ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಂಬಿ ಬಂದವರೊಡನೆ ನಮ್ಮ ನಡೆ ಹೇಗಿರಬೇಕು? ಅಂತ ಒಂದು ಪ್ರಶ್ನೆ ಬಂದರೆ ಅದಕ್ಕೆ…… ಉತ್ತರವನ್ನು ಹುಡುಕುವ ಪ್ರಯತ್ನ ಯಾವ ರೀತಿ ಮಾಡಬಹುದು….. ಅಂತ ಅಕ್ಕನ ವಚನವೊಂದರಿಂದ ತಿಳಿಯಬಹುದು.
ನಮ್ಮ ಜೀವನದಲ್ಲಿ ಅನೇಕರು ನಮ್ಮನ್ನು ನಂಬಿ, ಪ್ರೀತಿಯಿಂದ ಅಥವಾ ಆಸರೆಯನ್ನರಸಿ ಬರುತ್ತಾರೆ. ಆದರೆ ಅವರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು, ಅವರ ನಂಬಿಕೆಗೆ ಹೇಗೆ ನ್ಯಾಯ ಒದಗಿಸಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ ಅಕ್ಕಮಹಾದೇವಿಯವರ ಈ ವಚನ ನಮಗೆ ಮಾರ್ಗದರ್ಶನ ನೀಡುತ್ತದೆ.
“ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ,
ಮನ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ!
ಅರಿವು ನಿಮ್ಮಲ್ಲಿ ಸ್ಥಯವಾದ ಬಳಿಕ ನಾನಾರನರಿವೆ!
ಚನ್ನಮಲ್ಲಿಕಾರ್ಜುನಾ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯ.”
ಈ ವಚನವು ಕೇವಲ ದೇವರಿಗಷ್ಟೇ ಸೀಮಿತವಾದ ಆಧ್ಯಾತ್ಮಿಕ ಅನುಭವವಲ್ಲ. ಇದನ್ನು ನಮ್ಮ ದೈನಂದಿನ ಲೌಕಿಕ ಜೀವನಕ್ಕೆ ಮತ್ತು ನಮ್ಮನ್ನು ನಂಬಿ ಬಂದ ಜನರೊಂದಿಗಿನ ಸಂಬಂಧಕ್ಕೆ ಅನ್ವಯಿಸಿಕೊಂಡಾಗ ಹಲವು ಮುಖ್ಯವಾದ ಜೀವನ ಮೌಲ್ಯಗಳು ದೊರೆಯುತ್ತವೆ.ಅವು ಹೇಗೆಂದರೆ…
೧. ನಿಸ್ವಾರ್ಥ ಸೇವೆಯ ಬಗ್ಗೆ ಹೇಳಲಾಗಿದೆ.ಅಂದರೆ..
ವಚನದಲ್ಲಿ “ತನು ನಿಮ್ಮ ರೂಪಾದ ಬಳಿಕ” ಎನ್ನಲಾಗಿದೆ. ಅಂದರೆ ಶರೀರವು ಪರಮಾತ್ಮನ ಇಚ್ಛೆಯಂತೆ ಪವಿತ್ರವಾದಾಗ, ಮಾಡುವ ಪ್ರತಿಯೊಂದು ಕಾಯಕವೂ ಪೂಜೆಯಾಗುತ್ತದೆ. ನಮ್ಮನ್ನು ನಂಬಿ ಬಂದ ಕುಟುಂಬದವರು, ಮಿತ್ರರು ಅಥವಾ ಆಶ್ರಿತರಿಗೆ ನಾವು ಮಾಡುವ ಸಹಾಯದಲ್ಲಿ ಯಾವುದೇ ಸ್ವಾರ್ಥವಿರಬಾರದು. “ನಾನು ಅವರಿಗೆ ಸಹಾಯ ಮಾಡುತ್ತಿದ್ದೇನೆ” ಎಂಬ ಅಹಂಕಾರವನ್ನು ತೊರೆದು, ಪ್ರೀತಿಯಿಂದ ನಡೆದುಕೊಳ್ಳುವುದೇ ನಿಜವಾದ ಧರ್ಮ.ಇದು ನಮ್ಮನ್ನು ನಂಬಿ ಬಂದವರಿಗೆ ನಾವು ಕೊಡುವ ಗೌರವ.
