ಕಾವ್ಯ ಸಂಗಾತಿ
ಎಮ್ಮಾರ್ಕೆ
“ನಾವಿರೋದೇ ಹೀಗೆ”


ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮ
ಮನೆಗೆ ತಗುಲುವುದೆಂಬ ಪ್ರಜ್ಞೆಯಿಲ್ಲ,
ನಮ್ಮ ಮನೆಗೆ ಬೆಂಕಿ ಬಿದ್ದಾಗಲಷ್ಟೇ
ನಾವು ಆರಿಸಲು ಅಣಿಯಾಗುವೆವು
ಕಣ್ಣ ಮುಂದೆ ವಂಚನೆ,ಮೋಸ
ನಡೆದರೂ ತಡೆಯುವ ತುಡಿತವಿಲ್ಲ,
ನಮ್ಮ ಹತ್ತಿರಕ್ಕೆ ಬಂದಾಗಲಷ್ಟೇ
ನಾವು ಬಿಡದೇ ಹರಿಹಾಯುವೆವು
ನಮಗ್ಯಾಕೆ ಇಲ್ಲದ ಉಸಾಬರಿ
ನಮಗೂ ಅದಕೂ ಸಂಬಂಧವಿಲ್ಲ,
ನಮಗೆ ಸಂಬಂಧ ಪಟ್ಟಾಗಲಷ್ಟೇ
ಎದೆಯನ್ನುಬ್ಬಿಸಿ ಎದುರಾಡುವೆವು
ಬಿಟ್ಟಿ ಉಪದೇಶ ನೀಡುವವರ
ಸಂಖ್ಯೆಗಂತೂ ಕೊರತೆಯೇ ಇಲ್ಲ,
ಸ್ವಾರ್ಥದ ಸದುದ್ದೇಶವಿದ್ದರಷ್ಟೇ
ಉದ್ದ ಉಪದೇಶವ ನೀಡುವೆವು
ಬಹುತೇಕ ಪ್ರಭು,ಪ್ರಜೆಗಳಲ್ಲಿನ
ಅಹಂಕಾರಕ್ಕ್ಯಾವ ಅಳತೆಗೋಲಿಲ್ಲ,
ಕಾಗೆಯ ಬಣ್ಣ ಬಿಳುಪೆಂದರೂ
ಹೂಂ ಎಂದು ಗೋನು ಹಾಕುವೆವು
ಒಬ್ಬನೇ ಸೂರ್ಯ ನಿತ್ಯ ಜಗವ
ಬೆಳಗುವುದರ ಪರಿವೇ ನಮಗಿಲ್ಲ,
ನಮ್ಮೊಬ್ಬರಿಂದಲೇ ಏನಾದೀತು!
ಎಂದು ಮನದಲ್ಲೇ ಮರುಗುವೆವು
ಎಮ್ಮಾರ್ಕೆ



