‘ನಾನೇಕೆ ಬರೆಯುವುದಿಲ್ಲ..?’ ವಿಶೇಷ ಬರಹ-ವಿಜಯೇಂದ್ರ ಪಾಟೀಲ ಅವರಿಂದ

ಚಿಕ್ಕಂದಿನಿಂದಲು ನನ್ನಲ್ಲೊಂದು ಸಮಸ್ಯೆಯಿದೆ.
ಏನಾದರು ಊಹಿಸಿಕೊಂಡು ಅಥವಾ ಕಾಲ್ಪನಿಕ ಸನ್ನಿವೇಶ ನಿರ್ಮಿಸಿಕೊಂಡು ನಾಲ್ಕಾರು ಸಾಲು ಬರೆಯುವುದೆಂದರೆ ನನಗೆ ಜೀವದ ಸುತ್ತು ಬರುತ್ತದೆ.ಅದೇಕೆ, ಕಣ್ಣ ಮುಂದೆ ನಡೆಯುವುದನ್ನೇ ಬರೆ ಎಂದರೂ ಬರೆಯುವುದು ಕಷ್ಟ ನನಗೆ.
          ನಾನಾಗ ಮೂರನೇಯತ್ತೆ. ಒಮ್ಮೆ ಅಜ್ಜ ಊರಿಗೆ ಹೋದಾಗ ಬಂದು ಹೋಗುವಂತೆ ಚಿಕ್ಕಪ್ಪನಿಗೊಂದು ಕಾಗದ ಬರೆಯಲು  ತಂದೆ ಹೇಳಿದ್ದರು. ಅದರಂತೆ ನಾನು, “ಅಜ್ಜ ಹೋದರು.ನೀನು ಬಾ” ಎಂಬ ಚುಟುಕು ಪತ್ರ ಬರೆದಿದ್ದೆ. ಮನೆಯಲ್ಲಿ,ಬಳಗದಲ್ಲಿ ದೊಡ್ಡ ಗಲಾಟೆಯೇ ನಡೆಯಿತು. ತಂದೆ, ” ನಿನಗೆ ಬರೆಯಲು ಬರುವುದಿಲ್ಲ.ಎಂದೂ ಬರೆಯಬೇಡ..” ಎಂದು ಸಕ್ತ ತಾಕೀತು ಮಾಡಿದ್ದರು. ಆ ಕ್ಷಣಕ್ಕೆ ಸ್ವಲ್ಪ ಬೇಜಾರಾದರೂ ಈ ಬರೆಯದೆ ಬಂದ ಸುಖದ ಬದುಕು ಆರಾಮಾಗಿಯೇ ಇತ್ತು. ಹೀಗಾಗಿ ನನ್ನ ಅತಿಬಾಲ್ಯ ಕಾಲದಲ್ಲೇ ನನಗೆ ಬರವಣಿಗೆಯ ಕಷ್ಟ ಹಾಗೂ ಬರೆಯದಿರುವ ಸುಖ ಎರಡರ ಅನುಭವವೂ ಆಯಿತು. ಆದರೆ ನಾನು ಕಾಯಮ್ಮಾಗಿ ಮೂರಕ್ಕುಳಿಯಲಾಗಲಿಲ್ಲ. ಆರಕ್ಕೇರುವ ಸ್ಥಿತಿ ಬಂತು.  ಮೂರನೇತ್ತೆಯ ಮಾಸ್ತರರು ಕೂಡ ಅಲ್ಲೇ  ಉಳಿಯದೆ ನಮ್ಮ ಜೊತೆಗೆ ಬಂದರು. ಎಲ್ಲ ಚನ್ನಾಗಿ ಯಾರು, ಎಷ್ಟು ದಿನ ಇರಲು ಸಾಧ್ಯ. ಅಲ್ಲವೇ?
                  ಇಂತಿರುವಾಗ,ಮಾಸ್ತರರು ಒಮ್ಮೆ ” ನಾನು ವಿಮಾನ ಚಾಲಕನಾದರೆ..” ಎಂಬ ವಿಷಯವಾಗಿ ನಿಬಂಧ ಬರೆದುಕೊಂಡು ಬರುವಂತೆ ಹೇಳಿದರು. ನಾವೆಲ್ಲ ವಿಮಾನ ನೋಡಿದವರೇ. ಚಿಣಿ-ಫಣಿ ( ಚಿಣ್ಣಿ-ದಾಂಡು) ಆಡುವಾಗ ಅಷ್ಟು ಎತ್ತರದ ಆಕಾಶದಲ್ಲಿ ಚಿಣಿ-ಫಣಿಯಂಥದೇ ಕಡ್ಡಿಗಳನ್ನು ಅಡ್ಡ- ಉದ್ದ ಜೋಡಿಸಿಕೊಂಡು ಗುರ್ ಎಂದು ಶಬ್ದ ಮಾಡುತ್ತ ಹಾರಿ ಹೋಗುವುದನ್ನು ತಲೆ ಎತ್ತಿ ನೋಡುತ್ತ ನಿಲ್ಲುತ್ತಿದ್ದೆವು. ಒಮ್ಮೊಮ್ಮೆ ತಲೆಯ ಮೇಲಿನ ಟೊಪ್ಪಿಗೆ ಹಿಂದಕ್ಕೆ ಜರಿದು ಬೀಳುವುದೂ ಇತ್ತು ! ಬಿದ್ದ ಟೊಪ್ಪಿಗೆಯನ್ನು ಬಿದ್ದಲ್ಲೇ ಬಿಟ್ಟು, ಚಿಣಿ-ಫಣಿಗಳನ್ನು ವಿಮಾನವಾಗಿಸಿ,ಕೈ ಎತ್ತರಿಸಿ, ಆಕಾಶದ ವಿಮಾನದ ಕೆಳಗೆ ಭೂಮಿಯಲ್ಲಿ ಅಷ್ಟು ದೂರ ಓಡಿ ಓಡಿ ಸಂಭ್ರಮಿಸುತ್ತಿದ್ದೆವು…
       ಈ ಸಂಭ್ರಮ ನಾನು ಅದರ ಚಾಲಕನಾದರೆ ಎಂಬ ಕಲ್ಪನೆಯೊಂದಿಗೆ ಹೊರಟೇ ಹೋಯಿತು. ಮೊದಲಬಾರಿ ಬರೆಯುವುದೆಂಬುದು ಭಯವೆನಿಸಿತು.  ಪಾರಾಗುವ  ಚಿಂತೆ ಕಾಡಿತು. ಎರಡು ದಿನ ಕಳೆಯುವಾಗ ಪ್ರಧಾನ ಮಂತ್ರಿಗಳು ತೀರಿ ಹೋದ ಸುದ್ದಿ ಬಂತು. ಆ ರಜೆಯ ಜೊತೆಗೆ ಹೊಂದಿಕೊಂಡು ವರ್ಷ ಮಧ್ಯದ ರಜೆಯೂ ಬಂತು. ಮಾಸ್ತರರು ಇದೇ ಸುಸಂಧಿಯನ್ನು ಉಪಯೋಗಿಸಿ ಸಕಾಲಿಕವಾಗಿ  “ನಾನು ಪ್ರಧಾನ ಮಂತ್ರಿಯಾದರೆ..?” ಎಂಬ  ಇನ್ನೊಂದು, — ಒಟ್ಟಿಗೆ ಎರಡು ನಿಬಂಧಗಳನ್ನು — ರಜೆಯ ಅವಧಿಯಲ್ಲಿ ಬರೆದುಕೊಂಡು ಬರಲು ಆಜ್ಞಾಪಿಸಿದರು. ವಿಮಾನ ಚಾಲಕ ಅಥವಾ ಪ್ರಧಾನ ಮಂತ್ರಿ ಎರಡೂ ಆಗಿರದ ಮಾಸ್ತರರ ಆಜ್ಞೆಯಿಂದಾಗಿ ನಮಗೆ ಬರೆಹದ ಭಯ ದ್ವಿಗುಣವಾಗಿ ರಜೆಯ ಸ್ವಾರಸ್ಯವೇ ಇಲ್ಲದಂತಾಗಿಬಿಟ್ಟಿತು!
