ಮಹೀಳಾ ಸಂಗಾತಿ
ಪ್ರೇಮಾ ಟಿ ಎಂ ಆರ್
“ನಮ್ಮೊಳಗಿನ ಅವಳು”

ಪೆಟ್ರೋಲ ಬಂಕ್ ನ ಕ್ಯೂನಲ್ಲಿದ್ದಾಳೆ ಅವಳು. ಮುಸ್ಸಂಜೆ ಐದು ಗಂಟೆಗೂ ಕಡಲ ತಡಿಗೆ ಅಂಡಿಕೊಂಡ ಊರಿನಲ್ಲಿ ಚಟಪಟ ಹುರಿದು ಹೋಗುವಷ್ಟು ಬಿಸಿಲೆಂದು ಚಡಪಡಿಸುತ್ತಾಳೆ. “ಏನಮ್ಮಾ ನೀನು, ಹತ್ತುವರ್ಷದಿಂದ ಹೇಳ್ತಿದ್ದೇನೆ ಏಸಿ ಹಾಕ್ಸಿಕೊಡ್ತೇನೆ ಅಂತಾ ನೀನ್ಕೇಳೋದೆ ಇಲ್ಲ” ಮಗನ ಮಾತು ನೆನಪಿಸಿಕೊಂಡು ಮುಗುಳ್ನಗುತ್ತಾಳೆ. ತಂಪುಗಾಳಿ ಸುಳಿದಾಡಿದ ಹಾಗೇ ಸುಖ. ಆದ್ರೆ ಅವ್ಳು ಒಪ್ಪಿಕೊಳ್ಳುವವಳಲ್ಲ.. “ಅಲ್ನೋಡು ಒಂದೇ ರೂಮಿನ ತಗಡಿನ ಗುಡಿಸಲು, ಪಾಪ ಒಂದು ಕಿಡ್ಕಿ ಕೂಡ ಇಲ್ಲ ಆ ಮನೆಗೆ, ಅವ್ರು ಬದ್ಕೋದಿಲ್ವಾ.” ಔಟ್ ಹೌಸಿನಲ್ಲಿ ಬದುಕುವ ಫೆಮಿಲಿಯ ಬದುಕನ್ನು ಅವನೆದುರು ಹಾಸಿ ದಬಾಯಿಸುತ್ತಾಳೆ.. “ಏಸಿ ಪೃಕೃರ್ತಿಯನ್ನ ಇಂಬೆಲೆನ್ಸ್ ಮಾಡುತ್ತೆ ಕಂದಾ” ಎನ್ನುತ್ತಾಳೆ.. “ಬದುಕಿಗೆ ಒಂದಷ್ಟು ಉಸೂಲ್ ಗಳಿರಬೇಕು ಚಿನ್ನು” ಎಂದು ವಾದಿಸುತ್ತಾಳೆ. ಯಾವುದೂ ಕೆಲ್ಸ ಮಾಡ್ದೇ ಇದ್ರೆ, “ಏಸಿ ಅಮ್ಮಂಗೆ ಅಲರ್ಜಿ. ಅದ್ರ ವಾಸನೆಗೆ ನಂಗೆ ತಲೆ ಸುತ್ತುತ್ತೆ ಕಂದಾ. ನೀನೇ ಕಳಿಸಿದ ಕೂಲರ್ ಇದೆ ಅಲ್ವಾ..? ಎಜ್ಜಸ್ಟ್ ಮಾಡ್ಕೊಂತೇನೆ, ಪಾಪ ಅಲ್ವಾ ಅಮ್ಮಾ.” ಇಮೋಷನಲ್ ಬ್ಲಾಕ್ಮೇಲ್ ಮಾಡುತ್ತಾಳೆ. ನೆನಪುಗಳ ಕೊಡವಿಕೊಂಡು ಈಚೆಗೆ ಬಿದ್ದರೆ… ಉಸ್ಸಪ್ಪಾ, ಈ ಕ್ಯೂ ಮುಗಿದೇ ಇಲ್ಲ.. ಯಪ್ಪಾ ಎಷ್ಟೊತ್ತು