ಸಾಮಾಜಿಕ ಸಂಗಾತಿ
“ಒಂದು ಕೊಲೆ ಮತ್ತು ಆತ್ಮವಿಮರ್ಶೆ”
ವೀಣಾ ಹೇಮಂತ್ ಗೌಡ ಪಾಟೀಲ್


ಕಳೆದ ವಾರ ಜೂನ್ 18ರಂದು ಇಡೀ ದೇಶವನ್ನು ಬೆಕ್ಕಸ ಮಕ್ಕಳಬೆರಗಾಗಿಸಿದ, ನೋವಿನಲ್ಲಿ ಅದ್ದಿದ ಘಟನೆಯೊಂದು ಮಹಾರಾಷ್ಟ್ರ ರಾಜ್ಯದ ಪುಣೆಯ ಹೊರವಲಯದಲ್ಲಿ ನಡೆಯಿತು. ಇನ್ನೇನು ಕೆಲವೇ ತಿಂಗಳಲ್ಲಿ ತಾನು ಮದುವೆಯಾಗುವ ನಿಶ್ಚಿತ ವರ ಕೇತನ್ ಅಗರವಾಲ್ ನನ್ನು ಆತನ ನಿಶ್ಚಿತ ವಧು ಸಿಯಾ ಗೋಯಲ್ ನಾನೂರು ಅಡಿ ಎತ್ತರದ ಕೋಟೆಯ ಮೇಲಿನಿಂದ ತಳ್ಳಿ ಸಾಯಿಸಿದ ಘಟನೆಯ ವರದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವೆಲ್ಲರೂ ನೋಡಿದ್ದೇವೆ.
ನಿಖರ ಮಾಹಿತಿಗಳ ಪ್ರಕಾರ ಕೇತನ್ ಅಗರವಾಲ್ ಎಂಬ
600 ಕೋಟಿ ಬೆಲೆ ಬಾಳುವ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ ಶ್ರೀಮಂತ ಯುವಕನ ಕೊಲೆಯನ್ನು ಆತನ ಬಾವಿಪತ್ನಿಯೇ ಮಾಡಿದ್ದಾಳೆ… ಹಾಗೆ ಆತನನ್ನು ಕೊಲ್ಲಲು ಆಕೆ ನೀಡಿದ ಕಾರಣ ಆತ ಬಕ್ಕ ತಲೆಯವನಾಗಿದ್ದ ಎಂದು.
ಜೊತೆಗೆ ಆಕೆಯ ಪ್ರೇಮಿಯ ಕುಮ್ಮಕ್ಕು ಕೂಡ ಈ ಕೃತ್ಯದ ಹಿಂದೆ ಇತ್ತು…. ಹಾಗೂ ಇದನ್ನು ಅವರಿಬ್ಬರೂ ಸೇರಿ ಸಂಚು ಮಾಡಿದ್ದರು.
ಆದರೆ ಮನೋವಿಜ್ಞಾನ ಹೇಳುವುದು ಹೀಗೆ… ಯಾವುದೇ ಒಬ್ಬ ವ್ಯಕ್ತಿಯು ಕೇವಲ ಒಂದು ದಿನದಲ್ಲಿ ಮೋಸ ಮಾಡುವ, ಸತ್ಯವನ್ನು ಮುಚ್ಚಿಡುವ, ಕುತಂತ್ರ ಮಾಡುವುದನ್ನು ಕಲಿಯುವುದಿಲ್ಲ.ಈ ರೀತಿಯ ಒಂದು ಕಲಿಕೆಗೆ ಸಾಕಷ್ಟು ಸಮಯದ ಅವಶ್ಯಕತೆ ಇರುತ್ತದೆ. ಇದೊಂದು ಮನೋ ದೈಹಿಕ ಸಾಮರ್ಥ್ಯವಾಗಿದ್ದು ಇದನ್ನು ಕಲಿಯಲು ಸಾಕಷ್ಟು ಗ್ರಹಿಕೆಯ, ಸಮಯದ, ಅನುಭವದ ಅವಶ್ಯಕತೆ ಇರುತ್ತದೆ.
