ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಷಯ ತಿಳಿದ ನಂತರ ಖಂಡಿತ ತಂಗಿ ಹೀಗೆಲ್ಲಾ ಪ್ರತಿಕ್ರಿಯಿಸಿವಳು ಎಂಬುದು ಮೊದಲೇ ತಿಳಿದಿದ್ದ ಅಕ್ಕನಿಗೆ ದುಃಖ ಉತ್ತರಿಸಿ ಬಂದರೂ, ತಾನು ಕೂಡಾ ಅಳುತ್ತಾ ಕುಳಿತರೆ, ತಂಗಿಯನ್ನು ಸಮಾಧಾನ ಪಡಿಸುವವರು ಯಾರು? ಎಂದು ಯೋಚಿಸುತ್ತಾ, ತಂಗಿಯ ತಲೆಯನ್ನು ನಿಧಾನವಾಗಿ ಸಾಂತ್ವನ ಪಡಿಸುವಂತೆ ನೇವರಿಸಿದಳು. ಅವಳು ಅತ್ತು ಸಮಾಧಾನವಾಗುವರೆಗೂ ಹಾಗೆ ನೇವರಿಸುತ್ತಾ ಏನೂ ಮಾತನಾಡದೇ ಕುಳಿತಿದ್ದಳು. ಅವಳು ಸ್ವಲ್ಪ ಸಮಾಧಾನಗೊಂಡಳು ಎಂದು ಅರಿತ ಮೇಲೆ…. “ನಿನ್ನ ನೋವು, ಸಂಕಟ ಏನೆಂದು ನನಗೆ ಅರ್ಥವಾಗುತ್ತದೆ…. ದಯವಿಟ್ಟು ನಿನ್ನನ್ನು ನೀನು ಸಮಾಧಾನಪಡಿಸಿಕೋ…. ನಾವಿಬ್ಬರೂ ಈಗ ಮಾನಸಿಕವಾಗಿ ಗಟ್ಟಿಯಾಗಬೇಕಿದೆ…. ನಮ್ಮ ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಜೊತೆ ಬೇರೆ ಯಾರೂ ಇಲ್ಲ…. ಅಕ್ಕನಿಗೆ ಅವಳದಾದ ಕುಟುಂಬವಿದೆ…. ಎಲ್ಲಾ ಜವಾಬ್ದಾರಿಯನ್ನು ಅಕ್ಕನಿಗೆ ಹೊರಿಸಲು ಸಾಧ್ಯವಿಲ್ಲ…. ನಮ್ಮಿಬ್ಬರ ಕೈಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಪ್ರಯತ್ನ ಮಾಡೋಣ…. ವೈದ್ಯರು ಹೇಳಿದ್ದರು ಡಯಾಲಿಸಿಸ್ ಚಿಕಿತ್ಸೆ ಕೊಡಿಸಿದರೆ, ಅಮ್ಮ ಇನ್ನೂ ಸ್ವಲ್ಪ ದಿನ ಅಮ್ಮ ಜೀವಂತವಾಗಿರಬಹುದು…. ಅಮ್ಮನ ಎಲ್ಲಾ ನೋವು ಸಂಕಟಗಳು ಸ್ವಲ್ಪ ದಿನದ ಮಟ್ಟಿಗಾದರೂ ಸುಧಾರಿಸಬಹುದು….. ನೋಡೋಣ…ಹೇಗೆ ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳುತ್ತೇನೆ….. ಎಂದಳು. ಅಕ್ಕನ ಮಾತನ್ನು ಕೇಳಿದಾಗ ತಂಗಿಯ ಮುಖವರಳಿತು.

….”ಹಾಗೆಯೇ ಮಾಡುವ ಅಕ್ಕಾ….. ನಮ್ಮಿಂದ ಆಗಿದ್ದನ್ನು ನಾವು ಮಾಡೋಣ…. ನಮಗೆ ಆಶ್ರಯ ಕೊಟ್ಟಿರುವ ಎಸ್ಟೇಟ್ ನವರು ಮೊದಲಿಂದಲೂ ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ…. ಅವರು ಖಂಡಿತಾ ನಮಗೆ ಸಹಾಯ ಮಾಡುತ್ತಾರೆ… ಹಾಗಾಗಿ ನಾವು ಮಾಡಬೇಕಾಗಿದ್ದು ಏನು ಎಂಬುದನ್ನು ಕೇಳಿ ತಿಳಿದುಕೋ…. ಎಂದಳು. ಸರಿ ಎನ್ನುವಂತೆ ಅಕ್ಕ ತಯಾರಿಸಿದಳು…. “ಈಗ ಡಾಕ್ಟರ್ ರೌಂಡ್ಸ್ ಮುಗಿಸಿರುತ್ತಾರೆ…. ನಡಿ ವಾರ್ಡಿಗೆ ಹೋಗೋಣ…. ಮೊದಲು ನಿನ್ನ ಕಣ್ಣುಗಳನ್ನು ಒರೆಸಿಕೊ…. ನಮಗೆ ತಿಳಿದಿರುವ ವಿಷಯ ಅಮ್ಮನಿಗೆ ಗೊತ್ತಾಗುವುದು ಬೇಡ….. ಅಮ್ಮ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಾಳೆ… ಆದಷ್ಟೂ ಅಮ್ಮನ ಮುಂದೆ ನಾವು ಖುಷಿಯಿಂದ ಇರುವಂತೆ ನಟಿಸೋಣ…. ಇದಲ್ಲದೇ ನಮಗೆ ಬೇರೆ ದಾರಿ ಇಲ್ಲ….. ಅಮ್ಮನಿಗೆ ಈ ವಿಷಯಗಳು ತಿಳಿದರೆ, ಖಂಡಿತಾ ಪೂರ್ತಿ ಕುಸಿದು ಹೋಗುತ್ತಾಳೆ…. ನಾವೆಲ್ಲರೂ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಕೆಲಸಕ್ಕೆ ಸೇರಿ ನಂತರ ನಾವು ಮದುವೆಯಾಗುವುದನ್ನು ನೋಡಬೇಕು…. ಖುಷಿಯಿಂದ ಮೊಮ್ಮಕ್ಕಳನ್ನು ಮುದ್ದಾಡಬೇಕು…. ಅವರೊಂದಿಗೆ ಕಾಲ ಕಳೆಬೇಕು….ಎನ್ನುವ ತನ್ನಾಸೆಯ ಮಾತುಗಳನ್ನು ಆಗಾಗ ಹೇಳುತ್ತಲೇ ಇರುತ್ತಾಳೆ…. ಅಮ್ಮನಿಗೆ ಏನೂ ಆಗಿಲ್ಲ… ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ಆಶಯವನ್ನು ಅಮ್ಮನ ಮನಸ್ಸಿನಲ್ಲಿ ತುಂಬೋಣ…. ಯಾವುದೇ ಕಾರಣಕ್ಕೂ ತನ್ನ ಆರೋಗ್ಯ ಸ್ಥಿತಿ ಈ ರೀತಿ ಇದೆ ಎಂದು ತಿಳಿಯುವುದು ಬೇಡ…..

