ಧಾರಾವಾಹಿ ಸಂಗಾತಿ-34
ಸವಿತಾ ದೇಶಮುಖ

ಜಯದೇವಿತಾಯಿ ಲಿಗಾಡೆ
ಜೀವನಗಾಥೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದಮಹಾನ್ ಚೇತನ
ರಾಷ್ಟ್ರ ಐಕ್ಯತೆ -ಅಖಂಡ ಭಾರತ

*ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶವನ್ನು ಭಾಷಾವಾರು ಪ್ರಾಂತಗಳಾಗಿ ಪುನರ್ರಚಿಸುವ ಬೇಡಿಕೆ ಬಲವಾಗಿತ್ತು. ಕನ್ನಡಿಗರು ಕೂಡ ಎಲ್ಲ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕವನ್ನು ನಿರ್ಮಿಸಬೇಕು ಎಂದು ಹೋರಾಟ ನಡೆಸುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ದೇಶದ ರಾಜಕೀಯ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು.
ಒಂದೆಡೆ ಪಾಕಿಸ್ತಾನದ ವಿಭಜನೆಯ ಪರಿಣಾಮಗಳು, ಮತ್ತೊಂದೆಡೆ ಬಂಗಾಳದ ವಿಭಜನೆ ಮತ್ತು ಗಡಿಭಾಗದ ಸಮಸ್ಯೆಗಳು, ಇನ್ನೊಂದೆಡೆ ಗೋವಾ ವಿಮೋಚನೆಗಾಗಿ ಹೋರಾಟ ನಡೆದಿದ್ದವು.ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ರಾಜಕೀಯ ಅಶಾಂತಿ. ಇವೆಲ್ಲವೂ ಭಾರತದ ಏಕತೆಗೆ ಸವಾಲಾಗಿದ್ದವು.
ಇಂತಹ ಸಂದರ್ಭಗಳಲ್ಲಿ ಕೇವಲ ಭಾಷೆಯ ಆಧಾರದ ಮೇಲೆ ಪರಸ್ಪರ ಸಂಘರ್ಷ ಮಾಡುವುದು ದೇಶದ ಹಿತಕ್ಕೆ ಮಾರಕವಾಗಬಹುದು ಎಂಬುದು ಜಯದೇವಿ ತಾಯಿಯವರ ಚಿಂತನೆಯಾಗಿತ್ತು .
ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದ ಗಡಿಗಳು, ರಾಷ್ಟ್ರೀಯ ಏಕತೆ, ಪ್ರಾದೇಶಿಕ ಸಮಸ್ಯೆಗಳು ಮತ್ತು ಜನರ ಭದ್ರತೆ ಮುಂತಾದ ಅನೇಕ ಪ್ರಶ್ನೆಗಳು ಎದುರಾಗಿದ್ದವು.
ಇಂತಹ ಸಮಯದಲ್ಲಿ “ನನ್ನ ಭಾಷೆ ಶ್ರೇಷ್ಠ, ನಿನ್ನ ಭಾಷೆ ಕಡಿಮೆ” ಎಂಬ ರೀತಿಯ ಭಾಷಾ ವೈಷಮ್ಯ ಬೆಳೆಸಿದರೆ, ಅದು ದೇಶದ ಒಗ್ಗಟ್ಟನ್ನು ದುರ್ಬಲಗೊಳಿಸುತ್ತದೆ.
ಆದ್ದರಿಂದ ಭಾಷೆ ನಮ್ಮ ಅಭಿಮಾನ ಮತ್ತು ಸಂಸ್ಕೃತಿಯ ಸಂಕೇತವಾಗಿರಬೇಕು….ಸಂಘರ್ಷದ ಕಾರಣವಾಗಬಾರದು ಎಂಬ ಸಂದೇಶವನ್ನು ಅವರು ನೀಡಿದರು.
ಭಾಷೆ ಮುಖ್ಯ, ಆದರೆ ದೇಶದ ಏಕತೆ ಇನ್ನೂ ಮುಖ್ಯ ಎಂದರು.
ಕನ್ನಡಿಗರಿಗೆ ತಮ್ಮದೇ ಆದ ಏಕೀಕೃತ ಕರ್ನಾಟಕ ಬೇಕು.ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಬೇಕು……
ಆದರೆ ಅದಕ್ಕಾಗಿ ಇತರ ಭಾಷೆಯ ಜನರನ್ನು ದ್ವೇಷಿಸಬಾರದು.ಭಾಷೆಯ ಹೆಸರಿನಲ್ಲಿ ಜಗಳ, ದ್ವೇಷ ಮತ್ತು ವಿಭಜನೆ ಉಂಟಾಗಬಾರದು.