ತನ್ನ ಹುಟ್ಟು ಹಬ್ಬವನ್ನು ಆಚರಿಸಲು ಪುಣೆಯ ಹತ್ತಿರದ ಲೋಹಗಢ ಕೋಟೆಗೆ ತನ್ನ ನಿಶ್ಚಿತ ವರನನ್ನು ಕರೆದೊಯ್ದ ಆಕೆ ಫೋಟೋಶೂಟ್ ಮಾಡುವ ನೆಪದಲ್ಲಿ ಆತನನ್ನು ನ 400 ಅಡಿ ಎತ್ತರದಿಂದ ತಳ್ಳಿ ಕೊಲೆ ಮಾಡಿದ್ದಾಳೆ.
ನಂತರ ತಾನೇ ಖುದ್ದಾಗಿ ಪೊಲೀಸರಿಗೆ ಫೋನ್ ಮಾಡಿದ ಆಕೆ ಮಾಹಿತಿಯನ್ನು ನೀಡಿದ್ದಾಳೆ. ಘಟನೆಯ ನಂತರ ಮುಂದುವರೆದ ಬೆಳವಣಿಗೆಯಲ್ಲಿ ಯುವಕನ ಅಂತ್ಯಕ್ರಿಯೆಯ ಎರಡು ದಿನಗಳ ನಂತರ ಕೇತನ್ ಅಗರವಾಲನ ಮನೆಗೆ ಆಕೆ ಭೇಟಿ ನೀಡಿದ್ದಾಳೆ. ಈ ಕುರಿತು ಪ್ರಶ್ನಿಸಿದಾಗ ಆಕೆಯ ವಿಭಿನ್ನ ಉತ್ತರಗಳನ್ನು ಆಲಿಸಿದ ಯುವಕನ ಸಹೋದರಿಗೆ ಅನುಮಾನ ಉದ್ಭವಿಸಿದೆ.
ಅಂತೆಯೇ ತನ್ನ ಅನುಮಾನವನ್ನು ಆಕೆ ತನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದು ನಂತರ ಕುಟುಂಬದ ಸದಸ್ಯರೆಲ್ಲರೂ ಈ ಕುರಿತು ಮಾತನಾಡಿಕೊಂಡಿದ್ದಾರೆ.
ಕೇಸನ್ನು ಪುನರ್ ಪರಿಶೀಲಿಸಲು ಯುವಕನ ತಾಯಿ ಪೊಲೀಸರಲ್ಲಿ ದೂರನ್ನು ನೀಡಿದರು. ಈಗಾಗಲೇ ಈ ಕೇಸಿನ ಕುರಿತು ಕೊಂಚ ಗುಮಾನಿಯನ್ನು ಹೊಂದಿದ್ದ ಪೊಲೀಸರಿಗೆ ಈ ದೂರಿನಿಂದ ಮತ್ತಷ್ಟು ಪುಷ್ಟಿ ದೊರೆಯಿತು. ಸಿ ಸಿ ಟಿವಿಗಳ ಮೂಲಕ ಘಟನೆಯನ್ನು ಪುನರ್ ಪರಿಶೀಲಿಸಿದ ಪೊಲೀಸರು ಬಿರು ಬೇಸಿಗೆಯ ಸಮಯದಲ್ಲಿಯೂ ಹೂಡಿ ಧರಿಸಿ ಓಡಾಡುತ್ತಿದ್ದ ಓರ್ವ ಯುವಕನನ್ನು ಗುರುತಿಸಿದ್ದಾರೆ. ಸಿಯಾಳನ್ನು ಈ ಕುರಿತು ಪ್ರಶ್ನಿಸಿದಾಗ ಆಕೆ ತಡಬಡಾಯಿಸಿದ್ದನ್ನು ಕಂಡು ಅನುಮಾನದಿಂದ ವಿಚಾರಣೆ ನಡೆಸಿದರು. ಸಿಯಾ ಹಾಗೂ ಆಕೆಯ ಪ್ರಿಯಕರನ ನಡುವಿನ ಸರಿ ಸುಮಾರು 2000 ಫೋನ್ ಕರೆಗಳನ್ನು, ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದ ನಂತರ ಆರೋಪಿಯಾಗಿ ಸಿಯಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದರು.
ಆರಂಭದಲ್ಲಿ ತನ್ನ ಮೇಲೆ ಬಂದ ಎಲ್ಲ ಅಪವಾದಗಳನ್ನು ತಿರಸ್ಕರಿಸಿದ ಆಕೆ ಅಂತಿಮವಾಗಿ ತನ್ನ ಪ್ರಿಯಕರನ ಒತ್ತಾಯ ಹಾಗೂ ಹೇಳಿಕೆಯ ಮೇರೆಗೆ ಈ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡರು.
