ಕಾವ್ಯ ಸಂಗಾತಿ
ಎನ್.ಜಯಚಂದ್ರನ್
“ಆಶ್ರಯ ಯಾರಿಗೆ?”


ಬಡವನಿಗೊಂದು ಮನೆ ಎಂದರು,
ಆಶ್ರಯ ಎಂದು ಹೆಸರಿಟ್ಟರು,
ಹೆಸರಿನಲ್ಲಿ ಮಾತ್ರ ಬಡವನ ಪಾಲು—
ಸೈಟ್ ಬಂದಾಗ ,ಸಿರಿವಂತನ ಕೈಗೆ ಕೊಟ್ಟರು.
ಅರ್ಜಿಯ ಮೇಲೆ ಅರ್ಜಿ ಹಾಕಿದ,
ಬಡವ ಕಚೇರಿ ಸುತ್ತಿದ,
ಸಾರ್, ನನ್ನ ಸೈಟ್ ಎಲ್ಲಿ ? ಎಂದಾಗ
ಫೈಲು ಮಾತ್ರ ಮೇಜಿನ ಕೆಳಗೆ ನಕ್ಕಿತು !
ಸರ್ಕಾರಿ ಜಾಗವಂತೆ—
ಬಡವನಿಗಾಗಿ ಮೀಸಲಂತೆ,
ರಾತ್ರಿ ಕತ್ತಲಲ್ಲಿ ಗಡಿ ಹಾಕಿ
ಬೆಳಗಾಗುವಷ್ಟರಲ್ಲಿ ಖಾಸಗಿ ಆಸ್ತಿಯಂತೆ !
ಸೈಟ್ ನಮ್ಮದು, ದಾಖಲೆ ನಿಮ್ಮದು,
ಕಾಗದ ನಮ್ಮದು, ಕಾನೂನು ನಿಮ್ಮದು.
ಹೀಗೆ ಹೇಳಿದ ಕುಳಗಳು
ಬ್ಯಾಂಕಿನ ಬಾಗಿಲಿಗೆ ಹೋದರು !
ಸರ್ಕಾರಿ ಆಸ್ತಿಗೆ ಸಾಲವಂತೆ,
ಸಾಲಕ್ಕೆ ಆಸ್ತಿಯೇ ಭದ್ರತೆಯಂತೆ,
ಬಡವನ ಕನಸಿನ ಜಾಗವನ್ನೇ
ಬ್ಯಾಂಕಿನ ಲಾಕರ್ಗೆ ಅಡವಿಟ್ಟರಂತೆ !
ಕಚೇರಿಯ ಗೋಡೆ ಕೇಳಿತು—
ಇದು ಹೇಗೆ ಸಾಧ್ಯ?
ಅಧಿಕಾರಿಯ ಕುರ್ಚಿ ಉತ್ತರಿಸಿತು—
ನನಗೇನೂ ಗೊತ್ತಿಲ್ಲ !
ಫೈಲು ಓಡಲಿಲ್ಲ,
ಸಹಿ ನಿಲ್ಲಲಿಲ್ಲ,
ನ್ಯಾಯ ಮಾತ್ರ ಬಾಗಿಲಲ್ಲೇ ನಿಂತು
ಸರದಿ ಯಾವಾಗ ? ಎಂದು ಕಾಯುತ್ತಿದೆ !
ಬಡವ ಕೇಳಿದ—
ನನ್ನ ಆಶ್ರಯ ಎಲ್ಲಿ ?
ಅಧಿಕಾರಿ ಹೇಳಿದ—
ತನಿಖೆ ನಡೆಯುತ್ತಿದೆ !!
ವರ್ಷಗಳು ಉರುಳಿದವು,
ಫೈಲುಗಳು ದಪ್ಪವಾದವು,
ಬಡವನ ತಲೆಮೇಲೆ ಮಾತ್ರ
ಆಕಾಶವೇ ಸೂರು ಆಯಿತು !
ಆಶ್ರಯ ಯೋಜನೆ ಹೆಸರಿನಲ್ಲಿ
ಆಶ್ರಯವಿಲ್ಲದವನಿಗೆ ಆಸೆ,
ಆಸೆಯ ಹಿಂದೆ ಸೈಟ್,
ಸೈಟ್ ಹಿಂದೆ ಸಿರಿವಂತನ ನೋಟು !
ಬಡವನ ಬೆವರಿನಿಂದ
ಸರ್ಕಾರದ ಯೋಜನೆ ಹುಟ್ಟಿತು,
ಸಿರಿವಂತನ ಬುದ್ಧಿಯಿಂದ
ಅದೇ ಯೋಜನೆ ಆಸ್ತಿಯಾಯಿತು !
ಕಾನೂನು ಪುಸ್ತಕದಲ್ಲಿ ಬಡವನ ಹಕ್ಕು,
ಕಚೇರಿ ಪುಸ್ತಕದಲ್ಲಿ ಅಧಿಕಾರಿಯ ಮೌನ,
ದಾಖಲೆ ಪುಸ್ತಕದಲ್ಲಿ ಸಿರಿವಂತನ ಹೆಸರು—
ಇದೇನಾ ಆಶ್ರಯದ ಹೊಸ ವ್ಯಾಖ್ಯಾನ ?
ಒಂದು ದಿನ ಬಡವ ಕೇಳುವನು—
ನನ್ನ ಸೈಟ್ ಎಲ್ಲಿ ಹೋಯಿತು ?
ಆಗ ಕಡತದೊಳಗಿಂದ ಧ್ವನಿ ಪಿಸುಗುಟ್ಟಿತು ;
ನಿನ್ನ ಹೆಸರೇ ಇತ್ತು…
ಆದರೆ ಸೈಟ್ ಮಾತ್ರ ಇನ್ನೊಬ್ಬರದಾಯಿತು !
ಆಶ್ರಯ ಯಾರಿಗೆ ?
ಬಡವನಿಗೋ…..
ಅಥವಾ ಬಡವನ ಹೆಸರಿನಲ್ಲಿ
ಸೈಟ್ ಕಳ್ಳರಿಗೋ ?
ಪ್ರಶ್ನೆ ಉಳಿದಿದೆ—
ಉತ್ತರ ಮಾತ್ರ ಕಾಣುತ್ತಿಲ್ಲ.
ಅಧಿಕಾರಿಗಳ ಮೌನದ ನಡುವೆ
ಬಡವನ ಆಶ್ರಯವೂ
ಆಸೆಯಂತೆಯೇ ದೂರವಾಗುತ್ತಿದೆ !
ಎನ್.ಜಯಚಂದ್ರನ್



