“ಭ್ರಮೆಯೊಳಗಿನ ಬದುಕು..”ರಮೇಶ ಸಿ ಬನ್ನಿಕೊಪ್ಪ ಹಲಗೇರಿ‌ ಅವರ ವಿಶೇಷ ಬರಹ

ಅಲ್ಲಿ, ಝಗಮಗಿಸುವ ಬೆಳಕು. ಉದ್ಘೋಹಾರ, ಕಿವಿಗಡಚುವ ಶಬ್ದಗಳು, ‘ಆತ’ನನ್ನು ಸ್ವಾಗತಿಸುವ ರೀತಿ ಒಂದು ಕಾಲದ ಮಹಾರಾಜರನ್ನು ಹೊಗಳುವ, ರೀತಿಯಲ್ಲಿ ಹೊಗಳುವ ಸನ್ನಿವೇಶದ ದೃಶ್ಯಗಳು…!

ಹಳ್ಳಿಯಿಂದ ಬಂದ ಅಮಾಯಕ ಯುವಕ ಅಥವಾ ಯುವತಿ ನಿರೂಪಕರ ಎದುರು ‘ಹೀರೋ’ ಆಗುತ್ತಾನೆ ಅಥವಾ ಹಿರೋಯಿನ್ ಆಗುತ್ತಾಳೆ.  ಮುಂದೆ ಅವರ ಪ್ರತಿಭೆ ಕೌಶಲ್ಯಗಳನ್ನು ಬಳಸಿಕೊಂಡು, ಆವರನ್ನು ಹೊಗಳುತ್ತಾ ಹೊಗಳುತ್ತಾ ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ.  

ಈ ಮೇಲಿನ ಎರಡು ಸನ್ನಿವೇಶಗಳು ಇಂದಿನ ಟಿವಿ ರಿಯಾಲಿಟಿ ಶೋಗಳ ಒಳ ಮಜಲುಗಳನ್ನು ನೋಡಿದವರಿಗೆ ಗೊತ್ತಾಗಿ ಬಿಡುತ್ತದೆ. ಏನು ಗೊತ್ತಿಲ್ಲದ ಒಬ್ಬ ಅಪ್ಪಟ ಗ್ರಾಮೀಣ ಪ್ರತಿಭೆಯನ್ನು ಟಿವಿ ಮಾಧ್ಯಮಗಳು ಬಳಸಿಕೊಂಡು, ಆತನನ್ನು ಆತನ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾರೆ. ಜೊತೆ ಜೊತೆಗೆ ಆತನನ್ನು ಉನ್ನತ ಮಟ್ಟಕ್ಕೆ ಕೊಂಡ್ಯೋಯ್ದು ಸಮಾಜದಲ್ಲಿ ಆತನಿಗೊಂದು ಸುಸ್ಥಿರ ಹೆಸರನ್ನು ಕಲ್ಪಿಸಿ ಕೊಡುತ್ತಾರೆ.  ಇಷ್ಟು ದಿವಸ ವಾಸ್ತವಿಕ ಬದುಕಿನಲ್ಲಿ ಬದುಕುತ್ತಿದ್ದ ಅಪಟ್ಟ ಗ್ರಾಮೀಣ ಪ್ರತಿಭೆಯು ಹೊಸದೊಂದು ಲೋಕಕ್ಕೆ ತೆರೆದುಕೊಳ್ಳುತ್ತಾನೆ.

 ಹೀಗೆ ತೆರೆದುಕೊಳ್ಳುವ ವ್ಯಕ್ತಿ “ಕಲ್ಪನೆ ಮತ್ತು ವಾಸ್ತವಿಕ” ಎರಡು ಸಮಷ್ಟಿಪ್ರಜ್ಞೆಯ ಅರ್ಥ ಗೊತ್ತಿದ್ದರೆ ಮಾತ್ರ ಆತ ಬದುಕನ್ನು ಸಮಷ್ಠಿಪ್ರಜ್ಞೆಯಲ್ಲಿಯೇ ಸ್ವೀಕರಿಸುತ್ತಾನೆ. ಇಲ್ಲದೆ ಹೋದರೆ ‘ನಾಗರಿಕತೆಯಿಲ್ಲದ ಕೆಲವು ನಗರಪ್ರದೇಶ’ ದಲ್ಲಿ ಇನ್ನೊಂದು ಕರಾಳ ಮುಖವನ್ನು ನೋಡುತ್ತಾ  ನೋಡುತ್ತಾ ಅದರಲ್ಲಿ ತಾನು ಒಬ್ಬನೆಂದು ಅದನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಯಾವಾಗ ತನ್ನ ಬದುಕಿನ ಕವಲೊಡೆದು ತನ್ನ ಪ್ರತಿಭೆಯ ಅಹಮಿನ ಪರದಧಿಯೊಳಗೆ ಬಂದು ಮೋಜು ಮಸ್ತಿಯಲ್ಲಿ ಮುಳುಗುತ್ತಾನೋ ಆಗ ಆತನ ಬದುಕು ಮುಗಿಯಲು ಪ್ರಾರಂಭವಾಗುತ್ತದೆ.

