ಮಲ್ಲಿಕಾರ್ಜುನ ಸ್ವಾಮಿ ಅವರ ಕೃತಿ ‘ನಿರಾಕಾರಿ'(ಕಥಾ ಸಂಗಮ) ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ

ಜೀವ ನೀರಮೇಲಣ ಗುಳ್ಳೆಯಂತೆ, ಜೀವನ ಕಮಲದ ಎಲೆಯಂತೆ”, ನಾವು ಇರಬೇಕು, ಇದ್ದು ಇರದಂತಿರಬೇಕು. ಎಲ್ಲವನ್ನೂ ಸ್ವೀಕರಿಸಬೇಕು, ಸ್ವೀಕರಿಸಿದಷ್ಟೇ ವಿನಮ್ರವಾಗಿ ನಿರ್ವ್ಯಾಮೋಹದಿ ತ್ಯಜಿಸಲು ಸಿದ್ಧರಿರಬೇಕು. ವರ್ತಮಾನದಲ್ಲಿ ಸುತ್ತಲಿನ ವಾತಾವರಣದಲ್ಲಿ ಎಲ್ಲರನ್ನೂ ನಮ್ಮವರೆಂದು ಭಾವಿಸಬೇಕು. ನಮ್ಮವರೇ ಆದರೂ ನಮ್ಮತನದ ಪರಿಧಿಯಿಂದ ಅವರನ್ನು ಹೊರಗಿಡಬೇಕು.
 
          ಮಸ್ತಕದಲ್ಲಿ ಇಷ್ಟೆಲ್ಲಾ ವಿಚಾರ ಧ್ವನಿಸಿದ್ದಕ್ಕೆ ಕಾರಣ, ನಾ ಓದಿದ “ನಿರಾಕಾರಿ” ಪುಸ್ತಕ. ಬದುಕಿನಲ್ಲಾದ ಅನುಭವಗಳ ಬುತ್ತಿಯಲ್ಲಿನ ಹೂರಣವನ್ನು ಓದುಗನ ಓದಿನ ಬಾಳೇ ಎಲೆಯಲ್ಲಿ “ನಿರಾಕಾರಿ” ಎಂಬ ಕಥಾಸಂಗಮದ ಮೂಲಕ ಉಣಬಡಿಸಿದ ಮಹಾ “ಮಹಿಮ”ರು ನಮ್ಮ ಹೆಮ್ಮೆಯ ಅಧಿಕಾರಿಗಳಾಗಿಯೂ ಆದರ್ಶವನ್ನೇ ಪಾಲಿಸುತ್ತ, ಸರ್ವಾಧಿಕಾರಿಯಾಗುವ ಅವಕಾಶವಿದ್ದರೂ ಸರಳತೆಯನ್ನೇ ಉಸಿರಾಗಿಸಿಕೊಂಡ, ಆಜ್ಞಾಪಿಸುವ ಆಸನದಲ್ಲಿದ್ದರೂ ಆತ್ಮೀಯತೆಯನ್ನೇ ಮೈಗೂಡಿಸಿಕೊಂಡ ಶ್ರೀಯುತ ಮಲ್ಲಿಕಾರ್ಜುನಯ್ಯ ಸ್ವಾಮಿ ಹಿರೇಮಠ ( ನಿವೃತ್ತ ಪ್ರಾಂಶುಪಾಲರು ಡಯಟ್, ರಾಯಚೂರು)ಅವರು.
       
       ನೀಡಬೇಕಾದ ಒಂದು ಸಂದೇಶವನ್ನು ಲೇಖನವಾಗಿ ಬರೆಯುವುದಕ್ಕೂ, ಕಥೆಯನ್ನಾಗಿಸಿ ಬರೆಯುವುದಕ್ಕೂ ಬಹಳ‌ ವ್ಯತ್ಯಾಸವಿದೆ. ಲೇಖನ ಭಾವನೆಗಳನ್ನು ಬಿತ್ತುವುದಿಲ್ಲ ಆದರೆ ಕಥೆ ಭಾವನೆಗಳಿಗೆ ಹೆಚ್ಚಿನ ಟಾನಿಕ್ ನೀಡುತ್ತದೆ. ಇದನ್ನರಿತ ಕೃತಿಕಾರರು ಎಲ್ಲ ಸಂದೇಶಗಳನ್ನು ಕಥಾ ರೂಪಕ್ಕೆ ತಂದಿದ್ದಾರೆ. ಇಲ್ಲಿಯ ಅನೇಕ ಕಥೆಗಳನ್ನು  ಹಿರಿಯರಲ್ಲದೆ ಮಕ್ಕಳು, ಯುವಕರು ಓದುವ ಅವಶ್ಯಕತೆ ಇದೆ ಅನಿಸುತ್ತದೆ. ಏಕೆಂದರೆ ಈ ಕೃತಿ ಸಾಮಾಜಿಕವಾಗಿ, ಕೌಟುಂಬಿಕವಾಗಿ, ಪ್ರೇಮಮಯಿಯಾಗಿ ಹೇಗೆ ಪ್ರಾಮಾಣಿಕವಾಗಿ ಬದುಕಬಹುದೆಂಬುದನ್ನು ತಿಳಿಸುತ್ತದೆ.
