ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್


ಅವನನ್ನು ಮೆತ್ತಗೆ ಮೇಣವಾಗಿಸುವ ಶಬ್ದಗಳ ಎಲ್ಲಿಂದ ತರಲಿ
ಉರಿಯುವ ಕೋಪ ತಣ್ಣಗಾಗಿಸುವ ಪದಗಳ ಎಲ್ಲಿಂದ ತರಲಿ
ಸ್ವರ ನುಡಿಸುವ ಕೊಳಲೇಕೋ ಉಸಿರು ಮರೆತು ಮೂಲೆ ಸೇರಿದೆ
ಮನಕ್ಕೆ ಮುದ ನೀಡಿ ಖುಷಿಗೊಳಿಸುವ ಗೀತಗಳ ಎಲ್ಲಿಂದ ತರಲಿ
ಅವನು ಎಲ್ಲವನ್ನು ಮರೆಯಬೇಕೆಂದು ಮಧು ಶಾಲೆ ಸೇರಿದ್ದಾನೆ
ಮತ್ತೆ ಮತ್ತೆ ನನ್ನ ನೆನಪಾಗಿಸುವ ಚಿತ್ರಗಳ ಎಲ್ಲಿಂದ ತರಲಿ
ಖಾಲಿಯಾಗಿರುವ ಬಟ್ಟಲನ್ನೇ ನೋಡಿ ಬಡ ಬಡಿಸುತ್ತಾನೆ ಅವನು
ಜನುಮದ ಅನುಬಂಧ ತಿಳಿಸುವ ಉಸ್ತಾದ್ ಗಳ ಎಲ್ಲಿಂದ ತರಲಿ
ಅವನಿಗಂತೂ ಗೊತ್ತಿದೆ ದಿನ್- ರಾತ್ ಅರುಣಾಕೊರಗುತ್ತಾಳೆಂದು
ಉದಾಸೀನಕ್ಕೆ ಮದ್ದರೆದು ಮೆಚ್ಚಿಸುವ ತಂತ್ರಗಳ ಎಲ್ಲಿಂದ ತರಲಿ

ಅರುಣಾ ನರೇಂದ್ರ



