ಪುಸ್ತಕ ಸಂಗಾತಿ
ವರದೇಂದ್ರ ಕೆ ಮಸ್ಕಿ
ಉಷಾರವಿ
‘ಅಂತರಪಟ’
ಒಂದು ಅವಲೋಕನ
ಮನಗಳ ನಡುವಿನ ಅಂತರವನ್ನು ಅಂತ್ಯಗೊಳಿಸುವ ಅಂತರಪಟ”
“ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ, ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ”, ಎಂಬ ನುಡಿಯಂತೆ, ನಾವು ನಮ್ಮೊಳಗಿರುವ ಅಂತಃಶಕ್ತಿಯ ಜ್ಞಾನವನ್ನು ಸಮಾಜಕ್ಕೆ ಯಾವಾಗ ಬಿಚ್ಚಿಡುತ್ತೇವೆಯೋ ಅದು ಯಾವತ್ತಿಗೂ ಹೊಳೆಯುತ್ತಾ, ಮೊಳಕೆಯೊಡೆಯುತ್ತಾ, ಬೆಳೆಯುತ್ತಾ ಸಾಗುತ್ತದೆ. ಈ ಹಂಚಿಕೊಳ್ಳುವ ಪ್ರಕ್ರಿಯೆಗೆ ನಾವೆಂದಿಗೂ ತಡೆಯೊಡ್ಡಬಾರದು. ತಡೆದರೆ ಸ್ವ ಜ್ಞಾನ ಅವಸಾನವಾಗುತ್ತಾ ಸಾಗುತ್ತದೆ. ಆದರೆ ಈ ಹಂಚುವಿಕೆಯ ಮಾರ್ಗ ಏನು ಸುಲಭವಾದುದಲ್ಲ. ಈ ಮಾರ್ಗ ಮಧ್ಯೆ ಒಮ್ಮೊಮ್ಮೆ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವ ಸಂದರ್ಭ ಬರುತ್ತದೆ. ನಮ್ಮ ನಡೆ-ನುಡಿ ಸಾಮ್ಯವಾಗಿ ಸಾಗುತ್ತಿದೆಯೇ? ಎಂಬ ಸಂಶಯವೂ ಹುಟ್ಟುತ್ತದೆ. ಅಂತಹ ಸಂದರ್ಭದಲ್ಲಿ ಜಾಣ ನಡೆಗೆ ಮೊರೆ ಹೋಗಿ ಸಹಜತೆಯಿಂದ ದೂರವಾಗಿಬಿಡುತ್ತೇವೆ. ಈ ಅಸಹಜತೆಯೇ ಕೃತಕವಾದ ಬರವಣಿಗೆಗೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಕಾರಣವೆಂದರೆ ನಮ್ಮೊಳಗಿರುವ ಪೂರ್ವಾಗ್ರಹ ಪೀಡಿತ ಮನ. ನನ್ನ ಬರವಣಿಗೆಯೇ ನನ್ನ ವ್ಯಕ್ತಿತ್ವ ಎಂದು ಓದುಗರು ಅಳೆಯುತ್ತಾರೆ, ಎಂಬ ಮನಸ್ಥಿತಿ ನಮ್ಮನ್ನು ಸಂಕುಚಿತ ಬರಹಕ್ಕೆ ಸೀಮಿತಗೊಳಿಸುತ್ತದೆ. ಆಗ ನಮ್ಮ ಬರಹ ಒಂದು ಪರಿಧಿಯೊಳಗೆ ಉಳಿದುಬಿಡುತ್ತದೆ. ಇಂತಹ ಪರಿಧಿಯಿಂದ ಬರಹಗಳು ಆಚೆ ಬಂದರೆ ಅದು “ಜ್ಞಾನ ಧಾರೆ”ಯಾಗಿ ಓದುಗರ ಮನದವರೆಗೆ ಹರಿಯುತ್ತದೆ.
ಈ ತೆರನಾಗಿ ಓದುಗರ ಮನೆ, ಮನ ತಲುಪುವಂತಹ ಸದಾಶಯದ, ಔಚಿತ್ಯಪೂರ್ಣವಾದ ನೂರಾರು ಲೇಖನಗಳ ಒಡತಿ, ಸಹೋದರಿ “ಉಷಾರವಿ” ಅವರು. ಈ ದಿನದವರೆಗೆ ಇವರ ಪ್ರತಿಯೊಂದು ಲೇಖನಗಳು ಬಹು ಸಂಖ್ಯಾತ ಓದುಗರನ್ನು ಸೆಳೆದಿವೆ. ಇವರ ಬರಹಗಳ ಓದಿನ ಪರಿಧಿಯೊಳಗೆ ಒಮ್ಮೆ ಬಂದವರು ಸದಾ ಮೌಲಿಕ ಚಿಂತನೆಗಳನ್ನೇ ಮಾಡುತ್ತಾರೆ.
