ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನ ಪ್ರಾಣದ ಇನಿಯ
ಎಲ್ಲಿರುವೆ  ಬರುವೆಯಾ
ಬಿಳಿ ಗೋಡೆಯ ನಡುವೆ ನಾನು
ನೆರಳಾಗಿ ಕರಗುತ್ತಿರುವೆ

ಒಮ್ಮೆ ನನ್ನ ಕಣ್ಣೊಳಗೆ
ಚಂದ್ರ ಬೆಳಕು ಹುಡುಕಿದವನು ನೀನು
ಇಂದು ಒಣಗಿದ ಹೂವಿನಂತೆ
ನನ್ನನ್ನು ದಾರಿಯಂಚೆ ಬಿಟ್ಟೆ

ಕೂದಲು ಉದುರಿದ ರಾತ್ರಿ
ಕನ್ನಡಿಯೊಳಗೆ ನಿಂತಿದ್ದು ನಾನು ಅಲ್ಲ
ಬೆಂಕಿಗೆ ಬಿದ್ದ ಕನಸೊಂದು
ನಿಧಾನವಾಗಿ ಬೂದಿಯಾಗುತ್ತಿತ್ತು

ಔಷಧದ ವಾಸನೆಯ ನಡುವೆ
ನನ್ನ ಉಸಿರು ಮುಳ್ಳಿನ ಹಾಸಿಗೆ
ಸಾವಿಗಿಂತ ಹೆಚ್ಚು ಕಾಡಿದ್ದು
ನೀ ಮೌನವಾಗಿ ದೂರಾದ ಹೆಜ್ಜೆ

ನನ್ನ ಎದೆಯೊಳಗೆ ಈಗ
ರಕ್ತವಲ್ಲ ವಿರಹ ಹರಿಯುತ್ತಿದೆ
ಕಣ್ಣೀರಲ್ಲ ಇದು
ಒಡೆದ ಹೃದಯ ಕರಗಿದ ಶಬ್ದ

ಒಮ್ಮೆ ಅಪ್ಸರೆ ಎಂದ ತುಟಿಗಳು
ಇಂದು ನನ್ನ ಹೆಸರನ್ನೇ ಮರೆತಿವೆ
ನಾನು ಒಣ ಮರದ ನೆರಳು
ನೀ ಬೇಸತ್ತ ಹಕ್ಕಿಯ ಹಾರಾಟ

ಕಿಟಕಿಯಾಚೆ ಚಂದ್ರ ಸುಡುತ್ತಾನೆ
ಒಳಗೇ ನೆನಪುಗಳು ಹೊತ್ತಿ ಉರಿಯುತ್ತವೆ
ನೀ ಬಾರದ ಪ್ರತಿರಾತ್ರಿ
ನನ್ನ ಜೀವ ಸ್ವಲ್ಪ ಸ್ವಲ್ಪ ಸಾಯುತ್ತದೆ

ನನ್ನ ಪ್ರಾಣದ ಇನಿಯ
ಒಮ್ಮೆ ಬರುವೆಯಾ
ಕೊನೆಯ ಉಸಿರ ತುದಿಯಲ್ಲಿ
ನಿನ್ನ ಹೆಸರೇ ಇನ್ನೂ ತೂಗುತ್ತಿದೆ


ಡಾ. ಹೆಚ್. ನಟರಾಜ್ ಆರ್ಯ.

About The Author

Leave a Reply

You cannot copy content of this page

Scroll to Top