ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಒಂದೇ ಹೊಟ್ಟೆಯಲ್ಲಿ ಹುಟ್ಟಿದರೂ  ಒಂದೇ ಮನಸ್ಥಿತಿಇಲ್ಲ” ಎನ್ನುವ ಮಾತು ಇಂದು ಹಳ್ಳಿಯ ಪ್ರತಿ ಕೇರಿಯಲ್ಲೂ ಕೇಳಿಬರುತ್ತಿದೆ. ಅಣ್ಣ-ತಮ್ಮಂದಿರು ಮುಖ ನೋಡದಂತೆ ಆಗಿದ್ದಾರೆ, ಅಕ್ಕಪಕ್ಕದ ಮನೆಯವರು ಬೇಲಿ ಮೇಲೆ ಜಗಳಕ್ಕೆ ನಿಲ್ಲುತ್ತಾರೆ. ಹಿಂದೆ ಕಷ್ಟ ಬಂದಾಗ ಊರೇ ಒಂದಾಗಿ ನಿಲ್ಲುತ್ತಿದ್ದ ಕಾಲ ಈಗ ಕಥೆಯಾಗಿದೆ. ಯಾಕೆ ಹೀಗಾಯ್ತು?

1. ಹಿಂದಿನ ಹಳ್ಳಿ: 

ಒಂದು ಕುಟುಂಬದಂತೆ  50 ವರ್ಷಗಳ ಹಿಂದೆ ಹಳ್ಳಿ ಎಂದರೆ ದೊಡ್ಡ ಅವಿಭಕ್ತ ಕುಟುಂಬ. ಜಮೀನು ಹೆಚ್ಚಿತ್ತು, ಆಸೆ ಕಡಿಮೆ ಇತ್ತು. ಸುಗ್ಗಿ ಬಂತೆಂದರೆ ಎಲ್ಲರೂ ಸೇರಿ ಕೆಲಸ. ಮದುವೆ-ಮುಂಜಿ ಊರ ಹಬ್ಬ. “ನನ್ನದು” ಎನ್ನುವುದಕ್ಕಿಂತ “ನಮ್ಮದು” ಎನ್ನುವ ಭಾವನೆ ಗಟ್ಟಿಯಾಗಿತ್ತು. ಅಣ್ಣ ದೊಡ್ಡವನು, ತಮ್ಮ ಚಿಕ್ಕವನು – ಹಿರಿತನಕ್ಕೆ ಬೆಲೆ ಇತ್ತು. ಮನೆಯಲ್ಲಿ ಸಾಂಬಾರ್ ಮುಗಿದರೆ “ಒಂದು ಲೋಟ ಸಾಂಬಾರ್ ಕೊಡಮ್ಮ”  ಬೆಂಕಿಕಡ್ಡಿ ಖಾಲಿಯಾದರೆ ಒಂದೆರಡು ಬೆಂಕಿಕಡ್ಡಿ ಕೊಡಮ್ಮ ಅಂತ ಪಕ್ಕದ ಮನೆಯಲ್ಲಿ ಕೇಳಲು  ನಾಚಿಕೆ ಇರಲಿಲ್ಲ. ಏಕೆಂದರೆ ನಾಳೆ ಅವರಿಗೂ ಬೇಕಾಗಬಹುದು ಎನ್ನುವ ವಾಸ್ತವ ಅರಿವಿತ್ತು. ಕಷ್ಟ-ಸುಖ ಹಂಚಿಕೊಂಡರೆ ಹಗುರವಾಗುತ್ತದೆ ಎನ್ನುವ ಜೀವನಪಾಠವನ್ನು ಹೆತ್ತವರು ಹೇಳಿಕೊಡುತ್ತಿದ್ದರು.

2. ಬಿರುಕು ಬಿಡಲು ಕಾರಣವೇನು?  
ಭೂಮಿ ಸಣ್ಣದಾಯ್ತು, ಆಸೆ ದೊಡ್ಡದಾಯ್ತು  10 ಎಕರೆ 4 ಮಕ್ಕಳಿಗೆ ಹಂಚಿದರೆ ತಲಾ 2.5 ಎಕರೆ. ಈಗ ಅದೇ 2.5 ಎಕರೆ 3 ಮೊಮ್ಮಕ್ಕಳಿಗೆ ಹಂಚಬೇಕು. ಭೂಮಿ ತುಂಡಾದಂತೆ ಮನಸ್ಸುಗಳೂ ತುಂಡಾಗುತ್ತಿವೆ. “ಅವನಿಗೆ ರಸ್ತೆ ಬದಿ ಜಾಗ ಕೊಟ್ಟರು, ನನಗೆ ಬಂಜರು” ಎನ್ನುವ ಲೆಕ್ಕಾಚಾರ ಶುರುವಾಯ್ತು.