ಎಂದು ಅಕ್ಕ ಹೇಳಿದಾಗ ‘ಸರಿ’ ಎನ್ನುವಂತೆ ತಲೆಯಾಡಿಸುತ್ತಾ ದುಪ್ಪಟ್ಟಾದಿಂದ ಕಣ್ಣುಗಳನ್ನು ಮತ್ತು ಮುಖವನ್ನು ಒರೆಸಿ, ಆದಷ್ಟೂ ತಾನು ನಗುನಗುತ್ತಿರುವಂತೆ ಇರುವ ಪ್ರಯತ್ನ ಮಾಡಿದಳು. ತಂಗಿಯನ್ನು ನೋಡಿ ಮುಗುಳ್ನಕ್ಕು ಅವಳ ಹೆಗಲ ಮೇಲೆ ಕೈ ಹಾಕುತ್ತಾ…._ ಬಾ ನಡಿ ಹೋಗೋಣ”…. ಎಂದಳು ಈಗ ನಾನು ಅತ್ತಿರೋದು ಕಾಣೋದಿಲ್ಲವಲ್ಲವೇ? ಎಂಬಂತೆ ಪ್ರಶ್ನಾರ್ಥಕವಾಗಿ ಅಕ್ಕನನ್ನು ನೋಡಿದಳು ತಂಗಿ. ‘ಇಲ್ಲ’ ಎನ್ನುವಂತೆ ತಲೆ ಆಡಿಸಿದಳು, ಇಬ್ಬರೂ ವಾರ್ಡಿಗೆ ತೆರಳಿದಾಗ, ನರ್ಸ್ ತಾಯಿಗೆ ಚುಚ್ಚುಮದ್ದನ್ನು ಚುಚ್ಚುತ್ತಿರುವುದು ಕಂಡಿತು. ಅಮ್ಮ ನೋವಿನಿಂದ ಮುಖ ಹಿಂಡಿದ್ದು ಕಂಡಾಗ, ಇಬ್ಬರ ಎದೆಯಲ್ಲೂ ಏನೋ ಹರಿತವಾದದ್ದು ಚುಚ್ಚಿದ ಅನುಭವವಾಯಿತು. ಆದರೂ ತೋರಗೊಡದೆ…. “ಅಮ್ಮಾ ….ಡಾಕ್ಟರ್ ಏನು ಹೇಳಿದರು?… ಎಂದು ಇಬ್ಬರೂ ಕೇಳಿದಾಗ…. “ಏನೂ ತೊಂದರೆ ಇಲ್ಲ….ಇನ್ನೂ ಕೆಲವು ದಿನಗಳು ನಾನು ಇಲ್ಲಿಯೇ ಇರಬೇಕೆಂದು ಹೇಳಿದ್ದಾರೆ”… ಎಂದು ಹೇಳುತ್ತಾ ಸುಮತಿ ಇಬ್ಬರೂ ಮಕ್ಕಳ ಮುಖವನ್ನು ನೋಡಿದಳು. ಮಕ್ಕಳಿಬ್ಬರ ಕಣ್ಣುಗಳು ಅತ್ತು ಊದಿಕೊಂಡಿರುವಂತೆ ಅವಳಿಗೆ ಅನಿಸಿತು….. “ಏನಾಯ್ತು ಮಕ್ಕಳೇ?…. ನಿಮ್ಮಿಬ್ಬರ ಕಣ್ಣುಗಳು ಏಕೆ ಊದಿಕೊಂಡಿವೆ?…. ಎಂದು ಕೇಳಿದಾಗ,….”ಇಲ್ಲಮ್ಮಾ…. ಹಾಗೇನೂ ಇಲ್ಲ…. ನಿನಗೆ ಹಾಗೆ ಅನಿಸಿದೆಯಷ್ಟೇ”….. ಎಂದು ತಂಗಿ ಹೇಳಿದಾಗ, …. “ನೀನು ಯಾವಾಗ ಸುಳ್ಳು ಹೇಳುವುದನ್ನು ಕಲಿತುಕೊಂಡೆ?…. ನಿಜ ಹೇಳಿ….ಅದೇನಿದ್ದರೂ ನನಗೆ ತಿಳಿಸಿ” …. ಎಂದಳು ತುಸುಕೋಪದಿಂದ.