ಇಂತಹ ಹಲವು ಸನ್ನಿವೇಶಗಳು ಹಿಂದಿ, ಕನ್ನಡ, ಮರಾಠಿ, ತಮಿಳು, ವಿವಿಧ ಭಾಷೆಗಳಲ್ಲಿ ರಿಯಾಲಿಟಿ ಶೋಗಳ ಪ್ರತಿಭೆಗಳನ್ನು ನೋಡಿದಾಗ ನಮಗೆ ಈ ವಿಷಯಗಳು ದಕ್ಕುತ್ತವೆ.

ಕನ್ನಡದ ರಿಯಾಲಿಟಿ ಶೋಗಳನ್ನು ಅವಲೋಕನ ಮಾಡಿದಾಗ, “ಹಳ್ಳಿಹೈದ ಪ್ಯಾಟೆಗ್ ಬಂದ”,  “ಪ್ಯಾಟಿ ಹುಡ್ಗೀರ್ ಹಳ್ಳಿ ಲೈಫು”,  “ಬಿಗ್ ಬಾಸ್” ಮುಂತಾದ ರಿಯಾಲಿಟಿ ಶೋಗಳು ಅಲ್ಲಿನ ‘ಪ್ರತಿಭೆಗಳ ಬದುಕು ಪ್ರದರ್ಶನ’ವಾಗುತ್ತದೆ. ‘ಮಾಗಿದ ಮನಸ್ಸುಗಳಿಗಿಂತ ಹಸಿ ಹಸಿ ಮನಸ್ಸುಗಳುಳ್ಳ ಯುವಕರ ಪಡೆ’ ಇರುವದನ್ನು ಕಾಣುತ್ತೇವೆ.

 ‘ಹಳ್ಳಿ ಹೈದ ಪ್ಯಾಟೆಗ್ ಬಂದ’ ರಿಯಾಲಿಟಿ ಶೋಗಳ ರಾಜೇಶ್ ನಮಗೆ ಉತ್ತಮ ಉದಾಹರಣೆಯಾಗಬಲ್ಲರು. ಆತ ತನ್ನ ಆದಿವಾಸಿಯ ನೆಲಮೂಲದ  ಬದುಕನ್ನು ಸ್ವೀಕರಿಸದೆ, ಅದನ್ನು ಮರೆತು, ನಗರದ ವೈಭವದ ಬದುಕಿಗೆ ತೆರೆದುಕೊಂಡು  ನಡುವಯಸ್ಸಿನಲ್ಲೇ ತನ್ನ ಜೀವವನ್ನೇ ಆಹುತಿಯಾಗಿದ್ದು ದುರಂತ. ಇದು ಆಗಬಾರದು.

ಇವರು ಬದುಕನ್ನು ಸ್ವೀಕರಿಸುವ ರೀತಿಗೂ ಇರುವ ಬದುಕನ್ನು ಇರುವ ಹಾಗೆಯೇ ಉಳಿಸಿಕೊಳ್ಳುವ ರೀತಿ ತುಂಬಾ ವ್ಯತ್ಯಾಸವಿದೆ. ಹಾಗಾಗಿ  ‘ನೆಲಮೂಲ’ದ ಅಪ್ಪಟ ಗ್ರಾಮೀಣ ಪ್ರತಿಭೆಗಳನ್ನು ಜನರು ಕಾಪಾಡಬೇಕಾದ ಜವಾಬ್ದಾರಿ ಅವರ ಪಾಲಕರ  ಮೇಲಿದೆ. ಅವರ ಪ್ರತಿಭೆ, ಕೌಶಲ್ಯ, ಜಾಣ್ಮೆ ಹಾಗೆಯೇ ಉಳಿಸಿಕೊಂಡು ಅದನ್ನು ಧನಾತ್ಮಕವಾಗಿ ಬಳಸಿಕೊಂಡಾಗ ಮಾತ್ರ ‘ಅವರ ಕಲಾ ಪ್ರಪಂಚದ ಬದುಕು’ ಸಾರ್ಥಕವಾಗುತ್ತದೆ. ಇಲ್ಲದೆ ಹೋದರೆ ಆ ಬದುಕು ತುಳುಕುಬಳುಕಿನೊಳಗೆ   ಮುಗಿದುಹೋಗುವ ಆತಂಕ ಕಾಡುತ್ತದೆ.