     ಭಯಕ್ಕೆ ಬಲವಾದ ಕಾರಣಗಳಿದ್ದವು. ಅಂದಿನ ನಾವೆಲ್ಲ ಸೈಕಲ್ ಬಲ್ಲವರಾಗಿದ್ದೆವು. ಫಟಫಟಿ ( ಮೋಟಾರ್ ಸೈಕಲ್) ಮುಟ್ಟಿದ್ದೆವು.ಕಾರು ನೋಡಿದ್ದೆವು. ಬಸ್ ಏರಿದ್ದೆವು. ರೈಲು-ಹಡಗುಗಳನ್ನು ಚಿತ್ರಗಳಲ್ಲಿ  ಕಂಡಿದ್ದೆವು. ಈ ಹಿನ್ನೆಲೆಯ ನಾವು ಅಷ್ಟೆತ್ತರದ ವಿಮಾನ ಹತ್ತುವುದಾದರು ಹೇಗೆ? ಅದರ ಚಾಲಕನಾಗುವುದಾದೆಂದರೆ ಹೇಗೆ? ಬ್ಯಾಲೆನ್ಸ್ ಮಾಡಿಸಲು ಆಕಾಶದಲ್ಲಿ ಹಿಂದೆ, ಹಿಂದೆ ಯಾರು ಅದನ್ನು ಹಿಡಿದು ಬರುತ್ತಾರೆ? ಅಷ್ಟು ಸಣ್ಣ ವಿಮಾನದಲ್ಲಿ ಫಟಫಟಿ ಹೊಡೆಯುವವರಂತೆ ಎರಡೂ ಕಡೆಗೆ ಕಾಲುಹಾಕಿ ಕೂಡ್ರಬೇಕೊ, ಬಸ್ ಚಾಲಕರಂತೆ ಕಾಲು ಮುಂದೆ ಬಿಟ್ಟು ಕೂಡ್ರಬೇಕೊ?… ಮಾಸ್ತರರು ನಮ್ಮನ್ನು ಒಂದು,ಎರಡು,ಮೂರು… ಎಂದು ಒಂದೊಂದೇ ಕ್ಲಾಸು ಪಾಸು ಮಾಡಿಸಿಕೊಂಡು ಬಂದ ರೀತಿಯಲ್ಲಿಯೇ ಹಂತ ಹಂತವಾಗಿ ಫಟಫಟಿ, ಕಾರು, ಬಸ್ಸು, ರೈಲು-ಹಡಗುಗಳ ಚಾಲಕರನ್ನಾಗಿಸಿ, ಅನುಭವ ನೀಡಿ, ಮೊದಲು ಪ್ರಯಾಣಿಕರನ್ನು ಬದುಕಿಸಿ ನಾವೂ ಬದುಕುವಷ್ಟರ ಮಟ್ಟಿಗೆ ತಯಾರು ಮಾಡಿದ್ದರೆ ಆದದ್ದಾಗಲಿ ಎಂದು ವಿಮಾನ ಹೊಡೆಯಬಹುದಾಗಿದ್ದಿತೊ ಏನೊ! “ಮನೆ ಗೆದ್ದು ಮಾರು ಗೆಲ್ಲು” ಎಂದು ಹೇಳುವವರೇ ಒಮ್ಮಿಂದೊಮ್ಮೆಲೆ ವಿಮಾನದ ಹಾರಿಸು ಎಂದರೆ? ವಿಮಾನ ಹೊಡೆಯುವಾಗ ಆಕಸ್ಮಾತ್ ದೃಷ್ಟಿ ಕೆಳಗೆ ಹರಿದು ತಲೆ ಸುತ್ತಿ ಬಿದ್ದರೆ? ಆಗ ಬೀಳುವುದು ವಿಮಾನದ ಒಳಗೊ,ಹೊರಗೊ ಎಂಬುದು ಕೂಡ ನಮಗೆ ತಿಳಿದಿರಲಿಲ್ಲ. ಇಂದು ಆಗಾಗ ಬರುವ ಭಯಂಕರ  ತಲೆ ಸುತ್ತು ಅರ್ಥಾತ್  ‘ವರ್ಟಿಗೊ’ ಕಾಯಿಲೆಯ ಬೀಜ ಆ ಭಯದ ಕಾವಿನಲ್ಲಿಯೇ ಅಂದೇ ಮೊಳೆತಿರಬೇಕು ಎಂದು ಈಗ ನಕ್ಕೀಯಾಗಿದೆ.
      ಈ ಚಿಂತೆಯ ಜೊತೆಗೆ ಅಪರಾತ್ರಿಯಲ್ಲಿಯ ಹೊಗೆ ವಿಮಾನದಂತೆ ಇನ್ನೊಂದು ಜವಾಬ್ದಾರಿಯ ನೆನಪಾಯಿತು.  ಗುರ್ ಎನ್ನುವ ಜೋರಾದ  ವಿಮಾನದ ಸದ್ದಿನಲ್ಲಿ ” ನಾನು ಪ್ರಧಾನ ಮಂತ್ರಿಯಾದರೆ?” ಎಂಬುದನ್ನು ಮರೆಯುವಂತಿರಲಿಲ್ಲ.


        ‌‌‌‌‌‌ನಾನು  ಪ್ರಧಾನಿಯಾದರೆ ವಿದೇಶಗಳಿಗೆ ಹೋಗಬೇಕಾಗುವುದು. ಅದು ಚೆಂದ. ಅಥವಾ ಅದೊಂದೇ ಚೆಂದ. ಆದರೆ ವಿಮಾನದ ಮೂಲಕವೇ ಹೋಗಬೇಕಾಗುವುದು.ನಾನು ಪ್ರಧಾನ ಮಂತ್ರಿಯಾಗಿ ನನ್ನ ವಿಮಾನಕ್ಕೆ ನನ್ನಂಥವನೆ ಒಬ್ಬ  —ಉದಾಹರಣೆಗೆ, ಸಹಪಾಠಿ ಪತ್ತಾರ ಕಾಳಪ್ಪ— ಚಾಲಕನಾದರೆ?
