ಲಂಕೇಶ್ ವಿಶೇಷ ಲೇಖನ
ಸಹಜ ಪ್ರೀತಿ ಮತ್ತು ಜೀವನ ಪ್ರೇಮ
ಸಾಹಿತಿಯಾದವನು ಎಲ್ಲರಂತೆ ನೋಡಬಯಸುತ್ತಾನೆ. ಮನುಷ್ಯ, ಮರ, ಪ್ರಾಣಿ, ಆಕಾಶ, ಮಣ್ಣು ಇದೆಲ್ಲದರ ಖಚಿತ ಗುಣ ಮತ್ತು ಗಾತ್ರ ಅವನಿಗೆ ತಿಳಿಯುವುದೇ ಹೀಗೆ. ಆದರೆ ಎಲ್ಲರಂತೆ ನೋಡುತ್ತಿರುವಾಗಲೇ ಅವನಿಗೆ ವಿಶೇಷವಾದದ್ದು ಕಾಣುತ್ತದೆ. ಅದು ವಿಶೇಷವಾದದ್ದು ಎಂಬ ವಿಶ್ವಾಸ ಅವನಲ್ಲಿದ್ದರೆ ಮಾತ್ರ ಅವನು ಅದನ್ನು ಆದಷ್ಟೂ ಸಮರ್ಪಕವಾಗಿ ಹೇಳುವ ವಿಧಾನಗಳನ್ನು ಕಂಡುಕೊಳ್ಳುತ್ತಾನೆ. ಪ್ರೀತಿ, ಔದಾರ್ಯವಿಲ್ಲದಿದ್ದರೆ, ತನ್ನ ಬಗ್ಗೆ ನಿಷ್ಠುರತೆ ಮತ್ತು ಇತರರ ಬಗ್ಗೆ ಸಹಾನುಭೂತಿ ಇಲ್ಲದಿದ್ದರೆ ಜೀವನದ ಬಾಗಿಲು ಲೇಖಕನಿಗೆ ತೆರೆಯುವುದೇ ಇಲ್ಲ.
ಮೇಷ್ಟ್ರು ಈ ಮಾತನ್ನು ಬರೆದದ್ದು ೧೯೯೨ರಲ್ಲಿ . ದೇವನೂರು ಮಹಾದೇವರನ್ನು ಕುರಿತು ಬರೆಯುತ್ತಾ, ಸೂಕ್ಷ್ಮ ಮನಸ್ಸಿನ ನ್ಯಾಯವಂತ ಮನುಷ್ಯ ಎಂದು ಕರೆಯುತ್ತಾರೆ ಲಂಕೇಶ್.
ಇನ್ನು ಅಂಬೇಡ್ಕರ್ ಪುರುಷಸೂಕ್ತದ ಬಗ್ಗೆ , ‘ಮನು’ ವಿನ ಬಗ್ಗೆ ಬರೆದುದ್ದನ್ನು ಮನಸ್ಸಿಗೆ ನಾಟುವಂತೆ ನಮ್ಮ ಎದುರು ಲಂಕೇಶ್ ಮಂಡಿಸುವುದು ಹೀಗೆ………
ಶೂದ್ರರಾದವರು ಯಾಕೆ ಈ ಬ್ರಾಹ್ಮಣ ತತ್ವಗಳ ಬಗ್ಗೆ, ನಮ್ಮ ಜನರನ್ನು ಛಿದ್ರಗೊಳಿಸಿ ಅವರನ್ನು ದಾಸ್ಯ, ಬಡತನ, ತಬ್ಬಲಿತನದಲ್ಲಿ ಆಳವಾಗಿ ನೆಟ್ಟವರ ಬಗ್ಗೆ ಮಾತಾಡಕೂಡದು? ಈ ಬ್ರಾಹ್ಮಣರು ಸಹಸ್ರಾರು ವರ್ಷಗಳಿಂದ ನಡೆಸಿದ ಟೀಕೆ, ವಿಮರ್ಶೆ, ಮೀಮಾಂಸೆ, ತತ್ವಚಿಂತನೆ ಯಾವ ರೀತಿ ಇತ್ತೆಂದರೆ ಇಲ್ಲಿ ಬರೆಯಲು ಕಾಗದಗಳಾಗಲಿ, ಇಂಕಾಗಲಿ, ಪುಸ್ತಕದ ಕಲ್ಪನೆಯಾಗಲಿ ಹುಟ್ಟಲಿಲ್ಲ! ಇವರ ‘ತತ್ವ’ಗಳನ್ನು ಕೇಳಿದ ಜನಸಾಮಾನ್ಯನ ಕಿವಿಗೆ ಕಾಯ್ದ ಶೀಶ ಹಾಕುವ ಕಟ್ಟಪ್ಪಣೆಯನ್ನು ಕೂಡ ಈ ‘ಜ್ಞಾನಿ’ಗಳು ಮಾಡಿದರು.