                             ***
      ಒಟ್ಟು 42 ಕಥೆಗಳನ್ನೊಳಗೊಂಡ ಈ “ನಿರಾಕಾರಿ” ಸುಸ್ಪಷ್ಟವಾಗಿ ಬದುಕಿಗೆ ಹತ್ತಿರದ ಪಕ್ವಯುತ ಸಣ್ಣ, ಸಣ್ಣ ಕಥಾನಕಗಳನ್ನು ಒಳಗೊಂಡಿದೆ. ಕಥೆಗಳು ಚಿಕ್ಕವಾಗಿದ್ದರೂ ನಮ್ಮ ಜೀವನದ ದಿಕ್ಕನ್ನು ಬದಲಿಸಲು ಸಹಕಾರಿಯಾಗಿವೆ. ಅಂತಹ ಕಥೆಗಳ ಒಂದಷ್ಟು ಅಂತರಾಳದ ಸತ್ಯ, ಸತ್ವದ ಕುರಿತಾಗಿ ನನ್ನ ಅಭಿಪ್ರಾಯವನ್ನು ಹೊರಹಾಕಲು ನಾನು ಪ್ರಯತ್ನಿಸುತ್ತಿದ್ದೇನೆ.
  *      ಬದುಕಿದ್ದಾಗ ಪ್ರಿತಿ ನೀಡಿ ಆದರಿಸದೆ, ಸತ್ತ ನಂತರ ಕ್ಷಮೆ ಕೇಳಿ ಅಶ್ರು ತರ್ಪಣ ನೀಡಿ ತಪ್ಪಾಯ್ತು ಅಂತ ಕೇಳೋ ಮಕ್ಕಳಿಗೇನು ಕಮ್ಮಿ ಇಲ್ಲ. ಆ ಕ್ಷಣದಲ್ಲಿ ಮೃತ ತಂದೆ, ತಾಯಿ, ಗೋರಿಯೊಳಗೆ “ಮಹೌಮೌನ” ವಹಿಸದೆ ಮತ್ತಿನ್ನೇನು ಮಾಡಿಯಾರು. ಹೆತ್ತವರನ್ನು ಕಳೆದುಕೊಂಡ ನಂತರ ನೊಂದು ಫಲವಿಲ್ಲ ಎಂಬಂತ ಮೊದಲ ಕಥೆ “ಮಹಾಮೌನ” ಓದುಗನ ನಿರ್ಲಜ್ಜ ಮೌನವನ್ನು ಮುರಿಯುತ್ತದೆ.
*      “ಮಾಮ ಮತ್ತು ಮುಗಿಲು” – ರೈತನಿಗೆ ಬೇಕಾಗಿರುವುದು ಮಳೆ, ಬೆಳೆ ಮತ್ತು ಅದಕ್ಕೆ ತಕ್ಕ ಬೆಲೆ. ಅದರ ನಿರೀಕ್ಷೆಯಲ್ಲಿರುವ ರೈತನೆದುರು ಬಂದ ಸ್ವಾಮೀಜಿ ಮತ್ತು  ಅವರ ಅನುಕೂಲ ಸಿಂಧು ಮಾತುಗಳು ಒಂದೆಡೆಯಾದರೆ; ಬಾರದ ಮಳೆಯ ಕುರಿತಾದ ಮತ್ತು “ಪ್ರಾರ್ಥನೆಗಿಂತ ಮೂಕ ವೇದನೆಗೆ ದೈವ ಒಲಿಯುವುದು” ಎಂದು ನಂಬಿದ ರೈತನ ವಿಶ್ವಾಸಕ್ಕೆ ಧಕ್ಕೆ ತರದೆ ಬಂದ ಮಳೆರಾಯನ ಕಥೆ ಚೆನ್ನಾಗಿ ಮೂಡಿಬಂದಿದೆ. “ಆ ಪೈರುಗಳಿದ್ದರೆ ಈ ಪೈರುಗಳು” ಎಂಬಂತೆ ಭೂ ತಾಯಿ ಕೊಟ್ಟ ಪೈರುಗಳು ಇದ್ದರೆ ಮಾತ್ರ ನಮ್ಮ ಒಡಲಿಂದ ಹುಟ್ಟಿದ ಪೈರುಗಳು ಸಂತಸದಿಂದಿರುತ್ತವೆ ಎಂಬ ಮಾತು ಓದುಗನಿಗೆ ತಾಕುತ್ತವೆ.
*      “ನಿನಗ ಸೈತ ಬಸ್ವಣ್ಣ ಅರ್ತ ಆಗಿಲ್ಲ ಬುಡು” ಎಂಬ ಕಥೆಯಲ್ಲಿನ, ಕರಿಯಣ್ಣನ ಮಾತುಗಳು ಸ್ವಾಮೀಜಿಗಳ ಮನಸನ್ನೇ ಬದಲಿಸುತ್ತವೆ.