ಸೃಜನಾತ್ಮಕವಾಗಿ, ಸಂದರ್ಭೋಚಿತವಾಗಿ ಸುಶೀಲ, ಸದ್ಬರಹಗಳನ್ನು ಬರೆಯುತ್ತ, ಬರೆಯುತ್ತ ಪ್ರಸ್ತುತ “ಅಂತರಪಟ” ಎಂಬ ಸಾಮಾಜಿಕ ಕಾದಂಬರಿಯನ್ನು ಲೋಕಾರ್ಪಣೆ ಮಾಡಿ, ಸಾಹಿತ್ಯ ಲೋಕಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ ಉಷಾರವಿ ಅವರು ಅಭಿನಂದನಾರ್ಹರು.
ಉಷಾರವಿ ಅವರಿಗೆ ಕರ್ನಾಟಕದಾದ್ಯಂತ ಓದುಗ ಅಭಿಮಾನಿಗಳನ್ನು ಸಂಪಾದಿಸಿ ಕೊಟ್ಟ ಈ “ಅಂತರಪಟ” ಕಾದಂಬರಿಯಲ್ಲಿ ಏನೇನಿದೆ? ಎಂಬುದನ್ನು ಒಂದು ಲೇಖನದ ಮುಖೇನ ತಿಳಿಸುತ್ತೇನೆ ಎಂದರೆ ಹಾಸ್ಯಾಸ್ಪದ ಎನಿಸಿಬಿಡುತ್ತದೆ. ಅದಕ್ಕಾಗಿ ಕೃತಿಯ ಕುರಿತಾಗಿ ಒಂದಷ್ಟು ಅನಿಸಿಕೆಗಳನ್ನು ಮಾತ್ರ ಈ ಮೂಲಕ ಮುಕ್ತವಾಗಿ ವ್ಯಕ್ತಪಡಿಸಬಯಸುತ್ತೇನೆ.
***
: ನಾ ಕಂಡಂತೆ ಕೃತಿಯಲ್ಲಿನ ಪಾತ್ರಗಳ ವ್ಯಕ್ತಿತ್ವ :
* ಬದುಕೋಕೆ ನಿಶ್ಚಲ ಮನಸಿದ್ದರೆ ಸಾಕು, ಬದುಕಿನಲ್ಲಿ ನಮ್ಮತನವನ್ನು ಉಳಿಸಿಕೊಳ್ಳಬಹುದು ಅನ್ನೋದನ್ನು ಸುಶೀಲಮ್ಮನ ಪಾತ್ರ ಕಲಿಸಿಕೊಟ್ಟರೆ; ಎಷ್ಟು ವಿಶಾಲ ಹೃದಯದಿಂದ ಬದುಕನ್ನು ಸ್ವೀಕರಿಸಬೇಕು ಎಂಬುದನ್ನು ಚಂದ್ರಯ್ಯ-ಪಾರ್ವತಮ್ಮ ಜೋಡಿಗಳು ಕಲಿಸಿಕೊಡುತ್ತವೆ.
* ಪ್ರೀತಿಸಿದರೆ ಅದಮ್ಯವಾಗಿ ಹೀಗೇ ಪ್ರೀತಿಸಬೇಕು ಎಂದು ಅಭಿ-ಶಾರ್ವರಿ, ವಿಶ್ವ-ಪ್ರಿಯಾ ಜೋಡಿಗಳು ತಿಳಿಸಿದರೆ; ಪ್ರೀತಿಯ ಜೊತೆಗೆ ನಿಯತ್ತಿನಿಂದ, ಬದ್ಧತೆಯಿಂದ, ವಿಧೇಯರಾಗಿ ಹೇಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕೆಂದು ಭೀಮಣ್ಣ-ಜ್ಯೋತಕ್ಕ ಜೋಡಿಗಳು ತಿಳಿಸಿಕೊಡುತ್ತವೆ.
* ರಕ್ತ ಸಂಬಂಧದ ಹೊರತಾಗಿಯೂ ಅಣ್ಣ-ತಂಗಿ, ಅಕ್ಕ-ತಮ್ಮ ಬೆಸುಗೆ ಇದ್ದರೆ ಹೀಗೇ ಇರಬೇಕು ಎಂಬುದನ್ನು ವಿಶ್ವ-ಪಲ್ಲವಿ, ಶಾರ್ವರಿ-ಚಿರು ಪಾತ್ರಗಳು ಅರಿವು ಮೂಡಿಸಿದರೆ; ಎಂತಹ ಪರಿಸ್ಥಿತಿ ಎದುರಾದರೂ, ಸ್ವತಃ ತನಗೇ ಅನ್ಯಾಯವಾಗುತ್ತಿದ್ದರೂ ಅನುಭವಿಸಬೇಕೇ ಹೊರತು, ಉಪಕಾರ ಮಾಡಿದವರಿಗೆ
ಕಿಂಚಿತ್ತೂ ನೋವು ಕೊಡಬಾರದೆಂಬ ವಿಶ್ವನ ಪಾತ್ರ ಅರಿವಿನ ಕಣ್ಣನ್ನು ತೆರೆಸುತ್ತದೆ.