೨. ಸಮಾನತೆಯ ಭಾವವನ್ನು ಹೇಳಲಾಗಿದೆ.. ಅಂದ್ರೆ
“ಮನ ನಿಮ್ಮ ರೂಪಾದ ಬಳಿಕ” ಎಂದರೆ ಮನಸ್ಸಿನಲ್ಲಿ ದ್ವೇಷ, ಸ್ವಾರ್ಥ, ಮೇಲು-ಕೀಳೆಂಬ ಭೇದಭಾವಗಳಿಲ್ಲದಿರುವುದು. ಭಾರತೀಯ ಸನಾತನ ಚಿಂತನೆಯಲ್ಲೂ ಇದನ್ನೇ ಉಲ್ಲೇಖಿಸಲಾಗಿದೆ.ಹೇಗೆಂದರೆ ಈ ಶ್ಲೋಕದ ಮೂಲಕ ಅದನ್ನು ತಿಳಿಯಬಹುದು.
“”ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ ।
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ॥””
ಅಂದರೆ..”ಇವನು ನನ್ನವನು, ಅವನು ಬೇರೆಯವನು” ಎಂಬ ಸಣ್ಣತನದ ಯೋಚನೆ ಕಿರಿದಾದ ಮನಸ್ಸಿನವರಿಗೆ ಇರುತ್ತದೆ. ವಿಶಾಲ ಮನಸ್ಸಿನ ಉದಾರ ಗುಣದವರಿಗೆ ಇಡೀ ಜಗತ್ತೇ ಒಂದು ಕುಟುಂಬದಂತೆ ಕಾಣುತ್ತದೆ.
ಅಕ್ಕಮಹಾದೇವಿ ಹೇಳುವಂತೆ ನಮ್ಮನ್ನು ಆಶ್ರಯಿಸಿ ಬಂದವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಅವರಲ್ಲಿರುವ ಭಾವನೆಗಳನ್ನು ಗೌರವಿಸಬೇಕು. ಮನಸ್ಸಿನಲ್ಲಿ ನಿಷ್ಕಲ್ಮಷ ಪ್ರೀತಿ ಇದ್ದಾಗ ಮಾತ್ರ ಮತ್ತೊಬ್ಬರ ಕಷ್ಟ ನಮಗೆ ಅರ್ಥವಾಗುತ್ತದೆ.ಇಲ್ಲವಾದರೆ ಅವರು ಅನುಭವಿಸುವ ನೋವುಗಳು ನಮಗೆ ಅರ್ಥ ಆಗುವುದೇ ಇಲ್ಲ.
೩. ಸನ್ಮಾರ್ಗ ಮತ್ತು ಅಭಯದ ಬಗ್ಗೆ ಹೇಳಲಾಗಿದೆ.
“ಅರಿವು ನಿಮ್ಮಲ್ಲಿ ಸ್ಥಯವಾದ ಬಳಿಕ” ಎನ್ನುವುದು ಜ್ಞಾನ ಮತ್ತು ವಿವೇಕವನ್ನು ಸೂಚಿಸುತ್ತದೆ. ನಮ್ಮನ್ನು ನಂಬಿ ಬಂದವರಿಗೆ ನಾವು ನೀಡಬೇಕಾದ ಅತಿ ದೊಡ್ಡ ಕೊಡುಗೆ ಎಂದರೆ ಒಳ್ಳೆಯ ದಾರಿ ತೋರಿಸುವುದು ಮತ್ತು ಅಭಯ ನೀಡುವುದು.ಇದನ್ನೂ ಕೂಡ ಒಂದು ಶ್ಲೋಕದ ಮೂಲಕ ತಿಳಿದುಕೊಳ್ಳಬಹುದು.
“”ಶರಣಾಗತ ದೀನಾರ್ಥ ಪರಿತ್ರಾಣ ಪರಾಯಣೇ ।
ಸರ್ವಸ್ಯಾಪ್ತಿ ಹರೇ ದೇವಿ ನಾರಾಯಣಿ ನಮೋऽಸ್ತು ತೇ ॥””
ಅಂದ್ರೆ..ನಮ್ಮನ್ನು ನಂಬಿ, ಆಸರೆಯನ್ನರಸಿ ಬಂದ ದೀನರನ್ನು ಮತ್ತು ಕಷ್ಟದಲ್ಲಿರುವವರನ್ನು ರಕ್ಷಿಸುವುದೇ ಅತ್ಯುನ್ನತ ಕರ್ತವ್ಯ ಎಂದು.