* ದುಡ್ಡು ಬಂತು, ದುರಹಂಕಾರ ತಂದಿತು  
ಒಬ್ಬ ಮಗ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿ ತಿಂಗಳಿಗೆ ಲಕ್ಷ ಸಂಪಾದಿಸಿದರೆ, ಹಳ್ಳಿಯಲ್ಲಿರುವ ತಮ್ಮನಿಗೆ ಕೀಳರಿಮೆ. “ನಾನು ಮಣ್ಣಲ್ಲಿ ದುಡಿದರೆ ಅವನು ಫ್ಯಾನ್ ಕೆಳಗೆ” ಎನ್ನುವ ಹೊಟ್ಟೆಕಿಚ್ಚು. ಹಬ್ಬಕ್ಕೆ ಬಂದವನು ಕಾರು ತೊಳೆಯುವಾಗ ಅಣ್ಣನ ಟ್ರ್ಯಾಕ್ಟರ್ ಮೂಲೆ ಸೇರುತ್ತದೆ.

* ಮೂರನೇ ದನಿ ಜೋರಾಯ್ತು  
ಹಿಂದೆ ಮನೆಯ ತೀರ್ಮಾನವನ್ನು ಹಿರಿಯರು ಮಾಡುತ್ತಿದ್ದರು. ಈಗ ಸೊಸೆ-ಅಳಿಯಂದಿರ ಮಾತು ಮನೆಯೊಳಗೆ ಬೆಂಕಿ ಹಚ್ಚುತ್ತದೆ. “ನಿಮ್ಮ ತಮ್ಮನ ಹೆಂಡತಿ ಹಾಗಂದ್ಲು”  ಅತ್ತೆ ಮಾವ ಅವಳನ್ನು ಮಾತ್ರ ಪ್ರೀತಿಯಿಂದ ಮಾತನಾಡಿಸುತ್ತಾರೆ,ಎಂಬ ಒಂದು ಚಾಡಿ ಮಾತು 40 ವರ್ಷದ ಸಂಬಂಧವನ್ನು ಮುರಿಯುತ್ತದೆ.

*  ಕಾಲವಿಲ್ಲ, ಕ್ಷಮೆಯೂ ಇಲ್ಲ  
ಮೊದಲು ಸಂಜೆ ಎಲ್ಲರೂ ಕಟ್ಟೆಯ ಮೇಲೆ ಸೇರುತ್ತಿದ್ದರು. ಮಾತುಕತೆಯಲ್ಲಿ ತಪ್ಪು ತಿಳುವಳಿಕೆ ಕರಗುತ್ತಿತ್ತು. ಈಗ ಎಲ್ಲರ ಕೈಯಲ್ಲಿ ಮೊಬೈಲ್. ಪಕ್ಕದ ಮನೆಯಲ್ಲಿ ಸಾವು ಆದರೆ ಸ್ಟೇಟಸ್ ಹಾಕಿ ಸುಮ್ಮನಾಗುತ್ತೇವೆ, ಹೆಗಲು ಕೊಡಲು ಸಮಯವಿಲ್ಲ.

3. ಕಳೆದುಕೊಂಡಿದ್ದೇನು?  
ನಾವು ಬರೀ ಸಂಬಂಧ ಕಳೆದುಕೊಳ್ಳಲಿಲ್ಲ, ನೆಮ್ಮದಿಯನ್ನೂ ಕಳೆದುಕೊಂಡೆವು. ಕೋರ್ಟ್-ಕಚೇರಿ ಅಲೆದು ದುಡ್ಡು, ಆರೋಗ್ಯ ಎರಡೂ ಹಾಳು. ಮಕ್ಕಳಿಗೆ “ಚಿಕ್ಕಪ್ಪ” ಎಂದರೆ ಕೋರ್ಟ್‌ನಲ್ಲಿ ಕಾಣುವ ಶತ್ರು ಎನ್ನುವ ಚಿತ್ರಣ ಕೊಡುತ್ತಿದ್ದೇವೆ. ಹಬ್ಬ ಬಂದರೂ ಅಡುಗೆ ಮನೆಗೆ 4 ಜನ ಸೇರುವುದಿಲ್ಲ.

