ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಳ್ಳಿ ಎಂಬ ಬಳ್ಳಿ (ತೋಳನೂರು-ಒಂದು ಸಾಂಸ್ಕೃತಿಕ ಅಧ್ಯಯನ)
ವಿಶ್ವೇಶ್ವರ ಎನ್‌.ಮೇಟಿ ಮುಂಬಯಿ
.

ಶ್ರೀ ವಿಶ್ವೇಶ್ವರ ಎನ್ ಮೇಟಿಯವರು ವೃತ್ತಿಯಲ್ಲಿ ಇಂಜಿನಿಯರ್ ಹಾಗೂ ಪ್ರವೃತ್ತಿಯಲ್ಲಿ ಸಾಹಿತಿ.ಇದೊಂದು ತರ ಭಿನ್ನ ಅಭಿರುಚಿಯಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ಲೇಖಕರು.ವೃತ್ತಿ ಬದುಕಿಗೆ,ಪ್ರವೃತ್ತಿ ಮನಸ್ಸಿನ ಸಂತೋಷಕ್ಕೆ ಜೊತೆಗೆ ತಾನು ಇಷ್ಟ ಪಟ್ಟ ಹವ್ಯಾಸವನ್ನು ಇತರರಿಗೂ ಹಂಚುವ ಕಾಯಕದಲ್ಲಿ ತೊಡಗಿರುವುದು ಕಾಯಕ ನಿಷ್ಠೆಯನ್ನು ಅಭಿವ್ಯಕ್ತಗೊಳಿಸುತ್ತದೆ.ಲೇಖಕರಿಗೆ ತನ್ನ ಬಾಲ್ಯದ ನೆನಪುಗಳನ್ನು ಹಚ್ಚಹಸಿರಾಗಿಸಲು ಮತ್ತು ಊರಿನ ಋಣತೀರಿಸಲು ಯಾಕೆ ಒಂದು ಅಧ್ಯಯನ ಕೃತಿ ತರಬಾರದೆಂಬ ಆಲೋಚನೆ; ಸಾಹಿತಿಗೆ ವಿವಿಧ ಆಕರ ಗ್ರಂಥಗಳ ಸಹಾಯದಿಂದ ಭಿನ್ನ ಮಜಲುಗಳಲ್ಲಿ ಅಧ್ಯಯನ ಕಾರ್ಯ ಕೈಗೊಂಡು ” ತೋಳನೂರು- ಒಂದು ಸಾಂಸ್ಕೃತಿಕ ಅಧ್ಯಯನ ಕೃತಿ ಅನಾವರಣಗೊಂಡಿದೆ.ಇದರಲ್ಲಿ ಹಳ್ಳಿಯ ಜೀವನ ಅನುಭವಿಸಿ, ಮುಂಬೈನಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರೂ ಕೂಡ,ಹಿಂದೆ ಕಳೆದ ನೆನಪುಗಳನ್ನು ಬಾಲ್ಯ,ಹುಟ್ಟಿದ ಊರನ್ನು ಮರೆಯದೆ ಅದರ ಅಧ್ಯಯನಕ್ಕೆ ಮನಸ್ಸು ಹಾತೊರೆದಿದ್ದನ್ನು ಸಾಕಾರ ಗೊಳಿಸಿದ ಪರಿ ಶ್ಲಾಘನೀಯ!. ನಗರ ಜೀವನಕ್ಕೆ ಹೊಂದಿಕೊಂಡ ಮೇಲೆ ಹಳ್ಳಿ ಮರೆತು ಹೋಗುವುದು.ಆದರೆ ಲೇಖಕರು ಹಳ್ಳಿಯನ್ನು ಕರುಳ ಬಳ್ಳಿಗೆ ಹೋಲಿಸಿಕೊಂಡು ದಾಖಲಿಕರಣವನ್ನು ಅಚ್ಚುಕಟ್ಟಾಗಿ ಮಾಡಿರುವುದು ಅಭಿನಂದನಾರ್ಹ..

