ಕಾವ್ಯ ಸಂಗಾತಿ
ಅಮು ಭಾವಜೀವಿ ಮುಸ್ಟೂರು
“ಕಾಡಿಸದಿರು”


ಕೊಳಲನೂದಿ ಕರೆವಾಗ
ಕರಗಿ ಹೋದೆ ಮಾಧವ
ಪ್ರೀತಿಯ ಕರೆಯ ತಿರಸ್ಕರಿಸಿ
ಬಾಳಲು ಸಾಧ್ಯವ
ನವಿಲು ಗರಿಯ ಹಿಡಿದು ಬಂದೆ
ನಲ್ಮೆಯ ಗೋಪಾಲನಿಗಾಗಿ
ಬೆಣ್ಣೆಯ ಮಡಿಕೆ ಹೊತ್ತು ತಂದೆ
ಕಳ್ಳನಾದ ಆ ಕೃಷ್ಣನಿಗಾಗಿ
ಬೃಂದಾವನದೊಳಗೆ ಅವಿತ
ಅವನ ಹುಡುಕತ ಬಂದೆ
ರಂಗಿನೋಕುಳಿ ಎರಚಿ
ಮರೆಯಾದವನ ಒಲವಲಿ ನೆನೆದೆ
ಎದೆಯ ಬಯಕೆಯ ಅರಿತವನಾದರೂ
ಎಲ್ಲರೆದುರು ಮಗ್ಧನ ರೀತಿ ನಿಂತು ಸತಾಯಿಸಿ
ಗೋಪಿಕೆಯರ ಜೊತೆ ಕಳೆದು ಹೋದ
ಗೋವರ್ಧನನ ಗುರುತು ಹಿಡಿದೆ ಭ್ರಮಿಸಿ
ಇನ್ನು ಕಾಡಿಸ ಬೇಡ ಮಾಧವ
ವಿರಹದಲಿ ಬೆಂದು ಸೋತಿದೆ ಜೀವ
ಆನಂದದ ಯಮುನೆಯಲಿ ಮೀಯಿಸು
ಜೀವಚೇತನವಾಗಿ ಕೈಹಿಡಿದು ಮುನ್ನಡೆಸು
ಅಮು ಭಾವಜೀವಿ ಮುಸ್ಟೂರು



