ರಂಗ ಸಂಗಾತಿ
ಗೊರೂರು ಅನಂತರಾಜು, ಹಾಸನ.
ರಂಗ ಪ್ರಯೋಗ
“ಭಾರತದ ಪಾಡು
ಮುತ್ತುಪಾಡಿಯ ಹಾಡು
ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ”

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶಿವಮೊಗ್ಗದ ರಂಗಾಯಣ ಕಲಾವಿದರು ಬೋಳುವಾರು ಮಹಮದ್ ಕುಂಞ ಅವರ ಕಾದಂಬರಿ ಆಧಾರಿತ ಸ್ವಾತಂತ್ರö್ಯದ ಓಟ ನಾಟಕವನ್ನು ಕಳೆದ ಭಾನುವಾರ ಪ್ರದರ್ಶಿಸಿ ಪ್ರೇಕ್ಷಕರ ಮನ ಸೆಳೆದರು. ಪ್ರಸಿದ್ಧ ಕಥೆಗಾರರು, ಕಾದಂಬರಿಕಾರರು, ನಾಟಕಕಾರರು ಆದ ಬೋಳುವಾರು ಮಹಮದ್ ಕುಂಞಯವರು ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂಸ್ಕೃತಿ ಮತ್ತು ಬದುಕನ್ನು ಸೃಜನಶೀಲ ಗದ್ಯಕ್ಕೆ ಪರಿಚಯಿಸಿದವರು. ತಮ್ಮ ಕಥೆಗಳ ಮೂಲಕ ಮುಸ್ಲಿಂ ಸಮುದಾಯದ ನಂಬಿಕೆ, ಆಚರಣೆ ಮತ್ತು ಸಾಮಾಜಿಕ ವಾಸ್ತವತೆಗಳನ್ನು ಚಿತ್ರಿಸಿದ್ದಾರೆ. ಇವರ ಸ್ವಾತಂತ್ರö್ಯದ ಓಟ ಒಂದು ಮೈಲುಗಲ್ಲು ಕಾದಂಬರಿ, ಇದಕ್ಕೆ ೨೦೧೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೧೯೪೭ರಲ್ಲಿ ದೇಶ ವಿಭಜನೆಯಿಂದ ಪ್ರಾರಂಭವಾಗುವ ಕಥಾವಸ್ತು ೬೦ ವರ್ಷ ಕಾಲ ಚಾಂದ್ ಅಲಿ ಎಂಬ ವ್ಯಕ್ತಿಕೇಂದ್ರಿತ ಕಥೆಯಾಗಿ ಆ ಕಾಲಘಟ್ಟದ ನೈಜ ಬದುಕನ್ನು ಚಿತ್ರಿಸುತ್ತದೆ. ಭಾರತ ಪಾಕಿಸ್ತಾನ ಗಡಿಯ ವಾಘಾದಲ್ಲಿ ಆರಂಭವಾಗುವ ಕಥೆ ಕೊನೆಗೆ ಅಲ್ಲಿಯೇ ಮುಕ್ತಾಯಗೊಳ್ಳುವ ಜಾತ್ಯಾತೀತ ಪರಿಕಲ್ಪನೆಯಲ್ಲಿ ರೂಪು ತೆಳೆದಿದೆ. ಗೋಮಾರದಹಳ್ಳಿ ಮಂಜುನಾಥ್ ನಾಟಕಕ್ಕೆ ರೂಪಾಂತರಿಸಿದ್ದು, ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ನಟರಾಜ್ ಹೊನ್ನವಳ್ಳಿಯವರದು. ಸಹ ನಿರ್ದೇಶನ ಸಲ್ಮಾ ದಂಡಿನ್. ಈ ಹಿಂದೆ ನಟರಾಜ್ ಹೊನ್ನವಳ್ಳಿಯವರು ಇದೇ ಕಲಾಭವನದಲ್ಲಿ ಪ್ರದರ್ಶಿಸಿದ್ಧ ಪಿ.ಲಂಕೇಶರ ಗುಣಮುಖ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿದ್ದರು. ಆಗ ನೋಡಿ ಬರೆದಿದ್ದು ನನ್ನ ರಂಗಪ್ರಯೋಗ (೨೦೧೧) ಕೃತಿಯಲ್ಲಿ ದಾಖಲಾಗಿದೆ.