ನಮ್ಮನ್ನು ನಂಬಿದವರ ಕಷ್ಟದಲ್ಲಿ ಆಸರೆಯಾಗಿ ನಿಂತು, ಸರಿ-ತಪ್ಪುಗಳ ಅರಿವು ಮೂಡಿಸಿ ಧೈರ್ಯ ತುಂಬುವುದು ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯ ಕರ್ತವ್ಯವಾಗಿದೆ.ಅವರಿಗೆ ಸರಿ ತಪ್ಪುಗಳ ಅರಿವು ಮೂಡಿಸದಿದ್ದರೆ..ಮುಂದೆಯೂ ಅದೇ ತಪ್ಪುಗಳನ್ನು ಮಾಡುವ ಸಂದರ್ಭಗಳನ್ನು ಎದುರಿಸಬಹುದು.
೪. ನಿಷ್ಕಲ್ಮಷ ಪ್ರೇಮದ ಬಗ್ಗೆ ತಿಳಿಸಲಾಗಿದೆ .
ವಚನದ ಕೊನೆಯಲ್ಲಿ “ನಿಮ್ಮಿಂದ ನಿಮ್ಮ ಮರೆದೆನಯ್ಯ” ಎಂದು ಅಕ್ಕಮಹಾದೇವಿ ಹೇಳುತ್ತಾರೆ. ಅಂದರೆ ‘ತಾನು’ ಎಂಬ ಅಹಂಕಾರ ಕರಗಿಹೋದಾಗ ಮಾತ್ರ ಸಂಬಂಧಗಳಲ್ಲಿ ಪೂರ್ಣತೆ ಸಾಧ್ಯ. ಲೌಕಿಕ ಜೀವನದಲ್ಲೂ ಅಷ್ಟೇ, “ನಾನು ಇಷ್ಟೆಲ್ಲಾ ಮಾಡಿದೆ” ನನ್ನಿಂದಲೇ ಇದೆಲ್ಲ ಸಾಧ್ಯವಾಗಿದ್ದು ಎಂಬ ಅಹಂ ಭಾವನೆ ಬಂದಾಗ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ನಮ್ಮನ್ನು ನಂಬಿದವರ ಬಳಿ ಅಹಂಕಾರ ತೋರದೆ, ಸಮರ್ಪಣಾ ಭಾವದಿಂದ ನಡೆದುಕೊಂಡಾಗ ಜೀವನವು ಶಾಂತಿ ಮತ್ತು ಸಂತೋಷದಿಂದ ಕೂಡಿರುತ್ತದೆ.
ಕೊನೆಯದಾಗಿ ಹೇಳಬೇಕೆಂದರೆ..
ಆಧ್ಯಾತ್ಮ ಎಂದರೆ ಎಲ್ಲವನ್ನೂ ತೊರೆದು ಕಾಡಿಗೆ ಹೋಗುವುದಲ್ಲ; ಲೌಕಿಕ ಜೀವನದಲ್ಲಿದ್ದುಕೊಂಡೇ ನಮ್ಮನ್ನು ನಂಬಿ ಬಂದವರನ್ನು ಪ್ರೀತಿಯಿಂದ, ವಿವೇಕದಿಂದ ಹಾಗೂ ಅಹಂಕಾರವಿಲ್ಲದೆ ನಡೆಸುವುದು. ಅಕ್ಕಮಹಾದೇವಿಯವರ ಈ ವಚನವು ನಮ್ಮ ನಡೆ-ನುಡಿಗಳನ್ನು ಶುದ್ಧವಾಗಿಟ್ಟುಕೊಂಡು, ಎಲ್ಲರನ್ನೂ ಗೌರವದಿಂದ ಕಾಣುವ ದಾರಿಯನ್ನು ತೋರಿಸುತ್ತದೆ.


About The Author

Leave a Reply

You cannot copy content of this page

Scroll to Top