     “ಮುತ್ತೈದೆಯರಿಗೆ ಉಡಿ ತುಂಬೋ ಕಾರ್ಯ ಗಂಡನ್ನ ಕಳಕಂಡ ಅದೆಷ್ಟೋ ಹೆಣ್ಣು ಮಕ್ಕಳಿಗೆ ನೋವು ನೀಡ್ತದೆ. ಇಂಥಾ ಪಾಪದ ಕೆಲಸಕ್ಕ ನೀ ಹೋಗಬ್ಯಾಡ ತಂದಿ, ನಿನ್ ಕಾಲಿಗೆ ಬೀಳ್ತೀನಿ”, ಎಂದು ಕರಿಯಣ್ಣ ಸ್ವಾಮೀಜಿಗೆ ಕೇಳಿಕೊಳ್ತಾನೆ. ಇದನ್ನು ಕೇಳಿದ ಸ್ವಾಮೀಜಿ, “ನನಗ ಬಸವಣ್ಣ ಅರ್ಥ ಆಗಿರಲಿಲ್ಲ, ಕರಿಯಣ್ಣ ಅರ್ಥ ಮಾಡಿಸಿದ” ಎನ್ನುತ್ತಾರೆ. ಪರರ ಮನಸನ್ನು ನೋಯಿಸದೇ ಇರೋದೇ ಬಸವಣ್ಣನ ತತ್ವ. ಅದನ್ನು ಕೃತಿಕಾರರು ಅತ್ಯಂತ ಪ್ರಭಾವಯುತವಾಗಿ ಕಥೆಯಲ್ಲಿ ತೋರ್ಪಡಿಸಿದ್ದಾರೆ.
*       ‘ದುಡಿಯದೇ ತಿನ್ನಬಾರದು’ ಎಂಬ ಸಂದೇಶವನ್ನು ದನಗಳ ಮೂಲಕ ಕಟ್ಟಿಕೊಟ್ಟ ಕಥೆ “ಗೌಡ್ರೇ ದನ ಮಾರಾಟ ಮಾಡ್ತೀರಾ”.
    ಮನುಜರಲ್ಲಿ ಹಲವರು ಪುಗಸಟ್ಟೆ ದುಡ್ಡು ಬಂದರೆ‌ ಬಿಡೋದೇ ಇಲ್ಲ, ಆದರೆ ಆದರ್ಶಗಳನ್ನೇ ರೂಢಿಸಿಕೊಂಡ ಲೇಖಕರು ದುಡಿದೇ ತಿನ್ನಬೇಕು ಎಂಬುದನ್ನು ಅತ್ಯಂತ ಮನೋಜ್ಞವಾಗಿ ಈ ಕಥೆಯಲ್ಲಿ ಚಿತ್ರಿಸಿದ್ದು ಸೋಮಾರಿಗಳಿಗೆ ಪಾಠವಾಗುತ್ತದೆ.
*        ದುಬಾರಿ ಉಡುಗೊರೆ ಕೊಡಲು ಹೋದ ಪ್ರೇಮಿಗೆ “ಕೇವಲ ಒಂದು ಸೀರೆ ಕೊಡಿಸು ಸಾಕು” ಎನ್ನುವ ಹೆಣ್ಣಿನ ಕಥೆ ನಿಜಕ್ಕೂ ಓದುಗನನ್ನು ಭಾವಪರವಶನನ್ನಾಗಿಸುತ್ತದೆ. ಪ್ರೀತಿಯಲ್ಲಿ ನಿರೀಕ್ಷೆಗಳೇ ಅಧಿಕ. ಒಂಚೂರು ವ್ಯತ್ಯಾಸವಾದರೂ ಕೋಲಾಹಲ ಎದ್ದೇಳುವುದು ನಿಶ್ಚಿತ. ಈ ಕಲಹಕ್ಕೆ ಲಿಂಗ ಬೇಧವೆಂಬುದಿಲ್ಲ. ಆದರೆ ಇಲ್ಲೊಂದು ಹೃದಯ ನಿರೀಕ್ಷೆ ಇಲ್ಲದೆ, ತನ್ನ ಪ್ರಿಯಕರನ ಪೂರ್ವಾಪರ ಹಿನ್ನೆಲೆ ತಿಳಿಯದೆ, ಅವನು ಹೇಳಲು ಬಂದರೂ ಬಾಯಿಗೆ ಬಾಯಿ ಇಟ್ಟು ಮುತ್ತಿಕ್ಕಿ ನನಗೆ ನೀನಷ್ಟೇ ಬೇಕು ನಿನ್ನ ಹಿನ್ನೆಲೆ ಬೇಡ ಎನ್ನುತ್ತದೆ. ತನ್ನ ಬಗೆಗೆ ಪ್ರಿಯಕರ ಕೇಳಿದರೆ “ನಾನೊಂದು ಹೆಣ್ಣು, ನಿನ್ನನ್ನು ಮನಸಾರೆ ಪ್ರೀತಿಸುತ್ತೇನೆ, ನನ್ನನ್ನು ನಂಬಬಹುದು” ಎಂದು ಮತ್ತೆ ತುಟಿ ಸೋಕಿಸಿ ಸುಮ್ಮನಾಗಿಸುತ್ತಾಳೆ. ನನ್ನ ಮನೆಗೆ ಬಾ ಜೊತೆ ಇರೋಣ ಎಂದರೆ, ಅವನ ಎದೆ ಮುಟ್ಟಿ “ಇದು ನನ್ನ ಮನೆ” ಎನ್ನುತ್ತಾಳೆ. ಇಂತಹ ಹೆಣ್ಣನ್ನು ಸೃಷ್ಟಿಸಿದ ಕಥೆಗಾರರ ಪ್ರೇಮದ ಕಲ್ಪನೆ ಬಹು ಎತ್ತರದ್ದೆನಿಸುತ್ತದೆ. ಕಡೆಗೆ ಕೋಮಾಗೆ ಹೋದ ಪ್ರಿಯಕರನನ್ನೂ ಆಕೆ ಮಾತು, ಸ್ಪರ್ಶದಿಂದ ಬದುಕಿಸಿಕೊಂಡು ವೈದ್ಯರೇ ಅಚ್ಚರಿಪಡುವಂತೆ ಮಾಡುತ್ತಾಳೆ.