‘ಪುರುಷ ಸೂಕ್ತ’ದ ಬಗ್ಗೆ, ಮನುವಿನ ಬಗ್ಗೆ ದಲಿತರ ನಾಯಕ ಅಂಬೇಡ್ಕರ್ ಬರೆಯಲು ಮನಸ್ಸು ಮಾಡಿದೊಡನೆ ಈ ಕಂದಾಚಾರಿಗಳು ಹೌಹಾರಿದರು. ಅಂಬೇಡ್ಕರ್ ಈ ಪುರುಷ ಸೂಕ್ತದ ಸಿದ್ಧಾಂತವನ್ನು ಚರ್ಚಿಸುತ್ತ ಹೇಳಿದರು: “ಇದು ಕ್ರೂರವಾದದ್ದು ಮಾತ್ರವಲ್ಲ, ತೀರಾ ನೀಚವಾದದ್ದೂ, ಅನೀತಿಯುತವಾದದ್ದೂ ಆಗಿದೆ.”
ಕಂದಾಚಾರಿಗಳ ಬಗ್ಗೆ ಇಂಗ್ಲೀಷ್ ಚಿಂತಕನೊಬ್ಬನ ಮಾತು ಕಾಣಿಸುತ್ತ ಅಂಬೇಡ್ಕರ್ ಹೇಳಿದರು: “ನಾನು ಖದೀಮನ ಬೆದರಿಕೆಗೆ ಮಣಿದು ಕಳ್ಳನನ್ನು ಹಿಡಿಯುವುದನ್ನು ನಿಲ್ಲಿಸಲಾರೆ.”
ಮುಂದುವರಿದು, ಅಂಬೇಡ್ಕರ್ ಹೇಳಿದರು: “ಬ್ರಾಹ್ಮಣರಾದ ನೀವು ನಿಮ್ಮ ತತ್ವಗಳನ್ನು ಬೆಂಬಲಿಸಿ ಮಾತಾಡುವುದು ಯಾಕೆಂದು ನನಗೆ ಗೊತ್ತು. ನಿಮಗೆ ಅದರಲ್ಲಿ ಲಾಭವಿದೆ. ನಿಮ್ಮ ಮೂಗಿನ ನೇರಕ್ಕೆ ನೀವು ಮೀಮಾಂಸೆ ಮಾಡುತ್ತಾ ಹೋಗುತ್ತೀರಿ. ಆದರೆ ನಿಮ್ಮ ತತ್ವಗಳ ಸತ್ಯಾಸತ್ಯತೆಯನ್ನು ಯಾವ ಮೋಹವೂ, ದ್ವೇಷವೂ ಇಲ್ಲದೆ ತನಿಖೆ ನಡೆಸುವುದು ಶೂದ್ರನಾದ ಅದರಲ್ಲೂ ಅಸ್ಪೃಶ್ಯನಾದ ನನ್ನ ಕರ್ತವ್ಯವಾಗಿದೆ. ತಮ್ಮ ಪವಿತ್ರವಾದ ಗ್ರಂಥಗಳ ಬಗ್ಗೆ ನಿಮಗೆ ಕುರುಡು ಗೌರವವಿರಬಹುದು; ಆದರೆ ಅವು ಪವಿತ್ರವೆಂದು ಗೊತ್ತಾಗುವವರೆಗೆ ಅವು ಧೂರ್ತ ಗ್ರಂಥಗಳೆಂದು ತಿಳಿದು ತನಿಖೆ ನಡೆಸುವ ಹಕ್ಕು ನನಗಿದೆ. ನಿಮ್ಮ ಆ ಗ್ರಂಥಗಳಲ್ಲಿರುವ ಆ ಪಾವಿತ್ರ್ಯ ಯಾವುದು? ಅದು ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ ತಯಾರಾದ ಗ್ರಂಥ ಸಮೂಹ. ತಾವು ಯಾವ ಕಾರಣಕ್ಕೆ ಈ ಗ್ರಂಥಗಳನ್ನ ಪೂಜಿಸುತ್ತೀರೋ ಅದೇ ಕಾರಣಕ್ಕೆ ನನಗೆ ಅವು ತುಚ್ಛವಾಗಿ ಕಾಣಬಹುದೆಂದು ನಿಮಗೆ ಅನ್ನಿಸುವುದಿಲ್ಲವೆ..?”
ಬುದ್ಧನ ಕುರಿತು ಲಂಕೇಶ್ :
“ಅತ್ಯಂತ ಶ್ರೇಷ್ಠ ತತ್ವಜ್ಞಾನಿಯಾಗಿದ್ದ ಬುದ್ಧ ಅತ್ಯಂತ ದುರ್ಬಲ ಪ್ರಾಣಿಗಳ ಬಗ್ಗೆ ಕೂಡ ಪ್ರೀತಿ ಇಟ್ಟುಕೊಂಡಿದ್ದ. ಎಲ್ಲವನ್ನೂ ಗೆದ್ದ ಈತ ತಾನು ಗೆದ್ದದ್ದನ್ನೆಲ್ಲ ಸಕಲ ಜೀವಿಗಳಿಗೆ ಅರ್ಪಿಸಿ ಬರಿಗೈನ ಮನುಷ್ಯನಾದ. ದೇವರಿದ್ದಾನೆ ಎಂದು ನಂಬಲು ನಿರಾಕರಿಸಿದ ಈತ, ಆತ್ಮವಿದೆ ಎಂದು ಸುಳ್ಳು ಹೇಳಲು ಒಪ್ಪದಿದ್ದ ಈತ ಎಲ್ಲ ಜೀವಿಗಳಲ್ಲೂ ದೇವರ ಅಂಶವನ್ನು ಕಂಡ. ಮಾನವಕೋಟಿ ಕಂಡ ಏಕಮಾತ್ರ ಮಹಾನ್ ವ್ಯಕ್ತಿಯಾದ ಈತ ತನ್ನ ಕೊನೇ ಗಳಿಗೆಯಲ್ಲಿ ಸಮಾಜದ ಕನಿಷ್ಠ ವ್ಯಕ್ತಿಯೊಬ್ಬ ಕೊಟ್ಟ ಆಹಾರವನ್ನು ಧನ್ಯತೆಯಿಂದ ಸ್ವೀಕರಿಸಿ ಅಸುನೀಗಿದ. ವೇದ ವೇದಾಂತ, ಜಾತಿ, ಧರ್ಮ, ಯಾವುದಕ್ಕೂ ತಲೆಬಾಗದ ಬುದ್ಧ ತನಗಾಗಿ ಏನನ್ನೂ ಬಯಸಲಿಲ್ಲ; ಸತ್ತಿದ್ದ ಎಲ್ಲ ದೇಹ, ಸಂಸ್ಥೆ, ನಂಬಿಕೆಗಳಿಗೆ ಜೀವ ಬರಿಸಿದ…”
ಭಂಡ ರಾಜಕೀಯದ ಕುರಿತು:
