ಕಲಾ ಸಂಗಾತಿ
ವೀಣಾ ಹೇಮಂತ್ ಗೌಡಪಾಟೀಲ
“ಮಂಡಲ ಕಲೆ….
ಎಂಬ ಅದ್ವಿತೀಯ ಕಲಾ ರಚನೆ”


ಮಂಡಲ ಕಲೆ….ಎಂಬ ಅದ್ವಿತೀಯ ಕಲಾ ರಚನೆ
ಒಂದೇ ರೀತಿಯ ಸಮ್ಮಿತಿಯ ರಚನೆಯನ್ನು ಹೊಂದಿರುವ ಮಂಡಲ ಕಲೆಗೆ ತನ್ನದೇ ಆದ ಶ್ರೀಮಂತ ಇತಿಹಾಸವಿದೆ ಆಧ್ಯಾತ್ಮಿಕ ಅಭಿವ್ಯಕ್ತಿಯ ಈ ಕಲೆಗೆ ಶತಶತಮಾನಗಳ ಹಲವಾರು ಸಾಂಸ್ಕೃತಿಕ ಅಭಿವ್ಯಕ್ತಿಯ ಮಹತ್ವವಿದೆ.
ಮಂಡಲ ಕಲೆಗೆ ಅತ್ಯಂತ ದುಬಾರಿ ಸಾಮಾನುಗಳ ಅವಶ್ಯಕತೆ ಇದೆ ಎಂದು ಸಾಕಷ್ಟು ಜನ ಭಾವಿಸುತ್ತಾರೆ.
ಬಗೆ ಬಗೆಯ ಪೆನ್ಸಿಲ್ ಗಳು ವಿವಿಧ ವಿನ್ಯಾಸಗಳನ್ನು ಚಿತ್ರಿಸುವ ಸಲಕರಣೆಗಳು ಬೇಕೇ ಬೇಕು ಎಂದೇನಿಲ್ಲ. ಕೇವಲ ಒಂದು ಪೆನ್ನು ಮತ್ತು ಪೆನ್ಸಿಲ್ ನ್ನು ಬಿಳಿಹಾಳೆಯ ಮೇಲೆ ಮೂಡಿಸುವ ಮೂಲಕ ನಾವು ಮಂಡಲಕಲೆಯನ್ನು ರಚಿಸಬಹುದು.
ಸಮತೋಲನ, ವಿವಿಧ ಬಗೆಯ ವಿನ್ಯಾಸ ಹಾಗೂ ಭಾವನೆಗಳ ಮಿಶ್ರಣ ಮಂಡಲಕಲೆ ಇದರಲ್ಲಿ ಬರುವ ವೃತ್ತಗಳು ಮಂಡಲಕಲೆಯ ಭಾಗವೇ ಹೊರತು ನಿಯಮಗಳಲ್ಲ…. ಬಹಳಷ್ಟು ಜನ ಮಂಡಲ ಕಲೆಯನ್ನು ವೃತ್ತಗಳನ್ನು ಹಾಕುವ ವಿಧಾನ ಎಂದು ಭಾವಿಸುತ್ತಾರೆ ಆದರೆ ಅದು ಸಂಪೂರ್ಣ ನಿಜವಲ್ಲ.
ಆಸಕ್ತಿ ಇರುವ ಯಾರು ಬೇಕಾದರೂ ಮಂಡಲ ಕಲೆಯನ್ನು ಕಲಿಯಬಹುದು ಇದರಲ್ಲಿ ಕಲಾತ್ಮಕ ಅಭಿವ್ಯಕ್ತಿಯ ಅವಶ್ಯಕತೆ ಇಲ್ಲ ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ, ನಿರಂತರ ಪ್ರಯತ್ನ ಹಾಗೂ ತರಬೇತಿ. ಮಂಡಲ ಕಲೆಯನ್ನು ಕಲಿಯುವವರು ಕಲಾವಿದರೇ ಆಗಬೇಕೆಂದಿಲ್ಲ ಕಲಾವಂತಿಕೆಯನ್ನು ಮೆಚ್ಚುವ ಆಸ್ವಾದಿಸುವ ಹಾಗೂ ರಚಿಸುವ ಆಶಯ ಹೊಂದಿದ್ದರೆ ಸಾಕು.
