ಪುಸ್ತಕ ಸಂಗಾತಿ
ಸುನೀತ ಕುಶಾಲನಗರ

ಜಯಲಕ್ಷ್ಮಿ ಕೆ, ಮಡಿಕೇರಿ
“ನಡೆದಷ್ಟೂ ದಾರಿ”



ಕೃತಿಯ ಹೆಸರು : ನಡೆದಷ್ಟೂ ದಾರಿ
ಲೇಖಕಿ : ಜಯಲಕ್ಷ್ಮಿ ಕೆ ಮಡಿಕೇರಿ
ಪುಟಗಳು : 188
ಬೆಲೆ : 230.
ಪ್ರಕಾಶಕರು : ಅಂಬಾರಿ ಪ್ರಕಾಶನ
ಕುವೆಂಪುನಗರ, ಮೈಸೂರು
ವೃತ್ತಿಯಲ್ಲಿ ಒಬ್ಬ ಅಧ್ಯಾಪಕಿಯಾಗಿ ಜಯಲಕ್ಷ್ಮಿ ಯವರು ಚಿರಪರಿಚಿತರು. ಪ್ರವೃತ್ತಿಯಿಂದ ಬರೆಹಗಾರ್ತಿಯಾಗಿ ಕೊಡಗು ಜಿಲ್ಲೆಯಲ್ಲಿ ಗುರುತ್ತಿಸಿಕೊಂಡವರು. “ನಡೆದಷ್ಟೂ ದಾರಿ” ಇವರ ಮೂರನೆಯ ಕೃತಿ. ಮೊದಲನೆಯದು ಚಪ್ಪಾಳೆಗೂ ಬೆಲೆಯಿದೆ.ಎರಡನೆಯದು ಮತ್ತೆ ವಸಂತ ಆಗಿದ್ದು ಈ ಕೃತಿ ರಾಜ್ಯ ಮಟ್ಟದ ಆಜೂರ ಪ್ರಶಸ್ತಿ, ಮುನಿ ಗಂಗಮ್ಮ ಪ್ರಶಸ್ತಿ ಮತ್ತು ಉಮಾ ಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದೆ.
‘ ನಡೆದಷ್ಟೂ ದಾರಿ’ ಪುಸ್ತಕವನ್ನು ಓದುತ್ತಾ ಹೋದಂತೆ ಪುಸ್ತಕ ಮುಗಿಯುವವರೆಗೂ ಮುಚ್ಚಿಡಲಾಗಷ್ಟು ಕುತೂಹಲ ತಂದುಕೊಟ್ಟಿತು.ಲೇಖಕಿ ಬಳಸಿದ ಭಾಷೆ, ಭಾಷೆಯ ಮೇಲಿನ ಹಿಡಿತ, ಗಟ್ಟಿತನ ನಿಜಕ್ಕೂ ಆಶ್ಚರ್ಯ ಮೂಡಿಸಿತು. ಇವರು ಸಾಹಿತ್ಯ ಪರಂಪರೆಯನ್ನು ಓದಿಕೊಂಡು ವರ್ತಮಾನಕ್ಕೂ ಅಪ್ಡೇಟ್ ಆಗುತ್ತಿದ್ದಾರೆ ಎಂದು ಈ ಕೃತಿಯೇ ಸಾರಿ ಹೇಳಿದೆ.
“ನಡೆದಷ್ಟೂ ದಾರಿ ಪಡೆದಷ್ಟೂ ಭಾಗ್ಯ” ಈ ಲೇಖನದಲ್ಲಿ ಬುದ್ಧಿವಂತ ವಿದ್ಯಾರ್ಥಿಯೊಬ್ಬ ಕಲಿಕೆಯಲ್ಲಿ ಆಸಕ್ತಿ ಹೀನನಾಗುವುದಕ್ಕೆ ಕಾರಣ ಮತ್ತು ಅದನ್ನು ಸೂಕ್ಷ್ಮವಾಗಿ ಗಮನಿಸುವ ಅಧ್ಯಾಪಕಿ ಲೇಖನದ ಮೂಲಕ ಕಲಿಯಲು ವಿಷಯದ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಕೊಡಬೇಕು. ಪೋಷಕರು ಒತ್ತಡ ಹೇರಬಾರದು ಎಂದು ಹೇಳುತ್ತಾರೆ.
