ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಅಪರೂಪದ ಕನಸು”


ಅಪರೂಪದ ಕನಸು ಕಂಡೆ
ಇಪ್ಪತ್ತೈದರ ಮುಂಜಾವಲಿ;
ಮಣ್ಣೆಣ್ಣೆ ದೀಪದ ಮಬ್ಬಿನಲಿ
ಆಲವೂ ಅತ್ತಿಯೂ ಚಿಗುರಿದ್ದವು,
ಒಂದೇ ಮಣ್ಣಿನ ಮಡಿಲಲಿ.
ಆಲದ ಕೆಳಗೆ ಭೀಮ ನಿಂತ,
ಬಾವಿಯ ಬಳಿ ಕೇರಿಯ ಮಗು;
ಬೊಗಸೆ ತುಂಬ ನೀರು ಕೊಟ್ಟಾಗ
ಮಗುವಿನ ಮುಖ ಅರಳಿತು
ನೀರೊಳಗೆ ಆಕಾಶವೂ ಅರಳಿತು.
ಅತ್ತಿಯ ಕೆಳಗೆ ದುರ್ಯೋಧನ,
ಮಡಿಲಲ್ಲಿ ಹಳೆಯ ಓಲೆ;
ಕೋಲ ತುದಿಯಿಂದ ನೆಲವ ಗೀರಿ
ಗೆರೆಯ ಮೇಲೆ ಗೆರೆ ಎಳೆದ
ಮಣ್ಣಿನ ಎದೆಯಲಿ ಗಾಯವಾಯಿತು.
ಆಲ ಮೆಲ್ಲಗೆ ಬೇರು ಚಾಚಿತು
ಕೇರಿಯಿಂದ ಬಾವಿಗೆ,
ಬಾವಿಯಿಂದ ಶಾಲೆಯ ಹೊಸ್ತಿಲಿಗೆ;
ಭೀಮ ಗದೆಯನ್ನು ನೆಲಕ್ಕಿಟ್ಟು
ಮಗುವಿನ ಕೈಗೆ ಸ್ಲೇಟು ಕೊಟ್ಟ.
ಅತ್ತಿಯ ಕೊಂಬೆ ಹಣ್ಣಾಯಿತು,
ಹಣ್ಣಿನೊಳಗೆ ಸಾವಿರ ಬೀಜ;
ದುರ್ಯೋಧನ ಬೇಲಿ ಕಟ್ಟಿದರೂ
ಹಕ್ಕಿಗಳು ಕೊಂಬೆಯಿಂದ ಹಾರಿದವು
ಬೀಜಕ್ಕೆ ಬೇಲಿಯ ಭಾಷೆ ತಿಳಿಯಲಿಲ್ಲ.
ಒಂದು ಸಂಜೆ ಬೆಂಕಿ ಎದ್ದಿತು,
ಹಳೆಯ ಓಲೆ ಉರಿದು ಬೂದಿಯಾಯಿತು;
ಬೂದಿ ಗಾಳಿಯ ಜೊತೆಗೆ ಹಾರಿದಾಗ
ಆಲದ ಬರಿದ ಕೊಂಬೆಯ ತುದಿಯಲ್ಲಿ
ಹೊಸ ಚಿಗುರೊಂದು ನಗುತ್ತಿತ್ತು.
ಮಳೆ ಸುರಿಯಿತು, ಮಣ್ಣು ಘಮಿಸಿತು;
ಆಲದ ನೆರಳಿಗೆ ಕೇರಿ ಬಂತು,
ಕೇರಿಯ ಬೆನ್ನಿಗೆ ಊರೂ ಬಂತು;
ಒಂದೇ ಚಾಪೆಯ ಮೇಲೆ ಕೂತು
ಅಕ್ಷರದ ದೀಪ ಹಚ್ಚಿದರು.
ಅತ್ತಿಯ ಕೆಳಗೆ ದುರ್ಯೋಧನ
ರಾತ್ರಿಯಿಡೀ ನಿದ್ದೆಗೆಟ್ಟ
“ಎಲ್ಲರೂ ನೆಟ್ಟಗೆ ನಿಂತರೆ
ನನ್ನ ಸಿಂಹಾಸನದ ಎತ್ತರ
ಇನ್ನು ಯಾರಿಗೆ ಕಾಣುವುದು?”
ಬೆಳಕು ಹರಿಯಿತು
ಭೀಮನ ಗದೆ ಮಣ್ಣಲ್ಲೇ ಉಳಿಯಿತು;
ಎಲ್ಲರ ಹೆಸರಿಗೂ ಒಂದೇ ಮಸಿ ಹೊತ್ತ
ಹೊಸ ಪುಸ್ತಕ ತೆರೆದುಕೊಂಡಿತು
ಅತ್ತಿಯ ನೆರಳು ಕಿರಿದಾಗುತ್ತಿತ್ತು.
ಎಚ್ಚರವಾದಾಗ
ಕಿಟಕಿಯಾಚೆ ಎರಡೂ ಮರಗಳಿದ್ದವು;
ಆಲದಡಿ ಮಕ್ಕಳು ಒಟ್ಟಾಗಿ ನಗುತ್ತಿದ್ದರು,
ಅತ್ತಿಯ ಬುಡದಲ್ಲಿ ಮಳೆ ಸುರಿಯುತ್ತಿತ್ತು
ನಿನ್ನೆ ಎಳೆದ ಗೆರೆ
ಇಂದು ಮಣ್ಣಾಗುತ್ತಿತ್ತು.
ಡಾ. ಹೆಚ್. ನಟರಾಜ್ ಆರ್ಯ




ಅಪರೂಪಕ್ಕೊಂದು ಒಳ್ಳೆಯ ಕವಿತೆ