ಎಲ್ಲಕ್ಕಿಂತ ಮೊದಲು ನಾವು ಭಾರತೀಯರು ಎಂಬ ರಾಷ್ಟ್ರೀಯ ಭಾವನೆ ಇರಬೇಕು.
ಅಂದರೆ “ಕನ್ನಡವನ್ನು ಪ್ರೀತಿಸಿ, ಆದರೆ ಇತರ ಭಾಷೆಗಳನ್ನು ದ್ವೇಷಿಸಬೇಡಿ” ಎಂಬ ಉದಾತ್ತ ಚಿಂತನೆ ಅವರ ಮಾತಿನಲ್ಲಿ ಕಾಣಿಸುತ್ತದೆ.
“ದೇಶದ ಐಕ್ಯತೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಮುಖ್ಯ” ದೇಶದ ಸ್ವಾಭಿಮಾನ, ರಾಷ್ಟ್ರೀಯ ಏಕತೆ, ಸಾರ್ವಭೌಮತ್ವ ಮತ್ತು ಒಗ್ಗಟ್ಟು.
ದೇಶವು ಹೊರಗಿನ ಮತ್ತು ಒಳಗಿನ ಹಲವು ಸವಾಲುಗಳನ್ನು ಎದುರಿಸುತ್ತಿರುವಾಗ, ಜನರು ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಲ್ಲಿ ಸಿಲುಕಿಕೊಳ್ಳದೆ ರಾಷ್ಟ್ರದ ಹಿತವನ್ನು ಮೊದಲ ಸ್ಥಾನದಲ್ಲಿ ಇಡಬೇಕು ಎಂದು ಅವರು ತಿಳಿಸಿದರು.
ಒಂದು ಮನೆಯಲ್ಲಿರುವವರು ಬೇರೆ ಬೇರೆ ಅಭಿಪ್ರಾಯ ಹೊಂದಿದ್ದರೂ ಮನೆ ಒಂದಾಗಿರುವುದು ಮುಖ್ಯ. ಅದೇ ರೀತಿ ಭಾರತದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಬಂಗಾಳಿ ಮುಂತಾದ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದರೂ ಭಾರತ ಎಂಬ ರಾಷ್ಟ್ರದ ಏಕತೆ ಉಳಿಯುವುದು ಅತ್ಯಂತ ಮುಖ್ಯ.”ಎಂದು ತಮ್ಮ ಭಾಷಣದಲ್ಲಿ ಹೇಳುತಿದ್ದರು.
ಜಯದೇವಿ ತಾಯಿಯವರ ಚಿಂತನೆ ಇಂದಿಗೂ ಬಹಳ ಪ್ರಸ್ತುತವಾಗಿದೆ. ಭಾಷೆ ನಮ್ಮ ಗುರುತು, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ. ಅದನ್ನು ಗೌರವಿಸಬೇಕು ಮತ್ತು ಬೆಳೆಸಬೇಕು. ಆದರೆ ಭಾಷೆಯ ಹೆಸರಿನಲ್ಲಿ ಮತ್ತೊಬ್ಬರನ್ನು ಕೀಳಾಗಿ ಕಾಣುವುದು ಅಥವಾ ದ್ವೇಷಿಸುವುದು ಸರಿಯಲ್ಲ.
ಭಾಷಾ ವೈವಿಧ್ಯತೆ ಭಾರತದ ಶಕ್ತಿ….ರಾಷ್ಟ್ರೀಯ ಏಕತೆ ಭಾರತದ ಅಸ್ತಿತ್ವ.
“ಭಾಷೆಯನ್ನು ಪ್ರೀತಿಸೋಣ, ಭಾಷಾ ಸಂಸ್ಕೃತಿಯನ್ನು ಉಳಿಸೋಣ…”ಎನ್ನುವರು.
ಇದು ಕರ್ನಾಟಕ ಏಕೀಕರಣದ ಹೋರಾಟದಲ್ಲಿದ್ದರೂ ವಿಶಾಲವಾದ ಭಾರತೀಯ ರಾಷ್ಟ್ರೀಯತೆಯನ್ನು ಮರೆಯದ ಜಯದೇವಿ ತಾಯಿಯವರ ದೂರದೃಷ್ಟಿಯನ್ನು ತೋರಿಸುತ್ತದೆ.