ಇಲ್ಲಿಯ ಭಂಡ ರಾಜಕೀಯ ಮತ್ತು ನಿರರ್ಥಕ ಕ್ರೌರ್ಯ ಕ್ರಮೇಣ ಸೂಕ್ಷ್ಮಜೀವಿಗಳನ್ನು ಮೊಂಡಾಗಿಸುತ್ತದೆ; ಜೀವವಿದ್ದರೂ ಶವಗಳಂತೆ ಓಡಾಡಬೇಕಾಗುತ್ತದೆ; ಸಾಹಿತಿಗೆ, ಕಲಾವಿದನಿಗೆ ಇರುವ ನಿಜವಾದ ಬಂಡವಾಳ ಮಾನವೀಯತೆ ಮತ್ತು ಸೂಕ್ಷ್ಮಜ್ಞತೆ; ಪ್ರೀತಿ, ಕರುಣೆ, ದಾಕ್ಷಿಣ್ಯವಿಲ್ಲದ ಯಾವನೂ ಸಾಹಿತಿಯಾಗಿರಲಾರ. ಒಂದು ನಾಡಿನ ಭ್ರಷ್ಟತೆ ಮತ್ತು ಅದಕ್ಷತೆ ಕ್ರಮೇಣ ಹಿಂಸೆಗೆ ದಾರಿ ಮಾಡಿಕೊಡುತ್ತದೆ; ಹಿಂಸೆಯೇ ಬಹುಸಂಖ್ಯಾತರ ಜೀವನಕ್ರಮವಾಗುತ್ತದೆ.
ಭಟ್ಟಂಗಿಗಳ ಕುರಿತು…
ಟೀಕೆ ವಿಮರ್ಶೆಯನ್ನು ತುಚ್ಚವೆಂದೂ, ಶತ್ರು ಮಾತ್ರ ನೀಡುವ ಕಿರುಕುಳವೆಂದೂ ತಿಳಿದ ಈ ದೇಶದಲ್ಲಿ ಭಟ್ಟಂಗಿಗಳು ವಂದಿಮಾಗಧರಿಂದ ಆಗಿರುವ ಅಪಾಯವೇ ಹೆಚ್ಚು.
55 ಅಂಕ ತೆಗೆಯುವವನು ಅದ್ಭುತ
ವಿದ್ಯೆಯ, ಸಂಪತ್ತಿನ ಲಾಭ ಪಡೆದ ಜನಾಂಗದಿಂದ ಬಂದವ ತೊಂಭತ್ತೈದು ಅಂಕ ತೆಗೆಯುವುದು ಎಷ್ಟು ಅದ್ಭುತವೋ ಯಾವುದೇ ಅಕ್ಷರ, ಆಸ್ತಿಯ ಹಿನ್ನೆಲೆಯಿಲ್ಲದವ ಐವತ್ತೈದು ಅಂಕ ತೆಗೆಯುವುದು ಅದಕ್ಕಿಂತ ಅದ್ಭುತ. ಅದಕ್ಕಿಂತ ಹೆಚ್ಚಾಗಿ ತೊಂಭತ್ತೈದು ಅಂಕ ತೆಗೆದವನಿಗೆ ಆತನ ಹಿನ್ನೆಲೆಯಿಂದಾಗಿ ಅವನ ಗುಂಪಿನ ಪರಿಚಿತರು, ವಿದೇಶದಲ್ಲಿರುವವರು, ಉನ್ನತ ಸ್ಥಾನದಲ್ಲಿರುವವರು ನೆರವಾಗಿ ಒಂದು ನೆಲೆ ನೀಡುವ ಸಾಧ್ಯತೆ ಕೇವಲ ಸಾಧ್ಯತೆ ಎಂಬುದಾದರೂ ಇರುತ್ತದೆ. ಈ ನಾಡಿನಲ್ಲಿರುವ ಕೋಟ್ಯಂತರ ದಲಿತರು, ಹಿಂದುಳಿದವರಿಗೆ ಹಿಂದುಗಡೆಯೂ ಕತ್ತಲು, ಮುಂದುಗಡೆಯೂ ಕತ್ತಲು…
ಕೊನೆಯದಾಗಿ ಲಂಕೇಶರು ಬರೆದ ಈ ಹಾಡು ನೆನೆಯೋಣ.….