*     ಈ ಕಥೆ ಆಪ್ತಾವಾಗುತ್ತದೆ ಆದರೆ ಮುಂದೆ, “ಮದುವೆ ಎಂದರೆ ಒಬ್ಬರ ಸ್ವಾತಂತ್ರ್ಯವನ್ನು ಮತ್ತೊಬ್ಬರು ಕಸಿದುಕೊಳ್ಳುವ ಕ್ರಿಯೆ, ಮದುವೆಯಾದರೆ ಪರಸ್ಪರ ದಾಸ್ಯದಿಂದಿರಬೇಕಾಗುತ್ತದೆ. ಹಾಗಂತ ನಾನೇನು ಸ್ವೇಚ್ಛಾಚಾರಿಯಲ್ಲ, ನಿನ್ನನ್ನು ಹೊರತುಪಡಿಸಿ ಯಾರಿಗೂ ಈ ಹೃದಯದಲ್ಲಿ ಸ್ಥಾನವಿಲ್ಲ. ನೀನು ನನ್ನ ದೇಹಕ್ಕೆ ತಾಳಿಕಟ್ಟಲು ಯೋಚಿಸುತ್ತಿರುವೆ, ನನ್ನ ಮನಸಿಗೆ ಎಂದೋ ತಾಳಿ ಕಟ್ಟಿದೀಯಾ, ಮನಸು ಮನಸುಗಳ ಮಿಲನವೇ ಲಗ್ನ” ಎಂಬ ಮಾತುಗಳನ್ನು ತನ್ನ ಮನದರಸನಿಗೆ ಹೇಳುತ್ತ ಮದುವೆಯೆಂಬುದೇ ಬಂಧನ ಎನ್ನುವಂತಿದ್ದ “ಮೋನಿಕಾ”ಳ(ಕಥೆಯ ಶೀರ್ಷಿಕೆ) ನಡೆ ಕೆಲ ಓದುಗನಿಗೆ ಒಂದು ದೃಷ್ಟಿಕೋನದಿಂದ ಸರಿ ಎನಿಸಿದರೂ, ಸಮಾಜಕ್ಕೆ ಅಂಜಿ ಬದುಕುವ ಅವಶ್ಯಕತೆ ಇಲ್ಲದಿದ್ದರೂ ಬದುಕಿನಲ್ಲಿ ಒಂದು ಭದ್ರತೆ, ಜವಾಬ್ದಾರಿಗಾಗಿ ಒಂದು ನಿಬಂಧನೆ ಬೇಕೇ ಬೇಕು ಎಂಬ ಆಲೋಚನೆಯುಳ್ಳ ನನ್ನಂತಹ ಓದುಗರಿಗೆ ಮೋನಿಕಾ ಸ್ವಲ್ಪ ಇರುಸು ಮುರುಸಾಗುತ್ತಾಳೆ. ಹೃದಯ ಒಪ್ಪಿಕೊಂಡರೂ ಬುದ್ಧಿ ಒಪ್ಪದಂತಹ ಸ್ಥಿತಿಯ ಕಥೆ ಸರಿ – ತಪ್ಪುಗಳ ನಡುವೆ ವಿಚಾರ ಮಾಡುವಂತೆ ಮೂಡಿಬಂದಿದೆ.
*      ಭಗ್ನ ಪ್ರೇಮಿಗಳು ತಾವು ಆತ್ಮಹತ್ಯೆ ಮಾಡಿಕೊಂಡರೆ, ತಮಗೆ ಮೋಸ ಮಾಡಿದ ಪ್ರೇಮಿ ಆ ದುರಂತದ ಕುರಿತು ಜೀವನ ಪೂರ್ತಿ ಕೊರಗುತ್ತಾ, ಮರುಗುತ್ತಾ ಇರುತ್ತಾರೆ ಎಂಬ ಭ್ರಮೆಯಲ್ಲಿರುತ್ತಾರೆ. ಬದುಕಿದ್ದಾಗಲೇ ಬಿಟ್ಟು ಹೋದವರು ಸತ್ತ ಮೇಲೆ ಇವರ ಬಗ್ಗೆ ಆಲೋಚಿಸುತ್ತಾರೆ ಎನ್ನುವುದು ನಿಜಕ್ಕೂ ಭ್ರಮೆಯೇ. ಇಂತಹ ಭ್ರಮೆಯಲ್ಲಿ ಸಾಯಲು ಹೊರಟ ಒಬ್ಬ ಯುವಕನಿಗೆ, “ನೀ ಸತ್ತರೆ ಮರುಗುವುದು ನಿನ್ನ ಹೆತ್ತವರೇ ಹೊರತು ನಿನ್ನ ಮಾಜಿ ಪ್ರೇಮಿಯಲ್ಲ”, ಎಂಬ ಸತ್ಯದ ದರ್ಶನವನ್ನು ಯುವಕನಿಗೆ ರೈಲ್ವೇ ಸ್ಟೇಷನ್ ಮಾಸ್ಟರ್ ಮುಖೇನ ಮಾಡಿಸಿ, “ಹೋಗು ಮೊದಲು ‘ಮನುಷ್ಯನಾಗು’ Love the truth, Love your parents” ಎಂದು ಹೇಳಿ ಅವನ ಮನಃಪರಿವರ್ತನೆ ಮಾಡಿಸುವ ಕಥೆಯನ್ನು ಭ್ರಮಾ ಲೋಕದಲ್ಲಿ ಮೋಜು ಮಾಡುತ್ತಿರುವ ಎಲ್ಲ ಯುವಕ, ಯುವತಿಯರು ಓದಲೇಬೇಕು.