‘ಬದುಕು ರೂಪಿಸುವ ಶಿಲ್ಪಿಗಳ ಬದುಕು’ ಎಂಬ ಲೇಖನದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಶ್ರಮ,ಪಡೆಯುತ್ತಿರುವ ಕಡಿಮೆ ವೇತನ, ಪವಿತ್ರ ವೃತ್ತಿ ಎಂದು ಅರ್ಪಿಸಿಕೊಳ್ಳುವ ಇವರು ಎಲ್ಲೋ ಅಲಕ್ಷಿತರಾಗುತ್ತಿದ್ದಾರೆ. ಇವರಿಗೆ ಕೆಲಸದ ಒತ್ತಡ ಹೇರಿದರೆ ಸರ್ಕಾರಿ ಶಿಕ್ಷಕರಿಗೆ ಬೋಧನೇತರ ಕಾರ್ಯಗಳ ಹೊರೆ ಎಂದು ಮುಕ್ತವಾಗಿ ಈ ಲೇಖನದಲ್ಲಿ ಶಿಕ್ಷಕರ ಬವಣೆಯನ್ನು ಬಿಚ್ಚಿಡುತ್ತಾರೆ.
ಇವರ ಒಂದೊಂದು ಲೇಖನದ ವಸ್ತು ಸಾಮಾನ್ಯ ಅನಿಸಿದರೂ ಓದುತ್ತಾ ಅದರ ಗಹನತೆ ಆಳವಾದದ್ದು ಎಂದು ವೇದ್ಯವಾಗುತ್ತದೆ. ಜಯಲಕ್ಷ್ಮಿಯವರ ಲೇಖನಗಳ ಶೀರ್ಷಿಕೆಗಳ ಆಕರ್ಷಣೆ ಮತ್ತೊಂದು ವಿಶಿಷ್ಟವೆಂಬುದನ್ನು ಹೇಳಲೇಬೇಕಾಗುತ್ತದೆ. ಉದಾಹರಣೆಗೆ “ಕರಿಹಲಗೆಯ ಹಿಂದೆ ಕರಗುತ್ತಿದೆ ಕಾಯಗಳು”, “ಮನ ಮರುಭೂಮಿಯಾಗುವ ಮುನ್ನ “ಹೀಗೆ ವೈವಿಧ್ಯಮಯ ಶಿರೋನಾಮೆಗಳೇ ಲೇಖನಗಳನ್ನು ಓದುವಂತೆ ಕುತೂಹಲ ಮೂಡಿಸುತ್ತವೆ.
‘ಮಕ್ಕಳ ಹದಿಹರೆಯ’ ಲೇಖನದಲ್ಲಿ ಅಮ್ಮ,ತಾಯಿ ಎನ್ನುವ ಪದಕ್ಕೊಂದು ಪರಿಪೂರ್ಣ ವ್ಯಾಖ್ಯಾನ, ಆಕೆಯ ಕೆಲಸ ಕಾರ್ಯಗಳಿಗೊಂದು ಸೀಮಿತ ರೇಖೆ ಇನ್ನೂ ಸೃಷ್ಟಿಯಾಗಿಲ್ಲ. ಆಗಲು ಸಾಧ್ಯವೂ ಇಲ್ಲ. ದೇವರ ಈ ಅಪೂರ್ವ ಕೊಡುಗೆಯನ್ನು ಪದಪುಂಜಗಳಿಂದ ಬಿಂಬಿಸಲು ಸಾಧ್ಯವೇ? ಎಂದು ಕೇಳಿರುವುದು ಸದಾ ಕಾಡುವ ವಾಕ್ಯ ಮತ್ತು ಬದುಕಿನ ವಾಸ್ತವ.
