ಸ್ಮರಣೆ ಸಂಗಾತಿ
ಯಮುನಾ ಕಂಬಾರ
ಆಶಾ ಇನ್ನು ನೆನಪು ಮಾತ್ರ..
ಅಗಲಿದ ಆಶಾ ಕಡಪಟ್ಟಿ-
ಮನೆಗಾಗಿ ಮಡಿವವರು ಬಹಳ ಜನ ಆದರೆ ಸಾರ್ವಜನಿಕ ಹಿತಾಸಕ್ತಿಗಾಗಿ ಸವೆಯುವವರು ವಿರಳ. ವಿರಳ . ಅಂತ ವಿರಳರಲ್ಲಿ ಆಶಾ ಕಡಪಟ್ಟೆಯವರೂ ಒಬ್ಬರು. ತಮ್ಮ ಜೀವಿತ ಕಾಲಾವಧಿಯಲ್ಲಿ ಕನ್ನಡಾಭಿಮಾನಿಯಾಗಿ ಕೆಲಸ ಮಾಡಿ ಕನ್ನಡಿಗರ ಮನದಲ್ಲಿ ಉಳಿದಿದ್ದಾರೆ. ಅದಕ್ಕಾಗಿ ಅವರು ಕೈ ಮೇಲೆ ಹಾಕಿಸಿಕೊಂಡ ಕನ್ನಡತಿ ಎಂಬ ಟ್ಯಾಟೋ…ಒಂದು ಉದಾಹರಣೆ. ಆಶಕ್ಕಾ ಎಲ್ಲರ ಜೊತೆ ಮಾತನಾಡುತ್ತಾ ತನ್ನಿಂದ ಅವರಿಗೆ ಏನಾದರೂ ಸಹಾಯಬೇಕಿದ್ದರೆ ನೀಡುವ ವ್ಯಕ್ತಿತ್ವಹೊಂದಿದ್ದರು. ಅದಕ್ಕಾಗಿ ಅವರು ಮೀನಮೇಷ ಎನಿಸುತ್ತಿರಲ್ಲಿ ಸಹಾಯ ಮಾಡಲೋ ಬೇಡವೊ ಎಂದು ಹಿಂಜರಿಯುತ್ತಿರಲಿಲ್ಲ . ವರ್ಗ ಭೇಧ ಅವರು ಮಾಡಲಿಲ್ಲ. ಎಲ್ಲರೂ ನಮ್ಮವರೇ ಎನ್ನುತ್ತಿದ್ದರು. ಎಲ್ಲರೊಡನೆಯೂ ಪ್ರೀತಿ ಹಂಚಿಕೊಂಡು ಮಾತನಾಡುತ್ತಿದ್ದರು. ಕನ್ನಡ ಬೆಳೆಯಬೇಕು ಮೊದಲು ಅದು ಉಳಿಯಬೇಕಾಗಿದೆ ಎಂದು ಅರಿರವರು. ಉಳುವಿಗಾಗಿ ಮಾರ್ಗ ಕಂಡುಕೊಂಡವರು. ಸನ್ : ೨೦೦೧-೦೨ ರ ಸಾಲಿನಲ್ಲಿ ಬೆಳಗಾವಿಯಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘವನ್ನು ಹುಟ್ಟುಹಾಕಿ ಸಂಘದ ಸಂಸ್ಥಾಪಕಿಯರಾದರು.ಈ ಸಂಘದ ಮೂಲಕವಾಗಿ ಅಕ್ಕಕನ್ನಡದ ಕಾರ್ಯಕ್ರಮಗಳನ್ನು ನಡೆಸತೊಡಗಿದರು. ದತ್ತಿ ದಾನಿಗಳಿಂದ ಹಣವನ್ನು ಸಂಗ್ರಹಿಸಿ ಆ ಹಣದ ಬಡ್ಡಿಯಿಂದ ಪ್ರತೀ ತಿಂಗಳು ಕನ್ನಡ ಕಾರ್ಯಕ್ರಮಗಳನ್ನು ಕೊಡತೊಡಗಿದರು. ಜಾಣಪದ ಹಾಡುಗಳು , ಚುಟುಕು ಸ್ಪರ್ಧೆಗಳು , ಕವನ ಸ್ಪರ್ಧೆಗಳೆ ಕಥಾ ಸ್ಪರ್ಧೆಗಳು ನಡೆಸುತ್ತಾ ಬಂದಿವೆ. ಸಂಘದಲ್ಲಿ ನಾಲ್ಕೈದು ಜನ ಮಾತ್ರ ಸದಸ್ಯರಿದ್ದ ಸಂಘವನ್ನು ಇನ್ನೂರು ಸದಸ್ಯರನ್ನಾಗಿ ಬೆಳೆಸಿದ್ದು ಅವರೇ. ಲೇಖನಿ ಖಡ್ಗಕ್ಕಿಂತ ಹರಿತ ಎಂಬುದನ್ನು ಅವರು ಅರಿತಿದ್ದರು. ಮಹಿಳೆಯರ ಅನುಭವಗಳಿಗೊಂದು ವೇದಿಕೆ ಕಲ್ಪಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.
