ರಮೇಶ ಸಿ ಬನ್ನಿಕೊಪ್ಪಹಲಗೇರಿ,ಚಿಂತನಾ ಲಹರಿ..”ಬದುಕುವುದಾದರೇ ಹೀಗೇ ಬದುಕಿಬಿಡೋಣ..”

ಟಿಕ್ ಟಿಕ್ ಬಿಟ್ಟುಬಿಡದೆ ತಿರುಗುವ ಗಡಿಯಾರ…

ಸದಾ ತನ್ನ ಪಾಡಿಗೆ ತಾನು ಜಗ ಬೆಳಗುವ ಸೂರ್ಯ…

ಇಂತಹ ಸನ್ನಿವೇಶಗಳನ್ನು ನೋಡಿದಾಗ….

ಹೀಗೆ ಅನಿಸದೆ ಇರದು…!!

ಇಂದಿನ ಯುಗ ಯಾಂತ್ರಿಕ ಯುಗ. ಶರವೇಗದಲ್ಲಿ ಕಾಲ ಓಡುತ್ತದೆ. ಎಲ್ಲರಿಗೂ ದಾವಂತದ ಬದುಕು. ಆದರೂ ನಮ್ಮ ಸಾಧನೆ ಶೂನ್ಯ..!  ನಾವು ಯಾವುದಾದರೂ ಕ್ಷೇತ್ರದಲ್ಲಿ ಕೆಲಸ ಮಾಡುವುದಾಗಲಿ ಅಥವಾ ಎನ್ನನ್ನಾದರೂ ಸಾಧನೆಗಳನ್ನು ಮಾಡುವುದಾದರೆ ನಮ್ಮೊಳಗೊಬ್ಬ ಆಲಸ್ಯತನದ ವೈರಿ ಮನೆ ಮಾಡಿಕೊಂಡಿರುತ್ತಾನೆ.

 “ಇಂತಹ ಕೆಲಸವನ್ನು ನಾಳೆ ಮಾಡಿದರಾಯಿತು..”

“ಅಯ್ಯೋ ಇನ್ನು ಒಂದು ವಾರ ಇದೆ ಅದಕೇನು ಚಿಂತೆ…ಹ್ಹ ಹ್ಹಾ…”

ಎಂದು ಮಾಡಬೇಕಾದ ಕೆಲಸವನ್ನು ಮುಂದೂಡುತ್ತಲೇ ಕಾಲವನ್ನು ಹರಣ ಮಾಡಿ ಬಿಡುತ್ತೇವೆ. “ಸಮಯ ಹಾಗೂ ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ ” ಎನ್ನುವ ಮಾತು ಮತ್ತೆ ನಮಗೆ ಪದೇ ಪದೇ ನೆನಪಾಗುತ್ತದೆ. ಅಯ್ಯೋ ನನಗೆ  20 ವರ್ಷವಾಯಿತಾ..?   ಅಯ್ಯೋ  40 ವರ್ಷ  ಗತಿಸಿ ಹೋಯಿತೇ..? ಅಯ್ಯೋ ನಾನು ಮುದುಕನಾಗಿ ಬಿಟ್ಟೆನಾ..?  ಇಷ್ಟು ವಯಸ್ಸಾಯ್ತ  ಏನು ಮಾಡಲಾಗಲಿಲ್ಲವಲ್ಲಾ…” ಎಂದು ನಮ್ಮನ್ನು ನಾವು  ಭೌತಿಕ ಲಕ್ಷಣಗಳನ್ನು ನೋಡಿಕೊಂಡು, ದೇಹದ ವಿವಿಧ ಗುಣಲಕ್ಷಣಗಳನ್ನು ನೋಡಿಕೊಂಡು ಮರುಗುತ್ತೇವೆ.  ಕೈ ಕೈ ಹಿಸುಕಿಕೊಳ್ಳುತ್ತೇವೆ. ಮಾಡಬೇಕಾದ ಕೆಲಸ ಅದರ ಬಗ್ಗೆ ಏನು ಮಾಡಲಿಲ್ಲವಲ್ಲ ಎನ್ನುವ ಕೊರಗು ಸದಾ ನಮ್ಮೊಳಗೆ ಕೊರೆಯುತ್ತಲೇ ಹೋಗುತ್ತದೆ.

