ಅನುಭವ ಸಂಗಾತಿ
ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು —
ರೇಡಿಯೇಷನ್ ಥೆರಪಿ: ನನ್ನ ಅನುಭವ
ಕವಿತಾ ಶ್ರೀನಿವಾಸ್ ನಾಯಕ್


ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು — ರೇಡಿಯೇಷನ್ ಥೆರಪಿ: ನನ್ನ ಅನುಭವ
ನಾನು ಲೇಖಕಿಯಾಗಿ ನನ್ನ ಕ್ಯಾನ್ಸರ್ ಚಿಕಿತ್ಸೆಯ ಅನುಭವವನ್ನು ನಾನೇ ಬರೆಯುವ ಪರಿಸ್ಥಿತಿ. ನನ್ನ ಕ್ಯಾನ್ಸರ್ ಪಯಣದಲ್ಲಿ ಸಾಕಷ್ಟು ಅನುಭವಗಳಾಗಿವೆ. ಸಾಧ್ಯವಾದಷ್ಟು ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಮುಂದೆ ಸಾಗುತ್ತಿದ್ದೇನೆ.
ಮೊದಲಿಗೆ ಕಿಮೋಥೆರಪಿ, ನಂತರ ಶಸ್ತ್ರಚಿಕಿತ್ಸೆ. ತದನಂತರ ಬಂದದ್ದು ರೆಡಿಯೇಷನ್ ಥೆರಪಿ.
ನನಗೆ ಮೊದಲು ರೆಡಿಯೇಷನ್ ಥೆರಪಿ ಎಂದರೆ ಏನು ಎಂಬುದೇ ಗೊತ್ತಿರಲಿಲ್ಲ. ವೈದ್ಯರು ರೆಡಿಯೇಷನ್ ಥೆರಪಿ ಮಾಡಬೇಕೆಂದು ಹೇಳಿದಾಗ ನನ್ನಲ್ಲಿ ಕುತೂಹಲ ಹೆಚ್ಚಾಯಿತು. ಯೂಟ್ಯೂಬ್ನಲ್ಲಿ ಹುಡುಕಿದೆ. ಅಲ್ಲಿ ಸ್ವಲ್ಪಮಟ್ಟಿನ ಮಾಹಿತಿ ಸಿಕ್ಕಿತು. ಆದರೆ ನಿಜವಾದ ಅನುಭವ ಚಿಕಿತ್ಸೆ ಪಡೆಯಲು ಹೋದಾಗಲೇ ತಿಳಿಯಿತು.
ಮೊದಲು ಸಿಟಿ ಸ್ಕ್ಯಾನ್ ಮಾಡಿ, ವೈದ್ಯರು ನಿಗದಿಪಡಿಸಿದ ದಿನಕ್ಕೆ ರೆಡಿಯೇಷನ್ ಥೆರಪಿಗಾಗಿ ಹೋದೆ. ಮೊದಲ ದಿನ ಸ್ವಲ್ಪ ಸಮಯ ಕಾಯಬೇಕಾಯಿತು. ನನ್ನ ಸರದಿ ಬಂದಾಗ ಅವರು ನೀಡಿದ ವಸ್ತ್ರ ಧರಿಸಿ ರೆಡಿಯೇಷನ್ ಕೊಠಡಿಗೆ ಹೋದೆ.
ಅದು ವಿಶಾಲವಾದ, ಎಸಿ ಇರುವ ಕೊಠಡಿ. ಮಧ್ಯದಲ್ಲಿ ರೆಡಿಯೇಷನ್ ಯಂತ್ರ. ಮೊದಲ ಬಾರಿ ನೋಡಿದಾಗ, ಯಾವುದೋ ಹೊಸ ಲೋಕಕ್ಕೆ ಬಂದಂತಾಯಿತು!
ಚಳಿಯಾಗಿದ್ದರಿಂದ ಅಲ್ಲಿನ ಸಿಬ್ಬಂದಿ ಬೆಡ್ಶೀಟ್ ನೀಡಿದರು. ಮೊದಲ ದಿನ ವೈದ್ಯರು, ದಾದಿಯರು ಹಾಗೂ ರೆಡಿಯೇಷನ್ ಸಿಬ್ಬಂದಿ ನನ್ನ ರೆಡಿಯೇಷನ್ ನೀಡಬೇಕಾದ ಭಾಗವನ್ನು ಪರಿಶೀಲಿಸಿ, ಎಲ್ಲವನ್ನೂ ಸರಿಯಾಗಿ ಹೊಂದಿಸಿದರು. ನಂತರ ರೆಡಿಯೇಷನ್ ಯಂತ್ರ ತಿರುಗಲು ಆರಂಭಿಸಿತು.