ಮರಣ ಹೊಂದಿದ ತನ್ನ ಮಗನ ಮುಖದ ಭಾಗವು180 ಡಿಗ್ರಿಯಷ್ಟು ತಿರುಚಿಕೊಂಡಿದ್ದು ಬೆನ್ನಿನ ಭಾಗದಲ್ಲಿ ಮುಖ ಜಜ್ಜಿದಂತೆ ತೋರುತ್ತಿತ್ತು. ಬೇಡವಾದರೆ ಬಿಡಬೇಕಿತ್ತು… ಈಗ ನನ್ನ ಮಗನನ್ನು ಯಾರು ತಂದು ಕೊಡುತ್ತಾರೆ ಎಂದು ಅಳುವ ತಾಯಿಯ ಆಕ್ರಂದನ, ನನ್ನನ್ನು ಕಾಳಜಿ ಮಾಡಬೇಕಾದ ನನ್ನ ಮಗ ಇನ್ನಿಲ್ಲವಾಗಿ ಹೋದ.. ಅದೂ ಕುತಂತ್ರದಿಂದ ಎಂಬ ನೋವನ್ನು ಬದುಕಿನ ಕೊನೆಯವರೆಗೂ ಭರಿಸಬೇಕಾದ ತಂದೆಯ ಅಳಲು, ಸೋದರನನ್ನು ಕಳೆದುಕೊಂಡು ತಬ್ಬಲಿತನದ ಭಾವವನ್ನು ಹೊಂದಿರುವ ಸಹೋದರಿಯ ದುಃಖಭರಿತ ಆಕ್ರೋಶ ಒಂದೆಡೆ ಕಂಡರೆ, ಮತ್ತೊಂದೆಡೆ ತಮ್ಮ ಮಗಳ ಕೃತ್ಯದಿಂದ ಮನನೊಂದಿರುವ ತಂದೆ ತಾಯಿಯರು ಆಕೆಯನ್ನು ಕೂಡ ಅದೇ 400 ಅಡಿ ಎತ್ತರದ ಪರ್ವತದಿಂದ ನೂಕಿ ಸಾಯಿಸಿ ಬಿಡಬೇಕು ಎಂದು ತಮ್ಮ ನೋವನ್ನು ಆಕೆಯ ಪಾಲಕರು
ಹೊರ ಹಾಕಿದ್ದಾರೆ.
ಈ ಕುರಿತು ಆಳವಾಗಿ ಪ್ರಶ್ನಿಸಿದರೆ ಆಕೆ ಎಂದೂ ತನಗೆ ಈ ಸಂಬಂಧ ಇಷ್ಟವಿಲ್ಲ ಎಂದು ತೋರ್ಪಡಿಸಿರಲಿಲ್ಲ ಎಂದು ಹೇಳುತ್ತಾರೆ. ವಿವಾಹದ ಕುರಿತು ಅತ್ಯಂತ ಸಂತಸವನ್ನೆ ತೋರಿದ್ದಳು…. ಆಕೆಗೆ ಒಬ್ಬ ಬಾಯ್ ಫ್ರೆಂಡ್ ಇರುವ ಸಂಗತಿ ಕೂಡ ನಮಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮುಂದಿನ ಕಾನೂನಾತ್ಮಕ ಪರಿಣಾಮಗಳು ಏನೇ ಇರಲಿ ಆದರೆ ಮಾನವಿಕ ಮನೋವಿಜ್ಞಾನವನ್ನು ಸ್ವಲ್ಪವಾದರೂ ಓದಿಕೊಂಡಿರುವವರಿಗೆ ಬರುವ ಮೊದಲ ಪ್ರಶ್ನೆ…. ಎರಡು ವಿಭಿನ್ನ ಬದುಕುಗಳನ್ನು ಓರ್ವ ಹರೆಯದ ವ್ಯಕ್ತಿ ಅದು ಹೇಗೆ ಬದುಕುತ್ತಿದ್ದ ಎಂಬುದು ?