ಮೊದಲ ಬಾರಿಗೆ ಮಂಡಲ ಕಲೆ ಪರಿಪೂರ್ಣತೆ ಹಾಗೂ ಸಾಮ್ಯತೆಯನ್ನು ಹೊಂದಿರಲೇಬೇಕಿಲ್ಲ. ಇಲ್ಲಿ ನಮ್ಮ ಗುರಿ ಕೇವಲ ಪರಿಪೂರ್ಣತೆಯಲ್ಲ , ಧ್ಯಾನಪೂರ್ವಕವಾದ ಅಭ್ಯಾಸವಾಗಿರಬೇಕು.
ಬಹುತೇಕ ಜನರು ಮಂಡಲ ಕಲೆಯನ್ನು ಮಾನಸಿಕ ನೆಮ್ಮದಿ ಹಾಗೂ ವಿಶ್ರಾಂತಿಗಾಗಿ ರಚಿಸುತ್ತಾರೆ ಎಂಬ ಭಾವ ಜನರಲ್ಲಿದೆ. ಮಂಡಲ ಕಲೆಯು ಮೆದುಳಿನ ನರಗಳನ್ನು ಶಾಂತವಾಗಿಸುತ್ತದೆ ಎಂಬುದು ನಿಜ, ಆದರೆ ಅದೇ ಸಮಯದಲ್ಲಿ ಮಂಡಲಕಲೆಯ ನಿರಂತರ ಅಭ್ಯಾಸವು ನಿಖರವಾದ ಗುರಿ, ಕ್ರಿಯಾಶೀಲತೆ ಹಾಗೂ ಸ್ವಯಂ ಅಭಿವ್ಯಕ್ತಿಯನ್ನು ತೋರ್ಪಡಿಸುತ್ತದೆ.
ಮಂಡಲ ಕಲೆಯ ನಿಜ ಪಯಣ ಆರಂಭವಾಗುವುದು ಒಂದು ಪುಟ್ಟ ಗುರಿಯ ಮೂಲಕ. ವಿವಿಧ ವಿನ್ಯಾಸಗಳನ್ನು ರಚಿಸುವ ನಿಟ್ಟಿನಲ್ಲಿ ನಮ್ಮ ಸಂಪೂರ್ಣ ಲಕ್ಷವನ್ನು ಕೊಡುವ ಮೂಲಕ. ವಿನ್ಯಾಸಗಳ ರಚನೆಯ ಸಮಯದಲ್ಲಿ ಮಾನಸಿಕವಾಗಿ ಅತ್ಯಂತ ಪ್ರಶಾಂತ ಭಾವ ಉದ್ಭವವಾಗುತ್ತದೆ, ಜೊತೆಗೆ ಸೃಜನಶೀಲತೆಗೂ ಕೂಡ ಅವಕಾಶ ದೊರೆಯುತ್ತದೆ. ಮಂಡಲ ಕಲೆಯು ಸ್ವಯಂ ಪ್ರೀತಿಯನ್ನು ಅಭಿವ್ಯಕ್ತಿಸುವ ಅತ್ಯುತ್ತಮ ರೇಖಾಚಿತ್ರವಾಗಿರುತ್ತದೆ.
ಮಂಡಲಕಲೆಯನ್ನು ಕಲಿಯಬೇಕು ಎಂದು ಇಚ್ಛಿಸುವವರು ಮೊದಲು ತಮ್ಮೊಳಗಿನ ಸೃಜನಶೀಲತೆಯು ಹೊಮ್ಮುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು. ಪ್ರತಿದಿನವೂ ಹಂತ ಹಂತವಾಗಿ ರಚನೆಯನ್ನು ಆರಂಭಿಸಿ ಹೆಚ್ಚಿಸುತ್ತಾ ಹೋಗಬೇಕು, ಜಾಣ್ಮೆಯನ್ನು ಹೆಚ್ಚಿಸಿಕೊಳ್ಳಬೇಕು, ಜೊತೆಗೆ ರಚನೆಯ ಸಮಯವನ್ನು ಆನಂದಿಸಬೇಕು ಹಾಗೂ ಅದರಲ್ಲಿಯೇ ವಿಶ್ರಾಂತಿಯ ಅನುಭವವನ್ನು ಪಡೆಯಬೇಕು.