4. ಮತ್ತೆ ಒಂದು ಮಾಡುವುದು ಹೇಗೆ?  
ಬದಲಾವಣೆ ಸರ್ಕಾರದಿಂದ ಬರಲ್ಲ, ನಮ್ಮ ಮನೆಯ ಒಳಗಿಂದಲೇ ಬರಬೇಕು.   ವಾರಕ್ಕೊಮ್ಮೆ 1 ಗಂಟೆ ಫೋನ್ ದೂರ ಇಟ್ಟು ಮನೆಯವರೆಲ್ಲ ಕೂತು ಮಾತಾಡಿ.  
 ತಂದೆ-ತಾಯಿ ಇದ್ದಾಗ ಅವರ ಮಾತೇ ಅಂತಿಮವಾಗಿರಬೇಕು. ಅವರು ಹೋದ ಮೇಲೆ
ಅಣ್ಣನ ಸ್ಥಾನ ದೊಡ್ಡದು.  
ಪಾರದರ್ಶಕತೆ ಇರಬೇಕು.ಆಸ್ತಿ, ದುಡ್ಡಿನ ವಿಷಯದಲ್ಲಿ ಮುಚ್ಚುಮರೆ ಬೇಡ. ಎಲ್ಲರೂ ಕೂತು ಬರೆದಿಟ್ಟುಕೊಳ್ಳಿ.  
ಯಾರಿಂದಲಾದರೂ ತಪ್ಪಾದಾಗ “ಅವನೇ ಮೊದಲು ಬರಲಿ” ಎನ್ನುವ ಅಹಂ ಬಿಡಿ. ನೀವು ಒಂದು ಹೆಜ್ಜೆ ಇಟ್ಟರೆ ಅವನು 2 ಹೆಜ್ಜೆ ಇಡುತ್ತಾನೆ.  ಅಪ್ಪ ಅಮ್ಮ
ಮಕ್ಕಳಿಗೆ ಮಾದರಿ ನಾವು ಅಣ್ಣ-ತಮ್ಮಂದಿರು ಜಗಳವಾಡಿದರೆ ನಾಳೆ ನಮ್ಮ ಮಕ್ಕಳೂ ಹಾಗೇ ಆಗುತ್ತಾರೆ.  

ಕೊನೆಯ ಮಾತು  
ಹಳ್ಳಿ ಎಂದರೆ ಮಣ್ಣಿನ ವಾಸನೆ ಮಾತ್ರವಲ್ಲ, ಮನುಷ್ಯತ್ವದ ವಾಸನೆಯೂ ಹೌದು. ಬೇಲಿ ಹಾಕಿಕೊಳ್ಳುವುದು ಸುಲಭ, ಪ್ರೀತಿಯ ಸೇತುವೆ ಕಟ್ಟುವುದು ಕಷ್ಟ. ಆದರೆ ಆ ಸೇತುವೆ ಒಮ್ಮೆ ಕಟ್ಟಿದರೆ 7 ತಲೆಮಾರು ನೆಮ್ಮದಿಯಿಂದ ದಾಟಬಹುದು. “ಕೆರೆಗೆ ಹನಿ ನೀರು” ಎನ್ನುವಂತೆ, ಬದಲಾವಣೆ ನಮ್ಮ ಒಂದು ನಗುವಿನಿಂದ, ಒಂದು ಕ್ಷಮೆಯಿಂದ ಶುರುವಾಗಲಿ.

ಏಕೆಂದರೆ ಕೊನೆಗೆ ಉಳಿಯುವುದು ಆಸ್ತಿಯಲ್ಲ, ಅನುಬಂಧ. ಅಣ್ಣ-ತಮ್ಮ, ಅಕ್ಕ -ತಂಗಿ, ಅಕ್ಕಪಕ್ಕ – ಇವರೇ ನಮ್ಮ ಮೊದಲ ಮತ್ತು ಕೊನೆಯ ಸಂಬಂಧ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾoತ್ರಿಕತೆಯಿಂದ ಸ್ವಲ್ಪ ದೂರವಿರೋಣ.


About The Author

Leave a Reply

You cannot copy content of this page

Scroll to Top