ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

                           
ನಮ್ಮ ಕುದುರೆ ಪ್ರವೇಶಿಸಿದ್ದು ಸ್ತ್ರೀರಾಜ್ಯವನ್ನು. ನಾವು ಹೊಕ್ಕದ್ದು ವನಿತಾ ಸೀಮೆಯನ್ನು. ಭಾರವನ್ನು ತಾಳಲಾರದೆ ಧರಣಿ ಕುಗ್ಗಿದೆಯೋ ಏನೋ! ತುಸು ಮುಂದೆ ಹಿಗ್ಗಿದೆಯೋ ಏನೋ! ಎಂಬಂತಿತ್ತು ಅಲ್ಲಿಯ ಭೂಮಿಯ ಸ್ವರೂಪ. ಹೀಗೆ ಏರಿಳಿತಗಳಲ್ಲಿಯೇ ಸಾಗಿದೆವು ನಾವು. ಸ್ತ್ರೀರಾಜ್ಯದ ಬಗೆಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ನನ್ನಲ್ಲಿ ಅಳುಕು ಮೂಡತೊಡಗಿತು. ನನ್ನ ಜೊತೆಗಿದ್ದವರೆಲ್ಲಾ ಸಂಯಮದ ಮನಸ್ಸನ್ನು ಕಾಪಾಡಿಕೊಳ್ಳದಿದ್ದರೆ ಆ ಸ್ತ್ರೀರಾಜ್ಯವನ್ನು ದಾಟಿ ಮುಂದೆ ಹೋಗುವುದು ಸಾಧ್ಯವಿಲ್ಲ ಎಂಬ ಭಯ ನನ್ನಲ್ಲಿ ಉಂಟಾಯಿತು.
    ಅಲ್ಲಿದ್ದವರೆಲ್ಲಾ ನಾರಿಯರೇ. ಪುರುಷರು ಜೀವನ ನಡೆಸುವುದಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ಅಲ್ಲಿದ್ದ ಸ್ತ್ರೀಯರು ಯೌವ್ವನಾವಸ್ಥೆಯನ್ನು ಹೊಂದಿದವರು. ಮಧುಪಾನದಿಂದ ಮತ್ತೇರಿಸಿಕೊಳ್ಳುವ ಚಟವನ್ನು ಇಟ್ಟುಕೊಂಡವರು. ಚೆಲುವಿತ್ತು ಅವರಿಗೆ. ಲಾವಣ್ಯವತಿಯರಾಗಿದ್ದರು. ಬಗೆಬಗೆಯ ಕಲೆಗಳಲ್ಲಿ ಪ್ರೌಢಿಮೆಯನ್ನು ರೂಢಿಸಿಕೊಂಡಿದ್ದರು. ಹಾಡನ್ನು ಇಂಪಾಗಿ ಹಾಡುವ ಕೌಶಲ್ಯವಿತ್ತು. ನೃತ್ಯವನ್ನು ಸೊಂಪಾಗಿ ಮಾಡುವ ಪ್ರತಿಭೆಯಿತ್ತು. ಕೊಳಲನ್ನು ನುಡಿಸುತ್ತಿದ್ದರು ಕೋಗಿಲೆ ಕೊರಳಿನಿಂದ ಧ್ವನಿಸರವು ಹೊಮ್ಮಿದಂತೆ. ವೀಣೆಯನ್ನು ನುಡಿಸುತ್ತಿದ್ದರು ರಸಿಕ ಹೃದಯದಿಂದ ಸ್ವರರಸವು ಚಿಮ್ಮಿದಂತೆ. ಮಾತುಮಾತಿಗೆ ನಗುವ, ಮಾತುಮಾತಿನಲಿ ನಗಿಸುವ ವಿನೋದ ಪ್ರಜ್ಞೆಯಿತ್ತು ಅಲ್ಲಿಯ ವಿನೋದಿನಿಯರಲ್ಲಿ. ಭೋಗಾಸಕ್ತರಾಗಿದ್ದರು ಅಲ್ಲಿನ ವನಿತೆಯರು. ಹೀಗೆ ಸ್ತ್ರೀಗಣವದು, ಸ್ತ್ರೀಗುಣಗಳ ಹೊಂದಿ, ಸ್ತ್ರೀಗಡಣದಲ್ಲಿಯೇ ಬದುಕು ನಡೆಸುತ್ತಾ, ಸ್ತ್ರೀಗಣಿಯೊಂದನ್ನು ನಿರ್ಮಿಸಿತ್ತು ಈ ಭೂಮಿಯೊಳಗೆ.
