ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್


ಸಿಡಿಲು ಅಬ್ಬರಿಸಿದರೂ ಮಳೆಯು ಭರವಸೆ
ಹುಟ್ಟಿಸಿದೆ ಗೆಳೆಯಾ
ಮಿಡಿದು ಅಂತರಂಗದಲಿ ಮೂಡಿದ ಭಾವಗಳ
ಮುಟ್ಟಿಸಿದೆ ಗೆಳೆಯಾ
ಸುರಿದ ಧಾರೆಯೊಳಗೆ ಮಿಂದ ಇಳೆಯಲಿ
ತಂಪಿನ ಸಿಂಚನವಲ್ಲವೇ
ಹರಿದು ಧಾರಾಕಾರವಾಗಿ ನದಿಯ ಸೇರುವಾಸೆ
ಮೆಟ್ಟಿಸಿದೆ ಗೆಳೆಯಾ
ವಸಂತ ತರುಲತೆಗಳಲಿ ಹಸಿರು ರಂಗವಲಿ
ಎರಚುತ ಬಂದನು
ಹೊಸತು ಕನಸುಗಳ ಬಿತ್ತಲು ಆಸೆಗಳ
ಕಟ್ಟಿಸಿದೆ ಗೆಳೆಯಾ
ಕುಣಿದ ವಸುಂಧರೆಯ ಒಡಲು ಹರುಷದ
ತೋರಣ ಬಿಡಿಸಿದೆ
ತಣಿದ ರೈತಾಪಿವರ್ಗಕೆ ಮೂಡಿದ ಭಯವನು
ಅಟ್ಟಿಸಿದೆ ಗೆಳೆಯಾ
ರಾಧೆಯ ಮನದಂಗಳದ ತೋಟದಿ ನಲಿದಿವೆ
ಬಣ್ಣಬಣ್ಣದ ಹೂವುಗಳು
ಮಧುರ ಅನುಭೂತಿಯಲಿ ಬದುಕ ಮೌಲ್ಯವ
ಗಿಟ್ಟಿಸಿದೆ ಗೆಳೆಯಾ
ಅನುರಾಧಾ ರಾಜೀವ್ ಸುರತ್ಕಲ್