ಪಾಕಿಸ್ತಾನದವರು ಬಂಗಾಲದ ಅಲ್ಪಸಂಖ್ಯಾತರ ಮೇಲೆ ಎರಡು ತಿಂಗಳ ಕಾಲ ಹವ್ಯಾಹಾತವಾಗಿ ಸತತ ಆಕ್ರಮಣ ಮಾಡಿದರು ಇಂತಹ ಅಮಾನುಷ ಘಟನೆಯನ್ನು ಪ್ರತಿಭಟಿಸಿ ಅಲ್ಲಲ್ಲಿ ಸಭೆಗಳು ನಡೆದವು ಸೊಲ್ಲಾಪುರದಲ್ಲಿಯೂ ಸರ್ವ ಪಕ್ಷಿಯ ಬಹಿರಂಗ ಸಭೆ ನಡೆಯಿತು ಈ ಸಭೆಗೆ ಸ್ತ್ರೀ ಪುರುಷರು ಬಹುಸಂಖ್ಯಾದಲ್ಲಿ ಉಪಸ್ಥಿತರಿದ್ದರು ಜಯದೇವಿ ತಾಯಿಯವರು ಮಾಡಿದ ಭಾಷಣ ಬಹಳ ಪ್ರಭಾವ ಬೀರಿತ್ತು ಎಲ್ಲ ಪತ್ರಿಕೆಗಳಲ್ಲಿ ವರದಿಯಾದವು.
ಬಂಗಾಳದಲ್ಲಿ ನಡೆದ ಅಮಾನುಷ ಹಿಂಸಾಚಾರವನ್ನು ಕಂಡು ಅನುಭವಿಸಿದ ಆಘಾತ, ನೋವು, ಆಕ್ರೋಶ ಮತ್ತು ಮಾನವೀಯ ಕಳಕಳಿ ಅತ್ಯಂತ ತೀವ್ರವಾಗಿ ವ್ಯಕ್ತಪಡಿಸಿದ್ದಾರೆ.
“ಬೆಂದಿದೆ ಬಂಗಾಲ” ಕವನ ರಚನೆ ಮಾಡಿದರು
*“ಬೆಂದಿದೆ ಬಂಗಾಲ”*
“ಹಳ್ಳಿ ಪಟ್ಟಣಗಳು ಸುಟ್ಟು ಬೂದಿ ಮಾಡಿದರು,
ಹೆಣಗಳ ರಾಶಿಯೊಟ್ಟಿದರು”
“ಕಾಮಾಂಧರು ಕೋಮಲಾಂಗಿಯರ ಶೀಲಸೂರೆಗೈದರು”
ಏನಿದ್ದ ಹೊಂಗನಾಡು? ಏನಾಯಿತು?”
ಭಾರತೀಯರ ಬಂಗಾಳಿಗಳ ನರನಾಡಿಲಿ ಹರಿವ
ರಕ್ತ ನೀರಾಯಿತೇ……….!!!
ಈ ಸಾಲುಗಳಲ್ಲಿ ಬಂಗಾಳದಲ್ಲಿ ನಡೆದ ಭೀಕರ ಹಿಂಸಾಚಾರದ ಚಿತ್ರಣವಿದೆ. ಜನರು ನೆಮ್ಮದಿಯಿಂದ ಬದುಕುತ್ತಿದ್ದ ಹಳ್ಳಿಗಳು ಮತ್ತು ಪಟ್ಟಣಗಳು ಬೆಂಕಿಗೆ ಆಹುತಿಯಾಗಿ ನಾಶವಾದವು. ಜೀವಂತ ಜನರ ವಾಸಸ್ಥಳಗಳು ಸುಟ್ಟು ಬೂದಿಯಾದವು. ಎಲ್ಲೆಡೆ ಸಾವು-ನೋವು ತುಂಬಿ, ಹೆಣಗಳ ರಾಶಿ ಕಾಣುವಂತಹ ದಾರುಣ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಕವಯಿತ್ರಿ ನೋವಿನಿಂದ ಹೇಳುತ್ತಾರೆ.
ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯರ ದುಸ್ಥಿತಿಯನ್ನು ಚಿತ್ರಿಸಿದ್ದಾರೆ. ಯುದ್ಧ, ಕೋಮು ಹಿಂಸೆ ಅಥವಾ ರಾಜಕೀಯ ಸಂಘರ್ಷದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವು ಅತ್ಯಂತ ಅಮಾನುಷವಾದದ್ದು. ಇಂತಹ ಘಟನೆಗಳು ಅವರ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸಿವೆ. ಮಹಿಳೆಯರ ಗೌರವ ಮತ್ತು ಮಾನವೀಯತೆಯನ್ನೇ ತುಳಿದುಹಾಕಿದ ಕ್ರೌರ್ಯವನ್ನು ಅವರು ಖಂಡಿಸಿದ್ದಾರೆ.