    ಹೀಗಿದ್ದ ವನಿತಾ ರಾಜ್ಯವನ್ನು ಪ್ರವೇಶಿಸಿ ಅಲ್ಲಿಂದ ಜೀವಂತವಾಗಿ ಹೊರಬಂದ ಪುರುಷರು ಇರಲಿಲ್ಲ. ಬಂದ ಗಂಡಸರನ್ನು ಆಕರ್ಷಿಸಿ, ಕೊನೆಗೆ ಮರಣವನ್ನೀಯುವ ಕಠೋರತೆಯಿತ್ತು ಅಲ್ಲಿನ ಹೆಂಗಳೆಯರ ಹೃದಯದಲ್ಲಿ. ಸೌಂದರ್ಯಮಯ ದೇಹವನ್ನು ಮುಂದಿಟ್ಟು ಪುರುಷರನ್ನು ಯಮಪಾಶಕ್ಕೆ ಸಿಲುಕಿಸುತ್ತಿದ್ದ ಮೋಹನಾಂಗಿಯರು ಅಲ್ಲಿನವರು.
    ಬಂದ ಗಂಡಸರನ್ನು ಕಂಡು ಚೆಲ್ಲುಚೆಲ್ಲಾಗಿ ನೋಡುತ್ತಾ, ಆಸೆಯ ಕಣ್ಣೋಟ ಬೀರುತ್ತಿದ್ದರು. ಆಕರ್ಷಕವಾದ ಭಂಗಿಯಲ್ಲಿ ನಿಂತು, ಕಾಲ ಉಗುರುಗಳಿಂದ ನೆಲವನ್ನು ಕೆರೆಯುತ್ತಾ ಹುಸಿಲಜ್ಜೆಯ ಭಾವವನ್ನು ತೋರಿಸುತ್ತಿದ್ದರು. ಸರಸಗೈಯ್ಯುವ ಸಮಯದಲ್ಲಿ ದೇಹಸಿರಿಯನ್ನು ಉಣಬಡಿಸುತ್ತಾ ಗಂಡಸರಿಗೆ ಹುಚ್ಚು ಹಿಡಿದು ಅವರ ಅರಿವು ಇನ್ನಿಲ್ಲವಾಗುವ ಹಾಗೆ ಮದವನ್ನು ಏರಿಸುತ್ತಿದ್ದರು.
    ಇಲ್ಲಿನ ಸ್ತ್ರೀಯೊಡನೆ ಒಮ್ಮೆ ಸರಸಕೇಳಿಗೆ ಇಳಿದ ಬಳಿಕ ಅದೇ ವಿಷಯದಲ್ಲಿ ಸಂಪೂರ್ಣ ಆಸಕ್ತನಾಗಿಬಿಡುತ್ತಿದ್ದ ಇಲ್ಲಿಗೆ ಬಂದ ಪುರುಷ. ಇಲ್ಲಿಂದ ತೆರಳಲು ಅವನಿಗೆ ಮನಸ್ಸೇ ಆಗುತ್ತಿರಲಿಲ್ಲ. ನಾನಾ ಪ್ರಕಾರದ ಕಾಮಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ಬಗೆಯಲ್ಲಿಯೇ ಒಂದು ತಿಂಗಳು ಸುಖಿಸುತ್ತಿದ್ದರು. ಉತ್ತಮವಾದ ಸುಗಂಧವನ್ನು ಮೈಗೆ ಬಳಿದುಕೊಂಡು, ಸುಗಂಧ ದ್ರವ್ಯವನ್ನು ಬಾಯಿಗೆ ಹಾಕಿಕೊಂಡು, ತಾಂಬೂಲ, ಮಧುಪಾನ ಮೊದಲಾದವುಗಳ ಮೂಲಕ ಮದನಕೇಳಿಯ ಉತ್ತುಂಗ ಸೊಗವನ್ನು ಅನುಭವಿಸುತ್ತಿದ್ದರು.