ಮಂಡಲ ಕಲೆಯು ನಮ್ಮ ನಿಖರತೆಯನ್ನು ಹಾಗೂ ವಿವಿಧ ವಿನ್ಯಾಸಗಳನ್ನು ಹೆಚ್ಚಿಸಿಕೊಳ್ಳುವ ಕಲೆಯಾಗಿದೆ. ಪ್ರತಿ ಬಾರಿಯೂ ನೀವು ರಚಿಸುವ ಮಂಡಲ ಕಲೆ ಚಿತ್ರವು ಪರಿಪೂರ್ಣವಾಗಿರಬೇಕಾಗಿಲ್ಲ ಅದು ನಿಮ್ಮ ಅಭಿವ್ಯಕ್ತಿಯಾಗಿದ್ದರೆ ಸಾಕು. ನೀವು ಎಳೆಯುವ ಪ್ರತಿ ರೇಖೆಯು ಉನ್ನತಿಕೆಯ ಸಂಕೇತ.
ನಿಮ್ಮ ಅಭಿವ್ಯಕ್ತಿಯ ಈ ಕಲೆಯನ್ನು ಇತರರ ಕಲೆಯೊಂದಿಗೆ ಹೋಲಿಸಬೇಡಿ ನಿಮ್ಮ ಮಂಡಲ ಕಲೆಯ ಪಯಣ ವಿಶಿಷ್ಟ ಹಾಗೂ ಕೇವಲ ನಿಮ್ಮದಾಗಿದ್ದರೆ ಸಾಕು.
ಮಂಡಲ ಕಲೆಗೆ ಸಾಕಷ್ಟು ಸಮಯದ ಅವಶ್ಯಕತೆ ಇದೆ, ನಿಜ ಹಾಗೆಂದು ಒಂದೇ ಸಮನೆ ದಣಿದು ಮಾಡುವುದು ಬೇಡ. ಮಧ್ಯದಲ್ಲಿ ಒಂದಷ್ಟು ಬ್ರೇಕ್ ತೆಗೆದುಕೊಳ್ಳುವುದು ಒಳ್ಳೆಯದು ವಿಶ್ರಾಂತಿ ತೆಗೆದುಕೊಳ್ಳುವುದು ಎಂದರೆ ಒಂದು ಹೆಜ್ಜೆ ಹಿಂದೆ ಸರಿದಂತಲ್ಲ ಅದು ಈ ಕಲಿಯುವಿಕೆಯ ರಚನೆಯ ಒಂದು ಭಾಗ.
ಮಂಡಲ ಕಲೆಯು ನಿಮ್ಮ ಅಭಿವ್ಯಕ್ತಿಯ ಭಾಗ ಎಂದು ಹೇಳುತ್ತಾರಲ್ಲವೇ… ಇದಕ್ಕೆ ಕಾರಣವೂ ಇದೆ
* ನೀವು ರಚಿಸುವ ವೃತ್ತಗಳು ಹಾಗೂ ಚುಕ್ಕಿಗಳು ನೀವು ಸಮಗ್ರತೆಯನ್ನು, ಸಾಮರಸ್ಯವನ್ನು ಹಾಗೂ ಇತರರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಇಚ್ಛಿಸುತ್ತೀರಿ ಎಂಬುದನ್ನು ತೋರುತ್ತದೆ.
* ಮುಕ್ತ ಹಾಗೂ ಭೂಮಿ ತೂಕದ ಮನಸ್ಥಿತಿ ನಿಮ್ಮದಾಗಿದ್ದು ನೀವು ಮಾಡುವ ಎಲ್ಲಾ ಕೆಲಸದಲ್ಲೂ ಒಂದು ಸಮತೋಲನವನ್ನು ನೀವು ಹೊಂದಿರುತ್ತೀರಿ.
* ಹೂವಿನ ದಳಗಳು… ನೀವು ಹೂವಿನ ದಳಗಳನ್ನು ರಚಿಸುತ್ತಿದ್ದರೆ ನೀವು ಸಹಾನುಭೂತಿಯನ್ನು ಹೊಂದಿರುವ ಪೋಷಕ ಗುಣವನ್ನು ಹೊಂದಿರುವ ಹಾಗೂ ಸೌಂದರ್ಯ ಪ್ರಜ್ಞೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದೀರಿ ಎಂದರ್ಥ.