* ಆಚಾರ, ವಿಚಾರ, ಸಂಪ್ರದಾಯ ಇವುಗಳೆಲ್ಲ ನಮ್ಮ ಬದುಕಿಗಿಂತ ದೊಡ್ಡವೇನಲ್ಲ. ಕಷ್ಟ ಸುಖ ಹಂಚಿಕೊಳ್ಳೋಕೆ ಸಂಗಾತಿ ಬೇಕು. ಗೊಡ್ಡು ಸಂಪ್ರದಾಯಕ್ಕೆ ಜೋತು ಬಿದ್ದರೆ ಯಾವ ಆಸರೆಯ ಹೆಗಲೂ ಸಿಗುವುದಿಲ್ಲ ಎಂದಾಲೋಚಿಸಿ; ಹಳೇ ಸಂಪ್ರದಾಯದಲ್ಲೇ ಜೀವ ಸವೆಸಿದ ಅಜ್ಜಮ್ಮನ ಹೊಸ ದಿಟ್ಟತನದ ಒಲವಿನ, ಬೆಂಬಲದ ನಿರ್ಧಾರ ಬದುಕೇ ದೊಡ್ಡದು ಎಂಬುದನ್ನು ಸಾಬೀತುಗೊಳಿಸುತ್ತದೆ.
* ಕ್ರೋಧ, ಕಪಟ, ಮಾತ್ಸರ್ಯಗಳೆಲ್ಲ ಮಿಥ್ಯ. ನಿಷ್ಕಲ್ಮಶ ಹೃದಯದಿಂದ ಸಾಗುವುದೇ ಸತ್ಯದ ಪಥ ಎಂಬ ಭಾವವನ್ನು ಪ್ರಮೋದ್, ಚಿರು ಪಾತ್ರಗಳು ಮಸ್ತಕದಲ್ಲಿ ಬಿತ್ತಿದರೆ; ಅಹಂಕಾರ, ಮದ ವಿನಾಶಕ್ಕೆ ದಾರಿ ಮಾಡಿಕೊಡುತ್ತವೆ. ಸೌಂದರ್ಯದ ಮೇಲಿನ ಮೋಹ ಎಂದಿಗೂ ಶಾಶ್ವತವಲ್ಲ, ಲೋಭದಿಂದ ಶೋಕಿಗೆ ಬಿದ್ದವರಿಗೆ ಶೋಕ ಎಂದಿಗೂ ತಪ್ಪದು ಎಂಬುದನ್ನು ವಿನುತಾ ಪಾತ್ರ ಬಿತ್ತರಿಸುತ್ತದೆ.
— ಇನ್ನುಳಿದ ವಿಶ್ವ, ಶಾರ್ವರಿಯ ಕಾಲೇಜಿನ ಸಹೋದ್ಯೋಗಿಗಳು, ಮೇಷ್ಟ್ರು, ಚಂದ್ರಯ್ಯನವರ ಗೆಳೆಯುರು ಹೀಗೆ ಪ್ರತಿಯೊಂದು ಪಾತ್ರಗಳೂ ಸಹ ಹಲವಾರು ಒಳ್ಳೆಯ ಕಲಿಕಾಂಶಗಳನ್ನು ತಿಳಿಸುವಂತಿದ್ದು, ನಾನು ಕೇವಲ ಕೆಲವು ಪ್ರಮುಖ ಪಾತ್ರಗಳ ಒಂದೊಂದು ಒಳ್ಳೆಯ ಅಂಶಗಳನ್ನು ಮಾತ್ರ ಇಲ್ಲಿ ದಾಖಲಿಸಿದ್ದೇನೆ. ಕೃತಿಕಾರರ ಜಾಣ್ಮೆ, ದೂರದೃಷ್ಟಿ, ಪಾತ್ರ ಮುಖೇನ ಏನನ್ನು ಸಮಾಜಕ್ಕೆ ನೀಡಬೇಕೆಂಬ ನಿಶ್ಚಿತ ಚಿಂತನೆ, ಆ ಚಿಂತನೆಯಲ್ಲಿರುವ ಖಚಿತತೆ ಎಲ್ಲವೂ ಓದುಗನ ಮನದ ಸುತ್ತ ಧನಾತ್ಮಕ ಅಲೆಯನ್ನು ಸೃಷ್ಟಿಸುತ್ತವೆ. ಸಾಹಿತ್ಯದ ಪ್ರಮುಖ ಉದ್ದೇಶವೇ ಸಮಾಜಕ್ಕೆ ಒಳ್ಳೆಯದನ್ನು ತಿಳಿಸುವುದಾದುದರಿಂದ ಸಂಪೂರ್ಣವಾಗಿ ಈ ಕಾದಂಬರಿ ಸಮಾಜಮುಖಿಯಾಗಿ ನಿಲ್ಲುತ್ತದೆ.
