿ ಹಿಡಿದ ತೊಡೆಗಳ ಮಧ್ಯೆದಿಂದ ಪಾದಗಳ ಮಧ್ಯೆ
ನೆಲದ ಮೇಲೆ ಚಿಕ್ಕ ಕೆರೆಯೊಂದು ಹುಟ್ಟಿಕೊಂಡು
ಪಕಪಕ ನಕ್ಕವರ ಅಪಹಾಸ್ಯದ ಮಧ್ಯೆ
ಕಂಗಳು ಕೂಡಾ ಕಾರಂಜಿಗಳಾಗುತ್ತಿದ್ದವು!
ನನ್ನ ಯವ್ವನದಲ್ಲಿ
ಶ್ರಾವಣ ಮಾಸವೋ ಧನುರ್ಮಾಸವೋ
ಮಾಸಗಳು ಬದಲಾಗಲೆಲ್ಲಾ
ಕಾಲೇಜಿಗೆ ಹೋಗುವಾಗ ಬಸ್ಸಿನೊಳಗೆ
ಮರೆಯ ತಾವು ಸಿಗುವುದರೊಳಗೆ
ತಡೆದುಕೊಳ್ಳಲಾಗದೆ ತೊಯ್ದುಹೋದ
ನೆತ್ತರಿನ ನೇಪ್ಕಿನ್ನುಗಳ ರಸಾಯನಗಳೊಡನೆ
ನಡೆದ ಪ್ರತಿ ಹೆಜ್ಜೆಯ ತಿಕ್ಕಾಟದಲ್ಲಿ
ಸೀಳಿಹೋದ ಚರ್ಮದ ಸೋಂಕುವುಂಟುಮಾಡುವ
ಉರಿಯನು ಮುಷ್ಠಿ ಬಿಗಿದು ಭರಿಸುತ್ತ ಮಾಸಗಳು ಉರುಳಿದಾಗಲೆಲ್ಲಾ
ಭಯದಿಂದ ಒಂದಕ್ಕೆ ಹೋಗುವುದು
ಪ್ರತಿ ತಿಂಗಳ ಒಂದು ಪದ್ಧತಿಯಾಯಿತು!
ಮಡದಿಯಾದ ಮೇಲೆ
ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೇ ಅಲ್ಲ
ಗಂಡನಲ್ಲವೆ
ಅವನು ಅಂಟಿಸಿದ ಸುಖಕ್ರಿಮಿಗಳಿಗೂ
ನನ್ನ ಮೇಲೆ ಆಧಿಪತ್ಯವೇ!
ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸಿಗದ ಶೌಚಾಲಯಕ್ಕಾಗಿ
ಬಿಗಿಹಿಡಿದ ಮೂತ್ರಾಶಯ ಸೀಳಿಹೋಗುವುದರೊಳಗೆ
ಕಾಣುವ ಯಾವ ಶಾಪಿಂಗ್ ಮಾಲಿಗಾದರೂ
ಕಳ್ಳನಂತೆ ಸಿಗ್ಗುಬಿಟ್ಟು ಓಡಬೇಕಾಗುತ್ತಿತ್ತು!
ಗರ್ಭಚೀಲ-ಮೂತ್ರಚೀಲ ಎರಡೂ ಸಮುದ್ರಗಳಾಗುತ್ತಿದ್ದವು
ನನ್ನ ಮುಷ್ಠಿ ಸಾಧಿಸಿದ ಆತ್ಮವಿಶ್ವಾಸವನ್ನು
ಕಿರು ಬೆರಳು ಸೋಲಿಸುತ್ತಿತ್ತು!
ಈಗ…
ಅಜ್ಜಿ ಆಗಿದ್ದೆನಲ್ಲವೆ
ಮೆನೋಪಾಜ್ ಅಲ್ಲವೆ
ತಡೆದುಕೊಳ್ಳುವ ಬಲವನು ಕಳೆದುಕೊಂಡ
ಮೂತ್ರಚೀಲವನು ಹೊರುವ ವೃದ್ಧ ದೇಹಿಯಲ್ಲವೆ
ಅಜ್ಜಿಯಾದ ಮೇಲೆ ನನ್ನ ಕಿರು ಬೆರಳಿನ್ನೂ ನಾಟ್ಯವಾಡುತ್ತಲೇ ಇದೆ
ನನ್ನ ಮೊಮ್ಮಗಳ ಕಿರು ಬೆರಳಿನ ಜೊತೆ!!
———————————————————-
ತೆಲುಗು ಮೂಲ : ಗೀತಾಂಜಲಿ (ಡಾ|| ಭಾರತಿ)
ಕನ್ನಡಾನುವಾದ : ಧನಪಾಲ ನಾಗರಾಜಪ್ಪ
ಡಾ|| ಭಾರತಿ :- ಇವರು ಹುಟ್ಟಿದ್ದು ಹೈದರಾಬಾದಿನಲ್ಲಿ. ಗೀತಾಂಜಲಿ ಎಂಬುವುದು ಇವರ ಕಾವ್ಯನಾಮ. ವೃತ್ತಿಯಿಂದ ಇವರು ಸೈಕೋಥೆರಾಪಿಸ್ಟ್ ಮತ್ತು ಮ್ಯಾರಿಟಲ್ ಕೌನ್ಸಲರ್ ಆಗಿದ್ದಾರೆ. ‘ಆಮೆ ಅಡವಿನ ಜಯಂಚಿಂದಿ’ (ಆಕೆ ಅಡವಿಯನ್ನು ಗೆದ್ದಳು-ಕಾದಂಬರಿ), ‘ಪಾದಮುದ್ರಲು’ (ಪಾದಮುದ್ರೆಗಳು-ಕಾದಂಬರಿ), ಲಕ್ಷ್ಮಿ (ಕಾದಂಬರಿ), ‘ಬಚ್ಚೇದಾನಿ’ (ಗರ್ಭಾಶಯ- ಕಥಾ ಸಂಕಲನ), ‘ಪಹೆಚಾನ್’ (ಮುಸ್ಲಿಂ ಸ್ತ್ರೀಯರ ಕಥಾ ಸಂಕಲನ), ‘ಪಾಲಮೂರು ವಲಸ ಬತುಕು ಚಿತ್ರಾಲು’ (ಪಾಲಮೂರು ಬಲಸೆ ಬದುಕಿನ ಚಿತ್ರಗಳು – ಕಥಾ ಸಂಕಲನ), ‘ಹಸ್ಬೆಂಡ್ ಸ್ಟಿಚ್’ (ಸ್ತ್ರೀ ವಿಷಾದ ಲೈಂಗಿಕ ಗಾಥೆಗಳು), ‘ಅರಣ್ಯ ಸ್ವಪ್ನಂ’ (ಕವನ ಸಂಕಲನ) ಇವು ಇವರ ಕೃತಿಗಳು. ಇವರ ಸಾಹಿತ್ಯ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಗಿದೆ.
ಸಂಗಾತಿ ಬಳಗಕ್ಕೆ ಧನ್ಯವಾದಗಳು
ಚಂದದ ಕವಿತೆ ಸರ್