*       ಬಡತನವನ್ನು ಕಂಡುಂಡು, ಅದನ್ನು ಮೀರಿ ಬೆಳೆದು ನಿಂತರೂ ಅಹಂಕಾರವನ್ನು ತೋರದ ಹುಡುಗನ ಕಥೆ “ಸೂರ್ಯ ಮತ್ತು ಹವಾಯಿ ಚಪ್ಪಲಿ”. ತನ್ನ ತಂದೆಯ ಸವೆದ ಚಪ್ಪಲಿಯನ್ನು ಶೋಕೇಸಿನಲ್ಲಿಟ್ಟ ಮಹಾನುಭಾವನ ಕಥೆ. ತಂದೆ ತಾಯಿ ಮಕ್ಕಳಿಗಾಗಿ ಮಾಡುವ ತ್ಯಾಗದ ಪ್ರತಿಬಿಂಬದ ಕಥೆ ಅಪ್ತವಾಗಿದೆ, ಮನಮುಟ್ಟುವಂತಿದೆ, ಮನ ಕರಗಿಸಿ ಬದುಕನ್ನು ಬದಲಾಯಿಸುವಂತಿದೆ.
*      ಓಟಿಗಾಗಿ ನೋಟು ಪಡೆಯುವವರು ಓದಲೇ ಬೇಕಾದ ಕಥೆ “ಮಾನ ಮರ್ವಾದಿ ಇನ್ನೂ ಉಳಿಸಿಗೆಂಡೀವಿ ಎಣ್ಣಾ”. ಹೊಟ್ಟೆಗೆ‌ ಹಿಟ್ಟಿಲ್ಲದಿದ್ದರೂ ಓಟಿಗಾಗಿ ನೋಟು ಕೊಡಬಂದವರಿಗೆ ಮೈ ಛಳಿ ಬಿಡಿಸಿದ ಮಾಳವ್ವನ ಕಥೆ ಅನುಕರಣೀಯವಾಗಿದೆ.
*        ಪ್ರೇಮವೆಂಬುದು ಎಷ್ಟು ಮಧುರವೋ, ಪ್ರೇಮಿಗಳ ಸಮಾಗಮ, ಮನಸು ಮತ್ತು ಮೈ ಹಂಚಿಕೊಳ್ಳುವಿಕೆ ಎಷ್ಟು ಮಧುರವಾಗಿರುತ್ತದೆಯೋ ಅದೇ ಪ್ರೇಮ, ಅದೇ ತನು – ಮನಗಳನ್ನು ತಪ್ಪಾದವರೊಂದಿಗೆ ಹಂಚಿಕೊಂಡರೆ ಬದುಕು ಎಂತಹ ಘೋರ ದುಸ್ಥಿತಿಗೆ ತಲುಪುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುವ ಕಥೆ “ಯೌವನದ ಹೊಳೆಯಲ್ಲಿ”.
       ಪತಿ, ಇಬ್ಬರು ಮಕ್ಕಳಿದ್ದರೂ ಅನೈತಿಕವಾಗಿ‌ ಸಂಬಂಧ ಬೆಳೆಸಿದ ಹೆಣ್ಣಿನ ಸಾವಿನ ಕಥೆ ಅನೈತಿಕ ಸಂಬಂಧದಿಂದಾಗುವ ದಾರುಣತೆಯನ್ನು ಬಿಚ್ಚಿಡುತ್ತದೆ.
      ಈ ಕಥೆಯಲ್ಲಿ “ನಿನ್ನ ಗಂಡನಿಗೆ ನನಗೆ ತೋರಿಸಿದ ಪ್ರಿತಿಯಲ್ಲಿ ಕೇವಲ ಒಂದು ಭಾಗ ತೋರಿಸಿದ್ದರೆ ಆತ ಧನ್ಯನಾಗುತ್ತಿದ್ದ” ಎನ್ನುವ  ಸಾಲುಗಳು ನಿಜಕ್ಕೂ ವಿವಾಹೇತರ ಅನೈತಿಕ ಸಂಬಂಧ ಇಟ್ಟುಕೊಳ್ಳುವ ಹೆಣ್ಣು ಮಕ್ಕಳಿಗೆ ಮುಖಕ್ಕೆ ಹೊಡೆದಂತಿದೆ ಮತ್ತು ಇದನ್ನರಿತರೆ ಜ್ಞಾನೋದಯವೂ ಆಗುವಂತಿದೆ.