ಹಳ್ಳಿ ಎಂಬುದು ಮನುಷ್ಯನ ಬದುಕಿನ ಬೇರುಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಜೀವಂತ ನೆಲೆ. ಪ್ರಕೃತಿಯ ಮಡಿಲಲ್ಲಿ ರೂಪುಗೊಂಡ ಗ್ರಾಮಜೀವನವು ತನ್ನದೇ ಆದ ಭಾಷೆ, ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಆಚರಣೆ, ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಸಂಬಂಧಗಳ ಮೂಲಕ ವಿಶಿಷ್ಟ ಅಸ್ಮಿತೆಯನ್ನು ಪಡೆದುಕೊಂಡಿದೆ. ಹಳ್ಳಿಯ ಬದುಕು ಕೇವಲ ಜೀವನೋಪಾಯಕ್ಕೆ ಸೀಮಿತವಾಗಿರದೆ, ತಲೆಮಾರುಗಳಿಂದ ಹರಿದುಬಂದ ಅನುಭವ, ಜ್ಞಾನ, ಮೌಲ್ಯ ಮತ್ತು  ನೆನಪುಗಳ ಸಂಗಮವಾಗಿದೆ. ಈ ಹಿನ್ನೆಲೆಯಲ್ಲಿ ಹಳ್ಳಿಯೊಂದರ ಸಾಂಸ್ಕೃತಿಕ ಅಧ್ಯಯನವು ಆ ನೆಲದ ಬದುಕಿನ ಒಳನೋಟಗಳನ್ನು ಅರಿಯಲು ಸಹಕಾರಿಯಾಗುತ್ತದೆ.

‘ಹಳ್ಳಿ ಎಂಬ ಬಳ್ಳಿ’ ಎಂಬ ಶೀರ್ಷಿಕೆಯು ಹಳ್ಳಿಯ ಬದುಕಿನ ನಿರಂತರತೆ, ಸಂಬಂಧಗಳ ಬೆಸುಗೆ ಮತ್ತು ಸಂಸ್ಕೃತಿಯ ಬೆಳವಣಿಗೆಯನ್ನು ರೂಪಕಾತ್ಮಕವಾಗಿ ಸೂಚಿಸುತ್ತದೆ. ಬಳ್ಳಿಯು ಹೇಗೆ ತನ್ನ ಬೇರುಗಳಿಂದ ಪೋಷಣೆ ಪಡೆದು, ಆಸರೆಯನ್ನು ಹಿಡಿದು ಹರಡುತ್ತದೆಯೋ ಹಾಗೆಯೇ
ಅಧ್ಯಯನದ ಪ್ರಮುಖ ಉದ್ದೇಶಗಳು ಬಹುಮುಖ್ಯವಾಗುತ್ತದೆ.

# ತೋಳನೂರಿನ ಐತಿಹಾಸಿಕ, ಭೌಗೋಳಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪರಿಚಯಿಸುವುದು.

ತೋಳನೂರು ಇದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಅಚ್ಚಕನ್ನಡದ ಕೊನೆಯ ಗಡಿ ಗ್ರಾಮ.ಮಹಾರಾಷ್ಟ್ರ ಮತ್ತು ಕರ್ನಾಟಕದ “ಬಾಂಡರಿ”ಯಾಗಿದೆ.2011 ರ ಜನಗಣತಿಯ ಪ್ರಕಾರ 815 ಮನೆಗಳು.ಜನಸಂಖ್ಯೆ 4415 ಇದೆ.ತೋಳನೂರು ಕ್ಷೇತ್ರ ಅಂದಾಜು 2429.62 ಹೆಕ್ಟೇರ್. ಬಾಂಡರಿಯಲ್ಲಿರುವುದರಿಂದ ಎರಡು ರಾಜ್ಯ ಸರ್ಕಾರಗಳ ಸೌಕರ್ಯ ಪಡೆಯುತ್ತಿರುವರು.ತೆರಿಗೆಯನ್ನು ಕೂಡ ಎರಡು ರಾಜ್ಯಗಳಿಗೆ ಕಟ್ಟುತ್ತಾರೆ.ಇಲ್ಲಿಯ ಜನರ ಸಂಬಂಧ ದ್ವಿರಾಜ್ಯಗಳಿಗೆ ಬೆಸೆದುಕೊಂಡಿದೆ.