ನಿಶ್ಚಿತಾರ್ಥದಲ್ಲಿ ನಗು ನಗುತ್ತಾ ಪಾಲ್ಗೊಂಡ ಯುವತಿ, ತನ್ನ ಮುಂದಿನ ಬದುಕನ್ನು ಜೊತೆಯಾಗಿ ಕಳೆಯುವ ಭಾವಿ ಪತಿಯ ಮನೆಯವರೊಂದಿಗೆ ಹಬ್ಬ ಉತ್ಸವಗಳಲ್ಲಿ ಪಾಲ್ಗೊಂಡಿರುವ, ಅವರ ಪ್ರೀತಿ, ನಂಬಿಕೆ ವಿಶ್ವಾಸ, ಆಶೀರ್ವಾದಗಳನ್ನು ಪಡೆದುಕೊಂಡಿರುವ, ಮದುವೆಯ ಪೂರ್ವಭಾವಿ ತಯಾರಿಯಲ್ಲಿ ತೊಡಗಿಕೊಂಡಿರುವ, ನಿಶ್ಚಿತ ವರನೊಂದಿಗೆ ವಿವಾಹ ಪೂರ್ವ ಫೋಟೋ ಶೂಟ್ನಲ್ಲಿ ಭಾಗವಹಿಸಿರುವ ಬದುಕಿನ ಒಂದು ಮುಖ ಇದ್ದರೆ, ಇದಕ್ಕೆ ತದ್ವಿರುದ್ಧವಾಗಿ ಬೇರೊಬ್ಬ ಯುವಕನೊಂದಿಗೆ ಪ್ರೀತಿಯನ್ನು ಹೊಂದಿದ್ದು, ಆ ಪ್ರೀತಿಯನ್ನು ಯಾರಿಗೂ ಜಾಹೀರು ಮಾಡದೆ ಹೋದರೂ ಕೂಡ ಅದೇ ವ್ಯಕ್ತಿಯೊಂದಿಗೆ ಸೇರಿ ತಾನು ಮದುವೆಯಾಗಲಿರುವ ಯುವಕನನ್ನು ಕೊಲೆಗೈಯುವ ಸಂಚನ್ನು ಹೂಡಿ ಅದರಲ್ಲಿ ಯಶಸ್ವಿಯಾಗಿ ಎಲ್ಲರ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಿದ ಮತ್ತೊಂದು ಹೇಯ ಮುಖ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ.
ಪ್ರಶ್ನೆ ಇರುವುದು ತಪ್ಪು ಯಾರದು? ಯಾಕೆ ಹೀಗಾಯ್ತು ? ಎಂದು ಕೇಳಿಕೊಳ್ಳುವುದರಲ್ಲಿಲ್ಲ… ಬದಲಾಗಿ ಇಂತಹ ತಪ್ಪುಗಳು ಆಗಲು ಕಾರಣವೇನು? ಎಂಬುದನ್ನು ಅರಿತು ಮುಂದೆ ಈ ರೀತಿಯ ತಪ್ಪುಗಳು ಆಗದೇ ಇರಲು ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ಅರಿಯೋಣ.
ಯಾವುದೇ ಮಕ್ಕಳಾದರೂ ಹುಟ್ಟಿನಿಂದಲೇ ಆಗಲಿ, ಇಲ್ಲವೇ ಚಿಕ್ಕಂದಿನಿಂದಲೇ ಆಗಲಿ ಇತರರನ್ನು ನೋಯಿಸುವ, ಮೋಸ ಮಾಡುವ,, ಕುತಂತ್ರಗಳನ್ನು ಬಳಸುವ, ತಪ್ಪಿಸಿಕೊಳ್ಳುವ ತಂತ್ರಗಳನ್ನು ಕಲಿತಿರುವುದಿಲ್ಲ.
ಬಹಳಷ್ಟು ಬಾರಿ ಮನೆಯಲ್ಲಿ ಶಾಲೆ ಕಾಲೇಜುಗಳಲ್ಲಿ ಕಲಿಸುವುದನ್ನೇ ಕಲಿಯದ ಮಕ್ಕಳು ತಾವು ನೋಡಿರುವುದನ್ನು, ಗ್ರಹಿಸಿರುವುದನ್ನು …ಮತ್ತಿತರ ಸಾಮಾಜಿಕ ಸಿದ್ಧ ಮಾದರಿಗಳನ್ನು ನೋಡಿ ಕಲಿಯುತ್ತಾರೆ.
* ನಮ್ಮ ಮಕ್ಕಳು ನಮ್ಮನ್ನು ಪ್ರತಿದಿನ ಪ್ರತಿ ಕ್ಷಣ ಗಮನಿಸುತ್ತಿರುತ್ತಾರೆ.