**
ವಿದುರ ವಿವಾಹ ಎಂಬುದನ್ನು ಎಷ್ಟು ಸಾಮಾನ್ಯವಾಗಿ ಜನರು ಸ್ವೀಕರಿಸುತ್ತಾರೋ, ವಿಧವಾ ವಿವಾಹವನ್ನು ಅಷ್ಟೇ ಸರಾಗವಾಗಿ ವಿರೋಧಿಸುವವರಿದ್ದಾರೆ. ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀಯನ್ನು ಒಂಟಿಯಾಗಿಸುವ ಈ ವಿಧವಾ ವಿವಾಹ ವಿರೋಧ ನೀತಿ ಅತಿ ಅಮಾನುಷವಾದುದು. ಕೃತಿಕಾರರು ಇಂತಹ ಅಮಾನವೀಯ ಹೆಜ್ಜೆಯನ್ನು ಖಂಡಿಸದೆ, ಓದುಗರೇ ಸ್ವಯಂ ಅವಲೋಕನದ ಮೂಲಕ ತಮ್ಮನ್ನು ತಾವು ಬದಲಾಯಿಸಿಕೊಂಡು ಕೃತಿಕಾರರ ತೀರ್ಮಾನ ಸರಿಯಾಗಿದೆ ಎಂದು ಶರಣಾಗುವಂತೆ ಕಾದಂಬರಿಯನ್ನು
ಅತಿ ಜಾಣ್ಮೆಯಿಂದ ರಚಿಸಿದ್ದಾರೆ.
ಪ್ರಸ್ತುತ ಅನೇಕ ವಿಧವಾ ವಿವಾಹಗಳು ನಡೆಯುತ್ತಿವೆಯಾದರೂ ಅನಿವಾರ್ಯವಾಗಿ ಅದಕ್ಕೆ ಒಗ್ಗುತ್ತಿರುವರೇ ಹೊರತು ಪ್ರೇಮಕ್ಕಂತೂ ಅಲ್ಲ. ಆದರೆ ಈ ಕಾದಂಬರಿಯಲ್ಲಿ ಅನಿವಾರ್ಯತೆ ಇಲ್ಲ, ಅವಶ್ಯಕತೆ ಇಲ್ಲ, ಸ್ವಾರ್ಥ ಇಲ್ಲ. ಬದಲಾಗಿ ಪ್ರೀತಿ ಇದೆ, ಮನೆಯವರ ಸಹಕಾರವಿದೆ ಎಲ್ಲಕ್ಕೂ ಮಿಗಿಲಾಗಿ ತೀರಿಕೊಂಡ ಸಂಗಾತಿಗಳ ಅಭಿಲಾಷೆಯೂ ಇದೆ.
ಆ ಅಗಲಿದ ಸಂಗಾತಿ ಚೇತನಗಳೋ (ಅಭಿ ಮತ್ತು ಪ್ರಿಯಾ) ತುಂಬಿದ ಕೊಡಗಳು. ಉತ್ಸಾಹದಿಂದ ಹಿಡಿದು ವೈರಾಗ್ಯದವರೆಗೆ ಬದುಕನ್ನು ಪ್ರಾಯೋಗಿಕವಾಗಿ ಕಂಡವರು. ಪ್ರೀತಿಯಿಂದ ಹಿಡಿದು ತ್ಯಾಗದವರೆಗೆ ಬದುಕನ್ನು ಪ್ರಾಮಾಣಿಕವಾಗಿ ಸವಿದವರು. ತಾವು ಜೀವಂತವಿದ್ದಾಗ ತಮ್ಮ ಸಂಗಾತಿಯ ಸೌಖ್ಯವನ್ನು ಎಷ್ಟು ಕಾಳಜಿ ಮಾಡುತ್ತಿದ್ದರೋ ಅಗಲುವ ಸಂದರ್ಭ ಬಂದಾಗಲೂ ಒಂದು ಹಿಡಿ ಜಾಸ್ತಿನೇ ಮುತುವರ್ಜಿ ವಹಿಸಿದ್ದಾರೆ. ಮರಣಾಂತ್ಯದಲ್ಲಿ ಈ ಆಗಲಿದ ಜೋಡಿಗಳ ಮಾತುಗಳೇ ಮತ್ತೊಂದು ವಿವಾಹಕ್ಕೆ ಮನಸು ಮಾಡಲು ದಾರಿ ಮಾಡಿಕೊಡುತ್ತದೆ ಎಂಬುದು ಗಮನಾರ್ಹವಾದುದಾಗಿದೆ.
ಇಷ್ಟೆಲ್ಲ ಇದ್ದೂ ಕೊನೆಯಲ್ಲಿ..