ಈ ಪ್ರಶ್ನೆಗಳಲ್ಲಿ ಕವಯಿತ್ರಿಯ ತಳಮಹ, ದುಃಖ ಮತ್ತು ಅಸಹಾಯಕತೆ ವ್ಯಕ್ತವಾಗುತ್ತದೆ.
ಒಮ್ಮೆ ಸಮೃದ್ಧಿ, ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವದಿಂದ ಕೂಡಿದ್ದ ಬಂಗಾಳವು ಇಂತಹ ರಕ್ತಪಾತದ ನೆಲವಾಗಿ ಹೇಗೆ ಬದಲಾಯಿತು? ಜನರು ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿದ್ದ ನಾಡಿನಲ್ಲಿ ಇಷ್ಟೊಂದು ದ್ವೇಷ ಮತ್ತು ಹಿಂಸೆ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯ ಕೇಳಿದರು.
ಇದು ಕೇವಲ ಬಂಗಾಳದ ದುಃಖವಲ್ಲ ಇಡೀ ಮಾನವ ಸಮಾಜದ ಅಧಃಪತನದ ಬಗ್ಗೆ ಅವರಿಗೆ ಆತಂಕವಿತ್ತು.
*ಜಾತಿ ಸೂತಕವಳಿದು ನೀತಿಯೇ ಹಿರಿದೆಂದು ಪ್ರೀತಿಯಿಂದ ಎಲ್ಲರನ್ನು ಕಾಣುತ ಇರಬೇಕು
ಪತಿತ ಪಾವನ ನೀವು ನಾವಾಗಬೇಕು*
ಮತವು ಮನುಷ್ಯನಿಗೆ ನೀತಿ, ದಯೆ, ಪ್ರೀತಿ ಮತ್ತು ಸಹಬಾಳ್ವೆ ಕಲಿಸಬೇಕೇ ಹೊರತು ದ್ವೇಷ ಮತ್ತು ಹಿಂಸೆಯನ್ನು ಕಲಿಸಬಾರದು. ಆದರೆ ಮತದ ಹೆಸರಿನಲ್ಲಿ ಮನುಷ್ಯನೇ ಮನುಷ್ಯನ ಶತ್ರುವಾದಾಗ, ಧರ್ಮದ ನಿಜವಾದ ಉದ್ದೇಶವೇ ನಾಶವಾಗುತ್ತದೆ… ಬಂಗಾಳಿಗಳ ಮೇಲೆ ನಡೆದ ಹತ್ಯಾಕಾಂಡದ ತೀವ್ರತೆಯನ್ನು ವ್ಯಕ್ತಪಡಿಸುತ್ತಾರೆ.
“ಬೆಂದಿದೆ ಬಂಗಾಲ” ಪದ್ಯದಲ್ಲಿ ಜಯದೇವಿ ತಾಯಿಯವರು ಮೂರು ಪ್ರಮುಖ ವಿಚಾರಗಳನ್ನು ಅತ್ಯಂತ ಗಾಢವಾಗಿ ವ್ಯಕ್ತಪಡಿಸಿದ್ದಾರೆ
ಹಿಂಸಾಚಾರ ಮತ್ತು ಹತ್ಯಾಕಾಂಡದ ವಿರುದ್ಧದ ತೀವ್ರ ಪ್ರತಿಭಟನೆ ಕೋಮು ದ್ವೇಷದ ವಿರುದ್ಧದ ಎಚ್ಚರಿಕೆ.
ಶಾಂತಿ, ಸಹೋದರತ್ವ ಮತ್ತು ಮಾನವೀಯತೆಯ ಪರವಾದ ದೃಢವಾದ ನಿಲುವು.
ಹೀಗಾಗಿ ಈ ಪದ್ಯವನ್ನು ಬಂಗಾಳದ ದುರಂತದ ವರ್ಣನೆ ಆದರೂ ಇದು “ಧರ್ಮ ಮನುಷ್ಯನನ್ನು ಮನುಷ್ಯನಿಂದ ದೂರ ಮಾಡಬಾರದು…. ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡ ಧರ್ಮ” ಎಂಬ ಜಯದೇವಿ ತಾಯಿಯವರ ಉದಾತ್ತ ಸಂದೇಶವನ್ನು ಸಾರುವ ಕವನವಾಗಿದೆ.