ಕಾಯುವದು? ಇಡೀ ಎರಡುದಿನ ತನ್ನ ಗಾಡಿ ರಿಪೇರಿ ಕೊಟ್ಕೊಂಡು ಒಂಚೂರು ನಿನ್ನ ಗಾಡಿ ಚಾವಿ ಕೊಡು ಎಂದು ಇದ್ದ ಪೆಟ್ರೋಲ್ ಕಾಲಿ ಮಾಡಿಟ್ಟುಬಿಟ್ಟ ಸಂಗಾತಿಯ ಮೇಲೆ ಉಕ್ಕರಿಸುತ್ತದೆ ಸಿಟ್ಟು. ‘ಪೆಟ್ರೋಲ್ ಚಿನ್ನ ಆಗೋಯ್ತು, ಚಿನ್ನ ದೇಸ ಬಿಟ್ಟೋಯ್ತು’ ತುಂಟ ಹಾಡೊಂದು ಗುನುಗುತ್ತದೆ ಮನ. ಮೊದ್ಲೆಲ್ಲ ಇನ್ನೂರು ರೂಪಾಯಿ ಕೊಟ್ರೆ ಸುಮಾರು ಮುಕ್ಕಾಲು ದಾಟುತ್ತಿದ್ದ ಪೆಟ್ರೋಲ್ ಟೆಂಕ್ ಈಗ ಅರ್ಧಕ್ಕೂ ಬರೋದಿಲ್ಲ.. “ನೀವು ನನ್ನ ಪೆಟ್ರೋಲ್ ಕಾಲಿ ಮಾಡಿದ್ರಿ ಸ್ವಲ್ಪ ಪೆಟ್ರೋಲ್ ಹಾಕ್ಸಿಬಿಡಿ” ಅಂದ್ರೆ ಕಿವಿಗೇ ಹಾಕ್ಕೊಳ್ಳದೇ ಇಲ್ಲ ಅಸಾಮಿ. ಇನ್ನಷ್ಟು ಉರಿಯುತ್ತದೆ ಸಿಟ್ಟು. ಹೆಚ್ಚು ಮಾತಾಡಿದ್ರೆ, “ನೀನು ಪೆಟ್ರೋಲ್ ಹಾಕ್ಸೋ ದುಡ್ಡು ನಾ ಕೊಡೋ ಪಾಕೀಟ್ ಮನೀನೇ” ಅಂದುಬಿಡ್ತಾರೆ ಅಂತ ಅವಳಿಗೆ ಗೊತ್ತು.. ಛೇ ನನ್ನ ಗಾಡೀಲಿ ಪೆಟ್ರೋಲೇ ಇಲ್ಲ ಅಂತ ಶತಪತ ನಾಲ್ಕು ರೌಂಡ್ ಹೊಡೆದರೂ ಜಪ್ಪಯ್ಯ ಅನ್ನೋದಿಲ್ಲ ಪುಣ್ಣಾತ್ಮ… ಅಥವಾ “ನೀ ನನ್ನ ಪರ್ಸ್ ಮುಟ್ಬೇಡ ನೋಡು, ಮೊದ್ಲೇ ಹೇಳ್ತೇನೆ.. ಮನೆಬಾಗ್ಲಿಗೆ ಮೀನು ಬಂದಿತ್ತು , ಬಸ್ಲೆ ತಕೊಂಡೆ, ಯಪ್ಪಾ ಆ ಗಾಡಿಯವ್ನು ಎಷ್ಟು ಚಂದ ಹೂವಿನ ಗಿಡ ತಂದಿದ್ದ, ಅದೂ ಇದೂ ಯಾವ್ಯಾವದೋ ನೆವ ಮಾಡಿ ಒಂದಷ್ಟು ಎಗರಿಸಿ ಅಪರಾ ತಪರಾ ಮಾಡಿಬಿಡ್ತೀಯಾ.. ಎಲ್ಲಿ ಖರ್ಚಾಯ್ತು ಅಂತ ಲೆಕ್ಕಕ್ಕೇ ಸಿಗಲ್ಲ” ನೇರ ಅಪವಾದ ಹೊರಿಸಿ ಬಿಡ್ತಾರೆ. ‘ಮೌನಮ್ ಸಮ್ಮತಿ ಲಕ್ಷಣಂ’ ಎಂದು ಸುಮ್ನೆ ಇದ್ಬಿಟ್ರೆ ನೋಡು ಕಳ್ಳ ಸಿಕ್ಬಿದ್ದ ಅಂದು ಬಿಡ್ತಾರೆ.. ಕುದಿಯುತ್ತದೆ ಮನ. ಯಾಕೋ ಸಿಕ್ಕಾಪಟ್ಟೆ ಜಗ್ಳ ಮಾಡ್ಬೇಕು ಅಂದ್ಕೊಂಡ್ರೆ ಅವಳಿಗೆಲ್ಲಿ ಬರುತ್ತೆ ಬೈಗೋಳು.. ನಿತ್ಯ ಕೋಳಿಗೋ, ಕುನ್ನಿಗೋ, ಬೇಲಿಗೋ, ಮಳೆನೀರಿಗೋ, ಕೊಟ್ಟಿಗೆಯ ದನಕ್ಕೋ, ಒಟ್ಟಿನಲ್ಲಿ ಯಾವುದೋ ಒಂದು ಕಾರಣಕ್ಕೆ ಜಗಳವಿರುವ ಕೇರಿಯಲ್ಲಿ ರಂಡೆ, ಮುಂಡೆ, ಬೋಳಿಮಗ್ನೆ, ಸೋಳಮಗ್ನೆ ,ಸುಟ್ಟ ಮೊಖದವ್ಳೆ ನಿನ್ನ ಬೋಳ್ ಕೆತ್ತುಕೆ ಇಂತಹ ತಾಜಾತಾಜಾ ಬಿಸಿಬಿಸಿ ಬೈಗಳುಗಳನ್ನು ನಿತ್ಯ ಕೇಳುತ್ತಲೇ ಬೆಳೆದ ಅವಳನ್ನು ಅವೆಲ್ಲವುಗಳಿಂದ ಹೊರಗಿಟ್ಟ ಜೀವಗಳು ಮೇಲಿನ ಲೋಕದಲ್ಲಿ. ಜಗಳಕ್ಕೆ ಶಬ್ದಗಳಿಲ್ಲದ ಮೇಲೆ ಹೆಂಗೆ ಜಗ್ಳ ಆಡೋದು. ಈ ಹೊತ್ತಿಗೆ ದೊಡ್ಡ ಬೈಗಳೆಂದ್ರೆ ಹೋಗಿ ಬನ್ನಿ ಎಂಬ ಬಹುವಚನ ಬಿಟ್ಟು ತಟ್ಟಂತ ಏಕವಚನಕ್ಕಿಳಿದುಬಿಡುವ ದಿವ್ಯಾಸ್ತ್ರ ಬಾಯಿಗೆ ಬಲ ತರುತ್ತದೆ. “ನೀ ನನ್ನ ಬಂಗಾರದಂತ ನೌಕ್ರಿ ಬಿಡ್ಸಿ ಮನೇಲಿ ಕುಳ್ಸದೇ ಇದ್ದಿದ್ರೆ ನಾನೆಂತಕೆ ಯಾರ್ದಾದ್ರೂ ಪರ್ಸ್ ಒಳ್ಗಿನ ದುಡ್ಡು ಕದೀತಿದ್ದೆ… ಈಗ ಪೈಸೆಗೂ ಲೆಕ್ಕಾಚಾರ ಕೊಡ್ಬೇಕು ನಿಂಗೆ” ಸಿಡಿಯುತ್ತಾಳೆ.. ಇವ್ರೂ ಪಕ್ಡಾ ಇದ್ದಾರೆ. “ಸೀತೆ ರಾಮನ್ನ , ರುಕ್ಮಿಣಿ ನಿನ್ನ ಕೃಷ್ಣನ್ನ ಏಕವಚನದಲ್ಲೇ ಕರೀತಿದ್ದುದಂತೆ.. ಮತ್ತೆ ನೀನು ಯಾಕೆ ಸಿಟ್ಟು ಇಳಿದಮೇಲೆ ಹೋಗಿ ಬನ್ನಿ ಅನ್ನೋದು? ನೀನು ಹೇಗೆ ಬೇಕಾದ್ರೂ ಕರಿ, ನಂದೇನೂ ತಕರಾರು ಇಲ್ಲಪ್ಪಾ” ಎಂದು ಸಣ್ಣಗೆ ನಕ್ಕು ಎದ್ದು ಹೋಗವವನ ಮೇಲೆ ಏನೋ ಒಂಥರಾ ಪ್ರೇಮವೋ ಮೋಹವೋ ಸ್ನೇಹವೋ ಎದೆಯಲ್ಲಿ ಮಿಸುಗಿ ಈ ಸುಮ್ಸುಮ್ನೆ ಬರಿಸಿಕೊಂಡ ಸಿಟ್ಟು ಕಾಲಡಿಗೆ ಹಾಗೇ ಹರಿದು ಹೋಗುತ್ತದೆ.. ಅದೇ ಮಗ ಮನೆಗೆ ಬಂದಾಗಾದ್ರೆ ಅವ್ನು ವರ್ಕ ಫ್ರಮ್ ಹೋಮ್ ಲ್ಲಿ ಎಷ್ಟೇ ಬ್ಯೂಸಿ ಆದ್ರೂ ಈ ಪೆಟ್ರೋಲ್ ಎಷ್ಟು ಬೇಗ ಕಾಲಿಯಾಗುತ್ತಪ್ಪಾ ಅಂತ ನನ್ನಷ್ಟಕ್ಕೆ ಸ್ವಗತದ ಹಾಡು ಹೇಳಿಕೊಂಡು ತಿರುಗಾಡಿದ್ರೆ ಕೇಳಿಸ್ಕೊಂಡು “ಪರ್ಸ ಅಲ್ಲಿದೆ, ತಕೊಂಡೋಗಿ ತುಂಬಿಸ್ಕೋ ಅಮ್ಮಾ ” ಅಂತಾನೆ. ಹೇಳೋ ರೀತೀನೂ ಎಷ್ಟೊಂದು ಮೆದು. ಮನೆಗೆ ಬರದೇ ಎಷ್ಟೊಂದು ದಿನಗಳಾದವು.. ಮನಸ್ಸು ಉರಿಯಲ್ಲೂ ಬೆಣ್ಣೆಯಾಗುತ್ತದೆ…
ಈ ಗೃಹಮುಚ್ಯತೇ ಎಂಬ ಅಟ್ಟವೇರಿದ ಹೆಣ್ಣುಗಳ ಹಣೆ ಬರಹಾನೇ ಇಷ್ಟು… ಸಣ್ಣ ಸಣ್ಣದಕ್ಕೂ ಲೆಕ್ಕಾಚಾರವೇ.. ಅವಳು ಎಲ್ಲರಂತಲ್ಲ.. ಅವಳಿಗೆ ದೇವಸ್ಥಾನಗಳನ್ನು ಸುತ್ತುವದೆಂದರೆ ಮೊದಲಿಂದಲೂ ಒಂಥರಾ ಕಂಠಾಳ.. ಹಾಗೆಂದು ಅವಳು ನಾಸ್ತಿಕಳಲ್ಲ.. ಆದರೆ ಅಲ್ಲಿ ಅವಳ ಮನ್ಸು, ಕಣ್ಣು ದೇವರ ಪಾದಗಳಲ್ಲಿ ಎಲ್ಲಿ ನಿಲ್ಲತ್ತದೆ..? ಹೆಣ್ಮಕ್ಕಳ ಹೇರ್ ಸ್ಟೈಲ್ , ಪರ್ಸು ,ಚಂದದ ಸೀರೆ, ಲೇಟೆಸ್ಟ್ ಬ್ಲೌಸ್ ಡಿಸೈನ್, ಹೈ ಹೀಲ್ಡ್ ಚಪ್ಪಲ್ಲು ಇವುಗಳ ಸುತ್ತಲೇ ಸುತ್ತುವ ಮನಸ್ಸಿಗೆ ಲಗಾಮು ಹಾಕುವದಕ್ಕೆ ಅವಳು ಸರ್ಕಸ್ಸು ಮಾಡಿ ಸೋತಿದ್ದಾಳೆ..