ಆ ಸಮಯದಲ್ಲಿ ನಮ್ಮ ದೇಹಕ್ಕೆ ಯಾವುದೇ ರೀತಿಯ ನೋವು ಅಥವಾ ವಿಶೇಷ ಅನುಭವವಾಗುವುದಿಲ್ಲ. ಆರಾಮವಾಗಿ ಮಲಗಿಕೊಂಡೇ ಇರಬಹುದು. ಕೆಲವೊಮ್ಮೆ ಸಣ್ಣ ನಿದ್ರೆಯೂ ಬರಬಹುದು. ಆದರೆ ರೆಡಿಯೇಷನ್ ನಡೆಯುವ ಸಂದರ್ಭದಲ್ಲಿ ನಮ್ಮ ದೇಹವನ್ನು ಅಲುಗಾಡಿಸದೆ ಸ್ಥಿರವಾಗಿರಬೇಕು.
ಸಕಾರಾತ್ಮಕವಾಗಿ ಹೇಳಬೇಕೆಂದರೆ, ನಾನು ಆ ಸಮಯವನ್ನೂ ಒಳ್ಳೆಯ ರೀತಿಯಲ್ಲಿಯೇ ಕಳೆದಿದ್ದೇನೆ.
ರೆಡಿಯೇಷನ್ — ಕ್ಯಾನ್ಸರ್ ಹೋರಾಟಗಾರರ ಮಿತ್ರ
ರೆಡಿಯೇಷನ್ ಥೆರಪಿ ಕ್ಯಾನ್ಸರ್ ಚಿಕಿತ್ಸೆಯ ಪ್ರಮುಖ ಭಾಗವಾಗಿದೆ. ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿ ಅವುಗಳನ್ನು ನಿಯಂತ್ರಿಸಲು ಅಥವಾ ನಾಶಪಡಿಸಲು ರೆಡಿಯೇಷನ್ ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸೆಯ ಭಾಗವಾಗಿರಬಹುದು; ಕೆಲವೊಮ್ಮೆ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹ ಬಳಸಲಾಗುತ್ತದೆ.
ನನ್ನ ಅನುಭವದಲ್ಲಿ ರೆಡಿಯೇಷನ್ ಪಡೆಯುವ ಸಂದರ್ಭದಲ್ಲಿ ಯಾವುದೇ ವಿಶೇಷ ಸಮಸ್ಯೆಯಾಗಲಿಲ್ಲ. ಅಲ್ಲಿನ ವೈದ್ಯರು ಹಾಗೂ ರೆಡಿಯೇಷನ್ ಸಿಬ್ಬಂದಿ ಬಹಳ ಅಕ್ಕರೆಯಿಂದ ಪ್ರತಿಯೊಂದನ್ನೂ ಮಾಡುತ್ತಿದ್ದರು. ಅವರ ಮಾತು, ಕಾಳಜಿ ಮತ್ತು ಧೈರ್ಯ ತುಂಬುವ ರೀತಿಯೇ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿತ್ತು.
ನಾನು ಚಿಕಿತ್ಸೆ ಪಡೆಯುವುದರ ಜೊತೆಗೆ ಅಲ್ಲಿಗೆ ಬರುವ ಇತರ ಕ್ಯಾನ್ಸರ್ ಚಿಕಿತ್ಸಕರಿಗೂ, “ರೆಡಿಯೇಷನ್ ಬಗ್ಗೆ ಭಯಪಡಬೇಡಿ. ಧೈರ್ಯವಾಗಿ ಬನ್ನಿ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಹೋಗಿ” ಎಂದು ಹೇಳುತ್ತಿದ್ದೆ. ಅವರೊಂದಿಗೆ ಮಾತನಾಡಿ ಅವರಲ್ಲೂ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದೆ.
ರೆಡಿಯೇಷನ್ ಚಿಕಿತ್ಸೆಯಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆಯೂ ವೈದ್ಯರು ಮೊದಲೇ ವಿವರವಾಗಿ ತಿಳಿಸುತ್ತಾರೆ. ಆದರೆ ಎಲ್ಲರಿಗೂ ಒಂದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಚಿಕಿತ್ಸೆ ನೀಡುವ ಭಾಗ ಮತ್ತು ವ್ಯಕ್ತಿಯ ದೇಹದ ಪ್ರತಿಕ್ರಿಯೆಗನುಗುಣವಾಗಿ ಅನುಭವ ಬದಲಾಗಬಹುದು.