# ತೋಳನೂರಿನ ಹೆಸರಿನ ಉತ್ಪತ್ತಿ,ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ಅಸ್ಮಿತೆಯನ್ನು ಗುರುತಿಸುವುದು.

ಪ್ರತಿಯೊಂದು ಊರಿಗೂ ಒಂದಿಲ್ಲೊಂದು ಹೆಸರು ಇದ್ದೆ ಇರುತ್ತದೆ.ಅದರ ಹಿನ್ನಲೆಯ ಕಥೆಗಳು ಕೇಳಲು ಉತ್ಸುಕ ಮನಸ್ಸು. ತೋಳನೂರಿಗೂ ಒಂದು ಕಥೆ‌..”ವೃಕ ಶತಕ ಪುರ” ವೃಕ-ತೋಳ,ಶತ- ನೂರು,ಪುರ-ಊರು
ಅಂದರೆ ನೂರಾರು ತೋಳಗಳು ವಾಸವಿದ್ದ ಊರು.ಇದರಿಂದ ಅಲ್ಲಿ ವಾಸವಿದ್ದ ಕುರುಬ ಕುಟುಂಬಗಳಿಗೆ ಕುರಿಕಾಯುವುದೊಂದು ದೊಡ್ಡ ಸವಾಲು.ಅಂತಹ ಸಂಕಷ್ಟದ ಸಮಯದಲ್ಲಿ ಒಮ್ಮೆ ಶಿವಯೋಗಿಶ್ವರರು ತೋಳಗಳ ಊರಿನ ಮಾರ್ಗವಾಗಿ ಹೋಗುತ್ತಿರುವಾಗ,ಮೂರು ದಿನದಿಂದ ಉಪವಾಸವಿದ್ದ ತೋಳ ಸ್ವಾಮಿಗಳಿಗೆ ಅಡ್ಡಬರಲು, ಸ್ವಾಮಿಗಳು ತೋಳಕ್ಕೆ ಹೋಗಲು ಆಜ್ಞೆ ಮಾಡುತ್ತಾರೆ.ಆದರೆ,ಆ ತೋಳ ಹೋಗುವುದಿಲ್ಲ.ಆಗ ಸ್ವಾಮಿಗಳು ಭಸ್ಮ ವನ್ನು ತೋಳದ ಹಣೆಗೆ ಹಚ್ಚುತ್ತಾರೆ.ತಕ್ಷಣ ‘ತೋಳ’ಮಾಯವಾಗಿ ಹನ್ನೆರಡು ವರುಷದ ಬಾಲಕ
 ಕಾಣಿಸಿಕೊಂಡು ಗುರುಗಳಿಗೆ ನಮಸ್ಕರಿಸಿ, ನನ್ನ ಶಾಪ ವಿಮೋಚನೆಗೊಳಿಸಿದ್ದಕ್ಕೆ ಧನ್ಯವಾದ ಹೇಳಿ,ತನ್ನ ಜೀವನ ವೃತ್ತಾಂತ ಹೇಳಿ ತಾನು ತನ್ನ ದುರ್ನಡತೆಗೆ ನೂರು ಜನ್ಮಗಳಲ್ಲಿ ತೋಳನಾಗಿ ಹುಟ್ಟುವ ಶಾಪ ಹೊಂದಿದ್ದು.ಇಂದಿಗೆ ನಿಮ್ಮ ದರ್ಶನ ಭಸ್ಮದಿಂದ ನಿಶ್ಯಾಪ ಹೊಂದುವಂತಾಗಿದೆ.ಸೂರ್ಯ,ಚಂದ್ರರಿರುವ ತನಕ ಈ ಊರಿಗೆ “ತೋಳನೂರು” ಎಂಬ ಹೆಸರಿರಲೆಂದು ಬೇಡಿಕೊಂಡಿರುವುದಕ್ಕೆ ಶಿವಯೋಗಿಗಳು ಅವನ ಇಚ್ಛೆಯನ್ನು ಇಡೇರಿಸಿದರೆಂಬ ದಂತಕಥೆಯಿದೆ.

