ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಅಪರೂಪದ ಕನಸು ಕಂಡೆ
ಇಪ್ಪತ್ತೈದರ ಮುಂಜಾವಲಿ;
ಮಣ್ಣೆಣ್ಣೆ ದೀಪದ ಮಬ್ಬಿನಲಿ
ಆಲವೂ ಅತ್ತಿಯೂ ಚಿಗುರಿದ್ದವು,
ಒಂದೇ ಮಣ್ಣಿನ ಮಡಿಲಲಿ.

ಆಲದ ಕೆಳಗೆ ಭೀಮ ನಿಂತ,
ಬಾವಿಯ ಬಳಿ ಕೇರಿಯ ಮಗು;
ಬೊಗಸೆ ತುಂಬ ನೀರು ಕೊಟ್ಟಾಗ
ಮಗುವಿನ ಮುಖ ಅರಳಿತು
ನೀರೊಳಗೆ ಆಕಾಶವೂ ಅರಳಿತು.

ಅತ್ತಿಯ ಕೆಳಗೆ ದುರ್ಯೋಧನ,
ಮಡಿಲಲ್ಲಿ ಹಳೆಯ ಓಲೆ;
ಕೋಲ ತುದಿಯಿಂದ ನೆಲವ ಗೀರಿ
ಗೆರೆಯ ಮೇಲೆ ಗೆರೆ ಎಳೆದ
ಮಣ್ಣಿನ ಎದೆಯಲಿ ಗಾಯವಾಯಿತು.

ಆಲ ಮೆಲ್ಲಗೆ ಬೇರು ಚಾಚಿತು
ಕೇರಿಯಿಂದ ಬಾವಿಗೆ,
ಬಾವಿಯಿಂದ ಶಾಲೆಯ ಹೊಸ್ತಿಲಿಗೆ;
ಭೀಮ ಗದೆಯನ್ನು ನೆಲಕ್ಕಿಟ್ಟು
ಮಗುವಿನ ಕೈಗೆ ಸ್ಲೇಟು ಕೊಟ್ಟ.

ಅತ್ತಿಯ ಕೊಂಬೆ ಹಣ್ಣಾಯಿತು,
ಹಣ್ಣಿನೊಳಗೆ ಸಾವಿರ ಬೀಜ;
ದುರ್ಯೋಧನ ಬೇಲಿ ಕಟ್ಟಿದರೂ
ಹಕ್ಕಿಗಳು ಕೊಂಬೆಯಿಂದ ಹಾರಿದವು
ಬೀಜಕ್ಕೆ ಬೇಲಿಯ ಭಾಷೆ ತಿಳಿಯಲಿಲ್ಲ.

ಒಂದು ಸಂಜೆ ಬೆಂಕಿ ಎದ್ದಿತು,
ಹಳೆಯ ಓಲೆ ಉರಿದು ಬೂದಿಯಾಯಿತು;
ಬೂದಿ ಗಾಳಿಯ ಜೊತೆಗೆ ಹಾರಿದಾಗ
ಆಲದ ಬರಿದ ಕೊಂಬೆಯ ತುದಿಯಲ್ಲಿ
ಹೊಸ ಚಿಗುರೊಂದು ನಗುತ್ತಿತ್ತು.

ಮಳೆ ಸುರಿಯಿತು, ಮಣ್ಣು ಘಮಿಸಿತು;
ಆಲದ ನೆರಳಿಗೆ ಕೇರಿ ಬಂತು,
ಕೇರಿಯ ಬೆನ್ನಿಗೆ ಊರೂ ಬಂತು;
ಒಂದೇ ಚಾಪೆಯ ಮೇಲೆ ಕೂತು
ಅಕ್ಷರದ ದೀಪ ಹಚ್ಚಿದರು.

ಅತ್ತಿಯ ಕೆಳಗೆ ದುರ್ಯೋಧನ
ರಾತ್ರಿಯಿಡೀ ನಿದ್ದೆಗೆಟ್ಟ
“ಎಲ್ಲರೂ ನೆಟ್ಟಗೆ ನಿಂತರೆ
ನನ್ನ ಸಿಂಹಾಸನದ ಎತ್ತರ
ಇನ್ನು ಯಾರಿಗೆ ಕಾಣುವುದು?”

ಬೆಳಕು ಹರಿಯಿತು
ಭೀಮನ ಗದೆ ಮಣ್ಣಲ್ಲೇ ಉಳಿಯಿತು;
ಎಲ್ಲರ ಹೆಸರಿಗೂ ಒಂದೇ ಮಸಿ ಹೊತ್ತ
ಹೊಸ ಪುಸ್ತಕ ತೆರೆದುಕೊಂಡಿತು
ಅತ್ತಿಯ ನೆರಳು ಕಿರಿದಾಗುತ್ತಿತ್ತು.

ಎಚ್ಚರವಾದಾಗ
ಕಿಟಕಿಯಾಚೆ ಎರಡೂ ಮರಗಳಿದ್ದವು;
ಆಲದಡಿ ಮಕ್ಕಳು ಒಟ್ಟಾಗಿ ನಗುತ್ತಿದ್ದರು,
ಅತ್ತಿಯ ಬುಡದಲ್ಲಿ ಮಳೆ ಸುರಿಯುತ್ತಿತ್ತು
ನಿನ್ನೆ ಎಳೆದ ಗೆರೆ
ಇಂದು ಮಣ್ಣಾಗುತ್ತಿತ್ತು.


About The Author

8 thoughts on “ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು””

  1. ಇಷ್ಟೊಂದು ಬಾವನತ್ಮಕ ಮನುಷ ಅಂತಾ ಗೊತಿರಲಿಲ್ಲ ಮುಂದುವರಿರಿ

  2. ಕವಿತೆಗಳಲ್ಲಿ ನೋವು ನಲಿವು ಬೆಳೆದ ರೀತಿ ಕಾಣುತ್ತಿದೆ ಅದೇ ರೀತಿ ಮರ ಬೆಳೆದರೆ ಎಷ್ಟೊಂದು ಜೀವ ಸಂಕುಲಕ್ಕೆ ಹಾದಿ ಇನ್ನು ಎತ್ತರಕ್ಕೆ ಬೆಳೆಯಲಿ

  3. ಸಾಹೇಬ್ರೆ ನಿಮ್ಮ ಪ್ರತಿ ಒಂದು ಕವನ ಸೂಪರ್ ಅದಕ್ಕೆ ನಾನು ನಿಮ್ಮ ಅಭಿಮಾನಿ

  4. ಸಾಹೇಬ್ರೆ ನಿಮ್ಮ ಪ್ರತಿ ಒಂದು ಕವನ ತುಂಬಾ ಅರ್ಥಪೂರ್ಣವಾಗಿ ಇರುತ್ತವೆ ಅದಕ್ಕೆ ನಾನು ನಿಮ್ಮ ಅಭಿಮಾನಿ ಹನಮಂತಪ್ಪ ಎನ್ ಎಮ್

Leave a Reply

You cannot copy content of this page

Scroll to Top