ಲಂಕೇಶ್ ವಿಶೇಷ ಲೇಖನ

ಹೆಸರಿನಂತೆಯೇ ವಿಶೇಷ

‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಮಾತಿನಂತೆ ಪಿ. ಲಂಕೇಶರು ಮಾಡದ ಸಾಹಿತ್ಯ ಪ್ರಾಕಾರವಿಲ್ಲ. ಕವಿ, ಕಾದಂಬರಿಗಾರ, ನಾಟಕಕಾರ, ಕಥೆಗಾರ, ಅಂಕಣಕಾರ, ನಟ, ನಿರ್ದೇಶಕ , ಲಂಕೇಶ್ ಪತ್ರಿಕೆಯ ಸಂಸ್ಥಾಪಕ ಸಂಪಾದಕರು ಆಗಿದ್ದ ಪಿ. ಲಂಕೇಶರು ಬಹುಮುಖ ಪ್ರತಿಭೆಯ ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರಾಗಿದ್ದರು.
ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ ಮಾರ್ಚ್ ೮ , ೧೯೩೫ ರಂದು ಜನಿಸಿದರು. ಇವರ ವಿದ್ಯಾಭ್ಯಾಸ ಕಾಲೇಜು ಶಿಕ್ಷಣದವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದು, ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಪಡೆದಿದ್ದರು. ಇಪ್ಪತ್ತು ವರ್ಷಗಳ ಕಾಲ ಅಧ್ಯಾಪಕರಾಗಿ ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ವೃತ್ತಿಯನ್ನು ತ್ಯಜಿಸಿ ತಮ್ಮದೇ ಆದ ಲಂಕೇಶ್ ಪತ್ರಿಕೆಯನ್ನು ಪ್ರಾರಂಭಿಸಿದರು. ಪತ್ರಿಕೆಯೂ ಸಹ ಕರ್ನಾಟಕದ ಪತ್ರಿಕೆಯಾಗಿ ಬೆಳೆಯಿತು.


ಲಂಕೇಶರ ಅನೇಕ ಕವಿತೆಗಳು ಅಪಾರ ಜನಮೆಚ್ಚುಗೆ ಪಡೆದವು. ರಾಜಕೀಯ ಸಮಾಜದ ಬಗ್ಗೆ ಅಸಮಾಧಾನವಿತ್ತು. ಮತ್ತು ದುಡಿಯುವ ಸಾಮಾನ್ಯವರ್ಗದವರ ಬಗ್ಗೆ ಸಹಾನುಭೂತಿ ಮನಸ್ಸಿದ್ದ ಲಂಕೇಶರು ಯಾರ ಉತ್ಪ್ರೇಕ್ಷೆಗೂ ಒಳಗಾದವರಲ್ಲ. ಆಂಗ್ಲ ಕಥೆಗಾರ ಆಲ್ಬರ್ಟ ಕ್ಯಾಮಸ್ ರ ಪ್ಲೇಗ್ ಕಾದಂಬರಿ ಅವರ ಮೇಲೆ ಪ್ರಭಾವ ಬೀರಿತ್ತು. ಕುವೆಂಪು ರವರ ವೈಚಾರಿಕತೆ, ಬೇಂದ್ರೆಯವರ ಭಾಷೆ, ಜೀವನ ಪ್ರೇಮ, ಕಾರಂತರ ಜೀವನ ಕಲೆ, ಅಡಿಗರಿಂದ ಕಲಿತ ಬರಹದ ಕೌಶಲದಿಂದ ಲಂಕೇಶರು ಸಾಹಿತ್ಯಿಕವಾಗಿ ಗಟ್ಟಿಗೊಳಿಸಿತ್ತು. ಇವೆಲ್ಲಕ್ಕೂ ಹೆಚ್ಚಾಗಿ ೧೨ ನೇ ಶತಮಾನದ ಕ್ರಾಂತಿವೀರ ಬಸವಣ್ಣನವರ ವಿಚಾರಗಳು ಇವರ ಹೆಚ್ಚು ಪ್ರಭಾವ ಬೀರಿದ್ದವು ಎಂದು ಹೇಳಲಾಗುತ್ತದೆ.
ಇವರ ಕವಿತೆ ನನಗೆ ಇಷ್ಟವಾದ `ಕೆಂಪಾದವೋ ಎಲ್ಲ ಕೆಂಪಾದವೋ’ ಬಹಳ ಸೊಗಸಾಗಿದೆ. ಅದು ಚಲನಚಿತ್ರಗೀತೆಯಾಗಿಯೂ ಬಹಳ ಜನಪ್ರಿಯವಾಗಿದೆ. ಅವರ ನೀಲು ಕಾವ್ಯ ಸಂಗ್ರಹ-೧ ರಲ್ಲಿನ ಕೆಲವು ಎಂದೆಂದಿಗೂ ಸಲ್ಲುವ ಪದಪುಂಜಗಳ ಬಗ್ಗೆ ನೋಡೋಣ –


