ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

“ನೀನು ಜಗತ್ತಿನಲ್ಲಿ ಯಾವ ಬದಲಾವಣೆಯನ್ನು ನೋಡಬಯಸುವೆಯೋ, ಮೊದಲು ಆ ಬದಲಾವಣೆ ನಿನ್ನಲ್ಲೇ ಆಗಲಿ.”ಎಂಬ ಮಹಾತ್ಮ ಗಾಂಧೀಜಿಯವರ ಮಾತು ಬದಲಾವಣೆ ನಮ್ಮಿಂದಲೇ ಎಂಬ ಮಾತನ್ನು ಪುಷ್ಠಿಕರಿಸುತ್ತದೆ .

ಬದಲಾವಣೆ’ ಎಂಬುದು ಜಗತ್ತಿನ ಶಾಶ್ವತ ನಿಯಮ. ಆದರೆ, ಬಾಹ್ಯ ಜಗತ್ತಿನ ಬದಲಾವಣೆಯ ಮುನ್ನ ವ್ಯಕ್ತಿಯ ಅಂತರಂಗದ ಬದಲಾವಣೆ ಅತ್ಯಂತ ಮುಖ್ಯವಾದುದು. “ಬದಲಾವಣೆ ನಮ್ಮಿಂದಲೇ” ಎಂಬ ಪರಿಕಲ್ಪನೆಯು ಆಳವಾದ ತಾತ್ವಿಕ ತಳಹದಿಯನ್ನು ಹೊಂದಿರುವ ಜೀವನ ದರ್ಶನವಾಗಿದೆ.

ಸಮಾಜವೆಂಬುವುದು ನಿಂತ ನೀರಲ್ಲ. ಪ್ರತಿ ದಿನ ದಿನವೂ, ಕ್ಷಣ ಕ್ಷಣವೂ ಹೊಸ ಹೊಸ ಬದಲಾವಣೆಗಳು ಆಗುತ್ತಲೇ ಇರಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ,ಮನುಷ್ಯನ ವಿಚಾರ ಶಕ್ತಿಯೂ ಬೆಳೆದು, ಇಂದು ಜಗತ್ತು ಕ್ಷಣ ಕ್ಷಣವೂ ಬದಲಾಗುತ್ತಿದೆ, ಬದಲಾವಣೆಯ ಜಗತ್ತಿನೊಂದಿಗೆ ನಾವು ಕೂಡ ವೇಗವಾಗಿ ಹೆಜ್ಜೆ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಬದಲಾವಣೆಯನ್ನು ಮಾಡಬೇಕಾಗಿದೆ, ಬದಲಾವಣೆಗೆ ನಾವು ಹೊಂದಿಕೊಂಡು ಬದುಕಬೇಕಾಗಿದೆ. ಅಂದರೆ ಬದಲಾಗುತ್ತಿರುವ ಸಮಾಜದ ಜೊತೆ ಜೊತೆಯಲಿ ಹೆಜ್ಜೆ ಹಾಕಿಕೊಂಡು ಮುನ್ನಡೆಯುವಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು.ಇದು ಒಂದು ರೀತಿಯ ಬದಲಾವಣೆಯಾದರೆ,ಇನ್ನೊಂದು ರೀತಿಯ ಬದಲಾವಣೆಯಿದೆ ಅದು ನಮ್ಮ ಮಾನಸಿಕವಾದ ಬದಲಾವಣೆ ಅರ್ಥಾತ್ ತ್ಯಾಗ ಮಾಡಬೇಕಾದ ನಮ್ಮತನ.

ಮನುಷ್ಯ ಸಂಗ ಜೀವಿ, ಸಮಾಜ ಜೀವಿ. ಸಮಾಜದಲ್ಲಿ ಕೂಡು ಜೀವನ ನಡೆಸುತ್ತಿರುವಾಗ ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ. ಅಂತಹ ಸಂದರ್ಭದಲ್ಲಿ ಸಮಷ್ಟಿಯ ಸುಖಕ್ಕಾಗಿ ನಾವು ನಮ್ಮತನವನ್ನು ತ್ಯಾಗ ಮಾಡಬೇಕಾಗುತ್ತದೆ. ಅಂದರೆ ನಾವು ಬದಲಾಗಬೇಕಾಗುತ್ತದೆ. ಬದಲಾವಣೆ ನಮ್ಮಿಂದಲೇ ಆಗಬೇಕಾಗಿದೆ.