ಇತ್ತೀಚೆಗೆ ಮನಸ್ಸಿನ ತಲೆಮೇಲೊಂದು ಮೊಟಕಿ ನಿನ್ ಮೊಖಕ್ಕೆ ನಿನ್ಗೆ ಮನೆಯಂಗಳದ ತುಳಸಿ, ಮನದಂಗಳದ ಕೃಷ್ಣ, ಮನೆಮಂದಿರದ ದೇವರುಗಳಷ್ಟೇ ಸಾಕುಬಿಡು ಎಂದು ಸಂತೈಸಿಕೊಂಡುಬಿಟ್ಟಿದ್ದಾಳೆ. ಅಪರೂಪಕ್ಕೆ ಹಬ್ಬಕ್ಕೋ ಹುಣ್ಣ್ಮೆಗೋ ಮಂದಿರಗಳಿಗೆ ಹೋದ್ರೂ ಅಲ್ಲಿ ಕಾಣಿಕೆ ಡಬ್ಬಿಗೆ ಐನೂರು, ಭಟ್ರ ತಟ್ಟೆಗೆ ನೂರರ ನೋಟುಗಳನ್ನು ತುರುಕುವ ಗಟ್ಟಿ ಕುಳಗಳನ್ನು ಕಂಡು ಹುಬ್ಬೇರಿಸುತ್ತಾಳೆ.. ಅವ್ಳ ಬಜೆಟ್ ಆಚೆಗೂ ಈಚೆಗೂ ಬರೀ ಹತ್ತೇ ರೂಪಾಯಿ. “ಅಪ್ಪಾ ಸ್ವಾಮಿ ನಾನು ದುಡಿಮೆ ಇಲ್ಲದ ದಂಡ್ಪಿಂಡ.. ನನ್ಗಂಡ ಮಕ್ಳು ಅನ್ಯಾಯವಾಗಿ ಒಂದ್ಕಾಸೂ ಗಳಿಸುವವರಲ್ಲ.. ಕ್ಷಮಿಸಿಬಿಡು ತಂದೆ ” ಎಂದು ಎಕ್ಸಕ್ಯೂಸ್ ಕೇಳಲು ಅವಳೇನೂ ಸಂಕೋಚ ಪಟ್ಕೊಳ್ಳೋದೇ ಇಲ್ಲ.. ಅವಳಿಗೆ ಬೇರೆಯವರು ಉಡುವ ಸೀರೆಗಳ ಮೇಲೆ ಇನ್ನಿಲ್ಲದಷ್ಟು ಮೋಹ.. ಅವ್ರು ಹರ್ಕುಪರ್ಕು ಉಟ್ರೂನು ‘ಅಬ್ಬೋ ಎಷ್ಟು ಚಂದ’ ಎಂದುಕೊಂಡು ಹೊಟ್ಟೆ ಉರಿಸಿಕೊಳ್ಳುತ್ತಾಳೆ.. ಮುಟ್ಟಮುಟ್ಟಿ ನೋಡಿ ಎಲ್ಲಿ ತಕೊಂಡ್ರಿ ಅಂತ ಕೇಳೋಕಿಂತ ಮೊದ್ಲು ಎಷ್ಟು ಕೊಟ್ರಿ ಅಂತಾಳೆ… ‘ಒಂಚೂರು ತುಟ್ಟಿಯಾಯ್ತೇನೋ’ ಒಳಗೊಳಗೆ ಲೆಕ್ಕ ಹಾಕುತ್ತಾಳೆ.. ಸೀರೆ ಫಾಲ್ ಗೂ ಚೌಕಾಸಿ ಮಾಡುವ ಅವಳು ಲೈನಿಂಗ್ ಬಟ್ಟೆ ಕೊಳ್ಳುವಾಗಲೂ ಮೀಟರಿಗೆ ಬದಲು ನೈಂಟಿ ಸೆಂಟಿ ಮೀಟರ್ ಸಾಕು ಎನ್ನುತ್ತಾಳೆ.. ಬರೀ ನಾಲ್ಕು ರೂಪಾಯಿಗಾಗಿ..