…”ಏನಿಲ್ಲಮ್ಮಾ…. ಅವಳು ಸುಳ್ಳು ಹೇಳಿಲ್ಲ…. ನಮಗೇನೂ ಆಗಿಲ್ಲ…. ನಿನಗೆ ಹಾಗೆ ಅನಿಸುತ್ತಿದೆ ಅಷ್ಟೇ….. ನಾವು ಹೊರಗೆ ಕುಳಿತಿದ್ದಾಗ ಗಾಳಿಯಲ್ಲಿ ಏನೋ ಕಸ ಬಂದು ತಂಗಿಯ ಕಣ್ಣಿಗೆ ಬಿತ್ತು…. ಅವಳು ಹಣ್ಣುಗಳನ್ನು ಉಜ್ಜಿಕೊಂಡಳು…. ಹಾಗಾಗಿ ಅವಳ ಕಣ್ಣುಗಳು ಹಾಗಿವೆ”…. ಎಂದಳು….. “ಹಾಗಾದರೆ ನಿನ್ನ ಕಣ್ಣು?”…. ತುಸು ಏರು ಧ್ವನಿಯಲ್ಲಿ ಸುಮತಿ ಪ್ರಶ್ನಿಸಿದಾಗ…. “ನಾನು ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲಮ್ಮಾ…. ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ರಾತ್ರಿ ಹೆಚ್ಚು ಸಮಯ ಓದುತ್ತಾ ಕುಳಿತಿದ್ದೆ… ಹಾಗಾಗಿ ನನ್ನ ಕಣ್ಣುಗಳು ಊದಿಕೊಂಡಿವೆ…. ಸುಮ್ಮನೆ ಏನೇನೋ ಆಲೋಚಿಸಿ ತಲೆಕೆಡಿಸಿಕೊಳ್ಳಬೇಡ”… ಎಂದಳು ತಂಗಿಯನ್ನು ನೋಡುತ್ತಾ. ತಂಗಿ ‘ಹೌದು’ ಎನ್ನುವಂತೆ ತಲೆ ಆಡಿಸಿದಳು. ಇಬ್ಬರೂ ಮಕ್ಕಳು ಕೊಟ್ಟ ಉತ್ತರ ಯಾಕೋ ಸರಿ ಇಲ್ಲ ಎಂದು ಸುಮತಿಗೆ ಅನಿಸಿತು. ಆದರೆ ಇನ್ನೂ ವಾದ ಮಾಡುವುದು ಬೇಡ ಎಂದು ಸುಮ್ಮನಾದಳು. ತಂಗಿ ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಾಯಿ ಮತ್ತು ಅಕ್ಕನ ಜೊತೆ ಕಾಲ ಕಳೆದಳು. ಇದರ ನಡುವೆ…. “ಅಕ್ಕಾ ….ದೊಡ್ಡಕ್ಕನಿಗೆ ಅಮ್ಮನ ಅನಾರೋಗ್ಯದ ವಿಷಯ ತಿಳಿಸಿದ್ದೀಯಾ? ಎಂದು ಕೇಳಿದಳು….. “ಇಲ್ಲ ಕಣೇ…. ಹೇಳಬೇಕು…. ಒಂದು ಕೆಲಸ ಮಾಡುತ್ತೀಯಾ? ನಾವು ಇಲ್ಲಿ ಯಾವುದಾದರೂ ಹೋಟೆಲ್ನಲ್ಲಿ ಊಟ ಮಾಡಿಕೊಳ್ಳೋಣ…. ಅಮ್ಮನಿಗೆ ಆಸ್ಪತ್ರೆಯಿಂದ ಊಟ ಸಿಗುತ್ತದೆ…. ಅಮ್ಮನಿಗೆ ಊಟ ಕೊಟ್ಟು, ನಂತರ ಹೊರಗೆ ಹೋಗಿ ನಾವು ಊಟ ಮಾಡೋಣ…. ನಂತರ ನೀನು ಅಕ್ಕನ ಮನೆಗೆ ಹೋಗಿ, ಅಮ್ಮ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂಬುದನ್ನು ತಿಳಿಸು… ಎಂದಳು. ತಂಗಿ ಸರಿ ಎನ್ನುವಂತೆ ತಲೆಯಾಡಿಸಿದಳು.


About The Author

Leave a Reply

You cannot copy content of this page

Scroll to Top