ನಾವಿಬ್ಬರು ಸೈಕಲ್ ಹೊಡೆಯುವಾಗ ಬಿದ್ದದ್ದಕ್ಕೆ, ಕೆಡವಿದ್ದಕ್ಕೆ, ಯಾರು ಯಾರಿಗೊ ಹಾಯಿಸಿದ್ದಕ್ಕೆ ಲೆಕ್ಕವೇ ಇರಲಿಲ್ಲ. ಇಷ್ಟಾಗಿ ಅವನು ಕೂಡ ಈ  ನಿಬಂಧಗಳೆರಡನ್ನು ಬರೆಯುವವನಾದ್ದರಿಂದ ಅವನೂ ಚಾಲಕನಾಗಬಹುದು ಅಥವಾ ಪ್ರಧಾನ ಮಂತ್ರಿಯೇ ಆಗಿಬಿಡಬಹುದು.(ಒಬ್ಬನೇ ಎರಡೂ ಆಗುವುದು ಸಾಧ್ಯವಿಲ್ಲ  ಎಂಬಷ್ಟು  ತಿಳುವಳಿಕೆಯಿತ್ತು.) ಒಟ್ಟಾರೆ, ಪ್ರಧಾನ ಮಂತ್ರಿಯಾಗಿ ವಿಮಾನದಲ್ಲಿ ಕೂಡ್ರುವುದು ಅಥವಾ/ಹಾಗು ಪ್ರಧಾನ ಮಂತ್ರಿಯಂಥವರನ್ನು ಕೂಡ್ರಿಸಿಕೊಂಡು ವಿಮಾನ ಚಾಲನೆ ಮಾಡುವುದು ಎರಡರಲ್ಲೂ ವಿಮಾನ ಇರುವುದರಿಂದ ಇದು ಅಪಾಯಕಾರಿಯೇ. ಇಂತಹ ಸನ್ನಿವೇಶದಲ್ಲಿ ನಿಬಂಧಗಳನ್ನು ಬರೆದುಕೊಳ್ಳುತ್ತ ಕೂಡ್ರುವುದು ನನ್ನಿಂದಾಗದೆ, ಮಾಸ್ತರರನ್ನುದ್ದೇಶಿಸಿ ನಾಲ್ಕಾರು ಸಾಲುಗಳ  ‘ನಿ-ವೇದನೆ’ ಯ ಪತ್ರವೊಂದನ್ನು ಬರೆಯಬೇಕೆಂದು ನಿರ್ಧರಿಸಿ ಬರೆಯತೊಡಗಿದರೆ ಅದು ನನ್ನ ಮೀರಿ ಒಂದೆರಡು ಪುಟವೇ ಆಗಿ ಬಿಟ್ಟಿತು! ಮಾಸ್ತರರು ಅದನ್ನು ಓದಿದರು ಮಾತ್ರವಲ್ಲ,”ಶಾಭಾಶ್! ವಿಭಿನ್ನ ಬರೆಹ!! ಏಕೆ ಬರೆಯಬೇಕು ಎಂಬಂತೆಯೇ ಏಕೆ ಬರೆಯಬಾರದು ಎಂಬುದೂ ತಿಳಿದಿರಬೇಕು. ಪರಿಗ್ರಹಣದಂತೆ ಅಪರಿಗ್ರಹಣದ ಕಲ್ಪನೆ ಕೂಡ ಇರಬೇಕು…” ಎಂದು ಬೆನ್ನು ತಟ್ಟಿದರು. ನನಗೆ ಏನೇನೂ ಅರ್ಥವಾಗಲಿಲ್ಲ.ಆದರೆ ಬೆನ್ನು ತಟ್ಟಿದ್ದರಿಂದ ಒಪ್ಪಿಗೆ ಸಿಕ್ಕಿತೆಂಬುದಂತೂ ತಿಳಿಯಿತು. ಮತ್ತು ಮಾಸ್ತರರು ಆರನೇತ್ತೆಯವರಾದರೂ ಬಹಳ ಶಾಣ್ಯಾ ಎಂಬ ಗೌರವವೂ ಮೂಡಿತು.                                                                        ಮುಂದೆ ಹೈಸ್ಕೂಲಿನಲ್ಲಿ ಸಾಹಿತಿಗಳೊಬ್ಬರಿಂದ “ಬರೆಹ ಬದುಕಿಸುತ್ತದೆ” ಎಂಬ ಭಾಷಣ ಕೇಳಬೇಕಾಗಿ ಬಂದದ್ದು, ನಾನು ನನ್ನ  ಏರದ-ಹಾರದ  ಹಳೆಯ ವಿಮಾನ ನೆನೆದು, “ಬರೆಯದಿರುವುದೇ  ಹೆಚ್ಚು ಚನ್ನಾಗಿ ಬದುಕಿಸುತ್ತದೆ” ಎಂದು ಮನಸ್ಸಿನಲ್ಲಿಯೇ ಅವರಿಗೆ ಉತ್ತರ ಕೊಟ್ಟದ್ದು, ಎಲ್ಲಾ ನೆನಪಿನಲ್ಲಿ ಉಳಿದ  ಸಂಗತಿಗಳು…!
                ಈ ನಿಬಂಧ ನಾಟಕದ ಸುಖಾಂತ್ಯದ  ಪ್ರಭಾವವೊ, ನನ್ನ ಅನೂಚಾನ ಸ್ವಭಾವದಲ್ಲಿಯ ರಚನಾ ದೋಷವೊ, ಅಂತೂ ಯಾರಾದರು ಏನಾದರು ಹೇಳಿದರೆ – ಕೇಳಿದರೆ  ‘ ಹೂಂ..’ ಅನ್ನುವ ಬದಲು ಅದರ ವಿರುದ್ಧದ ‘ ಊಂ ಹೂಂ..’  ದಿಕ್ಕಿನತ್ತ ಒಮ್ಮೆ ದೃಷ್ಟಿ ಹಾಯಿಸುವ ಕ್ರಮವೊಂದು ಬೆಳೆದು ಬಂತು. ನಾನು ಈ ತನಕ ಯಾರಿಗೂ ಹೇಳಿಲ್ಲದ ವಿಚಿತ್ರ ಸಂಗತಿಯನ್ನು ಈಗ ನಿಮಗೆ ಹೇಳಬೇಕು, ಏನೆಂದರೆ — ಯಾರಾದರು ಎದುರು ಬಂದು ನಿಂತರೆ ಫಕ್ಕನೆ ಅವರ ತಲೆಯ ಹಿಂಭಾಗ ಮೊದಲು ಕಂಡಂತಾಗಿ, ಜೊತೆಗೆ ಬೆನ್ನಿನ ಭಾಗದ ಬನಿಯನ್ನಿನ ತೂತು ಗೋಚರಿಸಿ ಆಮೇಲಾಮೇಲೆ — ಕತ್ತಲೆಗೆ ಕಣ್ಣು ಹೊಂದಿಕೊಳ್ಳುತ್ತದಲ್ಲ, ಹಾಗೆ– ಅವರ ಮೂಗು,ಮುಖ, ಕಣ್ಣುಗಳು ಮುಂದೆ ಬಂದು ನಿಲ್ಲುತ್ತವೆ. ಒಂದು ರೀತಿಯ ಇರುಸು ಮುರುಸು ಆಗತೊಡಗುತ್ತದೆ….  ಹೀಗೆಲ್ಲ ಆಗುವುದನ್ನು ಹೇಳುವುದಾದರು ಹೇಗೆ?
       ಇದೆಲ್ಲ ಕಳೆದು ಎಷ್ಟೋ ವರ್ಷಗಳಾಗಿ ನೌಕರಿ-ಗೀಕರಿ ಮಾಡಿಕೊಂಡು ಆರಾಮಾಗಿ ಇದ್ದ ಈ ವೇಳೆಯಲ್ಲಿ, ಮೊನ್ನೆ ಮೊನ್ನೆ ನನ್ನನ್ನು ಹುಡುಕಿಕೊಂಡು ಪತ್ರಿಕೆಯ ಸಂಪಾದಕರ ಪತ್ರವೊಂದು ಬಂತು. ‘ನಾನೇಕೆ
 ಬರೆಯುತ್ತೇನೆ?’ ಎಂಬ ವಿಷಯವಾಗಿ ಅವರಿಗೆ ಲೇಖನವೊಂದು ಬೇಕಾಗಿದೆಯಂತೆ! ನಾನು ಕ್ಷಣಾರ್ಧದಲ್ಲಿ ಹಕೀಕತ್ತು  ಅರ್ಥ ಮಾಡಿಕೊಂಡು ಸಾಧ್ಯವಾದರೆ ಎಲ್ಲರಿಗು ತಿಳಿಯಲಿ ಎಂಬರ್ಥದಲ್ಲಿ ಗಂಟು ಮುಖ ಮಾಡಿಕೊಂಡೆ. ಇಂತಹ ಪತ್ರಗಳು ಬರುತ್ತಲೇ ಇರುತ್ತವೆ ಮತ್ತು ಬಂದಾಗಲೆಲ್ಲ ನನಗೆ ಎಡಚೆಡಚಾಗತೊಡಗುತ್ತದೆ….  ನಾನು ಸಾಹಿತ್ಯ ಬಿಟ್ಟರೂ ಅದು ನನ್ನನ್ನು ಬಿಡುತ್ತಿಲ್ಲ! ಕಾಗದವನ್ನು ಬೀದಿಯ ಕೊನೆಯಲ್ಲಿರುವ ನನ್ನ ಹೆಸರಿನವನೇ ಆದ ಲೇಖಕ ಮಹಾಶಯರಿಗೆ ತಲುಪಿಸುವ ವ್ಯವಸ್ಥೆಯನ್ನೇನೊ ಮಾಡಿದೆ. ಆದರೆ ಆತ್ಮ ಸಾಕ್ಷಿಯನ್ನು ಅಲುಗಾಡಿಸಿ ಹೋದ “ನೀವೇಕೆ ಬರೆಯುತ್ತೀರಿ..?” ಯಿಂದ ಹೊರಬರಲಾಗಲಿಲ್ಲ.