ಒಂದು ಸಾವಿರದ ಒಂದು ನೂರಾ ಹನ್ನೊಂದು ಪುಟಗಳ ಸುಧೀರ್ಘ ಕಾದಂಬರಿಯನ್ನು ಮೂರೂವರೆ ಗಂಟೆಯಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವ ನಾಟಕವಾಗಿ ರೂಪಿಸುವಲ್ಲಿ ನಿರ್ದೇಶಕರ ಜಾಣ್ಮೆ, ಕಲಾವಿದರ ತಲ್ಲೀನ ನಟನೆ, ರಂಗ ಸಂಗೀತ, ವಸ್ತç ವಿನ್ಯಾಸ, ರಂಗ ಪರಿಕರ, ಬೆಳಕು ಈ ಎಲ್ಲವೂ ಒಗ್ಗೂಡಿದೆ. ನಾಟಕದ ಪೂರ್ವಾರ್ಧ ದೇಶ ವಿಭಜನೆ, ಅದರ ಪರಿಣಾಮಗಳನ್ನು ಹೇಳಿದರೆ ಉತ್ತರಾರ್ಧ ಭಾಗವು ಮುತ್ತುಪಾಡಿಯ ಗ್ರಾಮ್ಯ ಕತೆಯನ್ನು ಮನಮುಟ್ಟವಂತೆ ಹೇಳುತ್ತದೆ.

ದೇಶ ವಿಭಜನೆ ಪೂರ್ವ ಪಾಕಿಸ್ತಾನದ ಲಾಹೋರ್ ನಲ್ಲಿ ಸಿಖ್ ಮಾಲಿಕತ್ವದ ಕಬ್ಬಿಣದ ಕುಲುಮೆಯಲ್ಲಿ ಕೆಲಸ ಮಾಡುವ ಅನಾಥ ಹುಡುಗ ಚಾಂದ್ ಆಲಿ ನಾಟಕದ ಕೇಂದ್ರ ಪಾತ್ರ. ದೇಶ ವಿಭಜನೆಗೆ ದುರಂತ ಸಾಕ್ಷಿಯಾಗಿ ಕಂಡುಬರುವ ಈ ಪಾತ್ರ ನಾಟಕದುದ್ದಕ್ಕೂ ಪ್ರಧಾನ ಭೂಮಿಕೆಯಲ್ಲಿ ಮೂರು ಹಂತಗಳಲ್ಲಿ ಹದಿನೈದರ ವಯೋಮಾನದ ಹುಡುಗ, ಮದುವೆ ವಯಸ್ಸಿನ ಪ್ರಾಯಕ್ಕೆ ಬಂದ ಯುವಕ, ಇಳಿವಯಸ್ಸಿನ ವೃದ್ಧ ಹೀಗೆ ಬರುವ ಪಾತ್ರಗಳನ್ನು ಮೂರು ಕಲಾವಿದರ ಪ್ರಸ್ತುತಿಯಲ್ಲಿ ತನ್ನ ಸುತ್ತಲಿನ ಸನ್ನಿವೇಶ ಸಮಯಕ್ಕೆ ತಕ್ಷಣಕ್ಕೆ ಉದ್ಭವಿಸುವ ವಿದ್ಯಮಾನಗಳಿಗೆ ಬಾಗಿಯಾಗುತ್ತಾ ಕಥೆಯ ಪಾತ್ರ ಸಾಗುತ್ತದೆ. ಇಲ್ಲಿ ಭಾವನಾತ್ಮಕ ಸಂಬAಧಗಳು ಭಾವ್ಯಕ್ಯ ಭಾರತವನ್ನು ಎತ್ತಿ ಹಿಡಿಯುತ್ತವೆ.