 *    “ಹೇಳೋದು ಆಚಾರ ತಿನ್ನೋದು ಬದನೇಕಾಯಿ” ಎಂಬ ಮಾತು ಗೊತ್ತೇ ಇದೆ, ಬಸವಣ್ಣನ ಎಲ್ಲಾ ಸಮಾನತೆಯ ನುಡಿಗಳು ಭಾಷಣಕ್ಕೆ ಸೀಮಿತ ಮಾಡಿಕೊಂಡಿದ್ದ ಗುರೂಜಿ ಮತ್ತು ಅವನ ಭಾಷಣವನ್ನು ಕೇಳಿ ಅವನ ಅನುಯಾಯಿಯಾಗಿದ್ದ ವಿರೂಪಾಕ್ಷನ ನಡುವೆ ಬೆಸೆದ‌ ಕಥೆ ಮಾರ್ಮಿಕವಾಗಿದೆ. “ಮಾತೇ ಬ್ಯಾರೇ ಕೃತಿನೇ ಬ್ಯಾರೆ” ಅನ್ನೋ ಗುರುವಿನ ಮಾತಿಗೆ ಸಿಡಿದೆದ್ದ ವಿರೂಪಾಕ್ಷ ಬಸಣ್ಣನವರ ‘ನಿಜವಾದ ಕೊಲೆಗಾರರು ನೀವು’ ಎಂದು ಗುರುವಿನ ಮುಖಕ್ಕೆ ಉಗಿದ ಕಥೆ “ಏನಿದು ಬಸವಾ” ಚಿಂತನಾಶೀಲವಾಗಿದೆ.
*      ಬಹುತೇಕ ದಾಂಪತ್ಯದಲ್ಲಿ ಗಂಡ ಹೆಂಡಿರ ನಡುವೆ ಬಿರುಕು ಮೂಡೋದು, ಹೆಣ್ಣಿನ ತಾಯಿ ತನ್ನ ಮಗಳ ಕಿವಿಯೂದುವಿಕೆಯಿಂದ ಎಂಬುದು ಮುಜುಗರದಿಂದಲೇ, ಒಪ್ಪಿಕೊಳ್ಳಬೇಕಾದ ಸತ್ಯ.  
       ಮದುವೆಯಾಗಿ ನಾಲ್ಕು ವರ್ಷಗಳಾಗಿ ಮಕ್ಕಳಾಗದಿದ್ದರೂ, ಗಂಡನನ್ನು ಗೌರವಾದರಗಳಿಂದ ಕಂಡು, ಗಂಡನೊಂದಿಗೆ ಸುಖೀ ದಾಂಪತ್ಯ ನಡೆಸುತ್ತಿದ್ದ ಮಗಳಿಗೆ ಅಳಿಯನ ವಿರುದ್ಧ “ಸೆಟೆದು ನಿಲ್ಲು, ಅಯ್ಯೋ ಎನ್ನುವಂತೆ ಮಾಡು, ರಾತ್ರಿ ಒಂದೇ ಮಂಚದಲ್ಲಿದ್ದರೂ ಮುಟ್ಟಿಸಿಕೊಳ್ಳಬೇಡ, ಮಕ್ಕಳಾಗದಿದ್ದಕ್ಕೆ ನೀನೇ ಕಾರಣ ಎಂದು ದೂಷಿಸು, ಹಂಗಿಸು, ಹೆದರಿಸು, ದಿನಾ ಕಿರಿಕ್ ಮಾಡ್ತಾನೆ ಇರು, ಜಗಳ ಅಡ್ತಾನೇ ಇರು, ಬಂಗಾರ ಮಾಡ್ಸು ಅನ್ನು, ಸೀರೆ ಬೇಕು ಅನ್ನು,  ನಾನು ನಿಮ್ಮಪ್ಪಂಗೆ ಹೀಗೆ ಪೀಡಿಸಿದ್ದಕ್ಕೇ ನಿನಗೆ ನಲವತ್ತು ತೊಲೆ ಬಂಗಾರ ಬಂದದ್ದು, ಇಂದೇ ಕಿರಿಕ್ ಶುರು ಮಾಡು, ಮಾರಿಯಾಗು, ರಣಚಂಡಿಯಾಗು” ಎಂದು ಪಾರಿಜಾತ ಮಗಳು ಜಾನಕಿಗೆ ಚುಚ್ಚಿಕೊಡುತ್ತಾಳೆ. ಆದರೆ ಮಗಳು ಜಾನಕಿ ತನ್ನ ತಂದೆ, ತನ್ನ ತಾಯಿಯಿಂದ ಅನುಭವಿಸಿದ ನೋವನ್ನೆಲ್ಲ ನೆನೆದು, ಮರುದಿನ ನಲವತ್ತು ತೊಲೆ ಬಂಗಾರವನ್ನು ತಾಯಿಯ ಕೈಗೆ ಇಟ್ಟು, ದೇವರಂತಹ ನನ್ನ ಗಂಡನ್ನ ನೋಯಿಸಲಾರೆ ನೀ ಹೊರಡು ಎಂದು ಮನೆಗೆ ಮರಳುತ್ತಾಳೆ. ಸುಶಿಕ್ಷಿತ ಹೆಣ್ಣು ಮಕ್ಕಳು ಯಾವತ್ತಿಗೂ ಸತ್ಯವನ್ನರಿತು, ಸುಶೀಲರಾಗಿಯೇ ಬಾಳಬೇಕೇ ಹೊರತು ತಾಯಿಯೋ, ಮತ್ಯಾರೋ ಹೇಳುವ ಚಾಡಿ ಮಾತುಗಳಿಗೆ ಕಿವಯಾಗಿ ಸಂಸಾರವನ್ನು ನರಕವಾಗಿಸಿಕೊಳ್ಳಬಾರದೆಂಬ ಮೌಲ್ಯಯುತ ಸಂದೇಶದ ಕಥೆ “ನಿನಗೆ ಕೇಡುಗಾಲ ಕಣೆ” ಓದಗರಿಗೆ ಖಂಡಿತ ತಲುಪುತ್ತದೆ.