ಕರಿಯವ್ವನ ಗುಡಿತಾವ ಅರಳ್ಯಾವ ಬಿಳಿಹೂವು
ಸೀಮೆಯ ಜನ ಕುಣಿದು ನಕ್ಕಂಗ್ಹಾದ
ತುಂಟ ಹುಡಿಗ್ಯಾರಲ್ಲಿ ನೆವ ಕೇಳಿ ಬರತಾರೆ
ಹರೆಯದ ಬಲೆಯಲ್ಲಿ ಸಿಕ್ಕಾಂಗ್ಹದ
ಊರಿಂದ ನಾಕ ಹೆಜ್ಜೆ ಹಾಕಿದರೆ ಕಾಣತೈತಿ
ಚೆಂದಾಗಿ ಹರಿತಾಳ ಐರಾವತಿ
ಮಳೆಗಾಲ ಬಂದಾಗ ಮೈತುಂಬಿ ಹರಿದವಳು
ಬ್ಯಾಸಗ್ಯಾಗ ಬಸವಳಿದು ಬೆಂದ್ಹಾಂಗದ
ಕರಿಯವ್ವನ ಗುಡಿತಾವ ಪಣತೊಟ್ಟು ಗೆದ್ದವರು
ಇನ್ನೂ ಬದುಕೇ ಅವರೆ ಸರದಾರರು
ಕಟ್ಟೊಡೆದು ಬಡಿದಾಡಿ ಉಯ್ಯಾಲೆ ತುಯ್ದಾಡಿ
ಮನಸಾರೆ ಮೆಚ್ಚಿಸಿದ ಸರದಾರರು
ಅಲ್ಲೆಯೇ ಗಿಣಿಯೊಂದು ಕತೆಯೊಂದ ಹೇಳೈತೆ
ಕೇಳಕ ನಾನಿಲ್ಲ ಊರೊಳಗೆ
ಕತೆ ನಡೆದ ದಿನದಿಂದ ಕೆಂಪಾಗಿ ಹರಿತವಳೆ
ಕತೆಗಳ ಮಹರಾಣಿ ಐರಾವತಿ
…………
–
……….
ಆಕರಗಳು :
೧)(ಉಲ್ಲೇಖ: ತೇಜಸ್ವಿ: ನಾವು ಕೇಳಿದಂತೆ (ಸೆಪ್ಟಂಬರ್ 13, 1981) . ಬಿಟ್ಟು ಹೋದ ಪುಟಗಳು (ಸಂಗ್ರಹ-1).
೨) -ಪಿ.ಲಂಕೇಶ್
ಟೀಕೆ ಟಿಪ್ಪಣಿ, ಸಂಪುಟ 3.
೩) ಕೃಪೆ: ಟೀಕೆ ಟಿಪ್ಪಣಿ, ಸಂಪುಟ 1 (ಮೀಸಲಾತಿ ವಿರೋಧಿ ಹುಡುಗರೊಂದಿಗೆ, 2 ಜೂನ್ 1985)
*********************************
ನಾಗರಾಜ್ ಹರಪನಹಳ್ಳಿ
ಉತ್ತಮ ನುಡಿ ನಮನ
ಹಲವು ಮಾಹಿತಿಯನ್ನು ಒಂದೇ ಲೇಖನದಲ್ಲಿ ಸೊಗಸಾಗಿ ಹಿಡಿದಿಟ್ಟ ಲೇಖನ.
ಉತ್ತಮ ಪರಿಚಯ ನೀಡಿದ್ದೀರಿ ಲಂಕೇಶರ ಹಲವು ವ್ಯಕ್ತಿತ್ವದ ಪರಿಚಯ ಸಿಕ್ಕಿತು