ನಾಟಕದ ಪೂರ್ವಾರ್ಧದ ದೇಶ ವಿಭಜನೆ ಕಾಲದ ಘಟನೆಗಳು ಭಾವಾವೇಶಗಳ ರೋಚÀಕತೆ ಇಲ್ಲದೆ ತಣ್ಣಗೆ ನಿರೂಪಿಸುತ್ತಾ ಸಾಗುತ್ತದೆ. ತನ್ನ ಕುಟುಂಬದವರಿAದ ಬೇರ್ಪಟ್ಟು ಜೀವ ಉಳಿಸಿಕೊಳ್ಳುವ ಭರದಲ್ಲಿ ಭಾರತ ಪ್ರವೇಶಿಸುವ ಸಿಖ್ ಕುಟುಂಬದ ತನ್ವೀರ್, ಮೊಹಿಂದರ್ ಬಾಭಿ ಜೊತೆಗೆ ಚಾಂದ್ ಅಲಿ ಕೂಡ ಭಾರತ ಪ್ರವೇಶಿಸುತ್ತಾನೆ. ತಾನು ಲಾಹೋರ್ಗೆ ವಾಪಸ್ಸು ಹೋಗಬೇಕೆನ್ನುವ ಚಾಂದ್ ಅಲಿಯ ಆಸೆಗೆ ಅನೇಕ ಸಿಕ್ಕುಗಳು ಎದುರಾಗಿ ನಲುಗುತ್ತಾನೆ. ಬದುಕಿನ ತಿರುವಿನಲ್ಲಿ ಉತ್ತರ ಭಾರತದಿಂದ ದಕ್ಷಿಣದ ಮುತ್ತುಪ್ಪಾಡಿಗೆ ಬರುವ ಅನೇಕ ಅನಿರೀಕ್ಷಿತ ಘಟನೆಗಳು ಜರುಗುತ್ತವೆ. ಅಚಾನಕ್ ಹೊನ್ನು, ಹೆಣ್ಣು, ಆಸ್ತಿಯ ಅದೃಷ್ಟವು ಒಲಿದು ಬರುತ್ತದೆ. ನಾಟಕದ ಅಂತ್ಯದಲ್ಲಿ ಅದೇ ವಾಘಾ ಗಡಿಯಲ್ಲಿ ವಿಭಜನೆ ಕಾಲದಲ್ಲಿ ಕಳೆದು ಹೋದವರ ಪುನರ್ ಮಿಲನದೊಂದಿಗೆ ನಾಟಕ ಸುಖಾಂತ್ಯಗೊಳ್ಳುತ್ತದೆ.

ಉತ್ತರಾರ್ಧ ಮಹಾತ್ಮ ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ್ಯ ಗ್ರಾಮವಾಗಿ ಮುತ್ತುಪಾಡಿ ಕಾಣಿಸಿಕೊಳ್ಳುತ್ತದೆ. ಈ ನಡುವೆ ನಾಟಕದ ಮಧ್ಯೆ ನಡೆಯುವ ಗಾಂಧಿಹತ್ಯೆಗೆ ಚಾಂದ್ ಆಲಿ ಮೂಕಸಾಕ್ಷಿಯಾಗುತ್ತಾನೆ. ನನ್ನ ದೇವರು ಸತ್ತು ಹೋದ ಎಂದು ಹೇಳುವುದು ಮಾರ್ಮಿಕವಾಗಿದೆ. ಇಲ್ಲಿ ಗಾಂಧಿ ಪಾತ್ರವನ್ನು ರಂಗಕ್ಕೆ ತರದೆ ನಿರ್ದೇಶಕರು ಜಾಣ್ಮೆ ತೋರಿದ್ದಾರೆ. ಚರಕವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಹೊರಡುವ ಚಂದನ್ ಹೆಸರಿನಲ್ಲಿ ದಾಖಲಾಗಿ ಭಾರತಕ್ಕೆ ಬಂದ ಚಾಂದ್ ಅಲಿ ಗಾಂಧೀಜಿಯ ಗ್ರಾಮಸ್ವರಾಜ್ಯದ ಕನಸಿನ ಕೂಸಾಗಿ ಪ್ರತಿಬಿಂಬಿಸುತ್ತಾನೆ.