ಶಶಿರವಿಗಳುಳ್ಳ ತನಕ ತೋಳಿನ |
ಪೆಸರು ನಗರಕೆ ಇತ್ತು ನಡಿಸದು |
ಹಸನವಾಯಿತು ಮರ್ತ್ಯಲೋಕಂ ಸಾಕು ಶಿವಪುರಕೆ ||
ವಸೆದು ಬೀಳ್ಗೊಡು ಎಂಬ ಮಾತಿಗೆ |
ಸುನಗುತ ಸ್ವರ್ಗಕೆ ಕಳುಹಿಸಿ |
ಭಸಿತ ಧೂಳಿತ ದೇಶ ಚರಿಸುತ ಬಂದು ಮಣಿಪುರಕೆ”||

ಹಾಗೆಯೇ ಮಹಾಲಕ್ಷ್ಮಿ ಬಾವಿಯ ಕಥೆಯು “ಕೆರೆಗೆ ಹಾರ” ಎಂಬ ಕಥೆಯನ್ನು ನೆನಪಿಸುತ್ತದೆ.

# ಊರಿನ ಜನಪದ ಸಾಹಿತ್ಯ, ಮೌಖಿಕ ಪರಂಪರೆ ಮತ್ತು ಆಡುನುಡಿಯ ವೈಶಿಷ್ಟ್ಯಗಳನ್ನು ಸಂಗ್ರಹಿಸುವುದು.ಕುರಟ್ಟಿಯ ಕಥೆ,ಮಹಾಲಕ್ಷ್ಮೀ ಬಾವಿಯ ಕಥೆ.

# ಸ್ಥಳೀಯ ಹಬ್ಬಗಳು, ಜಾತ್ರೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳನ್ನು ದಾಖಲಿಸುವುದು.
ಕಾರಹುಣ್ಣಿಮೆಗೆ ಮಣ್ಣಿನ ಎತ್ತುಗಳನ್ನು ಮಾಡಿ ಪೂಜಿಸುವುದು.ಮನೆಯಲ್ಲಿ ಇರುವ ಜಾನುವಾರುಗಳಿಗೆ ಪೂಜಿಸುವ ಹಬ್ಬವಾಗಿದೆ.

ಮಣ್ಣಿನ ಗುಳ್ಳವ್ವ:- ಆಷಾಢದ ಪ್ರತಿ ಮಂಗಳವಾರ ಗುಳ್ಳವ್ವನ ಮಣ್ಣು ತರುವಾಗ,


” ಗುಳ್ಳೆವ್ವಗ ಮಣ್ಣು ತರಲೇ ಇಲ್ಲ
ಗುಲಗಂಜಿ ಹಚ್ಚಿ ಆಡಲಿಲ್ಲ
ಸುಳ್ಳೆ ಬಂತಲ್ಲವ್ವ ನಾಗರ ಪಂಚಮಿ”

ಎಂದು ಹಾಡುತ್ತ ಬುಧವಾರ ಗುಳ್ಳೆವ್ವನನ್ನು ಕಳಿಸುವಾಗ,

” ರೊಟ್ಟಿ ಬುತ್ತಿ ಮಾಡಿಕೊಂಡು
ಎತ್ತಿನ ಮ್ಯಾಲೆ ಹೇರಿಕೊಂಡು
ಯಾವಾಗ ಕಂಡೆನವ್ವ ತಾಯಿ ಮಾರಿ”

ಎಂದು ಹಾಡುತ್ತ ತೋಟಕ್ಕೆ ಹೋಗಿ ಗುಳ್ಳವ್ವನ ಪೂಜೆ ಮಾಡಿ ಅಲ್ಲೆ ಬಿಟ್ಟು ಊಟಮಾಡಿ ಬರುವುದು.ನಂತರ ನಾಗರ ಪಂಚಮಿಗೆ ಹೊಸ ಮಣ್ಣು ತಂದು ನಾಗಪ್ಪಗ ಹಾಲು ಹಾಕುವುದು.

