ಕಾವ್ಯ ಸಂಗಾತಿ
ಟಿ.ಪಿ.ಉಮೇಶ್ ಚಿತ್ರದುರ್ಗ
“ನಿನ್ನ ಕಣ್ಣುಗಳ ಮೌನ ನಗು”


ಮಾತುಗಳೆಲ್ಲ
ಸೋತು ಸುಮ್ಮನಾದಾಗ
ನಿನ್ನ ಕಣ್ಣುಗಳ ಮೌನ ನಗುವೇ
ನನ್ನ ಜೊತೆ ಮಾತನಾಡುತ್ತಿರುತ್ತದೆ!
ಹೊರಗೆ ಸಂಜೆ
ನಿಧಾನವಾಗಿ ಕತ್ತಲಾಗುತ್ತಿರಲು
ಒಳಗೆ ಮಾತ್ರ
ನಿನ್ನ ನಗು ಬೆಳಕಾಗಿ ಉಳಿಯುತ್ತದೆ!
ಕೈಯಲ್ಲಿದ್ದ ಪುಸ್ತಕ
ತೆರೆದ ಹಾಗೆಯೇ ಇರುತ್ತದೆ
ನಾವು ಮಾತ್ರ
ಒಬ್ಬರ ಮನಸ್ಸನ್ನೊಬ್ಬರು ಓದುತ್ತಿರುತ್ತೇವೆ!
ಹೋಗಬೇಕು ಎಂದು
ನೀನು ಎಷ್ಟೇ ಹೇಳಿದರೂ
ನಿನ್ನ ಹೆಜ್ಜೆಗಳು ಮಾತ್ರ
ನನ್ನ ಹತ್ತಿರವೇ ನಿಲ್ಲಲು ಬಯಸುತ್ತವೆ!
ಕಿಟಕಿಯಾಚೆ ಗಾಳಿ
ಪರದೆಗಳ ಜೊತೆ ಆಟವಾಡಿದಂತೆ
ಅವಳ ಬೆರಳುಗಳು
ನನ್ನ ಕನಸುಗಳನ್ನು ನೇವರಿಸುತ್ತಿರುತ್ತವೆ!
ಈ ಕ್ಷಣಕ್ಕೂ
ಒಂದು ಜೀವ ಇದ್ದರೆ
ಅದು ಖಂಡಿತ
ನಮ್ಮಿಬ್ಬರ ನಡುವೆ ಉಸಿರಾಡುತ್ತಿರುತ್ತಿತ್ತು!
ನನಗೆ ಗೊತ್ತು
ನಾಳೆ ದಿನ ಮತ್ತೆ
ತಳುಕಿನ ಜಗತ್ತು ನಿನ್ನನ್ನು ಕದಿಯಬಹುದು!
ಆದರೆ ಈ ಸಂಜೆಯಿರುಳು ಮಾತ್ರ
ನೀನು ಸಂಪೂರ್ಣವಾಗಿ ನನ್ನವಳು!
ಹುಚ್ಚ ನೀನು ಎಂದು ನಗುತ್ತಾ
ತಲೆಯನ್ನ ನನ್ನ ಭುಜದ ಮೇಲೆ ಇಡುತ್ತೀಯ
ನಾನು ಏನೂ ಹೇಳುವುದಿಲ್ಲ
ಕೆಲವೊಮ್ಮೆ ಪ್ರೀತಿಗೆ
ಬರೀ ಮಾತುಗಳಿಗಿಂತ
ಮೌನದ ಆಲಿಂಗನವೇ ಅಗಾಧ ಭರವಸೆ!
ಟಿ.ಪಿ.ಉಮೇಶ್ ಚಿತ್ರದುರ್ಗ