*ನಾವು ಸಮಸ್ಯೆಗಳನ್ನು ಯಾವ ರೀತಿ ನಿಭಾಯಿಸುತ್ತೇವೆ, *ಕಠಿಣ ಪರಿಸ್ಥಿತಿಗಳಲ್ಲಿ ಯಾವ ರೀತಿ ವರ್ತಿಸುತ್ತೇವೆ ಎಂಬುದು ಅವರ ಗಮನದಲ್ಲಿ ಸದಾ ಇರುತ್ತದೆ. *ಅನಿವಾರ್ಯ ಪರಿಸ್ಥಿತಿಯಲ್ಲಿಯು ನಾವು ಸತ್ಯವನ್ನೇ ಮಾತನಾಡುತ್ತೇವೆಯೇ ಎಂಬುದನ್ನು ಅವರು ನೋಡುತ್ತಿರುತ್ತಾರೆ.
* ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳುತ್ತೇವೆಯೇ? ಇಲ್ಲವೇ? ಎಂಬುದನ್ನು ಅವರು ಗಮನಿಸುತ್ತಿರುತ್ತಾರೆ.
* ನಾವು ಮಾಡುವ ತಪ್ಪುಗಳು, ಅದಕ್ಕಾಗಿ ನಾವು ಕೊಡುವ ಸುಳ್ಳು ನೆಪಗಳು ಇಲ್ಲವೇ ಸಮರ್ಥನೆಗಳು, ವಿಷಯವನ್ನು ಮುಚ್ಚಿಡುವುದು, ತಮ್ಮ ಮೇಲೆ ಬರಬಹುದಾದ ತಪ್ಪನ್ನು ಬೇರೆಯವರ ಮೇಲೆ ನಿರ್ಧಾಕ್ಷಿಣ್ಯವಾಗಿ ಹಾಕುವುದು ಹಾಗೂ ಮುಖ್ಯವಾಗಿ ಸಮಯವು ಎಲ್ಲವನ್ನು ಮುಚ್ಚಿ ಹಾಕುತ್ತದೆ ಎಂದು ನಂಬುವುದು ಮಕ್ಕಳ ವಿಕಲ ಮಾನಸಿಕತೆಯನ್ನು ತೋರುತ್ತದೆ.
ಮಕ್ಕಳು ಕೇವಲ ತಮ್ಮ ಪಾಲಕರ ವಂಶವಾಹಿಗಳನ್ನು ಹಾಗೂ ಸ್ವಭಾವಗಳನ್ನು ಮಾತ್ರ ತಮ್ಮೊಂದಿಗೆ ಮುಂದುವರೆಸಿಕೊಂಡು ಹೋಗುವುದಿಲ್ಲ… ಬದಲಾಗಿ ಅವರು ತಮ್ಮ ಪಾಲಕರು ಬದುಕುವ ರೀತಿ ನೀತಿಗಳನ್ನು ತಮ್ಮದಾಗಿಸಿಕೊಂಡು ನಡೆಯುತ್ತಾರೆ. ಪ್ರಾಮಾಣಿಕತೆ ಮತ್ತು ಅಪ್ರಾಮಾಣಿಕತೆಗಳಲ್ಲಿ ಯಾವುದನ್ನು ಹೆಚ್ಚಾಗಿ ತಮ್ಮ ಪಾಲಕರು ಹೊಂದಿರುತ್ತಾರೆ ಎಂಬುದನ್ನು ಅವರು ತಮ್ಮ ಪಾಲಕರ ಅರಿವಿಗೆ ಬಾರದಂತೆ ಸದಾ ಗಮನಿಸುತ್ತಿರುತ್ತಾರೆ.