‘ನಾನೂ ಕವಿಯಾಗಬೇಕು’
ಕವಿಯಾಗುವ ನಾನು ಮೊದಲು ಕಿವಿಯಾಗಬೇಕು ಮತ್ತು ಸಾಕಷ್ಟು ಓದಿಕೊಳ್ಳಬೇಕು.ಸಾಗರದಷ್ಟು ಓದಿದರೆ ಸಾಸಿವೆಯಷ್ಷು ಜ್ಞಾನ ವೃದ್ಧಿಗೆ ಸಾಧ್ಯ ಮತ್ತು ಆ ಮೂಲಕ ಭಾಷೆಯ ಹಿಡಿತ ಸಿದ್ಧಿಸುತ್ತದೆ ಎಂಬ ಇವರ ಅಭಿಪ್ರಾಯ ಬರೆಹಗಾರರೊಳಗೆ ಜಾಗ್ರತೆ ಮೂಡಿಸುವುದರ ಜೊತೆಗೆ ಮೆಲ್ಲಗೆ ತಿವಿದಂತೆ ಭಾಸವಾಗುತ್ತದೆ.
ಚಪ್ಪಾಳೆ ಗಿಟ್ಟಿಸಿಕೊಳ್ಳುವವರಿಗೆ ಇತರರಿಗೂ ಚಪ್ಪಾಳೆ ಕೊಡುವ, ಪ್ರಶಂಸಿಸುವ ಗುಣ ಇರಬೇಕು ಎನ್ನುವ ಇವರು ಹತ್ತಾರು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕೆಲವೊಂದು ಉದಾಹರಣೆಗಳನ್ನು ಕೊಡುವುದರ ಮೂಲಕ ಈ ಲೇಖನದಲ್ಲಿ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
‘ ಪುಸ್ತಕಂ ಹಸ್ತ ಭೂಷಣಂ’. ಎಂಬ ಲೇಖನದಲ್ಲಿ ಒಳ್ಳೆಯ ಪುಸ್ತಕಗಳೆಂದರೆ “ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇದಾವಿಗಳ ಜೀವನ ಸರ್ವಸ್ವ ” ಆಂಗ್ಲಕವಿ ಮಿಲ್ಟನ್ ರವರ ಅದ್ಭುತ ಮಾತನ್ನು ಉಲ್ಲೇಖಿಸುತ್ತಾ ಪುಸ್ತಕದ ಮಹತ್ವವನ್ನು ವೇದ್ಯವಾಗಿಸಿದ್ದಾರೆ.
ತುಟಿಯಂಚಿನಲ್ಲಿ ನಗು ತರಿಸಿದ ಲೇಖನ ‘ಗೋಳಿನ ದನಿಗೆ ಕಿವಿಗಳಿಲ್ಲ’. ಈ ಲೇಖನವನ್ನು ಓದುತ್ತಾ ಹೋದಂತೆ ಧನಾತ್ಮಕ ಚಿಂತನೆ ಮತ್ತು ಮಾತು ಕೊಡುವ ಆತ್ಮ ವಿಶ್ವಾಸ ಇವುಗಳ ಕೆಲವು ನಿದರ್ಶನಗಳೊಂದಿಗೆ ಹೇಗೆ ಬದುಕನ್ನು ಸುಖದ ಸುಗ್ಗಿಯಾಗಿಸಬಹುದು ಎಂಬುದರ ಬಗ್ಗೆ ಇವರ ಅನಿಸಿಕೆ ನಿಜಕ್ಕೂ ವಾಸ್ತವ ಅನಿಸಿತು.’ ನೋವಲ್ಲೂ ನಲಿಯುವವನ ಸುತ್ತಲೇ ಈ ಜಗವೆಲ್ಲಾ ‘ ಈ ಮಾತು ನಮ್ಮ ಆಸುಪಾಸಿನ ಸತ್ಯ ಎನಿಸುವಷ್ಟು ನಮ್ಮನ್ನು ಸೆಳೆಯುತ್ತಾ ಹೋಗುತ್ತದೆ ಮತ್ತು ಅಗತ್ಯ ಬರೆಹ ಕೂಡಾ.