“ಕಾಮ, ಪ್ರೇಮವ ಪ್ರತ್ಯೇಕಿಸಿ
ನೋಡಬೇಡ;
ಚುಂಬನದ ನಾಲ್ಕು ತುಟಿಗಳಿಗೆ
ಸಾಕ್ಷಿಯಾದ ಎರಡು ನಾಲಿಗೆಗಳೂ
ಸದಾ ಗೊಂದಲದ ಸ್ಥಿತಿಯಲ್ಲಿರುತ್ತವೆ ”


ಪ್ರೇಮ ಕಾಮಗಳು ಮನುಷ್ಯನ ಬದುಕಿನಲ್ಲಿ ಅವ್ಯಾಹತವಾಗಿ ನಡೆಯುವ ಮಾನಸಿಕ ಮತ್ತು ದೈಹಿಕ ಕ್ರಿಯೆಗಳು. ಇದರ ಬಗ್ಗೆ ಹೇಳುತ್ತಾ ಗಂಡು ಹೆಣ್ಣಿನ ಸಾಂಗತ್ಯದ ಹಿಡಿತ ನಾಲಿಗೆಯ ಹಿಡಿತದಲ್ಲಿತ್ತದೆ ಎಂದು ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ.

“ಇಲ್ಲಿ ನೀನು ಮಾಡಿದ ಜಪತಪಗಳು
ರೆಕ್ಕೆ ಪಡೆದಂತೆ
ಪುಟ್ಟ ಗುಬ್ಬಿಯ ಮರಿಯೊಂದು
ಕಚಪಿಚ ಕೊರಲಿ
ಹೆತ್ತವಳ ಹುಡುಕಿ ಹಾರಿಹೋದದ್ದು
ನಿನಗೆ ಏನೆನ್ನಿಸಿತ್ತು?

ಇಲ್ಲಿಯ ಸಾಧನೆ, ಸಿದ್ಧಿ, ಪ್ರಶಂಸೆ
ಪ್ರಶಸ್ತಿ ಎಲ್ಲವೂ
ಇತಿಹಾಸದ ಪುಟಗಳ ಧೂಳಾಗಿ
ವಿಸ್ಮೃತಿಯ ಸೇರುತ್ತವೆ ಎನ್ನುವುದು
ಮಾತ್ರ ಚಿರಂತನ ಸತ್ಯ”

-ಎಂದು ಲೌಕಿಕ ಮತ್ತು ಅಲೌಕಿಕಗಳ ವಿಮರ್ಶೆಯ ಪ್ರಶ್ನೆಯನ್ನು ಎನ್ನುತ್ತಾರೆ.
ರಾಜಕೀಯದಲ್ಲಿ ಗೋಮುಖ ವ್ಯಾಘ್ರಗಳಾಗಿರುವವರ ಬಗ್ಗೆ.
ಅಪ್ಪಟ ಪುರುಷಸಿಂಹದಂತೆ
ಸದಾ ವರ್ತಿಸುವ ಜನ
ಅವಮಾನಿತರಾಗಿ ನರಿಗಳಾಗಿ
ಓಡುವುದೇ ಹೆಚ್ಚು”

