ವಿಶೇಷ ಸಂಗಾತಿ
ಅಮ್ಮನ ಸೆರಗು
ಕವಿತಾ ಶ್ರೀನಿವಾಸ ನಾಯಕ್


ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಾಡಿಸುವ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಬರೆದ ಪ್ರಬಂಧವೊಂದು ನನ್ನ ಗಮನ ಸೆಳೆಯಿತು. ಶಿಕ್ಷಕರು ಕೊಟ್ಟ ವಿಷಯಕ್ಕೆ ಆ ಮಗು ತನ್ನ ತಾಯಿಯ ಸೆರಗಿನ ಮಹತ್ವವನ್ನು ತನ್ನದೇ ಆದ ಮುಗ್ಧ ತಿಳುವಳಿಕೆಯಲ್ಲಿ ಬರೆದಿತ್ತು. ಆ ಸಾಲುಗಳು ನನ್ನ ಹೃದಯಕ್ಕೆ ಎಷ್ಟು ಆಳವಾಗಿ ನಾಟಿದವೆಂದರೆ, ಇಂದು ನನ್ನ ಲೇಖನಿಗೆ ಅದೇ ಪ್ರೇರಣೆಯಾಯಿತು. ಹೌದು, ಅಮ್ಮನ ಸೆರಗನ್ನು ವರ್ಣಿಸಲು ಈ ಜಗದ ಪದಗಳೇ ಸಾಲದು; ಅದು ಕೇವಲ ಒಂದು ಬಟ್ಟೆಯ ತುಂಡಲ್ಲ, ಮಗುವಿನ ರಕ್ಷಣೆಯ ಮೊದಲ ಗೂಡು!
ವಿಶೇಷವಾಗಿ 70 ಮತ್ತು 80 ರ ದಶಕದ ಮಕ್ಕಳಿಗೆ ಅಮ್ಮನ ಸೆರಗಿನ ಸುಖ ಏನೆಂಬುದು ಚೆನ್ನಾಗಿ ಗೊತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಕ್ರಮೇಣ ಆ ಸೀರೆಯ ಸೆರಗು ಮಾಯವಾಗಿ, ಎಲ್ಲೆಡೆ ನೈಟಿಗಳು ಆವರಿಸಿಬಿಟ್ಟಿವೆ. ಆ ಬದಲಾವಣೆಯೊಂದಿಗೆ ನಾವೇನೋ ಆಧುನಿಕತೆಯತ್ತ ಸಾಗಿದ್ದೇವೆ ನಿಜ, ಆದರೆ ಆ ಸೆರಗಿನಲ್ಲಿದ್ದ ಬೆಚ್ಚಗಿನ ಪ್ರೀತಿ, ಆಪ್ತತೆ ಎಲ್ಲೋ ಒಂದು ಕಡೆ ಕಳೆದುಹೋಗುತ್ತಿದೆ ಅನಿಸುವುದು ಸುಳ್ಳಲ್ಲ.
ಅಮ್ಮನ ಸೆರಗು ಆ ದಿನಗಳಲ್ಲಿ ಕೇವಲ ಮಗುವಿಗೆ ಮಾತ್ರವಲ್ಲ, ಇಡೀ ಮನೆಗೇ ಒಂದು ರಕ್ಷಣಾ ಕವಚವಾಗಿತ್ತು. ಮನೆಯ ಒಳಗೆ ಅಮ್ಮ ಅಡುಗೆಮನೆಯಿಂದ ಹಿಡಿದು ಹಿತ್ತಲವರೆಗೂ ಕೆಲಸ ಮಾಡುವಾಗ ಆಕೆಯ ಸೊಂಟಕ್ಕೆ ಸುತ್ತಿಕೊಂಡಿರುತ್ತಿದ್ದ ಸೀರೆಯ ಸೆರಗಿನಲ್ಲಿ ಇಡೀ ಸಂಸಾರದ ನೆಮ್ಮದಿ ಅಡಗಿರುತ್ತಿತ್ತು.