  ವಿಧವಿಧವಾದ ಬಗೆಯಲ್ಲಿ ಶೋಭಿಸುವ ಕುಸುಮಸಮೂಹಗಳ ಪರಿಮಳಭರಿತವಾದ ಮಕರಂದಗಳನ್ನು ಚಿನ್ನದ ಬಟ್ಟಲಲ್ಲಿ ಸುರಿಯುತ್ತಿದ್ದಳು ಹೆಣ್ಣು. ಆ ಮಕರಂದಕ್ಕೆ ತನ್ನ ತುಟಿಯ ಸಿಹಿಯನ್ನು ಸೇರಿಸುವಂತೆ ಬಟ್ಟಲಿಗೆ ಮುಖವಿಟ್ಟು ಅದನ್ನು ಸವಿಯುತ್ತಿದ್ದಳು. ಉಳಿದ ಮಕರಂದವನ್ನು ನೋಡಿ ನಗು ಬೀರುತ್ತಿದ್ದಳು. ಬಟ್ಟಲನ್ನು ಪುರುಷನ ಬಳಿಗೆ ತೆಗೆದುಕೊಂಡು ಹೋಗಿ ಬಟ್ಟಲಿನಲ್ಲಿದ್ದ ಮಕರಂದವನ್ನು ಇಬ್ಬರೂ ಹಂಚಿಕೊಂಡು ಸವಿಯುತ್ತಿದ್ದರು. ಮಕರಂದದ ಸವಿಯನ್ನು ತೊರೆದು ಇರುವವರಲ್ಲ ಎಂಬಂತೆ ಇಬ್ಬರೂ ಬಿಡದೆ ಮುಖವಿಟ್ಟು ರುಚಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಚಿನ್ನದ ಬಟ್ಟಲಲ್ಲಿ ಮೂಡಿದ ಪುರುಷನ ಬಿಂಬವನ್ನು ಆ ಹೆಣ್ಣು, ಅವಳ ಬಿಂಬವನ್ನು ಆ ಪುರುಷ ಇಬ್ಬರೂ ಕಂಡು ಅನ್ಯೋನ್ಯತೆಯ ಸಂಪ್ರೀತಿ ಭಾವ ಅವರನ್ನು ಆವರಿಸುತ್ತಿತ್ತು. ಬಟ್ಟಲಲ್ಲಿ ತುಂಬಿರುವ ಮಕರಂದ ಮುಗಿದುಹೋದರೆ ಜೊತೆಜೊತೆಗೆ ಅದನ್ನು ಸವಿಯುವ ಗಳಿಗೆಯದು ಮುಗಿದುಹೋಗುವುದು ಎಂಬ ಯೋಚನೆ ಬಂದ ಕ್ಷಣವೇ ಆತುರಾತುರವಾಗಿ ರಸವನ್ನು ಹೀರುವುದನ್ನು ನಿಲ್ಲಿಸುತ್ತಿದ್ದರು. ಬೇಕುಬೇಕೆಂದೇ ವಿಳಂಬ ಮಾಡುತ್ತಿದ್ದರು. ಜೊತೆಜೊತೆಗೆ ಸವಿವ ರಸಗಳಿಗೆಯದು ಅವರಿಗೆ ಮುದವನ್ನು ನೀಡುತ್ತಿತ್ತು.
  ಮನಸೆಳೆಯುವ ರತಿಕೇಳಿಯಲ್ಲಿ ತಲ್ಲೀನರಾಗುತ್ತಿದ್ದರು. ಹೆಣ್ಣು ತನ್ನ ತುಟಿಯ ಸಿಹಿರಸವನ್ನು ಕುಡಿಸಿ ಪುರುಷನನ್ನು ತಣಿಸುತ್ತಿದ್ದರು. ಮಿಲನದಲ್ಲಿ ಮನವದು ಮುಳುಗಿಹೋಗಿ ಸುಖ ಅವರದ್ದಾಗುತ್ತಿತ್ತು. ಕಾಮಕಲೆಗಳಲ್ಲಿ ಪರಿಣತಳಾದ ಹೆಣ್ಣು ಈ ಮೂಲಕ ಉನ್ನತ ನೆಮ್ಮದಿಯನ್ನು ತನ್ನದಾಗಿಸಿಕೊಳ್ಳುತ್ತಿದ್ದಳು.
  ಹಾಗಿದ್ದಾಗಲೇ ಅವಳ ಅಧರದ ಸ್ಪರ್ಶಕ್ಕೆ ಸಿಲುಕಿ ವಿಷವಾದ ಆ ಮಕರಂದ ಅವನಿಗೆ ಪ್ರಾಣಸಂಕಟವನ್ನು ಕೊಡುವ ಕಾಟವನ್ನು ಆರಂಭಿಸುತ್ತಿತ್ತು. ಇನ್ನೇನು ಮರಣ ತನ್ನನ್ನು ಬಂದು ಅಪ್ಪಿಕೊಳ್ಳುತ್ತದೆ ಎಂದು ಬೆದರಿದ ಪುರುಷ ಮಧ್ಯೆಯೇ ಕಾಮಕೇಳಿಯನ್ನು ನಿಲ್ಲಿಸಿಬಿಡುತ್ತಿದ್ದ. ತಕ್ಷಣವೇ ಅವನ ಚರಣಕ್ಕೆ ಎರಗಿ, ಒಪ್ಪಿಸುವ ನಾಟಕವನ್ನಾಡುತ್ತಿದ್ದಳು. ದೈನ್ಯತೆಯನ್ನು ತೋರಿಸುತ್ತಿದ್ದಳು. ಕರುಣೆ ನೋಟ ಹರಿಸುತ್ತಿದ್ದಳು. ಅದಕ್ಕೂ ಅವನು ಸಹಿಸದವನಾದರೆ ಬೊಬ್ಬೆ ಹೊಡೆದು ಅವನನ್ನು ಹೊಡೆಯುತ್ತಿದ್ದಳು, ಕೊಲ್ಲುತ್ತಿದ್ದಳು. ಕೈಗಳಿಂದ ಬಡಿದು ಪ್ರಾಣ ಹೋಗುವವರೆಗೂ ಅವಳು ಸುಮ್ಮನಾಗುತ್ತಿರಲಿಲ್ಲ.
