ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಧರ್ಮರಾಯನಿದ್ದ ಪುರಕ್ಕೆ ಬಂದ ದಾನವಾಂತಕ ಚಂಪಕಾನಗರಿಯ ಸಮಸ್ತ ವಿಚಾರಗಳನ್ನು ಅವನಿಗೆ ಹೇಳಿದ. ಹಂಸಧ್ವಜ ಕೊಟ್ಟಿದ್ದ ಸಕಲ ಸಂಪದಗಳನ್ನು ಯುದಿಷ್ಠಿರನಿಗಿತ್ತ.
ನಮ್ಮ ಯಾಗದ ಕುದುರೆಯದು ಈಗ ಉತ್ತರ ದಿಕ್ಕಿನಲ್ಲಿದ್ದ ಪಥವನ್ನು ಹಿಡಿದಿತ್ತು. ಆಗ ಗ್ರೀಷ್ಮ ಕಾಲ. ಬೇಸಿಗೆಯ ಬಿಸಿ ಸಂಪೂರ್ಣ ಧರೆಯನ್ನು ಇನ್ನಿಲ್ಲದಂತೆ ಸುಡತೊಡಗಿತ್ತು. ನಮಗೆ ಕಾಣುತ್ತಿದ್ದುದು ಸೂರ್ಯನುರಿಗೆ ಕಂಗೆಟ್ಟುಹೋಗಿದ್ದ ಕನಕಾಚಲ. ತನ್ನ ಕಣ್ಣಿಗೆ ಬೀಳದ ಹಾಗೆ ಈ ಪರ್ವತ ಮರೆಯಾಗಿನಿಂತಿದೆ ಎಂದು ಕ್ರೋಧಗೊಂಡ ಸೂರ್ಯ ಅದನ್ನು ಉರಿಸಿಹಾಕುವ ಸನ್ನಾಹದಲ್ಲಿದ್ದಾನೋ ಎನ್ನುವಂತೆ ಬಿರುಬಿಸಿಲು ಕನಕಾಚಲ ಪರ್ವತವನ್ನು ಬಿಸಿಬಿಸಿಯಾಗಿಸಿತ್ತು.
ಸೂರ್ಯನ ಬಿಸಿ ತಾಪವನ್ನು ಹೊತ್ತು ಮೆರೆಯುತಿರುವ ತೇರು, ನೀರಿದೆಯೇನೋ ಎಂಬ ಭ್ರಮೆ ಹುಟ್ಟಿಸುವ ಬಿಸಿಲು ಕುದುರೆ, ಗಾಳಿಯನ್ನು ಹೊತ್ತುತರುತ್ತಿರುವ ಸೈನಿಕರು, ಬಿಸಿಲೆಂಬ ಆನೆ ಇವೆಲ್ಲವೂ ಗ್ರೀಷ್ಮರಾಜನ ಚತುರಂಗ ಬಲದಂತೆ ತೋರುತ್ತಿದ್ದವು.
ಧರ್ಮಶಾಲೆಯಲ್ಲಿದ್ದ ಸುಂದರ ನೀರೆಯರು ದಾರಿಹೋಕರ ಕರಗಳಿಗೆ ನೀರನ್ನೆರೆಯುತ್ತಾ ಅವರ ದಾಹವನ್ನು ತಣಿಸುತ್ತಿದ್ದರು. ಬಯಲಿನಲ್ಲಿದ್ದ ತೊರೆಗಳು ಬಾಯಾರಿಕೆಯಿಂದ ಬಳಲಿದ್ದ ಮೃಗಗಳ ತೃಷೆಯನ್ನು ಮಣಿಸುತ್ತಿದ್ದವು. ಉಪ್ಪರಿಗೆಗಳ ಮೇಲೆ ಚೆಲುವೆಯರ ಜೊತೆ ದೇಹಸುಖವನ್ನು ಪಡೆಯುತ್ತಿದ್ದ ಕೆಲವರು ಸುಂದರಿಯರ ತುಟಿಗಳಿಂದ ಜಿನುಗುತ್ತಿದ್ದ ಅಮೃತದ ರುಚಿ ನೋಡುತ್ತಿದ್ದರು.