ಇನ್ನೊಂದೆಡೆ ಭಾರತೀಯರ ಮೇಲೆ ಚೀನಿಯರು ಅಕ್ರಮಣ ನಡೆಯಿತು ಆ ಹೊತ್ತಿಗೆ ಈ ದೇಶದಲ್ಲಿ ಹಲವಾರು ಆಂತರಿಕ ಸಮಸ್ಯೆಗಳು ಎದಿದ್ದವು ಅದನ್ನೇ ದೊಡ್ಡದು ಮಾಡದೇ ದೇಶದ ಭದ್ರತೆಯ ಕಡೆಗೆ ಗಮನವಿಡಲು ಕರೆಕೊಟ್ಟರು .ಗಡಿ ವಿವಾದದ ಮಧ್ಯೆ ಭಾಷಾವಾರು ಪ್ರಾಂತದ ಚಳುವಳಿ ಬೇಡವೆಂದು ಜನತೆಗೆ ಮನವಿ ಮಾಡಿದರು. ರಾಜಕಾರಣಿಗಳು ಇಂಥ ಅವಕಾಶವನ್ನು ದುರುಪಯೋಗ ಪಡಿಸಿ ಕೊಳ್ಳಬಾರದು ಎಂದು ಎಚ್ಚರಿಕೆ ಕೊಟ್ಟರು ರಾಜ್ಯಕ್ಕಿಂತ ರಾಷ್ಟ್ರ ಚಿಂತೆ ಮುಖ್ಯ ಪರಸ್ಥಿತಿಯನ್ನು ಕೆಡದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸಲು ಹೇಳಿದರು.
ಇನ್ನೊಂದಡೆ ಗೋವಾ ದೀವ ದಮನ ಪ್ರದೇಶಗಳು ಪೋರ್ಚುಗೀಸರ ವಶವಾಗಿದ್ದವು ದೇಶ ಬಾಂಧವರು ಪರಕೀಯರ ಕೈಯಲ್ಲಿ ತೊಳಲಾಡುವುದು ಹೇಳಿದರು ಶಾಂತಿ ರೀತಿಯ ಹೋರಾಟಕ್ಕೆ ಬೆಂಬಲ ಸೂ ಭಾಷಿಕವಾಗಿ ಮತ್ತು ಸಂಸ್ಕೃತಿಕವಾಗಿ ಕರ್ನಾಟಕಕ್ಕೆ ಉಳಿಸಿಕೊಳ್ಳುವುದು ಸೂಕ್ತ ಪ್ರಯತ್ನಗಳು ಸಾಗಬೇಕು ಮುಂದೋರಣೆಯಿಂದ ಕಾರ್ಯಾಚರಣೆ ಚಟುವಟಿಕೆ ತೊಡಗಬೇಕು ಗತ ವ್ಯುಭವದ ಮೈಸೂರು ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ನಿರ್ವಹಿಸಿದ ಹೊರತು ಅಧಿಕಾರದಲ್ಲಿ ಮುಂದುವರಿಯಲು ನಮ್ಮ ಮುಖಂಡರಿಗೆ ಯಾವ ನೈತಿಕ ಬಲವೂ ಇಲ್ಲ ತಮ್ಮ ಹೇಳಿಕೆಗಳ ಚಾಟಿ ಏಟಿನಿಂದ ಹೀಗೆ ಖಂಡನೆ ಮೇಲಿಂದ ಮೇಲೆ ಮಾಡುತ್ತಿದ್ದರು.
ಮಹಾರಾಷ್ಟ್ರವೂ ಗೋವಾ ತನಗೆ ಬೇಕೆಂದು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲು ಕೇಳಿ ಕೊಂಡಿತ್ತು.ಕರ್ನಾಟಕವು ತನಗೆ ಬೇಕೆಂದು ಬೇಡಿಕೆ ಮುಂದಿಟ್ಟಿತ್ತು .
