ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸುಮತಿಯ ಅನುಪಸ್ಥಿತಿಯಲ್ಲಿ ಮೂರನೇ ಮಗಳು ತಾಯಿಯ ಬದಲು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶಾಲೆ ಹೋಗುತ್ತಿದ್ದಳು. ತೋಟದ ಶಾಲೆಯ ಮಕ್ಕಳಿಗೆ ಯಾರಾದರೂ ಹೋಗಿ ಅಕ್ಷರಾಭ್ಯಾಸ ಮಾಡಿಸಲೇ ಬೇಕಾದ ಅನಿವಾರ್ಯತೆ ಇತ್ತು. ಒಂದು ದಿನ ಶಾಲೆಗೆ ರಜೆಯಾದರೂ ಕೂಡಾ ಮರುದಿನ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದರು. ಮಕ್ಕಳು ಶಾಲೆಗೆ ಬರದೇ ಹೋದರೆ ತಿಂಗಳ ಸಂಬಳ ಎಲ್ಲಿ ತಪ್ಪಿ ಹೋಗುವುದೋ ಎನ್ನುವ ಭಯ. ಸಂಬಳದಿಂದ ಬರುವ ಹಣದಲ್ಲಿ ತಿಂಗಳು ಪೂರ್ತಿ ಸುಮತಿಯ ಕುಟುಂಬ ಕಳೆಯಬೇಕಿತ್ತು. ಎರಡನೇ ಮಗಳು ಕೆಲಸ ಮಾಡುತ್ತಿದ್ದರೂ ಅವಳಿಗೆ ಬರುವ ಸಂಬಳವೂ ಕಡಿಮೆ ಇತ್ತು. ಈಗ ಸುಮತಿ ಆಸ್ಪತ್ರೆಯಲ್ಲಿ ಇರುವುದರಿಂದ ಖರ್ಚುಗಳು ಸ್ವಲ್ಪ ಹೆಚ್ಚಿತ್ತು. ಸರಕಾರಿ ಆಸ್ಪತ್ರೆ ಆದ್ದರಿಂದ ಅಲ್ಲಿ ವಾರ್ಡ್ ಗೆ ಹಣ ಕಟ್ಟುವ ಅಗತ್ಯ ಇರಲಿಲ್ಲ. ಮಾತ್ರೆ ಔಷಧಿಗಳು ಅಲ್ಲಿಯೇ ಸಿಗುತ್ತಿದ್ದವು. ಹೊರಗಿನಿಂದ ತರಬೇಕೆಂದಿದ್ದರೆ ಎಷ್ಟೇಟಿನ ಲೆಕ್ಕದಲ್ಲಿ ಮೆಡಿಕಲ್ ಸ್ಟೋರ್ ನಿಂದ ಖರೀದಿಸಬಹುದಿತ್ತು. ಆದರೆ ಇನ್ನುಳಿದ ಖರ್ಚನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಗುರುವಾರ ಶಾಲೆಗೆ ರಜೆ ಇದ್ದ ಕಾರಣ ಮೂರನೇ ಮಗಳು ಸುಮತಿಯನ್ನು ನೋಡಲು ಆಸ್ಪತ್ರೆಗೆ ಬಂದಳು. ಇನ್ನೂ ಹದಿನಾರರ ಹರೆಯದ ಹುಡುಗಿ ತೋಟದ ನಿರ್ಜನವಾದ ದಾರಿಯಲ್ಲಿ ಒಬ್ಬಳೇ ಶಾಲೆಗೆ ಹೋಗಿ ಬರಬೇಕಿತ್ತು. ಸುಮತಿ ಆಸ್ಪತ್ರೆಯಲ್ಲಿ ದಾಖಲಾದ್ದರಿಂದ ಮನೆಯಲ್ಲಿಯೂ ಕೂಡ ಅವಳೊಬ್ಬಳೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸುಮತಿಯ ಮಕ್ಕಳು ಧೈರ್ಯವಂತರು. ಅನಿವಾರ್ಯತೆಗಳಲ್ಲಿ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಲು ಶಕ್ತರಾಗಿದ್ದರು. ಜೀವನದಲ್ಲಿ ಅವರು ಅನುಭವಿಸಿದ ಕಷ್ಟಗಳು ಆವರಿಗೆ ವಿಧಿ ಒಡ್ಡಿರುವ ಸವಾಲುಗಳನ್ನು ಎದುರಿಸಿ ಬದುಕುವ ಪಾಠ ಕಲಿಸಿತ್ತು. ಆದರೂ ಭಯ, ಆತಂಕ, ಒಂಟಿತನ ಇವೆಲ್ಲವೂ ಕಾಡುತ್ತಿದ್ದರೂ ಆ ಹುಡುಗಿ ಧೈರ್ಯವಾಗಿ ಶಾಲೆಗೆ ಹೋಗಿ ಬಂದು ತಾಯಿಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಳು. ಇದೀಗ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ತಾಯಿಯನ್ನು ಕಂಡು ಅವಳ ಮನಸ್ಸು ವಿಹ್ವಲಗೊಂಡಿತು. ಕಾಲೇಜಿನಿಂದ ಆಸ್ಪತ್ರೆಗೆ ಬಂದಾಗ, ತನ್ನ ತಂಗಿ ತಾಯಿಯನ್ನು ನೋಡಲು ಬಂದಿರುವುದು ಅಕ್ಕನಿಗೆ ತಿಳಿದು ಸಂತೋಷದ ಜೊತೆಗೆ ದುಃಖವೂ ಆಯಿತು. ವೈದ್ಯರು ತಾಯಿಯ ಬಗ್ಗೆ ತಿಳಿಸಿರುವ ಸಂಗತಿಯನ್ನು ತಂಗಿಗೆ ಹೇಳಲೇ ಬೇಕಿತ್ತು. ಇವಳಿಗೆ ಅವಳು, ಅವಳಿಗೆ ಇವಳು ಸದಾ ಸಾಂತ್ವನ ನೀಡಿ, ಪರಸ್ಪರರನ್ನು ಕಾಳಜಿವಹಿಸುತ್ತಿದ್ದರು. ಇಬ್ಬರೂ ಅಕ್ಕತಂಗಿಯರಂತಿರದೇ ಆತ್ಮೀಯ ಗೆಳತಿಯರಂತೆ ಅನ್ಯೋನ್ಯವಾಗಿದ್ದರು. ಹಾಗಾಗಿ ಏನೇ ಇದ್ದರೂ ಮುಚ್ಚು ಮರೆ ಇಲ್ಲದೇ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೂ ಇಂತಹಾ ಖೇದಕರ ಸಂಗತಿಯನ್ನು ತಿಳಿಸಲು ಅಕ್ಕನಿಗೆ ಕಷ್ಟವಾಯಿತು…… ಇನ್ನು ನಮ್ಮ ತಾಯಿ ಬದುಕಿರುವುದು ಕೇವಲ ಆರು ತಿಂಗಳ ಮಾತ್ರ…. ಅಮ್ಮ ತುಂಬಾ ಗಂಭೀರ ಸ್ಥಿತಿಯಲ್ಲಿರುವಳು…. ಒಂದೊಂದು ದಿನ ಕಳೆಯುತ್ತಿದ್ದಂತೆ ಅವಳು ನಮ್ಮಿಂದ ದೂರವಾಗುತ್ತಿದ್ದಾಳೆ… ಎನ್ನುವ ಸತ್ಯವನ್ನು ನಾನು ಹೇಗೆ ತಂಗಿಗೆ ಹೇಳಲಿ? ಎಂಬ ಆಲೋಚನೆಯಲ್ಲಿ ಇದ್ದಳು.