ಇಂತಹ ಅಪ್ಪಟ ನೆಲಮೂಲದ ಅನೇಕ ಗ್ರಾಮೀಣ ಪ್ರತಿಭೆಗಳು ರಿಯಾಲಿಟಿ ಶೋಗಳಲ್ಲಿ ನಾವು ಕಾಣುತ್ತೇವೆ. ಹನುಮಂತ ಲಮಾಣಿ,ದ್ಯಾಮೇಶ ಕಾರಟಗಿ, ರಾಜೇಶ ಚಾಮರಾಜನಗರ, ರಮೇಶ್ ಲಮಾಣಿ, ಸುನಿಲ, ದರ್ಶನ್ ಜಿ, ಮೋನಮ್ಮ, ಚೆನ್ನಪ್ಪ ಉದ್ದಾರ್.. ಮೊದಲಾದ ರಿಯಾಲಿಟಿ ಶೋಗಳ ಪ್ರತಿಭೆಗಳು ತಮ್ಮ ಹಾಡು, ಕುಣಿತ, ನೃತ್ಯ, ಮುಗ್ಧ ಮಾತುಗಳೇ… ರಿಯಾಲಿಟಿ ಶೋಗಳ ಬಂಡವಾಳವಾಗಿ ಇವುಗಳನ್ನು ಬಳಸಿಕೊಳ್ಳುತ್ತವೆ.

ಈ ರಿಯಾಲಿಟಿ ಶೋಗಳ ವ್ಯವಸ್ಥಾಪಕರು ಒಂದು ಹಂತದವರೆಗೆ ಅವರ ಪ್ರತಿಭೆಯನ್ನು ಮುನ್ನೆಲೆಗೆ ತರುತ್ತಾರೆ.  ಅದು ವಾಸ್ತವಿಕ ಸತ್ಯವೂ ಹೌದು.  ನಂತರದ ಬದುಕು ಕಟ್ಟಿಕೊಳ್ಳುವ ಸರದಿ ಆಯಾ ಪ್ರತಿಭೆಗಳದ್ದಾಗಿರುತ್ತದೆ. ಟಿ.ವಿ, ಸಿನಿಮಾ..ಅದು ಯಾವುದೇ ಇರಲಿ, ದೊಡ್ಡ ಪರದೇ ಇರಲಿ, ಚಿಕ್ಕ ಪರದೆ ಇರಲಿ, ಅದರ ಮೇಲೆ ಬಂದರೆ ಅದರದೇ ಆದ ಝಲಕ್ ತೆರೆದುಕೊಳ್ಳುತ್ತದೆ.  ಬಣ್ಣ ಬಣ್ಣದ ಕನಸುಗಳು, ಬಣ್ಣ ಬಣ್ಣ ಆಸೆಗಳೊಡನೆ ಪ್ರತಿಭೆ ಹೊಸ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತಾನೆ.

 ಹೀಗೆ ಸೃಷ್ಟಿಸಿಕೊಂಡ ಪ್ರಪಂಚ ಧನಾತ್ಮಕವಾಗಿದ್ದು ಬದುಕನ್ನು ಒಂದು ದಡಕ್ಕೆ ತರುವಂತಿರಬೇಕು ಇಲ್ಲದೆ ಹೋದರೆ ದಡದ ಮೇಲಿಂದ ಆಳವಾದ ಪ್ರಪಾತಕ್ಕೆ ಬೀಳುವ ಅಪಾಯವು ಕೂಡ ಇದೆ. ಆ ಅಪಾಯದಿಂದ ಪಾರಾಗುವ, ಎಚ್ಚರದಿಂದ ತಮ್ಮ ಪ್ರತಿಭೆಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಪ್ರತಿಭೆಗಳು ಮತ್ತು ಪ್ರತಿಭೆಗಳ ಪಾಲಕರ ಮೇಲಿರುತ್ತದೆ.

̲̲—————————

 

Leave a Reply

Back To Top