# ಆಹಾರ ಪದ್ಧತಿ, ಉಡುಗೆ-ತೊಡುಗೆ, ವೃತ್ತಿ ಮತ್ತು ಜೀವನಶೈಲಿಯ ಸಾಂಸ್ಕೃತಿಕ ಮಹತ್ವವನ್ನು ಅಧ್ಯಯನ ಮಾಡುವುದು.

# ಗ್ರಾಮೀಣ ಬದುಕಿನ ಮೇಲೆ ಆಧುನಿಕತೆಯ ಪ್ರಭಾವವನ್ನು ಸಾಮಾಜಿಕ ಜನಜೀವನವನ್ನು  ವಿಶ್ಲೇಷಿಸುವುದು.

# ಸ್ಥಳೀಯ ಸಂಸ್ಕೃತಿಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಪರಿಚಯದ ಸಾಧ್ಯತೆಗಳನ್ನು ಗುರುತಿಸುವುದು.
ತೋಳನೂರಿನಲ್ಲಿ ಮಂದಿರಗಳು,ಮಠಗಳು ತಮ್ಮದೇ ಆದ ಸಾಂಸ್ಕೃತಿಕ ಸಾಂಪ್ರದಾಯಿಕ ಶೈಲಿಯನ್ನು ಹೊಂದಿವೆ.ಒಟ್ಟು 20 ದೇವಾಲಯಗಳು
3 ಮಠಗಳನ್ನು ಹೊಂದಿದೆ.

# ಸ್ವಾತಂತ್ರ್ಯ ಹೋರಾಟಗಾರರು,ಸಾಹಿತಿಗಳು, ಕಲಾವಿದರು, ಸಾಧಕರ ಪರಿಚಯ.
ಶ್ರೀ ಶಂಕರೆಪ್ಪಾ ಹುಲಮನಿ,ಶ್ರೀ ಚನ್ನಬಸಪ್ಪಾ ಮಳಸಿದ್ದಪ್ಪಾ ನಿರಾಳಿ,ಶ್ರೀ ಶಂಕೆಗೌಡ ಪಾಟೀಲ್ ಸ್ವಾತಂತ್ರ್ಯ ಹೋರಾಟಗಾರರು.
ಸಾಹಿತಿಗಳು:- ಶ್ರೀ ಚೆನ್ನಬಸವ ಕವಿ,ಶ್ರೀ ಬಿ.ಬಿ.ಜೇವೂರು,ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ವಿಶ್ವೇಶ್ವರ ಮೇಟಿ,