ಸುಮತಿಯ ಮೂರನೇ ಮಗಳು ತನ್ನ ತಾಯಿ ಮತ್ತು ಅಕ್ಕನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಳು. ತಾಯಿಯ ಮುಖದಲ್ಲಿ ಭರವಸೆಯ ಛಾಯೆ ಇದ್ದರೆ, ಅಕ್ಕನ ಮುಖದಲ್ಲಿ ನಿರಾಶೆಯ ಛಾಯೆ ಮನೆ ಮಾಡಿತ್ತು. ಸದಾ ಹಸನ್ಮುಖಿಯಾದ ಅಕ್ಕ ಗಂಭೀರವಾದ ವಿಚಾರವಿಲ್ಲದೆ ಹೀಗೆ ಚಿಂತಾಕ್ರಾಂತಳಾಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ತಂಗಿಗೆ ತಿಳಿದಿತ್ತು. ಆದರೂ ತಾಯಿಯ ಎದುರು ಏನನ್ನೂ ಕೇಳುವುದು ಸೂಕ್ತವಲ್ಲ ಎಂದುಕೊಂಡು…. “ಅಮ್ಮಾ ….ಈಗ ಹೇಗಿದ್ದೀಯಾ?….ಮೊನ್ನೆ ನೀನು ಮನೆಯಿಂದ ಹೊರಟಾಗ ತುಂಬಾ ದಣಿದಿದ್ದೆ…. ಈಗ ನಿನ್ನ ಆಯಾಸ ಕಡಿಮೆಯಾಯಿತೇ? ಮನೆಯಲ್ಲಿ ನೀನು ಆಗಾಗ ವಾಂತಿ ಮಾಡಿಕೊಳ್ಳುತ್ತಿದ್ದೆ…. ಈಗ ಹೇಗಿದೆ?…. ಊಟ ಸೇರುತಿದೆಯೇ?…. ಎಂದು ತಾಯಿಯನ್ನು ಕೇಳಿದಳು. ಅದಕ್ಕೆ ಸುಮತಿ ಈಗ ಸ್ವಲ್ಪ ಪರವಾಗಿಲ್ಲ ಮಗಳೇ….. ವೈದ್ಯರ ಮೇಲ್ನೋಟದಲ್ಲಿ, ದಾದಿಯರ ಶುಶ್ರೂಷೆಯಲ್ಲಿ ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ…. ಜೊತೆಗೆ ನಿಮ್ಮಿಬ್ಬರ ಪ್ರೀತಿ ಮತ್ತು ಕಾಳಜಿ ನನಗೆ ಔಷಧವಲ್ಲವೇ? ….. ಅದಿರಲಿ ನೀನು ಹೇಗಿದ್ದೀಯಾ?….. ನಿನ್ನನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ನಾನು ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ ಅನಿವಾರ್ಯ ಪರಿಸ್ಥಿತಿ ಬಂತು…. ನನಗೆ ತಿಳಿದಿರಲಿಲ್ಲ ಹೀಗೆ ಕೂಡಲೇ ನನ್ನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡುತ್ತಾರೆ ಎಂಬುದು…. ವೈದ್ಯರು ಪರಿಶೀಲನೆ ನಡೆಸಿ ಮನೆಗೆ ಕಳುಹಿಸುತ್ತಾರೆ ಎಂದು ತಿಳಿದಿದ್ದೆ…. ಇಲ್ಲಿಗೆ ಬಂದ ಕೂಡಲೇ ನನ್ನನ್ನು ವೈದ್ಯರು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ, ಇಲ್ಲಿ ದಾಖಲಾಗುವಂತೆ ತಿಳಿಸಿದರು…. ನಿನ್ನ ಅಕ್ಕ ಕೂಡ ಕೂಡಲೇ ನನ್ನನ್ನು ಇಲ್ಲಿಗೆ ದಾಖಲಿಸಿದಳು”….. ಎಂದಾಗ,….