– ಅಂತರಪಟ ಸರಿದು ಒಂಟಿ ಹೃದಯಗಳನ್ನು ಜಂಟಿಯಾಗಿಸುವಲ್ಲಿ ಸುತ್ತಲಿನ ಪಾತ್ರಗಳು ಪ್ರಯತ್ನಿಸುವವೇ ?
– ವಿದುರ ವಿವಾಹಕ್ಕೆ ಮಣೆ ಹಾಕುವವರು, ವಿಧವೆಯ ವಿವಾಹಕ್ಕೆ ಮತ್ತೊಮ್ಮೆ ಅರಿಶಿಣ ನೀರಿನ ಸುರಿಗೆ ಸುರಿಸುವರೇ?
– ಕುಂಕುಮ ಅಳಿಸಿದ ಕೈಗಳು ಮತ್ತೆ ಅಕ್ಷತೆಯನ್ನು ಹಾಕಿ ಆರತಿ ಬೆಳಗಿ ಆಶೀರ್ವದಿಸುವವೇ?
– ಕಣ್ಣೀರಿಂದ ಕರಗಿ, ಅಳಸಿ ಹೋದ ಹಸ್ತದ ರಂಗಿಗೆ ಮತ್ತೆ ಮದರಂಗಿಯನ್ನು ಲೇಪಿಸುವರೇ?
– ಒಡಲುರಿಯಲ್ಲಿ ಬೆಂದ ಮನೆ ಮಗಳ ಒಡಲಲ್ಲಿ ಮತ್ತೆ ಮಮತೆಯ ಕುಡಿ ಚಿಗುರಲು ಸಹಕರಿಸುವರೇ?
– ನಂದಿದ ದೀಪವನ್ನು ಮತ್ತೆ ಬೆಳಗಿಸಿ ನಂದಾದೀಪವಾಗಿಸಲು ಹೊಸ ಒಡತಿಯನ್ನು ಸ್ವಾಗತಿಸಲು ಸಮ್ಮತಿಸುವರೇ?
— ಎಲ್ಲದಕ್ಕೂ ಉತ್ತರ ಕಂಡುಕೊಳ್ಳಲು “ಅಂತರಪಟ” ಕಾದಂಬರಿಯನ್ನು ತಾವು ಓದಲೇಬೇಕು.
**
: ಕೃತಿಯಲ್ಲಡಗಿದ ತತ್ವಜ್ಞಾನದ ಸುತ್ತ ಓದುಗನ ಚಿತ್ತ :
ಈ ಮೊದಲೇ ಹೇಳಿದಂತೆ ಈ ಕಾದಂಬರಿ ಒಂದು ಮೌಲ್ಯಯುತ ನುಡಿಗಳ ರಾಶಿ. ಪ್ರತಿ ಪುಟಗಳಲ್ಲೂ ಓದುಗನು ಹೌದೌದು ಎನ್ನುವಂತಹ ನೀತಿ ತುಂಬಿದ ಸಾಲುಗಳು ಸಿಗುತ್ತಲೇ ಇರುತ್ತವೆ. ಅವುಗಳಲ್ಲಿ ಆಯ್ದ ಕೆಲವು ಸಾಲುಗಳನ್ನು ದಾಖಲಿಸಲೇಬೇಕೆಂದೆನಿಸಿ ಇಲ್ಲಿ ದಾಖಲಿಸಿದ್ದೇನೆ. ಇವು ಮನಸಲ್ಲಿ ಉಳಿದ ಸಾಲುಗಳು. ನಿಮಗೂ ಹಾಗೇ ಎನಿಸಿದರೆ ಮನದಿ ಉಳಿಸಿಕೊಂಡು ಮತ್ತೊಂದು ಮನಕ್ಕೆ ರವಾನಿಸಿರಿ.