* ವ್ಯಕ್ತಿಯ ಸಮಗ್ರ ಬೆಳವಣಿಗೆ, ಪ್ರಕೃತಿ ಹಾಗೂ ಅರ್ಥಪೂರ್ಣ ಬಾಂಧವ್ಯಗಳಲ್ಲಿ ನಿಮಗೆ ಆಸಕ್ತಿ ಇದೆ ಎಂಬುದನ್ನು ಇದು ತೋರುತ್ತದೆ.
ಸುರುಳಿ ರಚನೆಗಳು… ಸುರುಳಿ ಆಕಾರದ ರಚನೆಗಳನ್ನು ನೀವು ಇಷ್ಟಪಟ್ಟು ರಚಿಸುತ್ತೀರಿ ಎಂದಾದರೆ ನೀವು ಬೆಳವಣಿಗೆ ಮತ್ತು ಆತ್ಮ ಸಾಕ್ಷಾತ್ಕಾರದ ಭಾವವನ್ನು ಹೊಂದಿದ್ದೀರಿ ಎಂದರ್ಥ.
*ನೀವು ಅತ್ಯಂತ ಸುಲಭವಾಗಿ ಬದಲಾವಣೆಯನ್ನು ಒಪ್ಪಿಕೊಳ್ಳುತ್ತೀರಿ. ಬದುಕಿನ ಪ್ರಕ್ರಿಯೆಗಳನ್ನು ನೀವು ನಂಬುತ್ತೀರಿ ಹಾಗೂ ನಿಮ್ಮನ್ನು ನೀವು ಹೆಚ್ಚು ಪ್ರೀತಿಸುತ್ತೀರಿ
ಎಂದರ್ಥ.
* ಜಾಮಿತಿಯ ಆಕಾರಗಳು.. ನೀವು ತಾರ್ಕಿಕವಾಗಿ ನಿಖರ ಗುರಿಯ ಕುರಿತು ಹಾಗೂ ಉತ್ತಮ ರಚನಕಾರರಾಗಿ ಇರುವಿರಿ. ನಿಮ್ಮಲ್ಲಿ ಸ್ಪಷ್ಟತೆ ಇದ್ದು ನಿಖರವಾದ ಗುರಿಯನ್ನು ಹೊಂದಿರುತ್ತೀರಿ. ಅನವಶ್ಯಕ ಗೊಂದಲಗಳನ್ನು ಸರಿ ಮಾಡಿ ಸಮತ್ವವನ್ನು ತರುತ್ತೀರಿ.
* ಹೃದಯದಾಕಾರದ ಚಿಹ್ನೆಗಳನ್ನು ನೀವು ಬಳಸುತ್ತೀರಿ ಎಂದಾದರೆ ನೀವು ಪ್ರೀತಿ, ಕರುಣೆ ಮತ್ತು ಅತ್ಯಂತ ಆಳವಾದ ಭಾವನಾತ್ಮಕ ಭಾವಗಳನ್ನು ಹೊಂದಿದ್ದೀರಿ.
ನೀವು ಉಧಾರಿಗಳಾಗಿದ್ದು ಸಹಾನುಭೂತಿಯನ್ನು ಹೊಂದಿರುತ್ತೀರಿ. ಜೊತೆಗೆ ನೀವು ಅತ್ಯಂತ ಆಳವಾದ ಹಾಗೂ ಅಧಿಕೃತ ಸಂಬಂಧಗಳನ್ನು ಗೌರವಿಸುತ್ತೀರಿ ಎಂದರ್ಥ.
* ಪ್ರಾಕೃತಿಕ ವಸ್ತುಗಳ ರಚನೆ…. ನಿಮ್ಮ ರಚನೆಗಳಲ್ಲಿ ಪ್ರಾಕೃತಿಕ ವಸ್ತುಗಳನ್ನು ನೀವು ಅಳವಡಿಸಿದ್ದರೆ ನೀವು ಅತ್ಯಂತ ಮುಕ್ತ ಹಾಗೂ ಸ್ವತಂತ್ರ ಮನಸ್ಥಿತಿಯ ವ್ಯಕ್ತಿಯಾಗಿದ್ದು ಪ್ರಕೃತಿಯೊಂದಿಗೆ ಉತ್ತಮ ಸಮತೋಲನವನ್ನು ಹೊಂದಿರುತ್ತೀರಿ. ಪ್ರಕೃತಿಯಲ್ಲಿ ನೀವು ಅತ್ಯಂತ ನೆಮ್ಮದಿ ಹಾಗೂ ಭರವಸೆಯನ್ನು ಹೊಂದಿರುತ್ತೀರಿ. ಬದುಕಿನ ನೈಸರ್ಗಿಕ ಹರಿವನ್ನು ಬಯಸುವ ನೀವು ನಿಮಗೆ ಪ್ರಾಕೃತಿಕವಾಗಿ ದೊರೆಯುವ ಸಂಜ್ಞೆ ಗಳನ್ನು ಬಲವಾಗಿ ನಂಬುತ್ತೀರಿ.