                            ತಮ್ಮ ಪಾಡಿಗೆ ತಾವು ಬರಕೊಂಡು ಹೋಗುವವರಿಗೆಲ್ಲ ” ನೀವೇಕೆ ಬರೆಯುತ್ತೀರಿ” ಎಂದು ಏಕೆ ಕೇಳಬೇಕು ? ಅದಕ್ಕೆ ಉತ್ತರ ಅಪೇಕ್ಷಿಸುವುದರ ಉದ್ದೇಶವಾದರು ಏನು? ” ನಿಮ್ಮ ಬರವಣಿಗೆ ಸಾಕಾಗಿದೆ, ನೀವು ಏಕಾದರು ಬರೆಯುತ್ತೀರಿ,ಇನ್ನಾದರು ನಿಲ್ಲಿಸಿ” ಎಂಬರ್ಥದಲ್ಲಿ  ಕೊಟ್ಟ ನೋಟೀಸಿನಂತೆ ಕಾಣುವುದಿಲ್ಲವೇ ಇದು? ಮತ್ತು ಅತ್ಯಂತ ಸೂಕ್ಷ್ಮದವರು ಎನಿಸಿಕೊಳ್ಳುವ ಈ  ಸಾಹಿತಿಗಳಿಗೆ ಇದು  ತಿಳಿಯುವುದಿಲ್ಲ ಹೇಗೆ? ಏನು ಕೇಳಿದರು ಸಾಕು, ಇದ್ದಲ್ಲಿಯೇ ಎದ್ದುನಿಂತು  ‘ನಾನು ಬರೆಹವನ್ನು ಹೀಗೆ  ಕಾಣುವುದು, ಹಾಗೆ ಅಂದುಕೊಳ್ಳುವುದು, ಅದು ನನ್ನ ಒಳಗಿನದನ್ನು ಬಡಿದೆಬ್ಬಿಸುತ್ತದೆ, ನನ್ನ ಜೀವನ್ಮರಣದ ಪ್ರಶ್ನೆ..’ ಮುಂತಾಗಿ ಅದಕ್ಕೇನಾದರು ಸಮಜಾಯಿಷಿ ಕೊಡಲು ಹಾತೊರೆಯುತ್ತಾರಲ್ಲ, ಇದು ಆ ಉದ್ಧಟ ನೋಟೀಸಿಗೆ ಕೊಡುವ ಅನಗತ್ಯ ಸ್ಪಷ್ಟೀಕರಣ  ಅನಿಸುವುದಿಲ್ಲವೇ? ಹೀಗೆ ಏನೇನೊ ಅಂದುಕೊಂಡದ್ದೇನೊ ಆಯ್ತು, ಸಮಾಧಾನವಾಗಲಿಲ್ಲ. ಸಾಹಿತಿಗಳಿಗೂ ಪಾಪ! ಹೀಗೇ ಆಗುತ್ತದೊ ಏನೊ ಅನ್ನಿಸಿದಾಗ ಕೊಂಚ ಮೃದುವಾದೆ.  ಆದರೆ ಇದು ನನ್ನನ್ನೇ ಸುತ್ತುವರಿಯುತ್ತಿರುವಂತೆ, ಮೆಟ್ಟಿಕೊಳ್ಳುತ್ತಿರುವಂತೆ ಭಾಸವಾಗಿ ಗಾಬರಿಯಾದೆ! ಇದು ಕಾಕತಾಳೀಯವಾಗಿರಲಿಕ್ಕಿಲ್ಲ. ಬರೆಯದ ನನ್ನನ್ನು           ” ನೀವೇಕೆ ಬರೆಯುತ್ತೀರಿ?” ಎಂದು ಹುಡುಕಿಕೊಂಡು ಬಂದು ಕೇಳುವುದು ಆಕಸ್ಮಿಕವೂ ಅಲ್ಲ.  ಯಾವುದೂ ಕಾರ್ಯ ಕಾರಣ ಸಂಬಂಧ ಇರದೆ ಘಟಿಸುವುದಿಲ್ಲ…. ನಾವು ಒಂದೇ ಓಣಿಯಲ್ಲಿರುವುದರ ಹಿಂದೆ ಏನೊ ಇದೆ. ಪೋಸ್ಟ್ ಮನ್ ಹೇಳುವಂತೆ ಆತ ನನ್ನ ಹಾಗೇ ಇರುವ,ನನ್ನ ವಯಸ್ಸಿನವನೆ ಎಂಬುದು ಖಂಡಿತ ಸೋಜಿಗ ಮಾತ್ರ ಎಂದುಕೊಳ್ಳುವಂಥದಲ್ಲ. ವಿಚಿತ್ರವೆಂದರೆ ನನಗೆ ಬರುವ ಪತ್ರಗಳು ನನಗೇ ಬರುತ್ತವೆ. ಆದರೆ ಅವನಿಗೆ ಬರುವ ಸಾಹಿತ್ಯ ಸಂಬಂಧಿ ಕಾಗದಗಳು ನನ್ನಲ್ಲಿಗೆ ಬಂದು ನನ್ನನ್ನು ಮೊದಲ ಓದುಗನನ್ನಾಗಿಸಿದ ಮೇಲೆಯೇ ಅವನಿಗೆ ತಲುಪುತ್ತವೆ. ಇವೆಲ್ಲ ಆಗುತ್ತಿರುವುದು ಹಾಗೇ ಸುಮ್ಮನೆಯೇ? ಇದರ ಹಿಂದೆ ಯಾವುದಾದರು ಅಲೌಕಕ ಫಿತೂರಿ ಇದ್ದಿರಬಹುದೇ? ಇದರ ಜೊತೆಗೆ ಯಾವುದೊ ಕಾಣದ ಕೈಯೊಂದು ” ನಾನೇಕೆ ಬರೆಯುತ್ತೇನೆ?” ಎಂಬುದಕ್ಕೆ ನನ್ನಿಂದ ಮೇಲ್ನೋಟಕ್ಕೆ ಉತ್ತರವನ್ನು ಅಪೇಕ್ಷಿಸುತ್ತಿರುವಂತೆ ಕಾಣಿಸುವ ಮೂಲಕ ನಾನು ಮುಚ್ಚಿಟ್ಟುಕೊಂಡ ನನ್ನ ತಪ್ಪುಗಳನ್ನು ಹೊರತರಲು ಹೊಂಚುತ್ತಿರಬಹುದೇ..?  ಅಥವಾ ಈ ನೆಪದಲ್ಲಿ ನಾನೇಕೆ ಬರೆಯುತ್ತಿಲ್ಲ ಎಂಬುದರ ನಿಜವಾದ ಕಾರಣವನ್ನು ನನ್ನಿಂದ ಲೋಕದ ಮುಂದೆ ಇರಿಸಿ ಅದರ ಕಲ್ಯಾಣ ಮಾಡಲು ಹೊರಟಿದೆಯೇ? ಈ ಚಿಂತೆಯೇ ಬಲವಾಗಿ  ಬಾಲ್ಯಕಾಲದ ಪರರನ್ನೇ ಉದ್ದೇಶಿಸಿ ಕೊಟ್ಟ ‘ನಿ-ವೇದನೆ ‘ ಯಂಥ ಮತ್ತೊಂದಕ್ಕೆ ಮನಸ್ಸು ಸಿದ್ಧವಾಗತೊಡಗಿತು. ಆದರೆ ಅದು ನನ್ನ ಯೋಜನೆ ಮೀರಿ ನನಗೆ ನಾನೇ ಬರಕೊಂಡ ಆತ್ಮ ನಿವೇದನೆಯ ರೂಪ ತಾಳಿತು.