ಪ್ರದ್ಯುಮ್ನ, ವೃಷಕೇತು, ಯೌವನಾಶ್ವ, ನೀಲಧ್ವಜ, ಅನುಸಾಲ್ವ ಈ ಐದು ಮಂದಿ ನನಗೆ ಸಹವರ್ತಿಗಳಾಗಿದ್ದರು. ನನ್ನ ಜೊತೆಜೊತೆಗೇ ಹೆಜ್ಜೆ ಹಾಕುತ್ತಿದ್ದರು. ಈಗ ಹಂಸಧ್ವಜನೂ ನಮ್ಮೊಡನೆ ಸೇರಿಕೊಂಡಿದ್ದ.
ಹಾಗೆಯೇ ಮುಂದೆ ಮುಂದೆ ಹೋದ ಹಯವೀಗ ಪಾರಿಪ್ಲವ ಎಂಬ ಹೆಸರಿನ ದೇಶವನ್ನು ತಲುಪಿತ್ತು. ಅಲ್ಲಿಯ ನೆಲದ ಮೇಲೆ ಕುದುರೆ ಕಾಲಿಟ್ಟ ಕ್ಷಣದಲ್ಲಿಯೇ ನಾವೆಲ್ಲರೂ ವಿಸ್ಮಯಕ್ಕೀಡಾಗುವ ಪ್ರಸಂಗವದು ಎದುರಾಯಿತು. ಯಾಗಕ್ಕೆ ನಾವು ಆರಿಸಿದ ವಿಶೇಷಕುದುರೆಯದು ಗಂಡಾಗಿತ್ತು. ಪಾರಿಪ್ಲವದ ನೆಲದ ಸ್ಪರ್ಶವಾದೊಡನೆಯೇ ಹೆಣ್ಣುಗುದುರೆಯಾಗಿ ಬದಲಾಯಿತು. ಅಲ್ಲೇ ಇದ್ದ ಸರೋವರದ ನೀರನ್ನು ಕುಡಿದ ತಕ್ಷಣವೇ ಹುಲಿಯಾಯಿತು. ಇದಾವ ಬಗೆಯ ಮಾಯೆಯಿದು ಎಂದು ನಾವೆಲ್ಲರೂ ಸೋಜಿಗಪಟ್ಟೆವು. ನನ್ನಲ್ಲಿ ಆ ಕ್ಷಣಕ್ಕೆ ಮೂಡಿದ್ದು ಕೃಷ್ಣ ಸ್ಮರಣೆ. ನೆನೆದೆ ಶ್ರೀಹರಿಯನ್ನು. ಮೊದಲಿನಂತೆಯೇ ಗಂಡು ಕುದುರೆಯಾಯಿತು ನಮ್ಮ ಯಜ್ಞಾಶ್ವ. ಹೀಗೆ ನಮ್ಮ ಅಶ್ವವದು ತಕ್ಷಣದಲ್ಲಿಯೇ ಎರಡು ರೂಪಗಳನ್ನು ಹೊಂದುವುದಕ್ಕೆ ಕಾರಣವಿತ್ತು.
ಹಿಂದೊಮ್ಮೆ ಪರ್ವತರಾಜನ ಮಗಳಾದ ಪಾರ್ವತಿದೇವಿ ಶಿವನನ್ನು ಪೂರ್ಣಮನಸ್ಸಿನಿಂದ ಅರ್ಚಿಸುವೆನೆಂಬ ನಿರ್ಧಾರ ಮಾಡಿದಳು. ತನ್ನ ತಪಸ್ಸಿಗೆ ಸರಿಹೊಂದುವ ತಾಣವೆಲ್ಲಿದೆ ಎಂದು ಹುಡುಕಾಟ ಆರಂಭಿಸಿದಳು. ಪ್ರಶಾಂತಮಯವಾದ, ಚಿತ್ತಾಕರ್ಷಕವಾದ ಸ್ಥಳವನ್ನು ಅವಳ ಮನಸ್ಸು ಬಯಸುತ್ತಿತ್ತು.