* ಮನುಷ್ಯ ಬದುಕಿದ್ದಾಗ ಹೇಗೆ ಬದುಕಿದ್ದರೂ ಸಹ ಸತ್ತ ನಂತರ ದಂತಕಥೆಯಾಗ್ತಾನೆ. (ಪುಟ 96)
* ಅವರು ಕೇಳಿಲ್ಲವಾದ್ರೂ ನಾವು ಕೊಡಬೇಕಾಗಿದ್ದನ್ನು ಕೊಟ್ಟೇ ಕೊಡ್ತೀವಿ. (ಪುಟ 100)
* ಚುಕ್ಕಿ ಗೆರೆಗಳಿಂದ ಹೇಗೆ ರಂಗೋಲಿ ಸಂಪೂರ್ಣವಾಗುವುದೋ ಹಾಗೆ ಬದುಕು ರಕ್ತ ಸಂಬಂಧ ಹಾಗೂ ಇತರೆ ಬಂಧಗಳಿಂದಲೇ ಪರಿಪೂರ್ಣವಾಗುವುದು. (ಪುಟ 106)
* ಎಂದೋ ಬರುವ ದಿನಗಳಿಗೋಸ್ಕರ ಇವತ್ತಿನ ಆನಂದವನ್ನು ನೋವಿನ ಕ್ಷಣಗಳನ್ನಾಗಿ ಮಾಡ್ಕೊಳೋದು ಎಷ್ಟು ಸರಿ. (ಪುಟ 109)
* ತವರಿನ ವಿಚಾರವನ್ನ ಗಂಡನ ಮನೆಯಲ್ಲಿ, ಗಂಡನ ಮನೆಯ ವಿಚಾರವನ್ನು ತವರಲ್ಲಿ ಬಿಟ್ಟು ಕೊಡಬಾರದು ಅನ್ನೋದು ಹೆಣ್ಣಿಗೆ ಕಲಿಸುವ ಗುಣಗಳಲ್ಲಿ ಒಂದಾಗಿರುತ್ತದೆ.( ಪುಟ 113)
* ಎಲ್ಲ ಇದ್ದು ಅನಾಥರಾಗೋದು ಯಾರು ಇಲ್ಲದೇ ಅನಾಥರಾಗುವುದಕ್ಕಿಂತ ಘೋರವಾದ ಹಿಂಸೆ. (ಪುಟ 113)
* ಮನುಷ್ಯ ನೀರಿನಂತಿರಬೇಕು, ಭಗವಂತ ಯಾವ ಆಕಾರದ ಪಾತ್ರೆಗೆ ಹಾಕುವನೋ ಅದಕ್ಕೆ ಹೊಂದಲು ಸಿದ್ಧರಿರಬೇಕು. (ಪುಟ 137)
* ಓದು ಅನ್ನೋದು ಡ್ರಿಂಕ್ಸ್ ಗಿಂತ ಅತಿ ದೊಡ್ಡ ವ್ಯಸನ. ಋಣಾತ್ಮಕ ಪರಿಣಾಮ ಇಲ್ಲಿ ಸಿಗೋದಿಲ್ಲ, ಸಿಗೋದು ಏನಿದ್ರೂ ಧನಾತ್ಮಕ ಪರಿಣಾಮಗಳು ಮಾತ್ರ. (ಪುಟ 139)
* ಬದುಕಿನಲ್ಲಿ ನಮಗೆ ಎರಡೇ ಆಯ್ಕೆಗಳಿರೋದು, ಒಂದು ಕೊಟ್ಟು ಹೋಗು, ಇಲ್ಲ ಬಿಟ್ಟು ಹೋಗು. (ಪುಟ 145)
* ಪ್ರೀತಿ ಅಂದ್ರೆ ಮಾನಸಿಕ ಬೆಂಬಲ, ಭಾವನಾತ್ಮಕ ಆಸರೆ. (ಪುಟ 147)
* ಪ್ರೀತಿಯ ಗಿಡ ನೆಡುವವಳು ಅಮ್ಮ, ಉಳಿದೆಲ್ಲ ಪ್ರೀತಿಗಳು ಆ ಗಿಡದಲ್ಲಿನ ರೆಂಬೆ ಕೊಂಬೆಗಳು. ( ಪುಟ 147)
* ಮೈ ಕಪ್ಪಾದರೆ ಚಿಂತೆಯಿಲ್ಲ, ಮನಸ್ಸು ಕಪ್ಪಾಗಬಾರದು (ಪುಟ 159)
* ಒಂಟಿತನ ನಮ್ಮ ಮನಸ್ಸಿಗೆ ಮತ್ತೊಂದು ಹೃದಯದ ಆಸರೆಯನ್ನು ಅಪೇಕ್ಷಿಸುತ್ತದೆ ಆದರೆ ಏಕಾಂತ, ಏಕಾಂಗಿತನಕ್ಕೆ ಯಾರ ಅಗತ್ಯ ಇರದೆ ನನಗೆ ನಾನು ಸಾಕು ಎಂಬ ಮನಸ್ಥಿತಿ ಇರುತ್ತದೆ. (ಪುಟ 160)
* ಮನೆ ಕಟ್ಟೋಕೆ ಹಣ ಇದ್ರೆ ಸಾಕು, ಮನಸ್ಸುಗಳನ್ನು ಕಟ್ಟೋಕೆ ಪ್ರೀತಿ, ಹೊಂದಾಣಿಕೆ ಬೇಕು. (ಪುಟ 167)
* ಏಕಾಂತ, ಮೌನ, ನಿರೀಕ್ಷೆ ರಹಿತ ವರ್ತನೆಗಳು ಆದರ್ಶ ಬದುಕಿನ ಘನ ಆಯಾಮಗಳು. (ಪುಟ 176)
* ಹೂವನ್ನು ಏರಿಸಿದಷ್ಟು ಸುಲಭವಲ್ಲ ಸಂಬಂಧಗಳನ್ನು ನಿಭಾಯಿಸುವುದು. (ಪುಟ 184)
* ಕಷ್ಟದ ಪ್ರಖರತೆಗೆ ಮನುಷ್ಯ ಕುಗ್ಗಿದಂತೆ ಕಂಡರೂ ಅವನು ಎಂದಿಗಿಂತ ಮತ್ತಷ್ಟು ಮಾನಸಿಕವಾಗಿ ಬಲಿಷ್ಠನಾಗುವನು. (ಪುಟ 206)
— ಇಲ್ಲಿ ದಾಖಲಿಸಿದ ಮೌಲ್ಯಯುತ ಕೆಲವು ಸಾಲುಗಳ ಕುರಿತಾಗಿ, ರೂಪಿಸಿದ ಸನ್ನಿವೇಶಗಳ ಕುರಿತಾಗಿ ಮಾತನಾಡಿದರೆ ಲೇಖನಕ್ಕೆ ಅಂತ್ಯವೆಂಬುದೇ ಇರುವುದಿಲ್ಲ. ಹಾಗಾಗಿ ಇದರ ಹಿನ್ನೆಲೆಯ ಸಂದರ್ಭ, ಸನ್ನಿವೇಶಗಳನ್ನು ನಾನು ಮನದಲ್ಲಿಯೇ ಉಳಿಸಿಕೊಂಡು ಆಸ್ವಾದಿಸುತ್ತೇನೆ. ತಾವೂ ಸಹ ಕಾದಂಬರಿಯನ್ನು ಓದಿ ಆಸ್ವಾದದ ಆನಂದವನ್ನು ಅನುಭವಿಸಬಹುದು.