 ಇಷ್ಟಾದರೂ ನಾವು ಮತ್ತೆ ಅದೇ ‘ಆಲಸ್ಯ’  ಎನ್ನುವ ಸ್ನೇಹಿತನೊಡನೆ ಗೆಳೆತನ ಮಾಡಲು ಬಯಸುತ್ತೇವೆ. ಪರಿಶ್ರಮದಿಂದ ದುಡಿಯುವ ‘ಶ್ರಮ’ ಎನ್ನುವ ಮಿತ್ರನ ಜೊತೆಗೆ ಹೆಣಗಾಡಲು ಇಷ್ಟಪಡುವುದಿಲ್ಲ. ಎಷ್ಟು ಸಾಧ್ಯವೊ ಅಷ್ಟು ಆರಾಮವಾಗಿರೋಣ ಎಂದು ಖುಷಿಖುಷಿಯಾಗಿರುತ್ತೇವೆ. ಕೆಲವರ ಸಾಧನೆಗಳನ್ನು, ದಾಖಲೆಗಳನ್ನು ನೋಡಿದಾಗ ಮತ್ತೆ ನಮ್ಮ ಬಗ್ಗೆ ನಮಗೆ ಖೇದ ಉಂಟಾಗುತ್ತದೆ.

ನಮ್ಮ ಬದುಕಿನಲ್ಲಿ ಎಡವಿದ್ದಾದರೂ ಎಲ್ಲಿ ಎನ್ನುವುದನ್ನು ನಾವು ಎಂದಿಗೂ ಅವಲೋಕನ ಮಾಡುವುದಿಲ್ಲ.  ನಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವುದಿಲ್ಲ. ಅವಕಾಶಗಳಿಗಾಗಿ ಕಾಯುತ್ತಲೇ ಇರುತ್ತೇವೆ. ಸಿಕ್ಕ ಅವಕಾಶಗಳನ್ನು ಕೆಲವು ಸಲ ನಾವೇ ತಪ್ಪಿಸಿಕೊಳ್ಳುತ್ತೇವೆ.

 ಅದೇನೇ ಇರಲಿ, ಅವಕಾಶಗಳು ಬಂದಾಗ ನಾವು ಸದ್ಬಳಕೆ ಮಾಡಿಕೊಳ್ಳಬೇಕಲ್ಲವೆ..? ನಾವು ಇಂದೇ  ನಾಳೆ ಮಾಡಿದರಾಯಿತು ಎನ್ನುವ ಸಿದ್ಧ ಉತ್ತರವನ್ನು ಗಂಟುಮೂಟೆ ಕಟ್ಟಿ ಬಿಸಾಕಿ ಬಿಡಬೇಕು.  ನಾವು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡುವುದಾದರೆ ಅಂದರೆ ಸಾಹಿತ್ಯ, ರಾಜಕೀಯ,  ಕಲೆ,  ಶೈಕ್ಷಣಿಕ, ಕೃಷಿ, ವ್ಯವಹಾರ, ಉದ್ದಿಮೆ, ಹೋರಾಟ… ಅದು ಯಾವುದೇ ಇರಲಿ ಅಂದು ಮಾಡಬೇಕಾದ ಕೆಲಸವನ್ನು ಮಾಡುತ್ತಾ ಹೋದಂತೆ ನಮ್ಮ ಕ್ಷೇತ್ರದಲ್ಲಿ ಅದ್ವಿತೀಯವಾದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ.   ಇಲ್ಲದೆ ಹೋದರೆ ಮತ್ತೆ ಮತ್ತೆ ನಾವು ಕೊರಗುವುದರಲ್ಲಿ ಅರ್ಥವಿಲ್ಲ ಎನ್ನಬಹುದು. ಮೊಲ ಮತ್ತು ಆಮೆ ಕತೆ ನಮಗೆ ಉತ್ತಮ ಉದಾಹರಣೆ ಎನ್ನಬಹುದು.

  “ಅಲ್ಪ ಸ್ವಲ್ಪ ಸಾಧಿಸಿ,  ನಾನು ಸಾಧಿಸಿದ್ದೇನೆ. ನನ್ನ ಪ್ರತಿಸ್ಪರ್ಧಿ  ಇನ್ನೂ ದೂರವಿದ್ದಾನೆ ಎನ್ನುತ್ತಾ ಕುಳಿತುಕೊಂಡರೆ ಕೆಲಸ ಆಗುವುದಿಲ್ಲ. ಮುಟ್ಟಬೇಕಾದ ಗುರಿಯ ಬಗ್ಗೆ ಅರಿವಿರಬೇಕು. ಅದರಲ್ಲಿ ನಿರಂತರ ಪರಿಶ್ರಮ ಹಾಕಬೇಕು. ‘ಆಸೆ ಮತ್ತು ಗುರಿ’  ಸದಾ ನಮ್ಮನ್ನು ಜಾಗೃತಗೊಳಿಸಬೇಕು. ‘ಆಲಸ್ಯ’  ಎನ್ನುವ ವೈರಿ ನಮ್ಮ ಮನದೊಳಗೆ ಕೊಂದು ಹಾಕಬೇಕು.