“….ಅಮ್ಮಾ ….ಅಕ್ಕ ಆ ದಿನವೇ ನನಗೆ ಈ ಎಲ್ಲಾ ವಿಷಯವನ್ನು ತಿಳಿಸಿದ್ದಾಳೆ…. ನೀನು ಹೆಚ್ಚು ಯೋಚಿಸಿ ಆಯಾಸ ಪಡಬೇಡ…. ನಾನು ಅಲ್ಲಿ ಚೆನ್ನಾಗಿದ್ದೇನೆ…. ಅಲ್ಲಿ ಸುತ್ತಲೂ ನಮಗೆ ಪರಿಚಿತರಲ್ಲವೇ ಇರುವುದು? ಹಾಗಾಗಿ ಯಾವುದೇ ತೊಂದರೆ ಇಲ್ಲ…. ದಿನವೂ ನಾನು ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಬರುತ್ತಿದ್ದೇನೆ…. ನೀನು ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಡ…. ನಿನ್ನ ಜೊತೆ ಸದಾ ನಾನು ಮತ್ತು ಅಕ್ಕ ಇದ್ದೇವೆ…. ಎಂದಳು. ಮಗಳ ಮಾತನ್ನು ಕೇಳಿದ ಸುಮತಿ ಎದ್ದು ಕುಳಿತು, ಇಬ್ಬರನ್ನೂ ತನ್ನ ಅಕ್ಕಪಕ್ಕದಲ್ಲಿ ಬಂದು ಕುಳಿತುಕೊಳ್ಳುವಂತೆ ಸೂಚಿಸಿದಳು.
ತಾಯಿಯ ಅಣತಿಯಂತೆ ಇಬ್ಬರೂ ಅಕ್ಕಪಕ್ಕ ಬಂದು ಕುಳಿತರು. ಸುಮತಿ ಮಕ್ಕಳಿರಿಬ್ಬರನ್ನೂ ತೋಳಿಂದ ಬಳಸಿ …. ಮಕ್ಕಳೇ ಈ ಅಮ್ಮನನ್ನು ಕ್ಷಮಿಸಿ…. ಈ ವಯಸ್ಸಿಗೇ ನಿಮ್ಮನ್ನು ಹಲವಾರು ಕಷ್ಟಗಳಿಗೆ ದೂಡಿದೆ.‌ ನನ್ನಿಂದ ನಿನ್ನ ವಿಧ್ಯಾಭ್ಯಾಸ ಕೂಡಾ ಮೊಟಕುಗೊಂಡಿತು…..ಎನ್ನುತ್ತಾ ಮೂರನೇ ಮಗಳ ಭುಜವನ್ನು ಹಿಡಿದು ತನ್ನಡೆಗೆ ಆನಿಸಿಕೊಂಡು ಸುಮತಿ ಹೇಳಿದಳು….. “ಅಮ್ಮಾ …..ಅದಕ್ಕಾಗಿ ನೀನೇನೂ ಬೇಸರಗೊಳ್ಳಬೇಡ…. ಎಸ್ ಎಸ್ ಎಲ್ ಸಿ ವರೆಗೂ ಓದಿದ್ದೇನೆ…. ಅಕ್ಕ ಈಗ ಪದವಿ ತರಗತಿಯಲ್ಲಿ ಓದುತ್ತಿದ್ದಾಳೆ…. ತಂಗಿ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾವು ವಿದ್ಯೆಯನ್ನು ಕರೆಯಲಿ ಎಂದು ನೀನು ಮಾಡಿದ ತ್ಯಾಗ ಅಷ್ಟಿಷ್ಟಲ್ಲ”…. ಎಂದು ಹೇಳುತ್ತಾ, ನೀನೇಕೆ ಹೀಗೆ ಮಂಕಾಗಿರುವೆ ಎಂಬಂತೆ ಪ್ರಶ್ನಾರ್ಥಕವಾಗಿ
ಅಕ್ಕನನ್ನು ನೋಡಿದಳು. ಅವಳ ಮುಖವು ಮ್ಲಾನವಾಗಿತ್ತು. ಕಣ್ಣುಗಳಲ್ಲಿ ಕಂಡೂ ಕಾಣದಂತೆ ಕಣ್ಣೀರಿನ ಪಸೆಯಿತ್ತು.


About The Author

Leave a Reply

You cannot copy content of this page

Scroll to Top