**
ಒಂದು ಮೌಲ್ಯದ ಸಂದೇಶವನ್ನು ಸಾರಲು ಪಾತ್ರಗಳನ್ನು ಸೃಷ್ಟಿಸಿಕೊಂಡು, ಸನ್ನಿವೇಶಗಳನ್ನು ಪೋಣಿಸಿಕೊಂಡು ಕಥೆಯನ್ನು ಹೆಣೆಯುವ ಲೇಖಕರ ನಡುವೆ ಕೃತಿಕಾರರಾದ ಶ್ರೀಮತಿ ಉಷರವಿ ಅವರು ಒಂದೇ ಕಾದಂಬರಿಯಲ್ಲಿ ಪಾತ್ರ, ಸನ್ನಿವೇಶಗಳ ಜೊತೆ ಜೊತೆಗೆ ಅನೇಕ ಸತ್ಯ, ಮೌಲ್ಯ ಮತ್ತು ಸತ್ವಯುತವಾದ ಸಾಲುಗಳನ್ನು ಅಪರಿಮಾತವಾಗಿ ನೀಡಿ ನಮ್ಮ ಮಧ್ಯೆ ವಿಶೇಷ ಬರಹಗಾರರೆನಿಸುತ್ತಾರೆ. ಇವರ ಬರಹವೇ ಇಷ್ಟು ಆಳವಾಗಿ ಓದುಗನನ್ನು ಚಿಂತನೆಗೆ ಹಚ್ಚುತ್ತದೆಂದರೆ, ಇದನ್ನು ರಚಿಸಿದ ಉಷಾರವಿ ಅವರ ಅಧ್ಯಯನದ ಆಳ ಸಾಗರದ ಆಳದಷ್ಟು ಎಂಬುದು ಈ ಮುಖಾಂತರ ಸುಸ್ಪಷ್ಟವಾಗುತ್ತದೆ.
**
ಸುಖೀ ದಾಂಪತ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯನ್ನು ಓದುತ್ತಾ ಸಾಗಿದಂತೆ ಆ ಪಾತ್ರಗಳಿಗೆ ಎದುರಾಗುವ ಅನೇಕ ಎಡರು ತೊಡರುಗಳನ್ನು, ಸಾವು ನೋವುಗಳನ್ನು ಕಂಡ ಓದುಗ ನಿಜಕ್ಕೂ ಒಮ್ಮೆ ಕುಗ್ಗಿ ಹೋಗುತ್ತಾನೆ, ಮತ್ತೊಮ್ಮೆ ಅಳುತ್ತಾನೆ. ಒಮ್ಮೆ ಪಾತ್ರಗಳ ನೋವು ಕಂಡು ಅತೃಪ್ತಿ ಎನಿಸಿದರೆ ಮತ್ತೊಮ್ಮೆ ಬದಲಾದ ಒಳ್ಳೆಯ ಸನ್ನಿವೇಶಗಳನ್ನು ಓದಿ ಸಂತೃಪ್ತನಾಗುತ್ತಾನೆ.