ನಾಟಕದ ಉತ್ತರಾರ್ಧ ಮುತ್ತುಪ್ಪಾಡಿ ಎಂಬ ಗ್ರಾಮದ ಸಾಮರಸ್ಯದ ಬದುಕಿನ ಸೊಗಸಾದ ಕತೆ ಸ್ವತಂತ್ರ ಆಯಾಮದಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ನಿರ್ದೇಶಕರು ಚಾಂದ್ ಅಲಿಯನ್ನೇ ಪ್ರಧಾನ ಎಳೆಯಾಗಿಸಿ ದೃಶ್ಯರೂಪಕದಲ್ಲಿ ಸರಾಗವಾಗಿ ನಾಟಕ ಸಾಗಿಸುವ ದಿಶೆಯಲ್ಲಿ ಬೇಕಾದ ಉಪಕಥೆಗಳನ್ನು ಆರಿಸಿಕೊಂಡಿದ್ದಾರೆ. ಹೀಗೆ ಸೇರಿದ ಉಪಕಥೆಯಲ್ಲಿ ಬ್ಯಾರಿ ಮೂಸಜ್ಜ, ಆತನ ಹೆಂಡತಿ ಕೈಜುನ್ನಿಸಾ ಮತ್ತು ಮನೆ ಬಿಟ್ಟು ಹೋಗಿ ಸೂಫಿ ಫಕೀರನಾಗಿರುವ ಇವರ ಮಗ ಬದ್ರುದ್ಧೀನ್ ಪ್ರಮುಖರು. ಚಾಂದ್ ಅಲಿಯನ್ನು ಫಕೀರ ಬದ್ರುದ್ಧೀನ್ ತನ್ನದೇ ಮನೆಗೆ ಬಿಟ್ಟು ಹೋಗುವುದು ನಾಟಕೀಯ ತಿರುವು. ಮುಂದೆ ಮೂಸಜ್ಜ ಸತ್ತು ನಂತರದಲ್ಲಿ ಉದ್ಭವವಾಗುವ ಇಸ್ಲಾಂ ಧರ್ಮದ ನಂಬಿಕೆಗಳು. ಆಸ್ತಿಗಾಗಿ ಕಣ್ಣಾಕುವ ಊರಿನ ಪಾತ್ರಗಳು. ಸಭೆ, ತೀರ್ಮಾನ, ಮದುವೆ ಸಂಪ್ರದಾಯ ಎಲ್ಲವೂ ರಂಗದ ಮೇಲೆ ಬಂದು ಹೋಗುತ್ತವೆ. ಮಗನಿಲ್ಲದ ಮನೆಯಲ್ಲಿ ಉಳಿದುಕೊಂಡವನೇ ಆಸ್ತಿ ಒಡೆಯನಾಗಿ ಮತ್ತು ಈ ಕಾರಣಕ್ಕಾಗಿಯೇ ಮಾತೃಭೂಮಿಗೆ ವಾಪಸ್ಸು ಹೋಗಲಾಗದೆ ಅಲ್ಲಿಯೇ ಉಳಿಯಬೇಕಾಗಿ ಬರುವ ಅಲಿಯ ಉಭಯ ಸಂಕಟಗಳು ಒಂದು ಕಡೆಯಾದರೇ, ಮಗನಂತೆ ಕಂಡ ಬದ್ರುದ್ಧೀನ್ ತಾಯಿ ಖೈಜುನ್ನಿಸಾಳ ಸಾವು, ಸಾವಿನ ಹೊತ್ತಲ್ಲೇ ಮತ್ತೆ ಮನೆಗೆ ಬಂದ ಫಕೀರ ಬದ್ರುದ್ದೀನ್ ಆಸ್ತಿಯನ್ನು ಅಲಿಗೆ ತ್ಯಾಗ ಮಾಡಿ ಉಪದೇಶ ಹೇಳಿ ಹೋಗುವುದು ಹೀಗೂ ಉಂಟೆ..! ಎನಿಸುತ್ತದೆ. ಖೈಜುನ್ನಿಸಾ, ರಾಘಣ್ಣ, ಪಂಡಿತ, ಸುಮತಿ, ಅನಂತು, ಲತೀಫ್, ಪೋಡಿಯಪ್ಪ ಹೀಗೆ ಬರುವ ಪಾತ್ರಗಳೆಲ್ಲಾ ಮುತ್ತುಪ್ಪಾಡಿ ಎಂಬ ಹಳ್ಳಿಯ ಸಾಮರಸ್ಯದ ಬದುಕನ್ನು ಸಾಕ್ಷೀಕರಿಸುತ್ತವೆ. ನಾಟಕದ ಅಂತ್ಯದಲ್ಲಿ ಚಾಂದ್ ಅಲಿ ಕಡೆಗೂ ತನ್ನಲ್ಲಿದ್ದ ಸಿಖ್ ಕುಟುಂಬದ ಒಡವೆ ಗಂಟನ್ನು ಅವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆಯುತ್ತದೆ.
ಇಡೀ ನಾಟಕದ ಶಕ್ತಿ ಕೇಂದ್ರ ಅದರ ಸಂಗೀತ ಮತ್ತು ವಸ್ತç ವಿನ್ಯಾಸ. ಭಜನ್, ಕವ್ವಾಲಿ, ಕಬೀರ ದೋಹೆಗಳು ರಂಗಸಂಗೀತವಾಗಿ ಹಾಡುಗಳು ಮತ್ತು ರಂಗದಲ್ಲಿ ನೃತ್ಯಗಳು ಹಿಡಿದಿಡುತ್ತವೆ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.