           ಬಾಲ್ಯಕಾಲದಲ್ಲೇನೊ ನಾನು ಪದದ್ವಯಗಳನ್ನು ನಿರಾಕರಿಸಿದೆ. ಬರೆಯವುದನ್ನೂ ಬಿಟ್ಟೆ. ಈಗಲೂ ಏನೂ ಬರೆಯುತ್ತಿಲ್ಲ. ಇದೆಲ್ಲ ನಿಜ. ಆದರೆ ಇವುಗಳ ನಡುವೆ ಒಂದಿಷ್ಟು ಏನೇನೊ ಆಗಬಾರದ್ದು ಆಗಿದ್ದನ್ನು ಹೇಳದೆ  ಮುಚ್ಚಿಟ್ಟುಕೊಂಡಿದ್ದೆ….  ಕಾಲೇಜು ಸೇರಿ ಹದಿಹರೆಯಕ್ಕೆ ಬಂದಾಗ ನನ್ನೊಳಗೆ ಜನಿಸಿದ ನವನವೀನ ಹಾರ್ಮೋನುಗಳು ಕಾಣದ, ಕೇಳಿರದ ಹಾರ್ಮೋನಿಯಂ ನುಡಿಸತೊಡಗಿದವು. ‘ ದಾರಿ ತಪ್ಪಿ ನಡೆದೆ, ಸೇರಿದೆ ಕುಜನರ ‘ ಎಂಬಂತಾಗಿ ಏನೇನೊ ಆಗತೊಡಗಿತು. ಮರ, ಬಳ್ಳಿ, ಹೂವು ನೋಡಿದರೆ ಯಾವುದೊ ಮುಖ ಕಾಣುವುದು. ಮಾವಿನ ಹಣ್ಣು ಯಾರದೊ ಹೃದಯದಂತೆ ಕಾಣುವುದು. ಅಷ್ಟೇ ಏಕೆ,  ಕೊಟ್ರೇಶ್ ಕ್ಯಾಂಟೀನಿನಲ್ಲಿಯ ಚೌ ಚೌ ಭಾತ್ ನೋಡಿದರೂ ಒಂದು ವರ್ಣಮಯ,ಸುವಾಸನೆ ಬೀರುವ ಜೋಡಿಯಂತೆ ಭಾಸವಾಗುವುದು. ಬೇಲಿ  ಮೇಲಿನ  ಹೂ  ಬಡವರ  ಹೆಣ್ಣಿನಂತೆ, ತೆರೆಸ್ ಮೇಲಿನದು ಸಿರಿವಂತರದಂತೆ ಕಂಡರೂ ಅದಕು-ಇದಕು-ಎದಕು ಸರಿ ಸಮನಾದ ಪ್ರೀತಿ ಹೊಮ್ಮುವುದು. ನನಗಿಂತ ನನ್ನ ಗೆಳೆಯನ ಸ್ಥಿತಿ ತೀರ ಕೆಟ್ಟಿತ್ತು. ಟ್ರ್ಯಾಕ್ಟರ್, ರೋಡ್ ರೋಲರ್ ಗಳೂ ಅವನಿಗೆ ಸುಂದರವಾಗಿ ಕಾಣತೊಡಗಿದ್ದವು. ಬರೆಯಬೇಕೆಂಬ ತೀವ್ರ ತುಡಿತದ ಹೊರತಾಗಿಯೂ ನಾವು ಕವಿತೆ  ಬರೆಯುವುದನ್ನು ತಡೆದುಕೊಂಡಿದ್ದೆವು.  ನಮ್ಮ ಜೊತೆಯಲ್ಲಿ ಕಾಲೇಜು ಸೇರಿದ ಹುಡುಗಿಯರಿಗೆ ಕೂಡ ಕವಿತೆ ಬರೆಯುವಂತಾಗುತ್ತದೆಯೇ ಎಂಬ ಸಲ್ಲದ ಕುತೂಹಲ ನಮ್ಮಲ್ಲಿತ್ತು. ಹೀಗಿರುವಾಗ, ಬೆಣ್ಣೆ ಬೆಂಕಿಯ ಹತ್ತಿರ ಬಂದಂತೆ ಒಂದು ದಿನ ನಮಗೆ ಶಂಕರಚಂದ್ರ ಬಗಲಬಂಡಿಯ ಪರಿಚಯವಾಯ್ತು. ಆತ ಹಾಸ್ಟೆಲ್ಲಿನ ಪ್ರಸಿದ್ಧ ಕವಿ. ಶಂಚಂಬಂ ಆತನ  ಕಾವ್ಯನಾಮ. ಕಾಲೇಜಿನ ಕಾರ್ಯಕ್ರಮಗಳಲ್ಲಿ ಆತ ನೆರವೇರಿಸುವ ಅತಿಥಿಗಳ ಪರಿಚಯ ಜಗತ್ಪ್ರಸಿದ್ಧ. ಅದೊಂದು ಕಾವ್ಯಾರ್ಥ ಚಿಂತನ. ಬಿಟ್ಟ ಸ್ಥಳ ತುಂಬಿರಿ ಮಾದರಿಯಲ್ಲಿ ಕವನದ ಮಾದರಿ ರಚಿಸಿಟ್ಟುಕೊಂಡು ಬಂದ ಅತಿಥಿಗಳ ಹೆಸರು ತೂರಿಸಿ ಜೈ ಅನಿಸಿಕೊಳ್ಳುತ್ತಿದ್ದ. ಉದಾಹರಣೆಗೆ,ಕಾಲೇಜಿನ ಅಧ್ಯಕ್ಷರ ಹೆಂಡತಿಯನ್ನು ಒಮ್ಮೆ ಹೀಗೆ ಪರಿಚಯಿಸಿದ್ದ.


     ಅಂದು ದಾದಾಭಾಯಿ ನವರೋಜಿ
     ಇಂದು ರಾಧಾಬಾಯಿ ಕಾಮೋಜಿ

— ಇಂತಹ ಅನೇಕ ಫಾರ್ಮುಲಾಗಳು ಅವನ ಬಳಿ ದಂಡಿಯಾಗಿದ್ದವು. ಅತಿಥಿಗಳ ಹೆಸರಿಗೆ ತಕ್ಕಂತೆ ಪ್ರಾಸ ಹೊಂದಿಸುತ್ತಿದ್ದ. ಪಾಕೆಟ್ ಡೈರಿ, ಅಂಕಲಿಪಿ (ಮಗ್ಗಿ ಪುಸ್ತಕ) ಸೈಜಿನ ಎರಡು ಪುಸ್ತಕ ಅವನ ಹೆಸರಲ್ಲಿ ಬಂದಿದ್ದವು.”ನೀವೇನು ಬರೆದಿದ್ದೀರಿ?” ಎಂದು ಕೇಳಿ ಗಾಬರಿಗೊಳಿಸಿದ. ನನ್ನ ಕೈಯ್ಯಲ್ಲಿಯ ದಪ್ಪ ಪುಸ್ತಕ ನೋಡಿ    “ಓದು ಬರೆಹದ ಶತ್ರು” ಎಂಬ ಕಿವಿಮಾತು ಹೇಳಿದ. ಓದುತ್ತ ಕುಳಿತರೆ ಕವನ ಯಾವಾಗ ಬರೆಯುವಿರಿ? ಎಂದೂ ಕೇಳಿದ. ಅವನ ಕೋಣೆ ನೋಡಿದೆ.ಒಂದೂ ಪುಸ್ತಕ ಇರಲಿಲ್ಲ.ಅವನ ವಿಪುಲ ಸಾಹಿತ್ಯದ ಗುಟ್ಟು ಅದೇ ಆಗಿತ್ತು.