*        ಒಂದು ಕೊಲೆಯ ಸುತ್ತ ಹೆಣೆದ ಕಥೆ “ನೀವು ರವಿಯವರು ಅಲ್ವಾ” ಒಂದು ದೃಷ್ಟಿಯಲ್ಲಿ  ರವಿಯ ಬಗ್ಗೆ ಅಯ್ಯೋ ಎನಿಸಿದರೆ, ಮತ್ತೊಂದು ಆಲೋಚನೆಯಲ್ಲಿ ಬೇನಾಮಿ ಆಸ್ತಿ ಮಾಡಿದವರ ಅಂತ್ಯ ದುರಂತಮಯವಾಗಿರುತ್ತದೆ ಅನಿಸುತ್ತದೆ.
*       ಮಾನವನಿಗೆ ಶಾಂತಿ, ನೆಮ್ಮದಿ, ಮೋಕ್ಷ ಲಭಿಸಬೇಕೆಂದರೆ ಮನೋಕಾಮನೆಗಳ ಮೇಲೆ ನಿಗ್ರಹ ಇರಬೇಕು. ವಿಲಾಸಿ ಬದುಕು ಸಿಗದಿದ್ದಾಗ ಮೂಡುವ ವೈರಾಗ್ಯ ಶಾಶ್ವತವಲ್ಲ, ಎಲ್ಲ ಇದ್ದೂ ಬೇಡವಾದರೆ ಅಲ್ಲಿ ಪಕ್ವತೆ ಹುಟ್ಟುತ್ತದೆ. ಇಂತಹ ವಿಷಯ ವಸ್ತುವಿನ ಮೇಲೆ ಹೆಣೆದ ಕಥೆ, “ನಡೆಯಾಚೆ ಪಾಪಿ… ಯಾರು ನೀನು” ವೈಚಾರಿಕ ಚಿಂತನೆಗೆ ಹಚ್ಚುವಂತದ್ದಾಗಿದೆ.
*        ಕೃತಿಯ ಶೀರ್ಷಿಕೆಯ ಕಥೆ “ನಿರಾಕಾರಿ” ಓದುಗನ ಹೃದಯವನ್ನು ಆರ್ದ್ರವಾಗಿಸುತ್ತದೆ. ಪ್ರಸನ್ನವಾದ ಮುಖ ನೋಡಿ ಪರವಶವಾಗುವುದು, ಮಾತಿನಿಂದ ಪ್ರಭಾವಿತವಾಗುವುದು, ಜನ್ಮಾಂತರ ಸಂಬಂಧಿಗಳಂತೆ ವಿಷಯ‌ ವಿನಿಮಯ‌ ಮಾಡಿಕೊಳ್ಳವುದು ಎಲ್ಲವೂ ಓದುಗನಿಗೆ ಸೋಜಿಗ ಅನಿಸುತ್ತದೆ. ಸಂಬಂಧವೇ ಇರದ ವ್ಯಕ್ತಿ ಅಲ್ಪ ಸಮಯದಲ್ಲೇ ಮಾನಸಿಕವಾಗಿ ಭ್ರಾತೃತ್ವ ಭಾವನೆಯನ್ನು ಹೃದಯದಲ್ಲಿ ತುಂಬಿಕೊಳ್ಳುವುದು, ಅಣ್ಣಾ ಎಂದು ಸಂಬೋಧಿಸುವುದು. ಹೀಗೆ ಬೆಸೆದ ಬಾಂಧವ್ಯ ಪರಿಕಲ್ಪನೆಯ ಕಥೆ ತುಂಬಾ ಸೊಗಸಾಗಿದೆ.
*       ಬುದ್ಧನಂತಹ ಅಪ್ಪನನ್ನು ಮಗನಿಗೆ ಪರಿಚಯಿ‌ಸಿದ ಕಥೆ, “ನಿಮ್ಮಪ್ಪ ನಿಜವಾದ ಬುದ್ಧ ಕಣೋ”. ಹರಾಮಿ ದುಡ್ಡು ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದು ಎಂಬ ನೀತಿ ಕಥೆಯನ್ನು ಹೇಳುವ, “ಕಾಯಕದಲ್ಲಿ ದೇವರನ್ನು ಕಾಣು ಮಗಾ, ಪ್ರಾಮಾಣಿಕನಾಗು”. ‘ಯು ಚೀಟ್’, ‘ಬೆಳೆಸಿದವನಿದ್ದರೆ ಅವುಗಳನ್ನು ಕತ್ತರಿಸುತ್ತಿರಲಿಲ್ಲ’, ‘ಮಾಯಿ’, ‘ನಾವು ಮನಿಸ್ರು ಅಲ್ವಾರಾ ಬುದ್ಧಿ’ ‘ಸಾವಿಲ್ಲದ ಬದುಕು’, ‘ಹತ್ತು ಪೌಚ್ ಕೊಡು” ಹೀಗೆ ಬಹುತೇಕ ಕಥೆಗಳು ಮಾನವನಲ್ಲಿನ ದ್ವೇಷ, ಅಸೂಯೆ, ಕಪಟತನ, ಲಂಪಟತನ ಮುಂತಾದ ದುರ್ಗುಣಗಳ ಕುರಿತಾಗಿ ತಿಳಿಸುತ್ತಲೇ ಪ್ರೇಮ, ವಿಶ್ವಾಸ, ನಂಬಿಕೆ, ದೃಢತೆ, ಬದ್ಧತೆ, ಮಾತಿನಂತೆ ಕೃತಿ ಇರಬೇಕು ಎಂಬಿತ್ಯಾದಿ ನೈತಿಕ ಮೌಲ್ಯಗಳನ್ನು ಲೇಖಕರು ಬಿತ್ತುತ್ತಾರೆ.