ಬಟ್ಟೆ, ಮನೆ, ಬಚ್ಚಲು ಇತ್ಯಾದಿ
ಮರೆಗಳನ್ನು ಮಾಡಿಕೊಂಡ ಮನುಷ್ಯ
ನೀತಿಶಾಸ್ತವನ್ನೂ ರೂಪಿಸಿಕೊಂಡದ್ದನ್ನು
ಪಶುಪಕ್ಷಿಗಳು ತಮಾಷೆ ಮಾಡುತ್ತಿವೆ” ಎಂದು ವಿಡಂಬಿಸಿ ಲೇವಡಿ ಮಾಡುತ್ತಾರೆ.

ತಮ್ಮ ಹೆಸರಿನಲ್ಲೇ ವಿಶೇಷವನ್ನು ಹೊತ್ತಿದ್ದ ಲಂಕೇಶರು ಲಂಕಾಧಿಪತಿಯಂತೆ ಕಾವ್ಯವನ್ನು ಹೇಳಬೇಕಾದ ವಿಷಯದಲ್ಲಿ ನೇರವಾಗಿ ದಿಟ್ಟವಾಗಿ ಹೇಳಿಯೇ ಮುಗಿಸುತ್ತಿದ್ದರು. ಅಂತಹ ಸೃಜನಶೀಲತೆಯ ಮನಸ್ಸು ಅವರದು. ಇಂದು ಅವರ ಪಿ. ಲಂಕೇಶರ ೮೪ ನೇ ಹುಟ್ಟಿದ ದಿನ. ಅವರು ನಮ್ಮೊಡನೆ ಇಲ್ಲದಿದ್ದರೂ ಅವರು ಈ ಸಮಾಜದ ಜನರಿಗೆ ಮತ್ತು ಕನ್ನಡ ಸಾರಸ್ವತಲೋಕಕ್ಕೆ ಬಿಟ್ಟು ಹೋದ ಅದ್ಭುತ ಸೇವೆ ಮತ್ತು ಸಾಹಿತ್ಯ ಸದಾ ನಮ್ಮೊಂದಿಗೆ ಇರುತ್ತದೆ. ಅವರಿಗೆ ಹುಟ್ಟಿದ ದಿನದ ಶುಭಾಶಯಗಳು

***********************************

ವಿಶಾಲಾ ಆರಾಧ್ಯ

6 thoughts on “

    1. ಧನ್ಯವಾದಗಳು ಸರ್ ತಮ್ಮ ಪ್ರತಿಕ್ರಿಯೆಗೆ.

  1. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಪಿ. ಲಂಕೇಶ ರವರ ಬಗ್ಗೆ ತಾವು ತುಂಬಾ ತಿಳಿದುಕೊಂಡಿದ್ದೀರಿ, ಅದನ್ನು ನಮ್ಮ ಜೊತೆ ಹಂಚಿಕೊಳ್ಳಿ ದಕ್ಕೆ ಧನ್ಯವಾದಗಳು…

    ಇಂತಿ ನಿಮ್ಮ ವಿಶ್ವಾಸಿ,

    ಘನಶ್ಯಾಮ್

  2. ಲಂಕೇಶ್ ಕುರಿತು ಎಷ್ಟು ಬರೆದರೂ ಕಡಿಮೆಯೇ… ಚೆಂದ ಹಂಚಿಕೊಂಡಿರುವಿರಿ… ಮೇಡಂ

    1. ಧನ್ಯವಾದಗಳು ಮಮತಾ ಶಂಕರ್ ಮೇಡಂ.

Leave a Reply

Back To Top