# ಆಕರ ಗ್ರಂಥಗಳು.

ತೋಳನೂರಿನ ಸಾಂಸ್ಕೃತಿಕ ಅಧ್ಯಯನವು ಅಲ್ಲಿನ ಸ್ಥಳೀಯ ಜೀವನದ ವಿವಿಧ ಆಯಾಮಗಳನ್ನು ಗುರುತಿಸಿ, ಅವುಗಳ ಹಿಂದಿರುವ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ತಿಳಿಯುವ ಪ್ರಯತ್ನವಾಗಿದೆ. ಹಿರಿಯರ ಅನುಭವಗಳು, ಮೌಖಿಕ ಪರಂಪರೆಗಳು, ಸ್ಥಳೀಯ ಆಚರಣೆಗಳು ಹಾಗೂ ಜನಜೀವನದ ದಾಖಲೆಗಳ ಮೂಲಕ ಊರಿನ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಗುರುತಿಸುವುದು ಈ ಅಧ್ಯಯನದ ಪ್ರಮುಖ ಆಶಯವಾಗಿದೆ.ಕಾಲ ಬದಲಾದಂತೆ ಗ್ರಾಮೀಣ ಬದುಕಿನಲ್ಲಿಯೂ ಅನೇಕ ಬದಲಾವಣೆಗಳು ಸಂಭವಿಸುತ್ತಿವೆ. ಶಿಕ್ಷಣ, ಉದ್ಯೋಗ, ವಲಸೆ, ತಂತ್ರಜ್ಞಾನ, ಮಾಧ್ಯಮಗಳು ಮತ್ತು ಆಧುನಿಕ ಜೀವನಶೈಲಿಯ ಪ್ರಭಾವದಿಂದ ಸಾಂಪ್ರದಾಯಿಕ ಆಚರಣೆಗಳು ಹಾಗೂ ಜೀವನಮೌಲ್ಯಗಳಲ್ಲಿ ಪರಿವರ್ತನೆಗಳು ಕಂಡುಬರುತ್ತಿವೆ. ಕೆಲವು ಪರಂಪರೆಗಳು ಹೊಸ ರೂಪದಲ್ಲಿ ಮುಂದುವರಿದರೆ, ಇನ್ನು ಕೆಲವು ಕ್ರಮೇಣ ಮರೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ತೋಳನೂರಿನ ಸಾಂಸ್ಕೃತಿಕ ಪರಂಪರೆಯನ್ನು ದಾಖಲಿಸುವುದರ ಜೊತೆಗೆ, ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಅದರ ಸ್ವರೂಪವನ್ನು ವಿಶ್ಲೇಷಿಸುವ ಅಗತ್ಯವೂ ಇದೆ.

 ಅಧ್ಯಯನವು ತೋಳನೂರಿನ ಸಾಂಸ್ಕೃತಿಕ ಬದುಕನ್ನು ಕೇವಲ ಪರಿಚಯಿಸುವುದಕ್ಕೆ ಸೀಮಿತವಾಗದೆ, ಅದರ ವೈಶಿಷ್ಟ್ಯಗಳು, ನಿರಂತರತೆ ಮತ್ತು ಬದಲಾವಣೆಗಳನ್ನು ಗುರುತಿಸುವ ದಿಸೆಯಲ್ಲಿ ಸಾಗುತ್ತದೆ. ಕ್ಷೇತ್ರಕಾರ್ಯ, ಸಂದರ್ಶನ, ನೇರ ವೀಕ್ಷಣೆ, ಮೌಖಿಕ ಆಕರಗಳ ಸಂಗ್ರಹ ಹಾಗೂ ಲಭ್ಯವಿರುವ ಲಿಖಿತ ದಾಖಲೆಗಳ ಪರಿಶೀಲನೆಯ ಮೂಲಕ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಹಳ್ಳಿ ಎಂಬ ಬಳ್ಳಿ — ತೋಳನೂರು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಈ ಪ್ರಯತ್ನವು ಸ್ಥಳೀಯ ಸಂಸ್ಕೃತಿಯ ವಿವಿಧ ಆಯಾಮಗಳನ್ನು ದಾಖಲಿಸಿ, ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ವಿಶ್ಲೇಷಿಸಿ, ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಹಳ್ಳಿಯ ನೆಲಮೂಲದ ಬದುಕಿನ ಸೊಗಡು, ಅದರ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಕಾಲಾನುಕ್ರಮದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಅರಿಯುವ ಮೂಲಕ ಸ್ಥಳೀಯ ಅಸ್ಮಿತೆಯನ್ನು ದಾಖಲಿಸುವುದು ಈ ಅಧ್ಯಯನದ ಆಶಯವಾಗಿದೆ.ಇನ್ನೂ ಹೆಚ್ಚೆಚ್ಚು ಬರಹಗಳು ಕನ್ನಡ ಸಾಹಿತ್ಯ ಕಣಜವನ್ನು ಸೇರುವಂತಾಗಲಿ ಎಂದು ಹಾರೈಸುವೆ.


About The Author

Leave a Reply

You cannot copy content of this page

Scroll to Top