*  ‘ನಕ್ಕವರನ್ನು ನೋಡಿ ನಾವೂ ನಕ್ಕುಬಿಟ್ಟರಾಯ್ತು’,
*  ‘ಯೋಗಿ ಅಚ್ಯುತರು ಮತ್ತು ಉರವಕೊಂಡ ರಾಮಣ್ಣ’
*   ‘ಮಲ್ಲಿಕಾರ್ಜುನ್, ನನಗೆ  ಸಾವು ಅಂದ್ರೆ ಭಯ’  
          ಎಂಬುವು ಮೌಲ್ಯಯುತವಾಗಿದ್ದು ಕ್ರಮವಾಗಿ ಲೇಖನ, ವ್ಯಕ್ತಿ ಪರಿಚಯ, ಘಟನೆಯ ವಿವರಣೆಯಂತನಿಸುತ್ತವೆ. ಇವುಗಳನ್ನು ಕಥಾ ಚೌಕಟ್ಟಿನಿಂದ ಹೊರ ಬಂದು ಓದುಗ ಓದಬೇಕಾಗುತ್ತದೆ ಎಂಬುದು ನನ್ನ ಅನಿಸಿಕೆಯಾಗಿದೆ.
      *
     ಬದುಕನ್ನು ಅರ್ಥ ಮಾಡಿಕೊಂಡವರೇ ಇಂತಹ ನೀತಿಪೂರ್ಣ ಸಂದೇಶದ ಕಥೆಗಳನ್ನು ಕಟ್ಟಲು ಸಾಧ್ಯ ಎಂಬುದು ಕೃತಿಯ ಪ್ರತಿ ಓದುಗರಿಗೂ ಅನಿಸುತ್ತದೆ. ಜಗತ್ತನ್ನು ಎಲ್ಲರೂ ನೊಡುತ್ತೇವೆ ಆದರೆ ಅದನ್ನು,  ಸರಿ – ತಪ್ಪು, ನೀತಿ – ಅನೀತಿ, ಪಾಪ – ಪುಣ್ಯ, ಸ್ನೇಹ – ದ್ವೇಷ ಇನ್ಯಾವ ತಕ್ಕಡಿಯಲ್ಲಿಯೂ ನಾವು ಹಾಕಿ ತೂಗುವುದಿಲ್ಲ. ಹಾಗಾಗಿ ನಾವು ಕಂಡಂತಹವು ಕೇವಲ ಘಟನೆಗಳು ಮಾತ್ರವಾಗಿ ನಮ್ಮಲ್ಲಿ ಉಳಿಯುತ್ತವೆ, ಕಾಲದ ನಿರ್ಣಯದಂತೆ ಕ್ರಮೇಣ ಸ್ಮೃತಿ ಪಟಲದಿಂದ ಹೊರಹೋಗುತ್ತವೆ. ಆದರೆ ಈ ಎಲ್ಲಾ ಘಟನೆಗಳನ್ನು ವಿಶೇಷ ಕಣ್ಣಿನಿಂದ ತಕ್ಕಡಿಯಲ್ಲಿ ಹಾಕಿ ತೂಗಿ ಅದನ್ನು ಕಥಾ ರೂಪದಲ್ಲಿ ಹೆಣೆದ ಕೃತಿಕಾರರು ನಮ್ಮ ಮಧ್ಯೆ ಇರುವ ವಿಶೇಷ ಬರಹಗಾರರೆನಿಸುತ್ತಾರೆ.
      ಒಟ್ಟಾರೆ 42 ಕಥೆಗಳನ್ನುಳ್ಳ “ನಿರಾಕಾರಿ” ಕಥಾ ಸಂಗಮ, ನಿಜವಾಗಲು ಜಂಗಮ ವಾಣಿಯಂತಿದೆ. ಓದುಗರು ಕೃತಿಯನ್ನು ಕೊಂಡು ಓದಿ, ಆಸ್ವಾದಿಸಿ, ಬದುಕಿನುದ್ದಕ್ಕೂ ಅನುಷ್ಠಾನಕ್ಕೆ ತಂದುಕೊಂಡರೆ ಕೃತಿಕಾರರ ವಿಚಾರ, ಶ್ರಮ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಮುಂದುವರೆಯೋಣ ಎಂದು ಹೇಳುತ್ತ ನನ್ನ ಮಾತುಗಳಿಗೆ ವಿರಾಮ ನೀಡುತ್ತೇನೆ.

——————-

Leave a Reply

Back To Top