ಬುದ್ಧಿವಂತನಾದ ಮನುಜ ಇನ್ನೊಬ್ಬರಲ್ಲಿ ಹುಳುಕು ಹುಡುಕುವುದರಲ್ಲಿ ಕಾಲ ಕಳೆಯುತ್ತಾನೆ.ಆದರೆ ತನ್ನಲ್ಲಿರುವ ತಪ್ಪುಗಳನ್ನು ಅರಿತುಕೊಂಡು ತಿದ್ದಿಕೊಳ್ಳುವಲ್ಲಿ ಮನಸ್ಸು ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಬದಲಾವಣೆ ನನ್ನಿಂದಲೇ ಎಂಬ ಮಾತು ಅರ್ಥವನ್ನು ಪಡೆದುಕೊಳ್ಳುತ್ತದೆ.ಪ್ರತಿಯೊಬ್ಬರೂ ಪರಿಸ್ಥಿತಿ ಬದಲಾವಣೆ ಆಗಬೇಕೆಂದೂ, ಇನ್ನೊಬ್ಬರು ಬದಲಾಗಲಿ ಎಂದು ಕಾದು ಕುಳಿತರೆ, ಪರಿಸ್ಥಿತಿ ಬದಲಾಗದು. ಅದರ ಬದಲಾಗಿ ಬದಲಾವಣೆ ನನ್ನಿಂದಲೇ ಆಗಲಿ ಎಂದು ಎಲ್ಲರೂ ತಾವು ಬದಲಾದರೆ, ಪರಿಸ್ಥಿತಿ ಖಂಡಿತ ಬದಲಾಗುತ್ತದೆ.ನಾವು ಯೋಚಿಸುವ ರೀತಿ, ಮಾಡುವ ಕೆಲಸ ಮತ್ತು ನಮ್ಮ ನಡವಳಿಕೆಯಲ್ಲಿ ಬದಲಾವಣೆ ತಂದುಕೊಂಡಾಗ ಮಾತ್ರ ಸಮಾಜದಲ್ಲಿ ದೊಡ್ಡ  ಬದಲಾವಣೆ ಸಾಧ್ಯ.

ಒಂದು ಸಣ್ಣ ಬದಲಾವಣೆಯೂ ಸಹ ನಮ್ಮಿಂದಲೇ ಆರಂಭವಾಗಬೇಕು. ನಾವು ನಮ್ಮ ಜವಾಬ್ದಾರಿಗಳನ್ನು ಅರಿತು ನಡೆದರೆ, ಸುಂದರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ.”ಯದ್ಭಾವಂ ತದ್ಭವತಿ” ಅಂದರೆ ನಾವು ಹೇಗೋ, ಜಗತ್ತು ನಮಗೆ ಹಾಗೆಯೇ ಕಾಣುತ್ತದೆ. ನಾವು ಸಮಾಜದಲ್ಲಿ ಶಾಂತಿ, ಪ್ರಾಮಾಣಿಕತೆ ಮತ್ತು ಪ್ರೀತಿಯನ್ನು ನೋಡಬಯಸಿದರೆ, ಮೊದಲು ಆ ಗುಣಗಳು ನಮ್ಮ ಆತ್ಮದಲ್ಲಿ ಜಾಗೃತಗೊಳ್ಳಬೇಕು. ವ್ಯಕ್ತಿಯೊಬ್ಬನ ಮನಸ್ಸಿನ ಪರಿವರ್ತನೆಯೇ ಸಮಾಜದ ಪರಿವರ್ತನೆಗೆ ಮೊದಲ ಹೆಜ್ಜೆಯಾಗಬೇಕು.

ವ್ಯವಸ್ಥೆಯನ್ನು ಅಥವಾ ಇತರರನ್ನು ದೂಷಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ತಾತ್ವಿಕ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವ್ಯಕ್ತಿತ್ವಕ್ಕೆ ತಾನೇ ಜವಾಬ್ದಾರನಾಗಿರುತ್ತಾನೆ. ನಾವು ಮಾಡುವ ಪ್ರತಿಯೊಂದು ಸಣ್ಣ ಸತ್ಕಾರ್ಯವೂ ಜಗತ್ತಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. “ನಾನೊಬ್ಬ ಬದಲಾದರೆ ಏನು ಪ್ರಯೋಜನ?” ಎಂಬ ನಕಾರಾತ್ಮಕ ಚಿಂತನೆಯನ್ನು ಬಿಟ್ಟು, ಬದಲಾವಣೆಯ ನನ್ನ ಕರ್ತವ್ಯವನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ನಿಜವಾದ ಧರ್ಮ.