ಇನ್ನು ಅವ್ಳ ಮುಖದ ಅಲಂಕಾರವೆಷ್ಟು..? ಮಹಾ ಅಂದ್ರೆ ನೆನ್ಪಾದ್ರೆ ಒಂದಷ್ಟು ಮೊಯ್ಶ್ಚರೈಸರ್ ತಿಕ್ಕುತ್ತಾಳೆ, ಇಲ್ಲಾಂದ್ರೆ ಅದೂ ಇಲ್ಲ.. ಸನ್ಸ್ಕ್ರೀನ್ ಲೋಶನ್ ಗಳ ಅಬ್ಬರದ ಎಡ್ ಕಂಡು ಛೇ ಅದೂ ಬೇಕಾ? ನೋಡೇಬಿಡೋಣ ಎಂದು ‘ಮೈ ಶೊಪ್’ ಹೊಕ್ಕುತ್ತಾಳೆ.. “ಅರೇ ಫಿಫ್ಡಿ ಎಮ್ಮೆಲ್ ಗೆ ಅಟ್ರಾಶಿ ದುಡ್ಡಾ?” ಎಂದ್ಕೊಂಡು ಗಾಬರಿಯಾಗಿ ಬರಿಗೈಯ್ಯಲ್ಲಿ ಹಿಂದಿರುಗುತ್ತಾಳೆ.
ಯಾವ್ಯಾವಾಗ್ಲೋ ರೇಟ್ ಏರಿಸ್ಕೊಂಡು ಕೂತುಬಿಡುವ ಕೊಸ್ಮೆಟಿಕ್ಸ್ ಕಂಪನಿಗಳಿಗೆ ಹಿಡಿ ಶಾಪ ಹಾಕುತ್ತಲೇ, ಗೂಗಲಜ್ಜಿಯ ಮಡಿಲಲ್ಲಿ ‘ಹೋಮ್ ರೆಮಿಡಿ’ಗಾಗಿ ತಡಕಾಡುತ್ತಾಳೆ. ಐ ಬ್ರೋ ಟ್ರಿಮ್ ಮಾಡ್ಕೊಳ್ಳೋಕೆ ಅಂತ ಬ್ಯೂಟಿ ಪಾರ್ಲರ್ ಹೊಕ್ಕುವ ಅವಳು ಅಲ್ಲಿನ ಚಂದದ ಹೆಣ್ಣಗಳ ಮುಂದೆ ಸ್ಥಿತಪ್ರಜ್ಞೆ.. “ದೀದಿ ನಿಮ್ಮ ಮುಖದಮೇಲೆ ರಿಂಕಲ್ಸ್ ಬರೋಕೆ ಶುರುವಾಗಿದೆ, ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಸ್ಕೊಳ್ಳಿ ” ಅನ್ನುವ ‘ಜಿಯಾ’ ಎನ್ನುವ ಮುದ್ದಮುದ್ದು ಹಡುಗಿ ತುಂಬಾ ಇಷ್ಟವಾದರೂ, ಅವಳ ಸಲಹೆಯನ್ನು ಆಚೆ ತಳ್ಳುತ್ತಾಳವಳು.. ಮನೆಗೆ ಬಂದು ಮತ್ತೆಮತ್ತೆ ಕನ್ನಡಿಯಲ್ಲಿ ಇಣುಕಿ ಹೌದಾ..? ಹೌದಾ? ಎಂದು ನೂರುಬಾರಿ ಪ್ರಶ್ನಿಸಿಕೊಳ್ಳುತ್ತಾಳೆ… ಮತ್ತೆ ಏಜ್ ಆಯ್ತಲ್ವಾ? ನೊಟ್ ಅ ಬಿಗ್ ಇಷ್ಯೂ..’ ಎಂದು ಗಾಳಿಗೆ ತೂರಿ ಬಿಡುತ್ತಾಳೆ… ಯಾಕೋ ಒಂದ್ರಾಶಿ ಮಾತಾಡುವ ಅವಳು ಈಗ ಮೌನವನ್ನು ಹೆಚ್ಚು ಇಷ್ಟಪಡುತ್ತಾಳೆ. ಬದುಕೆಂದರೆ ಇತರರಿಗೆ ಹೊರೆಯಾಗದ ಹಾಗೆ ಬದುಕುವದು ಎಂದುಕೊಳ್ಳುವ ಇಂಥದ್ದೊಂದು ಕಂಜೂಸಿ ಹೆಣ್ಣು ನಿಮ್ಮ ಸುತ್ತಲೂ ಇದ್ದಾಳೆಯೇ…? ಅಥವಾ ನಿಮ್ಮೊಳಗೇನೇ…. ಇದ್ದರೆ ನನಗು ಪರಿಚಯಿಸಿ ಆಯ್ತಾ…..?
ಪ್ರೇಮಾ ಟಿ ಎಂ ಅರ್