ಇಲ್ಲಿ ಆ ಯುವತಿ ತನಗೆ ಇಷ್ಟವಿಲ್ಲದ ಈ ಸಂಬಂಧವನ್ನು ನಿರಾಕರಿಸಬಹುದಿತ್ತು… ಹಾಗೆ ಹೇಳುವ ಮೂಲಕ ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದಲ್ಲದೇ ಯುವಕನ ಪ್ರಾಣವನ್ನು ಕೂಡ ಉಳಿಸಬಹುದಾಗಿತ್ತು. ಒಂದು ಇಡೀ ಕುಟುಂಬವನ್ನು ನೋವಿಗೆ ತಳ್ಳುವುದರ ಜೊತೆಗೆ ತನ್ನದೇ ಕುಟುಂಬದ ಘನತೆ ಗೌರವಗಳನ್ನು ಬೀದಿ ಪಾಲು ಮಾಡುವುದನ್ನು ತಪ್ಪಿಸಬಹುದಿತ್ತು. ಈ ಸಂಬಂಧ ತನ್ನನ್ನು ಸಂತೋಷಗೊಳಿಸಿದೆ ಎಂದು ಎಲ್ಲರ ಮುಂದೆ ಹುಸಿ ನಗುವುದರ ಬದಲು ಇರುವ ವಿಷಯವನ್ನು ತನ್ನ ಕುಟುಂಬಕ್ಕೆ, ತನ್ನ ಭಾವಿ ಪತಿಗೆ ಹೇಳಿ ಆಗುವ ಅನಾಹುತವನ್ನು ತಪ್ಪಿಸಬಹುದಾಗಿತ್ತು.
ಪಾಲಕರಾಗಿ ನಾವು ನಮ್ಮ ಮಕ್ಕಳನ್ನು ಬೆಳೆಸುವಲ್ಲಿ ಬಹಳಷ್ಟು ಜಾಗರೂಕತೆಯನ್ನು ವಹಿಸಬೇಕು.
ನಮ್ಮ ಮಕ್ಕಳಿಗೆ ಉನ್ನತ ಅಂಕಗಳನ್ನು ಗಳಿಸಬೇಕು ಎಂದು ಹೇಳುವ ಹೆಮ್ಮೆಯ ಪಾಲಕರು ನಾವಾದರೆ ಸಾಲದು.
ಗೌರವಾನ್ವಿತ ನೌಕರಿ ಪಡೆಯುವ/ ಒಳ್ಳೆಯ ಕುಟುಂಬದ ವ್ಯಕ್ತಿಯನ್ನು ಸಂಗಾತಿಯಾಗಿ ಪಡೆಯುವ ಕುರಿತು ಮಾತ್ರ ಕಲಿಸಿದರೆ ಸಾಲದು.
ಮಕ್ಕಳು ತಮ್ಮ ಒಳ್ಳೆಯ ಮೌಲ್ಯಗಳನ್ನು ಮಾತ್ರ ಬಿಂಬಿಸಿದರೆ ಸಾಲದು… ಬದಲಾಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದನ್ನು ಕಲಿಸಲೇಬೇಕು.
ತಮ್ಮ ಆಯ್ಕೆಯ ಕುರಿತು ಪುನರ್ ಪರಿಶೀಲನೆ ಮಾಡುವುದನ್ನು, ತಮಗಿಷ್ಟವಿಲ್ಲದ ವಿಷಯವನ್ನು ಬೇಡ ಎಂದು ತಳ್ಳಿ ಹಾಕುವ ಧೈರ್ಯವನ್ನು, ತಮಗೆ ಒಗ್ಗದ ಆಹಾರವನ್ನು ಬೇಡ ಎಂದು ತಳ್ಳುವಷ್ಟೇ ಧೈರ್ಯದಿಂದ ತಮಗಿಷ್ಟವಿಲ್ಲದ ವೈವಾಹಿಕ ಸಂಬಂಧದಿಂದ ಹೊರಟು ಹೋಗುವ ದಾಸ್ಟಿಕತೆಯನ್ನು ಪ್ರದರ್ಶಿಸಬೇಕು.