“ಬದಲಾವಣೆ ಜಗತ್ತಿನ ನಿಯಮ” ಎಂಬುದು ಎಷ್ಟು ಸತ್ಯವೋ, “ಆ ಬದಲಾವಣೆಯ ಜವಾಬ್ದಾರಿ ನಮ್ಮದು” ಎಂಬುದು ಅಷ್ಟೇ ಸತ್ಯ. ಸಮಾಜದಲ್ಲಿ ಬದುಕುವ ಮನುಷ್ಯ ವ್ಯವಸ್ಥೆಯ ಲೋಪದೋಷಗಳನ್ನು, ಸಮಾಜದ ನೈತಿಕ ಅಧಃಪತನವನ್ನು ಕಂಡು ನಿರಂತರವಾಗಿ ದೂರುತ್ತಿರುತ್ತಾನೆ. ಆದರೆ, ಇಡೀ ವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿ ಮತ್ತು ನೈತಿಕ ಹಕ್ಕು ಪ್ರತಿಯೊಬ್ಬ ವ್ಯಕ್ತಿಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರೂ ತನ್ನ ಸ್ವಂತ ಜೀವನದಲ್ಲಿ ಬದಲಾವಣೆಯನ್ನು ತಂದುಕೊಂಡಾಗ ಮಾತ್ರ ಸಮಾಜಿಕ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ.

ಶರಣರು ಹೇಳುವಂತೆ “ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ” ಒಟ್ಟಿಗೆ ಸಾಗಿದಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ನಮ್ಮ ಅಹಂಕಾರ, ಜಾತಿವಾದ ಮತ್ತು ಮೂಢನಂಬಿಕೆಗಳನ್ನು ನಾವೇ ತೊರೆದು ನಡೆದಾಗ, ಸಮಾಜ ತಾನಾಗಿಯೇ ಪರಿವರ್ತನೆ ಹೊಂದುತ್ತದೆ. ಯಾವುದೇ ವ್ಯವಸ್ಥೆಯನ್ನು ನಿಂದಿಸುವುದರಿಂದ ಕಹಿತನ ಹೆಚ್ಚುತ್ತದೆಯೇ ಹೊರತು, ಪರಿಹಾರ ಸಿಗದು. ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕರ್ಮಗಳನ್ನು ನಾವೇ ಜಾಗೃತವಾಗಿ ಗಮನಿಸಿ, ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದೇ ಜಗತ್ತನ್ನು ತಿದ್ದುವ ಮೊದಲ ಹೆಜ್ಜೆಯಾಗಿದೆ.

ಸಮಾಜ ಎಂಬುದು ವ್ಯಕ್ತಿಗಳ ಸಮೂಹ.ಬಿಂದುಗಳೇ ಸೇರಿ ಸಿಂಧುವಾಗುವಂತೆ, ವೈಯಕ್ತಿಕ ನೈತಿಕತೆಯೇ ಸಾಮಾಜಿಕ ವ್ಯವಸ್ಥೆಯಾಗಿ ಮಾರ್ಪಡುತ್ತದೆ. ಪ್ರಪಂಚದಲ್ಲಿ ಕ್ರಾಂತಿಗಳು ಕೇವಲ ಯುದ್ಧಭೂಮಿಯಲ್ಲಿ ಆಗಲಿಲ್ಲ. ಅವು ಮೊದಲು ಮನುಷ್ಯನ ಆಲೋಚನಾ ಲಹರಿಯಲ್ಲಿ ಮೊಳಕೆಯೊಡೆಯುತ್ತವೆ. ಆದ್ದರಿಂದ, ಸಮಾಜದ ಉದ್ಧಾರಕ್ಕೆ ಕಾಯುವ ಬದಲು, ನಮ್ಮ ಅಂತರಂಗದ ದೀಪವನ್ನು ಮೊದಲು ಬೆಳಗಿಸೋಣ. ಬದಲಾವಣೆ ನಮ್ಮಿಂದಲೇ ಆರಂಭವಾಗಲಿ.


About The Author

Leave a Reply

You cannot copy content of this page

Scroll to Top