“ಹೇಗೆ ಬೇಕಾದರೂ ಅರ್ಥೈಸಿಕೊಳ್ಳಿ” ಎಂಬ ಲೇಖನದಲ್ಲಿ ನಾವು ದಿನ ನಿತ್ಯ ಮಾಡುವ ವ್ಯಾಕರಣ ದೋಷಗಳು ವ್ಯಾಕರಣದ ಮಹತ್ವ ಹಾಗೂ ಗಮನಿಸಬೇಕಾದ ಅಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.ಇಲ್ಲಿ ಇವರ ಭಾಷಾ ಪ್ರೇಮ ಧಾರಾಕಾರವಾಗಿ ಅನಾವರಣವಾಗಿದೆ. ಹಾಗೆ ಮುಂದುವರೆಯುತ್ತಾ ಹಬ್ಬಗಳು ಹೇಗೆ ನಮಗೆ ಉತ್ಸಾಹಕಾರಿ ಹಾಗೂ ಬದುಕಿಗೆ ಜೀವಂತಿಕೆ ತುಂಬುವ ಸೆಲೆ ಎಂಬುದನ್ನು ತಮ್ಮ ಅನುಭವ ಮೂಸೆಯಲ್ಲಿ ‘ಜೀವನೋತ್ಸಾಹ ತುಂಬುವ ಹಬ್ಬಗಳು ‘ ಎಂಬ ಲೇಖನದ ಮೂಲಕ ಅನುಭಾವವಾಗಿಸಿದ್ದಾರೆ.
ಪುಸ್ತಕ ಸಂಸ್ಕೃತಿಯಿಂದ ಹೇಗೆ ಪ್ರಬುದ್ಧರಾಗಬಹುದು ಎಂದು ಹೇಳುತ್ತಾ ಹವ್ಯಾಸಗಳಲ್ಲಿ ಅತ್ತ್ಯುತ್ತಮ ಹವ್ಯಾಸ ಓದುಗಾರಿಕೆ ಎನ್ನುತ್ತಾರೆ. ಹೌದು! ಎಳೆವೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡರೆ ಭಾಷಾ ಗಟ್ಟಿತನ ,ಮಾತನಾಡುವ ಧೈರ್ಯ ಆವರಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂಬುದನ್ನು ಎಳೆವೆಯಿಂದಲೇ ವಿದ್ಯಾರ್ಥಿಗಳಲ್ಲಿ ಶಿಕ್ಷಕರಾಗಿ, ಹಿರಿಯರಾಗಿ ತುಂಬಬೇಕಿದೆ ಎನ್ನುತ್ತಾರೆ.
“ಹಾಸ್ಯ ಕವಿ ಬೀಚಿ ಸವ್ಯಸಾಚಿ ” ಎಂಬ ಚೆಂದದ ಶೀರ್ಷಿಕೆಯ ಲೇಖನದಲ್ಲಿ “ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೆ ಸ್ವಾಗತ” ಹಾಸ್ಯ ಬ್ರಹ್ಮ ಬೀಚಿಯವರ ಆತ್ಮಕಥನದಿಂದ ಆಯ್ದ ಸಾಲುಗಳನ್ನು ಬಳಸಿ ಬೀಚಿಯವರ ಸಾಹಿತ್ಯ ಸಾಧನೆಯನ್ನು ಸ್ಮರಿಸಿರುವುದು ಇವರ ಓದಿನ ವಿಸ್ತಾರ ಮತ್ತು ಅಧ್ಯಯನವನ್ನು ಎತ್ತಿ ಹಿಡಿಯುತ್ತದೆ.