ಅಖಂಡ ಕರ್ನಾಟಕ ಏಕೀಕರಣ ಸಂಘದ ಉಪಾಧ್ಯಕ್ಷರಾಗಿ ಜಯದೇವಿ, ತಾಯಿಯವರು ಮೈಸೂರು ಗೋವಾ ಸಂಸ್ಕೃತಿಕ ಸಂಬಂಧ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಎಚ್ಎಫ್ ಕಟ್ಟಿಮನಿ ಮಾಸ್ತರು ,ಎಸ್ ನಿಜಲಿಂಗಪ್ಪ ,ಕೆ ಎಸ್ ಪಾಟೀಲ ಇವರೆಲ್ಲರೂ ಗೋವೆಯನ್ನು ಕರ್ನಾಟಕಕ್ಕೆ ಪಡೆಯುವ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತಾಯಿಯವರು ಸೊಲ್ಲಾಪುರ ಸಹಿತ ಅಖಂಡ ಕರ್ನಾಟಕ ಏಕೀಕರಣದ ಕನಸನ್ನು ಹೊತ್ತಿದ್ದರು.
ಜೊತೆ ಜೊತೆಗೆ ಅವರು ಯಾವಾಗಲೂ ರಾಷ್ಟ್ರದ ಐಕ್ಯತೆ ಮತ್ತು ಅಖಂಡ ಭಾರತದ ಕನಸು ಜಯದೇವಿ ತಾಯಿಯವರ ಹೃದಯದಲ್ಲಿ ಸದಾ ಧಗಧಗಿಸುವ ಜ್ವಾಲೆಯಂತಿತ್ತು. ಜಾತಿ, ಮತ, ಭಾಷೆ, ಪ್ರಾಂತಗಳ ಎಲ್ಲ ಭೇದಭಾವಗಳನ್ನು ಮೀರಿ, “ನಾವು ಭಾರತೀಯರು” ಎಂಬ ಏಕೈಕ ಭಾವನೆಯೇ ರಾಷ್ಟ್ರದ ನಿಜವಾದ ಶಕ್ತಿ ಎಂಬ ಅಚಲ ನಂಬಿಕೆಯಿಂದ ಅವರು ತಮ್ಮ ಬದುಕನ್ನು ರಾಷ್ಟ್ರಸೇವೆಗೆ ಸಮರ್ಪಿಸಿಕೊಂಡರು.
ದೇಶದ ಏಕತೆ ಹೃದಯಗಳ ಸಂಗಮ, ಭಾವನೆಗಳ ಸಮನ್ವಯ ಮತ್ತು ರಾಷ್ಟ್ರಪ್ರೇಮದ ಅಖಂಡ ಸಂಕಲ್ಪ ಎಂಬುದನ್ನು ಅವರು ತಮ್ಮ ಕಾರ್ಯದ ಮೂಲಕ ಸಾರಿದರು. ವಿಭಜನೆಯ ವಿಷಬೀಜಗಳು ಮೊಳಕೆಯೊಡೆಯುತ್ತಿದ್ದ ಸಂದರ್ಭದಲ್ಲಿಯೂ, ಜನಮನಗಳಲ್ಲಿ ದೇಶಪ್ರೇಮದ ಕಿಡಿಯನ್ನು ಹೊತ್ತಿಸಿ, ಒಗ್ಗಟ್ಟಿನ ಜ್ಯೋತಿಯನ್ನು ಬೆಳಗಿಸುವಲ್ಲಿ ಅವರು ನಿರಂತರವಾಗಿ ಶ್ರಮಿಸಿದರು.
ಜಯದೇವಿ ತಾಯಿಯವರ ಜೀವನ ನಮಗೆ ಸಾರುವ ಸಂದೇಶ ಒಂದೇ….ಭಾರತದ ಅಖಂಡತೆ ನಮ್ಮ ಹೆಮ್ಮೆ, ರಾಷ್ಟ್ರದ ಐಕ್ಯತೆ ನಮ್ಮ ಹೊಣೆ, ದೇಶಪ್ರೇಮ ನಮ್ಮ ಪರಮ ಕರ್ತವ್ಯ. ತಾಯಿನಾಡು ನುಡಿ ನಮ್ಮ ಗೌರವ ಎಂದು ಸಾರಿದರು.ರಾಷ್ಟ್ರಕ್ಕಾಗಿ ಸಮರ್ಪಿತವಾದ ಅವರ ಜೀವನ ಸದಾಕಾಲವೂ ದೇಶಭಕ್ತಿಯ ದಾರಿಯಲ್ಲಿ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಉಳಿಯುತ್ತದೆ.
ಸವಿತಾ ದೇಶಮುಖ





ತುಂಬಾ ಚೆನ್ನಾಗಿ ಬರೆದಿರುವಿರಿ. ಅಭಿನಂದನೆಗಳು. — ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