 ನಾವು ಬದುಕುವ ಪ್ರತಿ ಕ್ಷಣವನ್ನು ನಗುನಗುತ್ತಾ ಸಂತೋಷದಿಂದ ಇನ್ನೊಬ್ಬರಿಗೆ ನೋವಾಗದಂತೆ ನಮ್ಮ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಬೇಕು. ಇಲ್ಲದೆ ಹೋದರೆ “ನನ್ನ ಅವಕಾಶಗಳನ್ನು ಇನ್ನೊಬ್ಬರು ಬಳಸಿಕೊಂಡರು. ನನಗೆ ದಕ್ಕಬೇಕಾದ ಪಟ್ಟ ಇನ್ನೊಬ್ಬರು ಪಡೆದುಕೊಂಡರು.  ನಾನು ಮಾಡಬೇಕಾದ ಕೆಲಸ ಇನ್ನೊಬ್ಬರು ಮಾಡಿದರು. ಅಯ್ಯೋ ನನಗೆ ಅವಕಾಶ ಸಿಗಲಿಲ್ಲ…”  ಹೀಗೆ ಅನೇಕ ನೆಪಗಳನ್ನು ಹೇಳುತ್ತಾ ಕಾಲವನ್ನು ದೂಡಿಬಿಡುತ್ತೇವೆ.

ಸಾಧನೆ ಮಾಡುವಾಗ ಅನೇಕ ಅಡ್ಡಿ ಆತಂಕಗಳು ಬರುತ್ತವೆ.  ಅವುಗಳನ್ನು ಮೀರಿ ಬೆಳೆಯಬೇಕು. ಸಾಧನೆಯ ಹಾದಿಯಲ್ಲಿ ಕಲ್ಲು ಮುಳ್ಳು ಇವೆಲ್ಲವೂ ಸಹಜ. ಅವುಗಳನ್ನು ಮೀರಿ ಬೆಳೆದಾಗಲೇ ನಮ್ಮ ಗುರಿ ಮುಟ್ಟಲು ಸಾಧ್ಯ.  ನಾವು ಸಾಧನೆಗಾಗಿ ಬದುಕಬೇಕು. ಇಲ್ಲದೆ ಹೋದರೆ ಸಾವು ನಮಗೆ ಹತ್ತಿರವಾಗುತ್ತಾ ಹೋಗುತ್ತದೆ. ನಾವು ಆಚರಿಸುವ ಒಂದೊಂದು ಹುಟ್ಟುಹಬ್ಬಗಳು ಅವು ಸಂತೋಷದಾಯಕವಾಗಿ ಕೂಡಿದ್ದರೂ… ಪರೋಕ್ಷವಾಗಿ ನಮಗೆ ಸಾವು ಸಮೀಪಿಸುತ್ತದೆ ಎನ್ನುವ ಎಚ್ಚರಿಕೆ ಗಂಟೆ ಬಾರಿಸುತ್ತಲೇ ಹೋಗುತ್ತದೆ.

ಆದರೂ ನಾವು ಎಚ್ಚರವಾಗುವುದೇ ಇಲ್ಲ. ನಾವು ಮಾಡಬೇಕಾದ ಕೆಲಸಗಳನ್ನು,  ಕಾರ್ಯ ಚಟುವಟಿಕೆಗಳನ್ನು, ಯೋಜನೆಗಳನ್ನು, ಯೋಚನೆಗಳನ್ನು ಯಾವಾಗಲೂ ಮುಂದೆ ಹಾಕುತ್ತಲೇ ಹೋಗುತ್ತೇವೆ. ಅದು ಒಬ್ಬ ಸಾಧಕನ ಲಕ್ಷಣವಂತೂ ಅಲ್ಲವೇ ಅಲ್ಲ.. ಹೀಗೆ ನಾವು ನಮ್ಮ ಸಾಧನೆ ಹಾದಿಗೆ ಕಲ್ಲು ಮಣ್ಣುಗಳನ್ನು ಹಾಕಿಕೊಂಡು ಇನ್ನೊಬ್ಬರನ್ನು ದೂಷಿಸುತ್ತಾ ಹೋಗುವುದು ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ.

 ಹಾಗಾದರೆ ನಾವು ಹೇಗೆ ಬದುಕಬೇಕು…? ಬದುಕುವುದಾದರೆ ಗೆಳೆಯರೇ ಹೀಗೆ ಬದುಕಿ ಬಿಡೋಣ..!!