  ಸಂಪಿಗೆ ಹೂವಿಗೆ ಮನಸೋತು, ಅದರ ಆಸ್ವಾದನೆಗೆ ಬಂದು, ಹೂ ಬಾಡುವವರೆಗೂ ಮಕರಂದವನ್ನು ಹೀರಿಕೊಂಡಿದ್ದು, ಕೊನೆಗೆ ಅದರೊಳಗಡೆಯೇ ಸಿಲುಕಿ ಮರಣವನ್ನಪ್ಪುವ ದುಂಬಿಯಂತಹ ಸ್ಥಿತಿ ಸ್ತ್ರೀರಾಜ್ಯಕ್ಕೆ ಬಂದ ಪುರುಷರದ್ದು. ಅಲ್ಲಿಗೆ ಬಂದ ಎಲ್ಲಾ ಪುರುಷರಿಗೂ ಇದೇ ಅವಸ್ಥೆ ಒದಗಿಬರುತ್ತಿತ್ತು. ಅಲ್ಲಿದ್ದ ಎಲ್ಲಾ ಮಹಿಳೆಯರೂ ಇದೇ ತೆರದಲ್ಲಿದ್ದರು.
  ಹೀಗೆ ಪುರುಷರನ್ನು ಸಾಯಿಸಿದ ಕೆಲವು ಮಹಿಳೆಯರು ತಿಂಗಳು ಕಳೆದಾಗ ಅಗ್ನಿಪ್ರವೇಶ ಮಾಡುತ್ತಿದ್ದರು. ಇನ್ನೂ ಕೆಲವರು ಹೆಣ್ಣುಮಗುವಿಗೆ ಜನ್ಮ ನೀಡುತ್ತಿದ್ದರು. ಹೀಗೆ ಅಲ್ಲಿಯ ಸ್ತ್ರೀಸಂತತಿ ಬೆಳೆಯುತ್ತಲೇ ಬಂದಿತ್ತು. ಹೀಗೆ ವಿಷಾಂಗನೆಯರಾಗಿದ್ದ ಆ ರಾಜ್ಯಕ್ಕೆ ಪ್ರಮೀಳೆ ಎನ್ನುವವಳು ಅರಸಿಯಾಗಿದ್ದಳು.
  ನನ್ನ ಜೊತೆಗಿದ್ದವರನ್ನು ಎಚ್ಚರಿಸದೇ ಇದ್ದರೆ ಅಪಾಯವಾಗುತ್ತದೆ ಎನ್ನುವುದು ನನಗೆ ದೃಢವಾಗಿತ್ತು. ಇದುವರೆಗೂ ಪರಾಕ್ರಮವನ್ನಿಟ್ಟುಕೊಂಡು ಯುದ್ಧ ಹೂಡಿದ್ದ ನಾವು ಇದೀಗ ಸಂಪೂರ್ಣ ಬುದ್ಧಿವಂತಿಕೆಯಿAದ, ವಿವೇಚನೆಯಿಂದ ನಡೆದುಕೊಂಡು ಮುನ್ನಡೆಯಬೇಕಿತ್ತು. “ಇಲ್ಲಿನವರು ವಿಷಕನ್ನಿಕೆಯರು. ಕಂಡ ಕೂಡಲೇ ಆಕರ್ಷಿಸುತ್ತಾರೆ. ಅವರೆಡೆಗೆ ಮಾರುಹೋದರೆ ನಿಮ್ಮ ಆಯುಷ್ಯವನ್ನೇ ಅಪಹರಿಸಿಬಿಡುತ್ತಾರೆ. ಕಾಮಕ್ರೀಡೆಯಲ್ಲಿ ಆಸಕ್ತಿ ವಹಿಸದೆ ಬುದ್ಧಿವಂತರಾಗಿರಬೇಕು” ಎಂದು ಹೇಳಿ ಜಾಗೃತಿ ಮೂಡಿಸಿದೆ ನಮ್ಮವರಲ್ಲಿ. ಅರಸಿ ಪ್ರಮೀಳೆ ನಮ್ಮ ಕುದುರೆಯನ್ನು ಕಟ್ಟಿಹಾಕುವ ಲಕ್ಷಣ ತೋರಿತು.


About The Author

Leave a Reply

You cannot copy content of this page

Scroll to Top