ಹೊಣೆಗಾರಿಕೆ ಎಂಬುದು ಇಪ್ಪತ್ತನೇ ವರ್ಷದಲ್ಲಿ ಬರುವುದಲ್ಲ ಹುಟ್ಟಿದ ಮಗು ತನ್ನ ಐದನೇ ವರ್ಷದಿಂದಲೇ ತನ್ನ ವೈಯಕ್ತಿಕ ನಿಲುವುಗಳನ್ನು, ಸಾಮಾಜಿಕ ಬದ್ಧತೆಯನ್ನು, ಮೌಲ್ಯದ ಬದುಕನ್ನು ರೂಡಿಸಿಕೊಳ್ಳಲು ಪಾಲಕರು ಮಕ್ಕಳಿಗೆ ಸರಿಯಾದ ದಾರಿಯನ್ನು ತೋರಬೇಕು
ಸಾಮಾಜಿಕ ಹೊಣೆಗಾರಿಕೆಯು ಮಗುವಿಗೆ ಐದನೇ ವರ್ಷದಲ್ಲಿ ಕಲಿಕೆಯ ಭಾಗವಾಗಿ ದೊರೆತರೆ ಹತ್ತನೇ ವಯಸ್ಸಿನಲ್ಲಿ ಅದು ಮತ್ತಷ್ಟು ಬಲಿಷ್ಠವಾಗುತ್ತದೆ. ಹದಿಹರೆಯದ ಸಮಯದಲ್ಲಿ ಅವರ ಸಾಮಾಜಿಕ ಬದ್ಧತೆಯು ವಿಭಿನ್ನ ಹಂತಗಳಲ್ಲಿ ಪರೀಕ್ಷಿಸಲ್ಪಡುತ್ತದೆ
ಮತ್ತೆ 20ನೇ ವಯಸ್ಸಿನ ಹೊತ್ತಿಗೆ ಅವರ ಬದುಕಿನ ಮೌಲ್ಯವನ್ನು ಮಾಪನ ಮಾಡಲಾಗುತ್ತದೆ.
ಮನುಷ್ಯನ ಬದುಕಿನ ಕಲಿಕೆಗಳು ನಾವಂದುಕೊಂಡಷ್ಟು ಸರಳವಾಗಿಲ್ಲ ನಿಜ… ಆದರೆ ಅತ್ಯಂತ ಸಂಕೀರ್ಣವಾಗಬಾರದು ಎಂಬ ತಿಳುವಳಿಕೆ ಪಾಲಕರಾದ ನಮಗಿರಲೇಬೇಕು.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸುತ್ತಲ ವಾತಾವರಣಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬ ಹೊಣೆಗಾರಿಕೆ ಆತನಂತೆ ಆಗಿದ್ದು, ಎಷ್ಟೋ ಬಾರಿ ನಮ್ಮ ಬದುಕಿನ ಆಯ್ಕೆಗಳು ನಮ್ಮನ್ನು ರೂಪಿಸುತ್ತದೆ. ನಮ್ಮ ಮನದ ಭಾವಗಳು ಕನ್ನಡಿಯ ಪ್ರತಿಬಿಂಬದಂತೆ ನಮ್ಮನ್ನು ಈ ಸಮಾಜಕ್ಕೆ ತೋರುತ್ತವೆ.
ನಾವು ಹೊಂದಿರುವ ಸ್ನೇಹಿತರು ಸಂಬಂಧಗಳು ನಮ್ಮ ವ್ಯಕ್ತಿತ್ವ ನಮ್ಮ ಬದುಕಿನ ಕುರಿತಾದ ನಮಗಿರುವ ಅವಗಾಹನೆಗಳು ಮತ್ತಿತರ ಹಲವಾರು ವಿಷಯಗಳು ಮನುಷ್ಯನ ವರ್ತನೆ ಆದರೆ ಎಲ್ಲಕ್ಕಿಂತ ಮಿಗಿಲಾಗಿ ಸದಾ ನಿಮ್ಮನ್ನು ಗಮನಿಸುವ ಎರಡು ಜೋಡಿ ಕಣ್ಣುಗಳು ನಿಮ್ಮನ್ನೇ ಪ್ರತಿಬಿಂಬಿಸುತ್ತವೆ ಹಾಗೂ ಹಾಗೆ ಪ್ರತಿಬಿಂಬಿಸುವ ಕಣ್ಣುಗಳು ನಿಮ್ಮ ಮಕ್ಕಳದ್ದೇ ಆಗಿರುತ್ತವೆ. ನಿಮ್ಮ ಮಕ್ಕಳು ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳಿಗೆ ನೀವು ಮಾತ್ರ ಜವಾಬ್ದಾರರು ಎಂದು ತಿಳಿದುಕೊಳ್ಳುವ ಮುನ್ನ ಬದುಕಿನಲ್ಲಿ ಸರಿ ಮತ್ತು ತಪ್ಪು ಎಂಬ ಎರಡು ಕವಲು ದಾರಿಗಳ ನಡುವೆ ನಿಮ್ಮ ಮಗು ಸಿಲುಕಿಕೊಂಡಾಗ ಮೌಲ್ಯವನ್ನು ತಮ್ಮದಾಗಿಸಿಕೊಂಡ ಮಕ್ಕಳು ಕಷ್ಟವಾದರೂ ಸರಿ, ಸರಿಯಾದ ಮಾರ್ಗವನ್ನು ಆಯ್ದುಕೊಳ್ಳುತ್ತಾರೆ. ತಪ್ಪು ಹಾದಿಯಲ್ಲಿ ನಡೆಯುವ ಆಯ್ಕೆಯನ್ನು ತಮ್ಮದಾಗಿಸಿಕೊಂಡವರು ಆರಂಭದಲ್ಲಿ ಸುಖವನ್ನೇ ಸೂರೆಗೊಂಡರೂ ಕೂಡ ಅನಿಶ್ಚಿತತೆಯ ಬದುಕು ಅವರದ್ದಾಗುತ್ತದೆ.