        ಈ ಹಿನ್ನೆಲೆಯ ಬಾಹ್ಯ ಮತ್ತು ಆಂತರಿಕ ಒತ್ತಡದಲ್ಲಿ ನಾನು ಒಂದೆರಡು ಪ್ರೇಮ ಕವನದಂಥವುಗಳನ್ನು ಬರೆದೆ. ರೋಡ್ ರೋಲರ್ ಗೆಳೆಯ ಒಂದು ಕಥೆ ಬರೆದ.  ಸುಮ್ಮನಿದ್ದಿದ್ದರೆ ಆಗುತ್ತಿತ್ತು. ಇಬ್ಬರೂ ಹೋಗಿ ಪ್ರೊಫೆಸರ್ ಭಾಗೋಜಿಯವರಿಗೆ ತೋರಿಸಿದೆವು. ಮರುದಿನ ಬರಲು ಹೇಳಿದರು. ಹೋದೆವು. ನನ್ನ ಕವಿತೆಗಳನ್ನು ನನ್ನ ಮುಂದೆಯೇ ಮತ್ತೊಮ್ಮೆ ಓದಿ ಕರುಣಾ ಭಾವದಿಂದ ನೋಡಿದರು. ದಳ ದಳ ಕಣ್ಣೀರು ಸುರಿಸಿದರು. ಇದನ್ನೇಕೆ ಬರೆದೆ ಎಂದು ಕೇಳುತ್ತಿದ್ದರೇನೊ, ನನ್ನ ಮೀಸೆ ಮೂಡುವ ಜಾಗ ನೋಡಿ ಕಾರಣ ಹೊಳೆದಂತೆ ಏನನ್ನೂ ಕೇಳದೆ ಸುಮ್ಮನಾದರು.
ಗೆಳೆಯನ ಕತೆ ಓದಿದ್ದರು. ನಾನು ಮೊದಲೇ ಓದಿದ್ದೆ. ಅದರ ಸಾರಾಂಶ ಹೀಗಿತ್ತು. ಕಥಾನಾಯಕ ( ಆತ ಬೇರಾರೂ ಅಲ್ಲ!) ಪ್ರೀತಿಸಿದ ಹುಡುಗಿ ಇವನು ಬಡವ ಎಂದು ತಿರಸ್ಕರಿಸಿ ಬೇರೆ ಶ್ರೀಮಂತನನ್ನು ಮದುವೆಯಾಗಿ, ಅವನು ತಿಂಗಳೊಪ್ಪತ್ತಿನಲ್ಲಿಯೇ ಸತ್ತು, ಇವನು ಕೂಡ ಅಷ್ಟರಲ್ಲಿ ಶ್ರೀಮಂತನಾಗಿ,  ಆದರ್ಶ ಮೆರೆಯಲು ಆ ವಿಧವೆಯನ್ನೇ ಮದುವೆಯಾಗಿ ಅವಳಿಗೆ ಬಾಳು ಕೊಡುವ ಕಥೆಯದು…. ಪ್ರೊ.ಭಾಗೋಜಿಯವರು, ” ಏಕಪ್ಪಾ  ಅವನನ್ನು  ಕೊಂದೆ? ಸ್ವಾರ್ಥಕ್ಕಾಗಿ ಯಾರನ್ನೂ ಕೊಲ್ಲಬಾರದು. ಪ್ರೀತಿ ಬದುಕಿಸಬೇಕು.ಸಾಹಿತ್ಯ ಒಳಿತನ್ನು ಮಾಡಬೇಕು.ಸೇಡು-ಕೇಡು ಬಯಸಬಾರದು… ಒಂದೇ ತಿಂಗಳಲ್ಲಿ ಶ್ರೀಮಂತನಾಗುವ ವಿದ್ಯೆ ತಿಳಿದಿದ್ದರೆ ಮೊದಲೇ ಆಗಿ ಈ ದುರಂತ ತಪ್ಪಿಸಬಹುದಿತ್ತು. ಸಾಹಿತ್ಯಕ್ಕೆ ಆ ಉದ್ದೇಶವೂ ಇರಬೇಕು….” ಎಂದು ಗಂಭೀರವಾಗಿ ಮುಗುಳ್ನಕ್ಕರು.
              ಕಡೆಗೆ,ಎರಡೂ ಕಲಾಕೃತಿಗಳನ್ನು ಮರಳಿಸುತ್ತ,  ” ಏನನ್ನಾದರು ಬರೆಯುವ ಮೊದಲು ಬಹಳ…ಬಹಳ ಓದಬೇಕು. ಮನನ ಮಾಡಿಕೋಬೇಕು.  ನಾವು ಬರೆಯುವ ಸಾಹಿತ್ಯದಿಂದ ಈಗಿರುವ ಸಾಹಿತ್ಯದ ಸರಾಸರಿ ಗುಣಮಟ್ಟ ಏರಬೇಕು.ಕನಿಷ್ಠ, ಕೆಳಗಾದರು ಬಾರದಂತೆ ನೋಡಿಕೊಳ್ಳಬೇಕು. ಈ ಆತ್ಮಶಕ್ತಿ ಬಂದ ಮೇಲೆ ಬರೆಯುವ ಧೈರ್ಯ ಮಾಡಬೇಕು ಎಂದು ಹೇಳಿ ಬೇಂದ್ರೆ, ಕುವೆಂಪು, ಬೆಟಗೇರಿ, ಪುತಿನ, ಶಿವರುದ್ರಪ್ಪ, ಅಡಿಗ,  ಕೆ ಎಸ್ ನ ಅಲ್ಲದೆ ಅನೇಕ ಹಳಬ, ಹೊಸಬರ ಕವನ ಸಂಕಲನಗಳನ್ನು ಕೊಟ್ಟರು. ಜೊತೆಗೆ ಮಾಸ್ತಿ, ಕಾರಂತ, ಚಿತ್ತಾಲ, ಅನಂತಮೂರ್ತಿ,ಲಂಕೇಶ, ಬೈರಪ್ಪ, ಕಟ್ಟೀಮನಿ, ಮುಂತಾದವರ ಪುಸ್ತಕಗಳನ್ನೂ ದೊಡ್ಡ ಚೀಲದಲ್ಲಿ ಹಾಕಿ  ಹೊರಿಸಿ ಕಳಿಸಿದರು. ಇವುಗಳನ್ನು ಓದಿ ತಂದು ಕೊಟ್ಟ ಮೇಲೆ ಇನ್ನಷ್ಟು ಕೊಡುವೆ ಎಂದು ಹೇಳಿ,ಗೇಟಿನವರೆಗೆ ಬಂದು ಬೀಳ್ಕೊಟ್ಟರು.ಅವಮಾನ ಎನಿಸುತ್ತಿತ್ತು. ದಿಗ್ಭ್ರಮೆಯ ಗುಂಗಿನಲ್ಲಿ ಹೊರಬಂದೆವು. ನಾನು ಹಾಸ್ಟೆಲ್ ಕಡೆಗೆ ಸಾಗಿದೆ. ಗೆಳೆಯ ಎಲ್ಲಾ ಪುಸ್ತಕ ನನಗೆ ಹೊರಿಸಿ ದಾರಿಯಲ್ಲಿ ಸಿಕ್ಕ ಓದು ವಿರೋಧಿ ಶಂಚಂಬಂ ಕೋಣೆಯತ್ತ ನಡೆದ. ಕೋಣೆಗೆ ಬಂದು  ಕವಿತೆಗಳಲ್ಲಿ ಕಾಣಸಿಗುವುದೆಂದು ಭಾಗೋಜಿಯವರು ಆಗಾಗ ಹೇಳುತ್ತಿದ್ದ “ದರ್ಶನ”  ಏನಾದರು ನನ್ನ ಕವಿತೆಗಳಲ್ಲಿದೆಯೇ ಎಂದು ಹುಡುಕಿದೆ. ಅದೇ ನನ್ನ ಕವನಗಳ ಅಂತಿಮ ದರ್ಶನವಾಯ್ತು. ಅವುಗಳಿಗೆ ಯೋಗ್ಯವಾದ ಅಂತಿಮ ಕ್ರಿಯೆಗಳನ್ನೂ ಕೂಡ ಮಾಡಿ ಮುಗಿಸಿದೆ…