ಮಂಡಲಕಲೆಯಲ್ಲಿ ಯಾವುದೇ ಸರಿ ಅಥವಾ ತಪ್ಪು ರಚನೆಗಳು ಇಲ್ಲ . ನೀವು ರಚಿಸುವ ಮಂಡಲದ ಕಲೆಯು ನಿಮ್ಮ ಭಾವಾಭಿವ್ಯಕ್ತಿ ಯು ಪ್ರತಿಫಲನ. ಅತ್ಯಂತ ಸುಂದರ, ಅನನ್ಯ ಹಾಗೂ ವಿಕಸಿತ ಸೌಂದರ್ಯ ಮಂಡಲ ಕಲೆಯದ್ದು.
ಮಂಡಲಕಲೆಯನ್ನು ಒಂದೇ ಬಾರಿಗೆ ಅವಸರದಿಂದ ಕಲಿಯುವ ಅವಶ್ಯಕತೆ ಇಲ್ಲ ಇದೊಂದು ನಿಧಾನ ಪ್ರಕ್ರಿಯೆ… ನಿಜವಾದ ಮಂಡಲ ಕಲೆಯ ಸೌಂದರ್ಯ ಅಡಗಿರುವುದು ಅದರ ವಿಶಿಷ್ಟವಾದ ಪ್ರಕ್ರಿಯೆಯಲ್ಲಿ.
ವಿವಿಧ ವಿನ್ಯಾಸಗಳನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ನಿಮ್ಮ ಕ್ರಿಯಾಶೀಲತೆಯನ್ನು ಬಳಸಿ, ರಚನೆಗಳನ್ನು ಸಹಜವಾಗಿ ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿ.
ಮಂಡಲ ಕಲೆ ರಚನೆಯಲ್ಲಿ ವಿಶ್ರಾಂತಿ, ಉಸಿರಾಟ ಕ್ರಿಯೆ ಹಾಗೂ ರಚನೆಯ ಪ್ರಕ್ರಿಯೆಗಳು ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಮಂಡಲ ಕಲೆಯಲ್ಲಿ ನೀವು ಒಮ್ಮಿಂದೊಮ್ಮೆಲೆ ಕಲಾವಿದರಾಗಲು ಸಾಧ್ಯವಿಲ್ಲ ನಿಧಾನವಾಗಿ ನಿಮ್ಮ ಕಲೆ ವಿಕಸಿತವಾಗುತ್ತಾ ಹೋಗುತ್ತದೆ. ನಿಧಾನವಾಗಿ ನೀವು ನಿಮ್ಮ ಕೈಯಾರೆ ತಯಾರಿಸಿದ ರಚನೆಯನ್ನು ಇತರರಿಗೆ ಉಡುಗೊರೆಯಾಗಿ ನೀಡಬಹುದು ಆ ರೀತಿ ನಿಮ್ಮ ಉಡುಗೊರೆಯನ್ನು ಸ್ವೀಕರಿಸಿದವರ ಕಣ್ಣಲ್ಲಿನ ಹೊಂಬೆಳಕನ್ನು ಸಂಭ್ರಮಿಸಿ.
ಮಂಡಲ ಕಲೆ ಬ್ರಹ್ಮ ವಿದ್ಯೆಯೇನಲ್ಲ…ಕಲಿಯುವ ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಖಂಡಿತವಾಗಿಯೂ ನಿಮಗೆ ಆ ಕಲೆ ಹಸ್ತಗತವಾಗುತ್ತದೆ ಅಷ್ಟೇ?
ಏನಂತೀರಾ ಸ್ನೇಹಿತರೆ?
ವೀಣಾ ಹೇಮಂತ್ ಗೌಡ ಪಾಟೀಲ್