ಹೀಗೆ ಅರಸಿ ಬರುತ್ತಿದ್ದ ಶಿವನರಸಿಗೆ ಕಾಣಿಸಿದ್ದು ನಯನಮನೋಹರವೆನಿಸುವ ಒಂದು ಸರೋವರ. ಹಂಸಗಳು ಜಲದಲ್ಲಿ ಈಜುತ್ತಿದ್ದವು. ದುಂಬಿಗಳು ಹಾರಾಡುತ್ತಿದ್ದವು. ಕಮಲಗಳು ಅರಳಿನಿಂತಿದ್ದವು. ಕೋಗಿಲೆಗಳ ಮಧುರ ಧ್ವನಿಯದು ಕೇಳಿಬರುತ್ತಿತ್ತು. ಹೊಳೆವ ಶುಭ್ರ ಜಲವದು ರತ್ನದಿಂದ ನಿರ್ಮಿಸಲಾದ ಹಾಸಿಗೆಯಂತೆ ತೋರುತ್ತಿತ್ತು. ಸುಂದರವಾದ ಮೀನುಗಳಿದ್ದವು. ಸರೋವರದ ಸವಿನೀರನ್ನು ಸವಿಯುವ ಚಕ್ರವಾಕ ಪಕ್ಷಿಗಳಿದ್ದವು. ಮೊಸಳೆಗಳಿದ್ದವು. ಸುಗಂಧಭರಿತವಾದ ಗಾಳಿ ಅಲ್ಲೆಲ್ಲಾ ಬೀಸುತ್ತಿತ್ತು. ತಂಪುತAಪಾದ ವಾತಾವರಣವಿತ್ತು. ಹೀಗೆ ಕಣ್ಣಿಗೆ ಶೋಭಾಯಮಾನವಾಗಿ ಕಾಣುತ್ತಿತ್ತು ಆ ಸರೋವರ.
ಕಮಲದೆಲೆಗಳ ಹಸಿರು ಕಾಂತಿ. ಕೆಂದಾವರೆಗಳ ಕೆಂಪು ಕಾಂತಿ. ಬಿಳಿದಾವರೆಗಳ ಬಿಳುಪಿನ ಕಾಂತಿ. ಹೊಂದಾವರೆಗಳ ಹಳದಿ ಕಾಂತಿ. ಹೀಗೆ ಹಲವು ಬಣ್ಣಗಳ ಬೆಳಕಿನಿಂದ ಕಂಗೊಳಿಸುತ್ತಿದ್ದ ಆ ಸರೋವರ ಕಾಮನಬಿಲ್ಲಿನ ನೆನಪನ್ನು ತರುವಂತಿತ್ತು.
ಶಿವಧ್ಯಾನಕ್ಕಿದು ಸೂಕ್ತ ಸ್ಥಳ ಎಂದು ತೋರಿತು ಗಿರಿಜೆಗೆ. ಸರೋವರವಿದ್ದ ತಾಣವನ್ನು ತನ್ನ ತಪಸ್ಸಿನ ಸ್ಥಾನವಾಗಿ ಆಯ್ಕೆ ಮಾಡಿದಳು. ಹೀಗೆ ಅಂದು ಪಾರ್ವತಿ ಆರಿಸಿದ ತಾಣವದು ಈಗ ನಮ್ಮ ಯಾಗದ ಕುದುರೆ ಪ್ರವೇಶಿಸಿದ್ದ ಪಾರಿಪ್ಲವ ದೇಶ.