          ಮುಂದೆ ಒಂದು  ತಿಂಗಳು ಭಾಗೋಜಿ ಮೈಯಲ್ಲಿ ಹೊಕ್ಕರು. ಅಲ್ಲಿದ್ದ ಮಹಾನ್ ಲೇಖಕರನ್ನು ಎಡಬಿಡದೆ ಓದಿದೆ.ಕಾಣದ ಅನುಭವ, ವಿಭಿನ್ನ ಲೋಕಗಳ ವಿಶಾಲ ದರ್ಶನಗಳಾದವು…  ಓದಿನ ಆನಂದ ಮತ್ತು ಬರೆಯಲು ಹೊರಟಿದ್ದ ನೆನಪಿನ ವಿಷಾದ ಮತ್ತು ಮರಳಿ ಸರಿ ದಾರಿಗೆ ಬಂದ ಸಂಭ್ರಮಗಳು ಸಂಗಮಿಸಿದವು. ಓದುತ್ತ ಹೋದಂತೆ ಬರೆಯುವ ಧೈರ್ಯ ಧೈರ್ಯ ತಂತಾನೆ ಹೊರಟು ಹೋಯಿತು. ಶಂಚಂಬಂ ಬಗ್ಗೆ ಜಿಗುಪ್ಸೆ ಹುಟ್ಟಿತು. ಆತನ ಗರಡಿ ಸೇರಿದ ಗೆಳೆಯನ ಬಗ್ಗೆ ಕರುಣೆ ಉಕ್ಕುತ್ತಿತ್ತು. ಬರೆಯಲು ಧೈರ್ಯ ಬರಿಸಬಲ್ಲ ಆರು ಮೂರರ ನಡುವಿನ ಮಧ್ಯಮದವರೇನೊ ಇದ್ದರು. ಆದರೆ ಅವರ ಬಸ್ಸಿನಲ್ಲಿ ಜಾಗವಿರಲಿಲ್ಲ. ದೊಡ್ಡ ಕ್ಯೂ ಇತ್ತು. ಆ ಗುಂಪಿನಲ್ಲಿ ಗೋವಿಂದ ಎನಿಸಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ.
       ಶ್ರೇಷ್ಠತೆಯ ವ್ಯಸನದ ಚರ್ಚೆ ಆಗ ಜೋರಾಗಿತ್ತು. ಎಲ್ಲರು ಭಿಮಸೇನ ಜೋಶಿ ಆಗಲಾದೀತೇ ಎಂದು ಕೆಲವರು ಕೂಗಿ ಕೂಗಿ ಕೇಳುತ್ತಿದ್ದರು. ಕನಿಷ್ಠ ಶ್ರುತಿ,ಲಯಗಳನ್ನಾದರು ಕಲಿತು ಬಂದು ಹಾಡಿರಪ್ಪ ಎಂದು ಒಂದಿಷ್ಟು ಜನ  ಕ್ಷೀಣ ದನಿಯಲ್ಲಿ ಹೇಳುತ್ತಿದ್ದರು. ಸಾಹಿತಿಗಳ ಬದುಕು-ಬರೆಹಗಳ ನಡುವಿನ ಅಂತರದ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿತ್ತು.ಇದರಲ್ಲಿ ಬರೆಯದವರು, ಸರಿಯಾಗಿ ಬದುಕದವರು  ಸಕ್ರಿಯವಾಗಿ ಭಾಗವಹಿಸುತ್ತಿದ್ದರು! ಬರೆಯುವ ಸಂದರ್ಭ ಬಿಟ್ಟರೆ ನಾವೂ ಕೇವಲ ಮನುಷ್ಯರು ಎಂದು ಕೆಲವು ಸಾಹಿತಿಗಳೇ ಡಂಗುರ ಹೊಡೆದುಕೊಂಡಿದ್ದರು. ಇವರನ್ನು ಜಗುಲಿಯ ಮೇಲಿಟ್ಟವರಿಗೆ ಒಂದಿಷ್ಟು ಆಘಾತ ಕೂಡ ಆಗುತ್ತಿತ್ತು. ಜಾತಿ,ಧರ್ಮ,ಪ್ರಾದೇಶಿಕತೆ, ಇಜಮ್ಮುಗಳ ಜೊತೆಗೆ  ರಾಜಕೀಯ ಪಕ್ಷಗಳ ಜೊತೆಗಿನ ಸಾಹಿತಿಗಳ ಸಂಲಗ್ನತೆಯ ಮಾತೂ ಬರುತ್ತಿತ್ತು. ಪ್ರಶಸ್ತಿ ಘೋಷಣೆಯ ಸಂದರ್ಭವಂತೂ ಕಂಬಳದ ಕ್ರೀಡೆಯಾಗಿ ಕೆಸರಿನ ಓಟದಲ್ಲಿ ಎಲ್ಲರೂ ಭಾಗಿಯಾಗಿ ಯಾರ ಗುರುತೂ ಹತ್ತದಂತಾಗಿತ್ತು. ಇದು ಇಂದೂ ಇದೆ, ಮುಂದೂ ಇರುತ್ತದೆ…
   ಮನೆಯ ಅನ್ನ ಉಂಡು,ಹಗಲು ರಾತ್ರಿ ಎನ್ನದೆ ಬರೆದು ಜನರಿಂದ ಏನನ್ನಾದರು ಏಕೆ ಅನ್ನಿಸಿಕೊಳ್ಳ ಬೇಕೆಂದು ಸಾಹಿತಿಗಳ ಹೆಂಡಿರು ಗಂಡಂದಿರ ಕಾಳಜಿ ಮಾಡುತ್ತಿದ್ದರು.ನನಗೂ ಹಾಗೇ ಅನಿಸುತ್ತಿತ್ತು. ಒಂದು ಒಳ್ಳೆಯದನ್ನು ಬರೆಯಲು ಕೆಲವು ಸಾರಿ ವರ್ಷಗಟ್ಟಲೆ ಕಷ್ಟ ಪಡಬೇಕು.ಅಷ್ಟಾದರು ಅದು ವಿಮರ್ಶಕರ ಬಾಯಿ ಸೇರಿ ಜೀರ್ಣವಾಗಿ ಹೊರ ಬಂದಾಗ ಯಾವ ರೂಪದಲ್ಲಿರುತ್ತದೊ ಏನೊ! ಮಾಡಿಟ್ಟ ಹಲವು ಪಕ್ವಾನ್ನಗಳಲ್ಲಿ ನಮಗೆ ಬೇಕಾದ್ದನ್ನು ಬೇಕಾದಷ್ಟು ಬಡಿಸಿಕೊಂಡು ತಿನ್ನುವ ಅನುಕೂಲ ಇರುವಾಗ ನಾವೇ ಏಕೆ ಕಣ್ಣೀರು ಸುರಿಸುತ್ತ ಒಲೆ ಊದಬೇಕು? ಅನಂತ ಮೂರ್ತಿ,ಭೈರಪ್ಪನವರ ಹಾಗೆ ಎಡ ಬಲ ಅಂತ ಬರೆದುಕೊಂಡು ದೂರ ದೂರ ಇರುವುದಕ್ಕಿಂತ, ಅವರಿಬ್ಬರ ಪುಸ್ತಕಗಳನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಇದರಲ್ಲಿ ಇದು ಸರಿಯಿದೆ,ಇದರಲ್ಲಿ ಇದು ಸರಿಯಿಲ್ಲ ಎಂದು ಹೇಳುತ್ತ, ಸರಿ ಇರುವುದನ್ನು ಒಪ್ಪಿಕೊಂಡು, ಇರದ್ದನ್ನು ಬಿಟ್ಟುಕೊಟ್ಟು ಎಡಕೋಣೆ, ಬಲಕೋಣೆ, ನಡುಮನೆ, ಎಲ್ಲಿ ಬೇಕಲ್ಲಿ ಕುಳಿತು ಓದಿದರೆ ಸಾಕಲ್ಲವೇ? ಒಳ್ಳೆಯ ಹಾಡುಗಾರರ ನಡುವೆ ಹೋಗಿ ಸಾಮಾನ್ಯ ದನಿಯವರು ಹಾಡಲು ಯತ್ನಿಸದೆ ಕುಳಿತು ಕೇಳುವುದು ಕೂಡ ಒಳ್ಳೆಯ ಗುಣವೇ. ಒಳ್ಳೆಯ ಓದುಗನಾಗುವುದು, ಸಂಗೀತದ ಒಳ್ಳೆಯ ಕೇಳುಗನಾಗುವುದು,ನಾಟಕದ ಒಳ್ಳೆಯ ನೋಡುಗನಾಗುವುದು ಕಡಿಮೆಯ ಸಾಧನೆಯಲ್ಲ. ಎಲ್ಲರು ಹೊರುವವರೇ ಆದರೆ ಪಲ್ಲಕ್ಕಿಯಲ್ಲಿ ಕೂಡ್ರುವವರಾರು?