ನಾಯಕ, ನಾಯಕಿಯ ಬದುಕೇನು ಹೀಗಾಯಿತಲ್ಲ ಎಂದು ರೋಧಿಸುವ ಹೊತ್ತಿಗೆ ತಿರುವು ಪಡೆಯುತ್ತ ಸಾಗುವ ಕಥೆ ಓದುಗನಲ್ಲಿ ಹೊಸ ಭರವಸೆಯನ್ನು ಹುಟ್ಟಿಸುತ್ತದೆ. ಯಾವತ್ತಿಗೂ ಭರವಸೆಯನ್ನು ಕಳೆದುಕೊಳ್ಳಬಾರದೆಂಬ, ಭರವಸೆಯ ನಡೆ ಮುಂದೆ ಸಿರಿಯನ್ನು ದಯಪಾಲಿಸುತ್ತದೆ ಎಂಬ ಸಂದೇಶದ “ಅಂತರಪಟ” ಅಂತರಂಗವನ್ನು ಪ್ರವೇಶಿಸಿಬಿಡುತ್ತದೆ.
ಮನಸುಗಳ ನಡುವೆ ಎಷ್ಟೇ ವೈರುಧ್ಯಗಳಿದ್ದರೂ ಅವುಗಳನ್ನು ಕಂಡುಂಡು ಅರಗಿಸಿಕೊಂಡು ಸುತ್ತಲಿನ ಯಾವ ಬಂಧುಗಳಿಗೂ ನೋವಾಗದಂತೆ
ನಿಸ್ವಾರ್ಥವಾಗಿ ಮನಸುಗಳನ್ನು ಮಿಲನವಾಗಿಸುವ ಈ “ಅಂತರಪಟ” ಕಾದಂಬರಿಯ ನಿರೂಪಣೆ ಅಮೋಘವಾಗಿದೆ. ಪ್ರತಿ ಸನ್ನಿವೇಶಗಳನ್ನು ಓದುತ್ತಾ ಹೋದರೆ ಕಿಂಚಿತ್ತೂ ಮನಸು ಬೇರೆಡೆಗೆ ವಾಲುವುದೇ ಇಲ್ಲ. ಪ್ರಾರಂಭದಲ್ಲಿ ಇದ್ದ ಓದುಗನ ಮನಸ್ಥಿತಿ ಪುಟಗಳು ತಿರುವಿದಂತೆ ಮುಂದೇನು, ಮುಂದೇನು ಎಂಬ ಹಪಹಪಿಗೆ ಬೀಳುವುದರ ಜೊತೆಗೆ ಧನಾತ್ಮಕ ಅಂತ್ಯವಿರಲಿ ದೇವರೇ ಎಂದು ಹೊರ ಮನಕೆ ಅರಿವಾಗದಂತೆ ಸುಪ್ತ ಮನವು ಪ್ರಾರ್ಥಿಸತೊಡಗುತ್ತದೆ.
**
ಆದಿ ಇದ್ದ ಮೇಲೆ ಅಂತ್ಯವೂ ಇರುತ್ತದೆ. ಅಂತ್ಯದ ಮುಂದಿನ ಹೆಜ್ಜೆಯೇ ಮರುಹುಟ್ಟು. ಆ ಮರುಹುಟ್ಟಿನ ಆಶಾಭಾವದ ಈ “ಅಂತರಪಟ” ಕಾದಂಬರಿ ಮನದ ಅಂತಃಪುರವನ್ನು ಪ್ರವೇಶಿಸಿ ಅಲ್ಲಿಯೇ ಸ್ಥಾಪಿತವಾಗುತ್ತದೆ.
ಅಂತರವೆಂಬುದು ಸಹಜವಾಗಿ ಪ್ರತಿಯೊಬ್ಬರ ಮಧ್ಯೆ ಕಾಣದ ಪರದೆಯಾಗಿ ಬಿದ್ದಿರುತ್ತದೆ. ಇಂತಹ ಪರದೆಯನ್ನು ಕೇವಲ ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆ, ತ್ಯಾಗ, ಶ್ರದ್ಧೆ, ಪ್ರಾಮಾಣಿಕತೆ, ಸ್ವಾಭಿಮಾನದಿಂದಲೇ ಸರಿಸುವ ಕಥೆ ಈ “ಅಂತರಪಟ” ಕಾದಂಬರಿ ಸಮರಸ ಜೀವನದ ಪ್ರತೀಕವಾಗಿದೆ.
ಸಹೋದರಿ ಉಷಾರವಿ ಅವರಿಂದ ಇಂತಹ ಮತ್ತಷ್ಟು ಸಾಮಾಜಿಕ ಕೃತಿಗಳು ಲೋಕಾರ್ಪಣೆಗೊಳ್ಳಲಿ, ತನ್ಮೂಲಕ ಸಾಮಾಜದ ಬದಲಾವಣೆಗೆ ಕೃತಿಗಳು ನಾಂದಿಯಾಗಲಿ ಎಂದು ಹಾರೈಸುತ್ತ ನನ್ನ ಅನಿಸಿಕೆಗೆ ವಿರಾಮ ನಿಡುತ್ತೇನೆ.
——————————————-
ವರದೇಂದ್ರ ಕೆ ಮಸ್ಕಿ
ವಾವ್ ಅದ್ಭುತ
ಆಹಾ…ಚಂದದ ಅವಲೋಕನ…