ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಾಮರದ ಚಿಗುರೆಲೆ ಅದೇಕೋ ಅತ್ತಿತ್ತ
ಅಲ್ಲಾಡದಾಗಿಹುದು
ಮಧು ಹೀರಿ ಹಾರುವ ದುಂಬಿ ಝೇಂಕಾರ
ಮಾಡದಾಗಿಹುದು
ಕೋಗಿಲೆ ಹಾಡುವುದ ಮರೆತು ಮೌನದಲಿ
ಕುಳಿತಿಹುದು
ನವಿಲು ನರ್ತಿಸದೆ ಮುಗಿಲೆಡೆ ದೈನ್ಯದಿಂದ
ನೋಡುತಿಹುದು

ತೆಂಗು ಬಾಳೆ ಅಡಿಕೆ ಶುಭಕಾರ್ಯಗಳಿಲ್ಲದೆ
ಮಂಕಾಗಿಹವು
ಮಲ್ಲಿಗೆ ಸಂಪಿಗೆ ಹೂಗಳು ಒಣಗಿ ಮೊಗವ
ಬಾಡಿಸಿಹವು
ಪ್ರಾಣಿಸಂಕುಲ ಮನುಜನಾಟಕೆ ಸಿಕ್ಕಿ ತತ್ತರಿಸಿ
ಹೋಗಿಹುದು
ಪಶುಗಳೆಲ್ಲವೂ ನಿನ್ನ ಕ್ರೂರ ಆರ್ಭಟಕೆ ಬೆದರಿ
ಕಂಗಾಲಾಗಿಹವು

ಬೀಸುಗಾಳಿಯಲಿ ಕಲುಷಿತ ವಿಷದ ದುರ್ಗಂಧ
ಬರುತಿಹುದು
ಹರಿವ ನದಿಗಳಲಿ ಮನುಜ ಬಿಸುಟಿದ ಕೊಚ್ಚೆ
ಕಸ ಬೆರೆತಿಹುದು
ಮಲಿನ ಕೆಸರು ನೀರಿನಲ್ಲಿ  ಜಲಚರಗಳ ಜೀವ
ಬರಡಾಗಿಹುದು
ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವವಿಲ್ಲದೆ ಕಾಡು
ಬರಿದಾಗಿಹುದು.

ಪ್ಲಾಸ್ಟಿಕ್, ಕಸ, ಕಾಗದ ಉರಿದು ಹೊಗೆ ಏರಿ
ಬಾನು ಕಪ್ಪಾಗಿಹುದು
ನಿನ್ನ ಸ್ವಾರ್ಥದಾಟಕೆ ಸಿಲುಕಿ ಹಸಿರು ಕಾನನ ಬೋಳಾಗಿಹುದು
ನಿನ್ನಹಂಕಾರ ನೋಡಿ ಸಹಿಸದೆ ಸಮುದ್ರರಾಜ ಕೋಪದಿ ಗರ್ಜಿಸಿಹನು
ತನ್ನಲೆಗಳ ಬೀಸಿ ಭೂತಾಯಿಯ ಬಾಚಿ ತಬ್ಬುತ ಸಾಂತ್ವನ ನೀಡಿಹನು

ಇಳೆಯ ಸಿಂಗರಿಸಿ ನಲಿಯಲು ಬಂದ ಋತು
ವಸಂತ ಬೆಚ್ಚಿಹನು
ಪೃಥ್ವಿಯ ಮೇಲಿನ ದಾರುಣ ಸ್ಥಿತಿಯ ಕಂಡು
ಮರುಗಿ ಹೋಗಿಹನು
ಸ್ವಚ್ಛತೆ ನಿರ್ಮಲತೆ ಕಾಪಾಡುತ ಎಚ್ಚರದಿಂದ
ಇರಿ ಎಂದಿಹನು
ನಿಸರ್ಗದ ಕಾಳಜಿ ವಹಿಸುತ ಸುಖದಿ ಬಾಳಿರಿ
ಎಂದು ಹರಸಿಹನು..


About The Author

Leave a Reply

You cannot copy content of this page

Scroll to Top