ಬರೆಯದೆ ಇರಲು ಇನ್ನೂ ಕಾರಣ ಹುಡುಕಬಹುದು.  ವರ್ಷಕ್ಕೆ ಹತ್ತು ಸಾವಿರದಷ್ಡು ಕನ್ನಡ ಪುಸ್ತಕಗಳು ಬರುತ್ತವೆ. ಲಕ್ಷಾಂತರ ಖರ್ಚಿನ  ಕೆಲವು ಸಾಹಿತ್ಯ ಸಂಕಿರಣಗಳಲ್ಲಿ ವೇದಿಕೆಯ ಮೇಲೆ ಹನ್ನೆರಡು ಜನ ಸಾಹಿತಿಗಳು ಇದ್ದರೆ  ಒಂಭತ್ತು ಜನ  ಸಭಿಕರಿರುತ್ತಾರೆ. ಕನ್ನಡ ಮಾಧ್ಯಮದ ಅವನತಿಯ ಅನಂತರ ಸಭಿಕರನ್ನು ಎಲ್ಲಿಂದ ಕರೆ ತರುವುದು? ಈ ಅನುಪಾತ ಸರಿದೂಗಿಸಲು  ಸಾಹಿತಿಗಳ ಸಂಖ್ಯೆಯನ್ನೇ ಕಡಿಮೆ ಮಾಡಬೇಕು ಎಂಬುದು ನನ್ನ ಅಭಿಮತ.  ಒಂದೇ ಒಂದು ಪುಸ್ತಕ ಬರೆದವ ಕೂಡ ಸಾಮಾನ್ಯ ಸಭಿಕನಾಗಿ  ಬರಲು ತಯಾರಾಗದಿರುವಾಗ ನಾನು, ನನ್ನಂಥವರು ಇನ್ನಷ್ಟು ಬರೆಯುತ್ತ ಕೂಡ್ರಬೇಕೇ? “ಸಾಹಿತಿಯ ಸತ್ವ ಮೊದಲೆರಡು ಮೂರು ಪುಸ್ತಕಗಳಲ್ಲಿ ಮಾತ್ರ ಇರುತ್ತದೆ, ಮುಂದಿನವು ಕೇವಲ ಅಭ್ಯಾಸ ಬಲದಿಂದ ಹುಟ್ಟುತ್ತವೆ”, ಎಂಬ ಅರ್ಧದಷ್ಟಾದರು ಸತ್ಯ ಹೇಳುವ ಮಾತಿದೆ. ಅಗತ್ಯವಿರುವ ಸಾಹಿತಿಗಳು ಗುಣಮಟ್ಟದ ಸಾಹಿತ್ಯದ ಉಳಿವಿಗಾಗಿ  ಇದನ್ನು ಗಮನಿಸಬೇಕು. ಆತ್ಮ ಹೇಳಿದಂತೆ ಕೇಳುವುದಾದರೆ ಬರೆಯುವುದಕ್ಕೆ ಬೇಕಾಗುವ ಪ್ರೇರಣೆಗಳಿಗಿಂತ ಬರೆಯದಿರುವುದಕ್ಕೆ ಇರುವ ಪ್ರೇರಣೆಗಳೇ ಹೆಚ್ಚು!
ಕೊನೆಯದಾಗಿ, ಬರೆದೇ ಹೇಳಬೇಕಾದ ಅನಿವಾರ್ಯದ ನಡುವೆ ಇನ್ನೂ ಒಂದು ಗುಟ್ಟಿನ ಸಂಗತಿ ಹೇಳಿ ಬಿಡುವೆ.
ಪ್ರೊ.ಭಾಗೋಜಿಯವರ ಆರೋಗ್ಯ ಕ್ಷೀಣಿಸಿದಾಗ ನಾನು ಭೆಟ್ಟಿಯಾಗಿದ್ದೆ.ಅಂಥದರಲ್ಲೂ  ”ಏನು ಬರೆದೆ?” ಎಂದು ಕೇಳಿದರು. ನಾನು ನಗುತ್ತ ” ಏನೂ ಇಲ್ಲ.ನೀವೇ ಬರೆಯ ಬೇಡ ಎಂದಿದ್ದಿರಿ..?” ಎಂದೆ. ನಾನು “ಚನ್ನಾಗಿ ಓದು. ಆಮೇಲೆ ಬರೆ.ಕವನ ಮಾತ್ರ ಬೇಡ ಎಂದಿದ್ದೆ” ಎಂದವರೆ  “ನಿನ್ನಲ್ಲಿ ಚೆಂದದ ಅತಿಶಯೋಕ್ತಿಯಿದೆ. ಹೇಳುವ ಸುಳ್ಳಿಗೆ ಕೂಡ ಒಂದು ಘಮವಿದೆ. ನಪಾಸಾದರು ನಗುವ ತಾಕತ್ತಿದೆ. ಪ್ರೊಮೊಶನ್ ಇಲ್ಲದಿದ್ದರೂ ಬೇಜಾರು ಮಾಡಿಕೊಳ್ಳುವುದಿಲ್ಲ. ಮತ್ತೆ, ಅಂಥ ಹೆಂಡತಿಯಿದ್ದಾಗಲೂ ಲವಲವಿಕೆಯಿಂದ ಓಡಾಡಿಕೊಂಡಿದ್ದಿ…. ಹೀಗಾಗಿ ನೀನು ಬೇಕಾದರೆ ಲಲಿತ ಪ್ರಬಂಧ ಬರಕೊಂಡಿರಬಹುದು” ಎಂದರು. ಒಂದು ರೀತಿಯ ಉಃಶಾಪ ಇದು. ಎಂದಾದರು  ಅಗತ್ಯ ಎನಿಸಿದರೆ ಉಪಯೋಗಿಸಿಕೊಳ್ಳಬಹುದು.ಆದರೆ ಅದು ತೀರ, ತೀರ ಅಗತ್ಯ ಎನಿಸಿದಾಗ ಮಾತ್ರ ಎಂಬ ಎಚ್ಚರಿಕೆ ನನ್ನಲ್ಲಿ ಚಿರಕಾಲ ಉಳಿಯಬೇಕು.ಅದೊಂದೇ ನನ್ನ ಪ್ರಾರ್ಥನೆ!


 

Leave a Reply

Back To Top