ಕಾವ್ಯ ಸಂಗಾತಿ
ನಿರಂಜನ ನಾಯಕ
“ಅನುಭವಿ ಮೇಷ್ಟ್ರು”


ಒಮ್ಮೆ ಕಣ್ಣೀರಿಟ್ಟಿದ್ದರು
ಆ ಒಳ್ಳೆಯ ಮೇಷ್ಟ್ರು—
ಪಾಠಕ್ಕೆ ತಡೆಯೊಡ್ಡಿ,
ಸದಾ ರಂಪ ಮಾಡುತ್ತಿದ್ದ
ಮಕ್ಕಳ ರಗಳೆಗೆ ಬೇಸತ್ತು…
ದಿನಗಳು ಉರುಳಿದವು,
ಮಕ್ಕಳ ಪಡೆ ಬದಲಾಯಿತು;
ಬಂದ ಹೊಸಬರಂತೂ
ಹಳೆಯವರಿಗಿಂತ ಒಂದು ಕೈ ತಂಟೆಕೋರರೇ!
ಆದರೂ ಈ ಬಾರಿ
ಮೇಷ್ಟ್ರು ನಗುತ್ತಲೇ ಪಾಠ ಮಾಡಿದರು,
ತಮ್ಮ ಮುಂದಿರುವುದು
ಮಹಾ ಪಟಿಂಗರೆಂಬ
ಅರಿವೇ ಇಲ್ಲದೇ…
ಯಾವ ಕಣ್ಣೀರು ಅಂದು ಅವರನ್ನು ಕುಗ್ಗಿಸಿತ್ತೋ,
ಅದೇ ಇಂದು ಅವರ ಆತ್ಮಬಲವಾಗಿತ್ತು!
ಅಂದು ಬೆಟ್ಟದಂತಿದ್ದ ಅಡಚಣೆ,
ಇಂದು ಅವರ ಬೋಧನೆಯ ಸಹಜ ರಾಗವಾಗಿತ್ತು.
ಗಲಿಬಿಲಿಯ ಪ್ರತಿ ತರಗತಿಯೂ,
ಸಾಟಿಯಿಲ್ಲದ ಪ್ರತಿ ತುಂಟ ಮಗುವೂ—
ಅವರ ಭಾವಗಳ ಹದಗೊಳಿಸಿದವು,
ಕಾಲದ ಜೊತೆ ಬೆಳೆಸಿದವು.
ಅವರು ಒಳಗೂ ಬೆಳೆದರು, ಹೊರಗೂ ಮಾಗಿದರು—
ಏಕೆಂದರೆ,
ಅವರು ಕಲಿಸಿದ ಪ್ರತಿ ಮಗುವೂ
ಅವರಿಗೊಂದು ಹೊಸ ಪಾಠ ಕಲಿಸಿತ್ತು;
‘ಬೋಧಿಸುವುದೆಂದರೆ ತಿದ್ದುವುದಲ್ಲ, ತಾಳ್ಮೆಯಿಂದ ಕಲಿಯುವುದು’ ಎಂದು.
ನಿರಂಜನ ನಾಯಕ