ಆಶ್ರಮವೊಂದನ್ನು ನಿರ್ಮಿಸಿಕೊಂಡಳು ಪಾರ್ವತಿ. ಈಶ್ವರನ ಅನುಮೋದನೆಯೂ ದೊರಕಿತು. “ನಿನ್ನ ತಪಸ್ಸಿಗೆ ಯಾವ ತೊಂದರೆಯೂ ಎದುರಾಗದು ಇಲ್ಲಿ” ಎಂದು ಗಿರಿಜೆಯನ್ನು ಆಶೀರ್ವದಿಸಿದ ಗೌರೀರಮಣ. ಆ ತಾಣವೇ ಅನುದಿನದ ತಾಣವಾಯಿತು ಅವಳಿಗೆ. ತಪಸ್ಸಿನಲ್ಲಿ ಸುಖ ಕಂಡುಕೊಳ್ಳುವ ಯೋಗಿನಿಯಂತಾದಳು ಶಿವನ ಮಡದಿ. ಇದು ನಿಜಕ್ಕೂ ವಿಸ್ಮಯ. ಶಿವನ ಅರ್ಧ ಶರೀರ ಎನಿಸಿಕೊಂಡಿದ್ದ ಪಾರ್ವತಿ ಅವನಿದ್ದ ತಾಣವನ್ನು ತೊರೆದು ಇಲ್ಲಿಗೆ ಬಂದು ಮತ್ತೆ ಅವನನ್ನೇ ಧ್ಯಾನಿಸುವುದೆಂದರೆ, ಪೂಜಿಸುವುದೆಂದರೆ ಅದು ಭಕ್ತಿ ಪ್ರಕಟಣೆಯ ಇನ್ನೊಂದು ರೀತಿ. ದೇಹಗಳ ಅಂತರ ಅಧಿಕವಾದಾಗ ಪ್ರೀತಿ ಹೆಚ್ಚುವಂತೆ ಭಕ್ತಿಯೂ ಹೆಚ್ಚುವುದು ಎಂಬ ತತ್ವವನ್ನು ಸ್ವಯಂ ಮನಗಾಣಲು ಬಯಸಿದ್ದಳೋ ಏನೋ ಆ ಪಾರ್ವತಿದೇವಿ!
ಸರೋವರದ ನೀರಿನಲ್ಲಿ ಜಳಕ. ಬಳಿಕ ಶಿವಜಪದ ಪುಳಕ. ಇದು ಗಿರಿಜೆಯ ಅನುದಿನದ ಬದುಕಾಗಿಹೋಯಿತು.
ಅವಳ ತಪಜಪಗಳು ಆರಂಭಗೊAಡ ನಂತರ ಪೂರ್ಣ ವಾತಾವರಣವದು ಸುಂದರತೆಯನ್ನು ಪಡೆಯಿತು. ಬಿಸಿಗಾಳಿ ಬೀಸಲಿಲ್ಲ. ಗಿಡಮರಗಳು ಒಣಗಲಿಲ್ಲ. ನೀರ ಮೂಲಗಳು ಅಳಿಯಲಿಲ್ಲ. ಸದಾಕಾಲ ತಂಪುತಂಪಾದ ವಾತಾವರಣ. ಇಂಪುಇಂಪಾದ ಧ್ವನಿಯ ಅನುರಣನ. ಪಾರ್ವತಿಯಿದ್ದ ಕಾರಣದಿಂದಾಗಿ ಅಲ್ಲಿಯ ಪ್ರಾಣಿ ಪಕ್ಷಿಗಳು ತಮ್ಮ ವೈರತ್ವವನ್ನು ಮರೆತವು. ಶಿವಪೂಜೆಯನ್ನು ಅತೀವ ಭಕ್ತಿಭಾವದಿಂದ ನಡೆಸುತ್ತಿದ್ದಳು ಪಾರ್ವತಿ. ಜಗನ್ಮಾತೆಯಾದ ಪಾರ್ವತಿಗೇಕೆ ಶಿವನ ತಪಸ್ಸಿನ ಕಡು ಒಲವು! ಎಂದು ದೇವವೃಂದವೇ ಅಚ್ಚರಿಪಡುವ ರೀತಿಯಲ್ಲಿ ತ್ರಿನೇತ್ರನನ್ನು ಅರ್ಚಿಸುತ್ತಿದ್ದಳು ಭಕ್ತಿಭಾವನೇತ್ರೆ.
ಅದೊಂದು ದಿನ ಎಂದಿನಂತೆ ಪಾರ್ವತಿದೇವಿ ಶಿವಧ್ಯಾನದಲ್ಲಿದ್ದಳು. ಆಗಲೇ ಅಲ್ಲಿ ಕಾಣಿಸಿದ್ದು ರಾಕ್ಷಸನೊಬ್ಬನ ದೈತ್ಯ ನೆರಳು…


About The Author

Leave a Reply

You cannot copy content of this page

Scroll to Top