ಮಕ್ಕಳಿಗೆ ಅಮ್ಮನ ಸೆರಗೇ ಸರ್ವಸ್ವ:
ಮಕ್ಕಳಿಗೆ ಅಮ್ಮನ ಸೆರಗು ಹಲವು ರೂಪಗಳಲ್ಲಿ ಆಸರೆಯಾಗುತ್ತಿತ್ತು. ಆಟ ಆಡಿ ಬಂದ ಮಗು ಮುಖ ಒರೆಸಿಕೊಳ್ಳಲು ಮೊದಲು ಹುಡುಕುತ್ತಿದ್ದುದೇ ಅಮ್ಮನ ಸೆರಗನ್ನು. ಬೇಸಿಗೆಯ ಸೆಕೆಗೆ ಬೀಸಣಿಕೆಯಾಗುತ್ತಿದ್ದದ್ದೂ ಅದೇ, ಚಳಿಗಾಲದ ನಡುಕಕ್ಕೆ ಬೆಚ್ಚಗಿನ ಹೊದಿಕೆಯಾಗುತ್ತಿದ್ದದ್ದೂ ಅದೇ. ಅಷ್ಟೇ ಏಕೆ, ಮನೆಗೆ ಯಾರಾದರೂ ನೆಂಟರು ಬಂದಾಗ ನಾಚಿಕೆಯಿಂದ ಓಡಿಹೋಗಿ ಅಮ್ಮನ ಸೆರಗಿನ ಮರೆಯಲ್ಲಿ ಅಡಗಿ ನಿಲ್ಲುತ್ತಿದ್ದ ಆ ಕ್ಷಣಗಳೇ ಒಂದು ಸುಂದರ ಕಾವ್ಯ. ತಾಯಿಯ ಸೆರಗನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಸಾಕು, ಈ ಜಗತ್ತಿನ ಯಾವುದೇ ಶಕ್ತಿ ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಅದಮ್ಯ ಧೈರ್ಯ ಮತ್ತು ಸುರಕ್ಷತೆಯ ಭಾವ ಆ ಪುಟಾಣಿ ಹೃದಯದಲ್ಲಿ ಮೂಡುತ್ತಿತ್ತು.
ಮನೆಯವರಿಗೂ ಅದೊಂದು ಭರವಸೆ:
ಕೇವಲ ಮಕ್ಕಳಿಗಷ್ಟೇ ಅಲ್ಲ, ಮನೆಯ ಹಿರಿಯರಿಗೂ ಅಮ್ಮನ ಸೆರಗು ಭರವಸೆಯ ಸಂಕೇತವಾಗಿತ್ತು. ಅಡುಗೆಮನೆಯಲ್ಲಿ ಸದಾ ದುಡಿಯುವ ತಾಯಿಯ ಸೆರಗಿನ ಅಂಚಿಗೆ ಮನೆಯ ಬೀಗದ ಕೈಗಳು ಕಟ್ಟಲ್ಪಟ್ಟಿರುತ್ತಿದ್ದವು. ಅದು ಕೇವಲ ಬೀಗದ ಕೈಯಲ್ಲ, ಇಡೀ ಮನೆಯ ಜವಾಬ್ದಾರಿ, ಸಂಸ್ಕಾರ ಮತ್ತು ತಾಯಿ ಮುನ್ನಡೆಸುವ ಸಂಸಾರದ ದಾರಿದೀಪ. ತಂದೆ ಆಯಾಸದಿಂದ ಕೆಲಸ ಮುಗಿಸಿ ಬಂದಾಗ, ಕಷ್ಟದ ದಿನಗಳಲ್ಲಿ ಅಮ್ಮ ಅದೇ ಸೆರಗಿನಿಂದ ತನ್ನ ಕಣ್ಣೀರನ್ನು ಮರೆಮಾಚಿ, ಎಲ್ಲರಿಗೂ ಧೈರ್ಯ ತುಂಬುತ್ತಿದ್ದಳು.
ಕಾಲ ಬದಲಾಗಿದೆ. ಇಂದು ಉಡುಗೆ-ತೊಡುಗೆಗಳು ಬದಲಾಗಿರಬಹುದು, ಬದುಕಿನ ಶೈಲಿ ಆಧುನಿಕವಾಗಿರಬಹುದು. ಆದರೆ ಅಮ್ಮನ ಸೆರಗು ನೀಡುತ್ತಿದ್ದ ಆ ನಿಷ್ಕಲ್ಮಷ ಪ್ರೀತಿ, ಮಮತೆ ಮತ್ತು ಸುರಕ್ಷತೆಯ ಭಾವ ಇಂದಿಗೂ ಶಾಶ್ವತ. ಬಟ್ಟೆಗಳು ಬದಲಾಗಬಹುದು, ಆದರೆ ತಾಯಿಯ ಮಡಿಲ ಒಲವು ಎಂದಿಗೂ ಬದಲಾಗಲಾರದು. ನಮ್ಮ ಬಾಲ್ಯದ ಆ ಸುಂದರ ದಿನಗಳನ್ನು ನೆನಪಿಸಿಕೊಳ್ಳುತ್ತಾ, ತಾಯ್ತನದ ಆ ಪರಮ ಸುಖಕ್ಕೆ ಮನದಲ್ಲೇ ನಮಿಸೋಣ.
ಕವಿತಾ ಶ್ರೀನಿವಾಸ್ ನಾಯಕ್
ಕಾರ್ಕಳ, ಉಡುಪಿ ಜಿಲ್ಲೆ.