ಲೇಖಕ ಅಂದರೆ ಅವನು ಒಂದು ಸಮಾಜದ ಆಸ್ತಿ. ಲೇಖನಿ ಸಮಾಜದಲ್ಲಿ ಸುಧಾರಣೆ ತರಬಲ್ಲುದು. ಸಮುದಾಯದಲ್ಲಿ ಅಭಿಪ್ರಾಯಗಳನ್ನು ರೂಪಿಸಬಲ್ಲುದು. ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಬಲ್ಲುದು. ಅಲ್ಲದೇ ಸಮುದಾಯವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಬಲ್ಲುದು. ಅದನ್ನರಿತ ಅಕ್ಕ ಬೆಳಗಾವಿ ಜಿಲ್ಲೆಯಲ್ಲಿ ಪ್ರತೀ ತಾಲೂಕುಗಳಲ್ಲಿ ಒಂದೊಂದು ತಾಲೂಕಾ ಲೇಖಕಿಯರ ಸಂಘವನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದರು.ಎಲ್ಲ ತಾಲೂಕುಗಳಲ್ಲಿಯೂ ಆಗಿಲ್ಲ ಇನ್ನೂ ಆಗಬೇಕುವೆ. ಇವತ್ತಿನ ಕಾಲ ಘಟ್ಟದಲ್ಲಿ ಸಂಘಟನೆ ಎಂಬುದು ಸರಳ ಮಾತಲ್ಲ . ಸಂಘಟಕರು ಹರ ಸಾಹಸ ಪಡುವಂತಹುದು.
ಎಲ್ಲರು ತಮ್ಮ ತಮ್ಮ ಹೊಲ ಮನೆ ಅಂಗಡಿ ಕಛೇರಿ ಅಂತ ಧ್ಯಾನ ಮಗ್ನರಾಗಿರುವಾಗ ಸಾಹಿತ್ಯಕ್ಕೆ ಬನ್ನಿರಿ ಅಂದರೆ ಬಂದಾರೇಯೇ….? ಆದರೂ ಛಲಬಿಡದ ಅಕ್ಕ ತಂಡ ಕಟ್ಟಿಕೊಂಡು ತಾಲೂಕಿನಲ್ಲಿ ಸ್ಥಳೀಯ ಸಾಹಿತಿಗಳನ್ನು ಕಲೆಹಾಕಿಅವರ ಮನವೊಲಿಸಿ ಅವರ ಸಹಾಯ ಸಹಕಾರಗಳಿಂದ ಸಂಘದ ಚಟುವಟಿಕೆಗಳನ್ನು ನೋಡಿಕೊಂಡು ಹೋಗುತ್ತಿದ್ದರು. ತಾಲೂಕಿನಲ್ಲಿ ಕವಿಗೋಷ್ಟಿಗಳಿಗೆಲ್ಲಾ ನೂರಾರು ಜನ ಬಂದ ನಿದರ್ಶನಗಳಿವೆ. ಅಕ್ಕ ಕತೆ , ಕಾದಂಬರಿ ಮಕ್ಕಳ ಸಾಹಿತ್ಯ ಚುಟುಕು ಭಾವಗೀತೆಗಳು ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ . ಇದೇ ನವ್ಹೆಂಬರ ೩೦ ರಂದು ಬೆಳಗಾವಿ ಜಿ.ಲೇ.ಸಂ. ಅವರ ಸಮಗ್ರ ಸಾಹಿತ್ಯ ಅವಲೋಕನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಲ್ಲದೆ ಗೀಗಿ ಪದಗಳನ್ನು ಜನಪದ ಗೀತೆಗಳನ್ನು ರಚಿಸಿದ್ದಾರೆ. ಇವರು ರಚಿಸಿದ ” ಇದು ಎಂತಾ ಲೋಕವಯ್ಯ ” ಗೀತೆಗೆ ದಾದಾಸಾಹೇಬ ಪಾಲ್ಕೆ ಪ್ರಶಸ್ತಿ ವೀಜೇತ ಡಾ : ರಾಜಕುಮಾರ ಧ್ವನಿ ನೀಡಿದ್ದಾರೆ. ಗೀಗಿ ಪದಕ್ಕೆ ರುದ್ರಾಂಬಿಕಾ ಯಾಳಗಿಯ್ಯವರು ಧ್ವನಿ ಕೊಟ್ಟಿದ್ದಾರೆ. ಆಸಕ್ಕಾ ಬೆಳಗಾವಿಯಲ್ಲಿ ಬೆಟಗೇರಿ ಕೃಷ್ಣಶರ್ಮರ ಟ್ರಸ್ಟಿನಲ್ಲಿ ಸದಸ್ಯೆಯರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ. ಇವರ ಅನುಪಮ ಸೇವೆ ಯನ್ನು ಮೆಚ್ಚಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಅರಳಿಕಟ್ಟೆಯಲ್ಲಿ ತಾಲೂಕಿನ ಎಂಟನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಡಿ ಮಾಡಿ ಗೌರವ ಸಲ್ಲಿಸಿದೆ. ಬೆಳಗಾವಿ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಹುಬ್ಬಳ್ಳಿಯಲ್ಲಿ AIPC ಯಿಂದ ಸನ್ಮಾನಿತಗೊಂಡಿರುವರು. ಬೆಳಗಾವಿಯಲ್ಲಿ ನಡೆದ ೨೨ ಡನೇಯ ಅಖಿಲ ಭಾರತ ಕವಯತ್ರಿಯರ ಸಮ್ಮೇಳನದಲ್ಲಿ ಬ್ರೇನ ಬೂಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ ವೀರಶೈವ ಮಹಾಸಭೆಯು ” ಸಾಂಸ್ಕೃತಿಕ ಆಶಾ ದೀಪ ” ಎಂಬ ಬಿರುದು ನೀಡಿದೆ. ಬಿ.ಆರ್.ಅಂಬೇಡ್ಕರ ಪ್ರಶಸ್ತಿ ಕನ್ನಡ ಜೋತಿ ರಾಜ್ಯ ಪ್ರಶಸ್ತಿಗಳು ಇವರ ಮುಡಿಯನ್ನು ಅಲಂಕರಿಸಿವೆ.
ಯಮುನಾ.ಕಂಬಾರ