ನಿಮ್ಮ ಮಕ್ಕಳ ಬದುಕನ್ನು ಮೌಲ್ಯಗಳಿಂದ ತುಂಬ ಬೇಕೇ ಹೊರತು ಭಯದಿಂದಲ್ಲ.
ಒಂದು ಪ್ರಾಮಾಣಿಕ ಸಂಭಾಷಣೆ, ಚರ್ಚೆಯು ಸಂಬಂಧವನ್ನು ಉಳಿಸಬಲ್ಲದು …. ಆದರೆ ಒಂದು ಸುಳ್ಳು ಎಲ್ಲವನ್ನು ನಾಶಪಡಿಸಬಲ್ಲದು. ಒಬ್ಬ ವ್ಯಕ್ತಿಯ ತಪ್ಪು ನಿರ್ಧಾರ ಸಾಕಷ್ಟು ಜೀವಿಗಳ ಬದುಕಿನಲ್ಲಿ ಬಿರುಗಾಳಿಯನ್ನು ಎಬ್ಬಿಸಬಲ್ಲದು.
ಆದ್ದರಿಂದ ಪಾಲಕರೇ…. ನಿಮ್ಮ ಮಕ್ಕಳು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆಯೇ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಬೇಡಿ… ಬದಲಾಗಿ ನಿಮ್ಮ ಮಕ್ಕಳು ಭಾವನಾತ್ಮಕವಾಗಿ ಪ್ರಾಮಾಣಿಕವಾಗಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಿ.
ನಿಮ್ಮ ಮಕ್ಕಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆಯೇ ? ತಮ್ಮ ಆಯ್ಕೆಯ ಪರಿಣಾಮಗಳ ಹೊಣೆಯನ್ನು ಹೊರುತ್ತಾರೆಯೇ ಎಂದು ಪ್ರಶ್ನಿಸಿಕೊಳ್ಳಿ.
ಬಹುಶಹ ಆಸ್ತಿ ಅಂತಸ್ತುಗಳಿಗಿಂತ ಹೆಚ್ಚಿನದಾಗಿ ನಾವು ನಮ್ಮ ಮಕ್ಕಳಿಗೆ ಕೊಡಬೇಕಾದದ್ದು ಮೌಲ್ಯಗಳು ಎಂಬ ತಲೆತಲಾಂತರವಾಗಿ ಮುಂದುವರಿಸಲಾಗುವ ಆಸ್ತಿ.
ನಾವು ನಮ್ಮ ಮಕ್ಕಳಿಗೆ ಕೇವಲ ಓದು, ಯಶಸ್ಸು, ವಿಧೇಯತೆಗಳನ್ನು ಮಾತ್ರ ಕಲಿಸಿದರೆ ಸಾಲದು ಧೈರ್ಯದಿಂದ ಬದುಕುವ, ಸತ್ಯವನ್ನು ಒಪ್ಪಿಕೊಳ್ಳುವುದನ್ನು ಕೂಡ ಕಲಿಸಬೇಕು
.ಅಂತಿಮವಾಗಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದು….ಈ ಜಗತ್ತಿನಲ್ಲಿ ಮುಂದೆ ಬಾಳಿ ಬದುಕಬೇಕಾಗಿರುವ ಒಂದು ನಾಗರಿಕ ಸಮುದಾಯವನ್ನು ಎಂದು.
ಕೇತನ್ ಆತ್ಮಕ್ಕೆ ಶಾಂತಿಯನ್ನು ಕೋರುತ್ತ, ತಪ್ಪಿತಸ್ಥರಿಗೆ
ಶಿಕ್ಷೆ ದೊರೆಯಲಿ ಎಂಬ ಆಶಯದೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್