ನನ್ನದು ಸ್ತನ ಕ್ಯಾನ್ಸರ್ ಆಗಿದ್ದರಿಂದ ನನ್ನ ಗಂಟಲಿನವರೆಗೂ ರೆಡಿಯೇಷನ್ ಚಿಕಿತ್ಸೆ ನೀಡಬೇಕಾಯಿತು. ಅದರ ಪರಿಣಾಮವಾಗಿ ನನಗೆ ಸುಮಾರು ಎರಡು ತಿಂಗಳು ಗಂಟಲು ನೋವಿನ ಸಮಸ್ಯೆ ಇತ್ತು. ಆ ಸಮಯದಲ್ಲಿ ನೀರಾಹಾರ ಸೇವಿಸುತ್ತಿದ್ದೆ. ಇದನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಪ್ರಮುಖ ಅಡ್ಡ ಪರಿಣಾಮಗಳು ಇರಲಿಲ್ಲ.
ಇದು ನನ್ನ ವೈಯಕ್ತಿಕ ಅನುಭವ ಮಾತ್ರ. ಪ್ರತಿಯೊಬ್ಬರ ಚಿಕಿತ್ಸೆಯ ಅನುಭವವೂ ವಿಭಿನ್ನವಾಗಿರಬಹುದು. ಆದ್ದರಿಂದ ವೈದ್ಯರು ನೀಡುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.
ಭಯ ಬೇಡ… ಧೈರ್ಯದಿಂದ ಮುಂದೆ ಸಾಗೋಣ
ಕ್ಯಾನ್ಸರ್ ಎಂಬ ಪದ ಕೇಳಿದಾಗ ಭಯ ಸಹಜ. ರೆಡಿಯೇಷನ್ ಥೆರಪಿ ಎಂದಾಗಲೂ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಬಹುದು. ಆದರೆ ತಿಳುವಳಿಕೆ, ವೈದ್ಯರ ಮೇಲಿನ ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ಭಯವನ್ನು ಕಡಿಮೆ ಮಾಡಬಹುದು.
ನನ್ನ ಅನುಭವದಲ್ಲಿ ರೆಡಿಯೇಷನ್ ಥೆರಪಿ ನನಗೆ ಭಯ ಹುಟ್ಟಿಸಿದ ಚಿಕಿತ್ಸೆಯಾಗಿರಲಿಲ್ಲ. ಅದು ನನ್ನ ಕ್ಯಾನ್ಸರ್ ಹೋರಾಟದ ಮತ್ತೊಂದು ಪ್ರಮುಖ ಹಂತವಾಗಿತ್ತು.
ಆದ್ದರಿಂದ ರೆಡಿಯೇಷನ್ ಥೆರಪಿ ಪಡೆಯಬೇಕಾದ ಪ್ರತಿಯೊಬ್ಬ ಕ್ಯಾನ್ಸರ್ ಹೋರಾಟಗಾರರಿಗೂ ನನ್ನ ಒಂದೇ ಮಾತು—
ಭಯಪಡಬೇಡಿ… ಧೈರ್ಯದಿಂದ ಮುಂದೆ ಬನ್ನಿ.
ವೈದ್ಯರ ಮಾತು ಕೇಳಿ, ಚಿಕಿತ್ಸೆಯ ಮೇಲೆ ನಂಬಿಕೆ ಇಡಿ.
ಪ್ರತಿಯೊಂದು ದಿನವೂ ನಾವು ಗೆಲುವಿನತ್ತ ಇಡುವ ಮತ್ತೊಂದು ಹೆಜ್ಜೆ ಎಂದು ಭಾವಿಸಿ.
ಕ್ಯಾನ್ಸರ್ ಪಯಣ ಕಷ್ಟವಾದರೂ, ಧೈರ್ಯ, ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ದೊಡ್ಡ ಶಕ್ತಿ.
ಕವಿತಾ ಶ್ರೀನಿವಾಸ ನಾಯಕ್
ರೇಡಿಯೇಷನ್ ಥೆರಪಿ: ನನ್ನ ಅನುಭವ
ಕಾರ್ಕಳ, ಉಡುಪಿ ಜಿಲ್ಲೆ