ಈ ಕೃತಿಯಲ್ಲಿ ಶಿಕ್ಷಣವಿದೆ. ಸಂಸ್ಕೃತಿ, ಶಿಸ್ತು, ಸಂಸ್ಕಾರ, ಸಂಪ್ರದಾಯ ಎಲ್ಲವನ್ನು ಒಳಗೊಂಡ ಲೇಖನಗಳಿವೆ.ಮನಃಶಾಸ್ತ್ರಜ್ಞರ ಅಭಿಪ್ರಾಯಗಳು, ಶಿಕ್ಷಣ ತಜ್ಞರ ಸಲಹೆಗಳು, ಕವಿವಾಣಿಗಳು, ವಿಜ್ಞಾನಿಗಳ ಜ್ಞಾನ, ಲೋಕ ಜ್ಞಾನ ಇತ್ಯಾದಿ ವಿಚಾರಧಾರೆಗಳನ್ನು ಈ ಕೃತಿ ಕಟ್ಟಿಕೊಡುತ್ತದೆ.ಬಸವಣ್ಣನೆಂಬ ಸಾಧನೆಯ ಪ್ರತಿರೂಪದಿಂದ ಹಿಡಿದು ವೈವಿಧ್ಯಮಯ ವಸ್ತುಗಳನ್ನು ಇಲ್ಲಿನ ಲೇಖನಗಳು ಹೊಂದಿವೆ. ಶ್ರೀ ಸುಬ್ರಾಯ ಸಂಪಾಜೆಯವರು ಮುನ್ನುಡಿಯ ಮೂಲಕ “ಈ ಕೃತಿ ಒಂದು ಶಿಕ್ಷಣ ಸಂಹಿತೆಯೇ ಸರಿ ” ಎಂದು ಉಲ್ಲೇಖಿಸಿರುವುದು ಕೃತಿಯ ತೂಕವನ್ನು ಹೆಚ್ಚಿಸಿದೆ.. ಖ್ಯಾತ ಬರೆಹಗಾರ್ತಿ ಸ್ಮಿತಾ ಅಮೃತರಾಜ್ ಬೆನ್ನುಡಿಯ ಮೂಲಕ ಓದಿದ ನಂತರ ಬಹಳ ಕಾಡುವ ಬರೆಹ ಎಂದು ಹೇಳಿರುವುದು ಇವರೊಬ್ಬರು ಸಮರ್ಥ ಬರೆಹಗಾರ್ತಿ ಎಂಬುದಕ್ಕೆ ಸಾಕ್ಷಿ ಎನ್ನುವಂತಿದೆ .
ಜಯಲಕ್ಷ್ಮಿ.ಕೆ. ಇವರ “ನಡೆದಷ್ಟೂ ದಾರಿ” ಕೃತಿಯು ಸುಂದರ ಮುಖಪುಟ ಹೊಂದಿದ್ದು ಇದರಲ್ಲಿ ಸುಮಾರು 43 ಲೇಖನಗಳಿದ್ದು,184 ಪುಟಗಳಿರುವ ಈ ಕೃತಿಯ ಬೆಲೆ ರೂಪಾಯಿ 230 ಆಗಿರುತ್ತದೆ. ಈ ಪುಸ್ತಕವೂ ಪ್ರಶಸ್ತಿ , ಗೌರವಕ್ಕೆ ಅರ್ಹವಾಗಿದ್ದು ಇವರು ಜಿಲ್ಲೆಯ ಭರವಸೆಯ ಲೇಖಕಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಜಯಲಕ್ಷ್ಮಿಯರಿಗೆ ಶುಭಹಾರೈಕೆಗಳು.
ಸುನೀತ ಕುಶಾಲನಗರ