ಪ್ರತಿಕ್ಷಣವೂ,  ಪ್ರತಿ ನಿಮಿಷವೂ ನಮ್ಮ ಎದೆಯೊಳಗೆ ಕಾಡಬೇಕಾಗಿರುವುದು ‘ಸಾವು…!’ ನಾವು ಯಾರಿಗೆ ಹೆದರದಿದ್ದರೂ  ‘ಸಾವು’ ಅದು ನಮ್ಮ ಅಂತಿಮ ಪಯಣ ಎನ್ನುವ ಎಚ್ಚರಿಕೆ ಇರಬೇಕು.  “ನಾನು ಇನ್ನೊಂದು ಕ್ಷಣದಲ್ಲಿ ಸಾಯುತ್ತೇನೆ. ಮಾಡುವುದಾದರೆ ಎಲ್ಲ ಕೆಲಸವನ್ನು ಈಗಲೇ ಮಾಡಿ ಮುಗಿಸಿಬಿಡೋಣ..”  ಎನ್ನುವ ದೃಢಸಂಕಲ್ಪದೊಂದಿಗೆ ನಾವು ಬದುಕಿ ಬಿಡಬೇಕು…! ಬದುಕುವದಾದರೆ ಹೀಗೆ ಬದುಕಬೇಕು. ಹುಲಿ ಬೇಟೆಯಾಡುವಂತೆ, ಕೋಗಿಲೆ ಮಧುರವಾಗಿ ಕೂಗುವಂತೆ, ಮೀನು ಈಜುವಂತೆ, ಮಲ್ಲಿಗೆ ಘಮಘಮಿಸಿ ಅರಳಿ ನಗುವಂತೆ,  ಬ್ಯಾಟಿ ಮಾಡಲು ತಂದ ಕುರಿಯು ತೋರಣವನ್ನು ನಗುತ್ತಲೆ ಮೇಯುವಂತೆ,  ನಾವು ಬದುಕಿನ ಅಂತಿಮ ಕ್ಷಣದಲ್ಲಿ ಇದ್ದೇವೆ. ಇದೇ ಕೊನೆಯ ಅವಕಾಶ..” ಎಂದು ಬದುಕಿ ಬಿಡಬೇಕು..!!  ಆಗ ನಾವು ಮಾಡಬೇಕಾದ ಕೆಲಸವನ್ನು ನಮ್ಮ ಆಲೋಚನೆಗಳಿಗೆ ಅನುಗುಣವಾಗಿ, ಯೋಜನಾ ಬದ್ಧವಾಗಿ, ನಿಗದಿತ ಕಾಲಮಿತಿಯೊಳಗೆ ಮಾಡುತ್ತಾ ಮಾಡುತ್ತಾ ಸಾಧನೆಯ ಉತ್ತುಂಗದಲ್ಲಿ ಬೆಳೆಯುವದರಲ್ಲಿ ಎರಡು ಮಾತಿಲ್ಲ.

ಗೆಳೆಯರೇ, ಬದುಕುವುದಾದರೆ ಸಾವಿನೊಂದಿಗೆ ಹೋರಾಟ ಮಾಡುವ ಸೈನಿಕನಂತೆ, “ಬೆಳೆ ಬರುತ್ತದೆ” ಎನ್ನುವ ನಿರೀಕ್ಷೆಯೊಂದಿಗೆ ಬಿಸಿಲು, ಮಳೆ, ಚಳಿಗೆ ಬದುಕುವ ರೈತನಂತೆ ಸದಾ ಕಾಲವೂ ಸಾಧನೆಯ ಹೆಜ್ಜೆ ಹಾಕೋಣ. ಅಂತಹ ಸಾರ್ಥಕ ಬದುಕನ್ನು ಬದುಕಿ ಬಿಡೋಣ ಎಂದು ಸದಾಶಯ ಬಯಸುವೆ.


2 thoughts on “ರಮೇಶ ಸಿ ಬನ್ನಿಕೊಪ್ಪಹಲಗೇರಿ,ಚಿಂತನಾ ಲಹರಿ..”ಬದುಕುವುದಾದರೇ ಹೀಗೇ ಬದುಕಿಬಿಡೋಣ..”

  1. ಬದುಕು ಸಾರ್ಥಕವಾಗಬೇಕು ,ರೈತರಂತೆ ಕಷ್ಟವಿದ್ದರೂ ಬದುಕಬೇಕೆಂಬ ಕಿವಿಮಾತು ಸತ್ಯ.ಲೇಖನ ಚೆನ್ನಾಗಿದೆ.ಶುಭವಾಗಲಿ

Leave a Reply

Back To Top