ಲೇಖನ ಸಂಗಾತಿ
ಡಾ.ಯಲ್ಲಮ್ಮ
ಅವರಿವರನ್ನು ಓದಿ
ಅವರಂತಾ
ನನ್ನ ಉಪನ್ಯಾಸ ವೃತ್ತಿಯಲ್ಲಿ ಜೊತೆಯಾದ ಸಾಹಿತ್ಯಾಸಕ್ತಿಯುಳ್ಳ ಉದ್ಯೋಗಿ ಮಿತ್ರರು ಹಾಗೂ ಯುವ ವಿದ್ಯಾರ್ಥಿ ಮಿತ್ರರು ವಿರಾಮದ ವೇಳೆಯಲ್ಲಿ ನನ್ನೊಂದಿಗೆ ಚರ್ಚಿಸುವ ಸಂದರ್ಭದಿ ಮೇಡಂ ನನಗೆ ಸಾಹಿತ್ಯದ ಮೇಲೆ ಒಲವಿದೆ, ನಾನೂ ಕಥೆ, ಕವನ, ಲೇಖನ ಅದು-ಇದು ಅಂತ ಏನೇನೋ ಗೀಚುತ್ತಾ ಇರುತ್ತೇನೆ, ನಾನು ನನ್ನನ್ನು ಸಂಪೂರ್ಣವಾಗಿ ಸಾಹಿತ್ಯಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದಿದ್ದೇನೆ, ನೀವು ಈ ಬಗ್ಗೆ ಸಲಹೆ ನೀಡಿ ಎಂದು ಆಗಾಗ್ಗೆ ಕೇಳುತ್ತಿರುತ್ತಾರೆ. ಇವರುಗಳಿಗೆ ಸಲಹೆ ನೀಡುವಷ್ಟು ಪ್ರಬುದ್ಧಳಾ ನಾನು..? ಎಂಬುದೇ ನನ್ನನ್ನು ತುಂಬಾ ಯೋಚನೆಗೀಡುಮಾಡಿಬಿಡುತ್ತದೆ. ಮೊದಮೊದಲಲ್ಲಿ ಇದೇ ನನಗೆ ಎದುರಾದಾಗ ಗುರುಪರಂಪರೆಯಲ್ಲಿ ಹಿರಿಯರೆ ನಿಸಿಕೊಂಡವರಲ್ಲಿ ಕೇಳಿದಾಗ ಬಂದ ಸಿದ್ಧಮಾದರಿಯ ಉತ್ತರ : ನೀನು ಪಂಪ, ರನ್ನ, ಜನ್ನ, ಪೊನ್ನ ಮೊದಲಾದ ಪ್ರಾಚೀನ ಕವಿಗಳನ್ನು, ಕುವೆಂಪು, ಬೇಂದ್ರೆ, ಮಾಸ್ತಿಯಂತಹ ಕಾದಂಬರಿಕಾರರನ್ನು, ಕಿ.ರಂ.ನಾಗರಾಜ, ಡಿ.ಆರ್.ನಾಗರಾಜ, ಗಿರಡ್ಡಿ ಗೋವಿಂದರಾಜ್ ರಂತವರ ವಿಮರ್ಶೆಗಳನ್ನು ಚೆನ್ನಾಗಿ ಓದಿಕೊಳ್ಳಿ, ತದನಂತರದಲ್ಲಿ ಬರೆಯುವಿರಂತೆ ಎಂದು ಉಚಿತ ಸಲಹೆಯನ್ನಿತ್ತಿದ್ದರು, ಆಯಾ ಕಾಲಘಟ್ಟಕ್ಕೆ ಈ ಸಲಹೆ ತೀರಾ ಸಾಮಾನ್ಯವಾಗಿತ್ತು.
ಅದೇ ಪ್ರಶ್ನೆಗೆ ನಾನು ಉತ್ತರಿಸಬೇಕಾದ ಸಂದರ್ಭ ಒದಗಿಬಂದಿರುವಾಗ ಯುವ-ಉದಯೋನ್ಮುಖ ಸಾಹಿತ್ಯ ಮಿತ್ರರಿಗೆ ಹೇಳುವುದಿಷ್ಟೇ..! ನೀವು ನಿಮ್ಮ ಆತ್ಮತೃಪ್ತಿಗಾಗಿ ಓದಿಕೊಳ್ಳುವುದಾದರೆ.., ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಭೈರಪ್ಪನವರ ತಬ್ಬಲಿ ನೀನಾದೆ ಮಗನೆ, ಡಾ.ಎಚ್.ಎಸ್.ಶ್ರೀಮತಿಯವರು ಅನುವಾದಿಸಿರುವ ದಿ ಸೆಕೆಂಡ್ ಸೆಕ್ಸ್ ಯಾವುದಾದರೂ ಆಗಬಹುದು. ನೀವು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಬೇಕೆಂದಿದ್ದರೆ, ಬರೆಯುವ ಯೋಚನೆ – ಯೋಜನೆ ನಿಮ್ಮಲ್ಲಿದ್ದರೆ.., ನೀವು ಯಾರ ಪುಸ್ತಿಕೆಗಳನ್ನೂ ಓದಬೇಡಿ ಎಂಬ ಖಚಿತ ಸಲಹೆಯನ್ನೀಡುವೆ. ಹಿರಿಯ ಕವಿ-ಸಾಹಿತಿಮಹೋದಯರುಗಳ ಕೃತಿಗಳನ್ನು ಓದುವುದರಿಂದ ಅವರ ಅನುಭವಗಳೇ ನಿಮ್ಮ ಅನುಭವಗಳಾಗಿಬಿಡುತ್ತವೆ, ಪ್ರಭಾವ ಮತ್ತು ಪ್ರೇರಣೆಯಿಂದಾಗಿ ಅವರಂತೆ ಬರೆಯುವ – ಶೈಲಿ, ರಚನಾತಂತ್ರ, ಅವರದ್ದೇ ದೃಷ್ಟಿಕೋನದಲ್ಲಿ ಬದುಕನ್ನು ಅರಿಯುವ ಪ್ರಯತ್ನವನ್ನು ಮಾಡುತ್ತೀರಿ, ನಿಮ್ಮ ಬರಹದಲ್ಲಿ ಸಹೃದಯರಿಗೆ ಈ ಮೇಲಿನವರೇ ಕಾಣಿಸಿಕೊಳ್ಳುತ್ತಾರೆ, ನಿಮ್ಮ ಬರಹದಲ್ಲಿ ನೀವೇ ಇಲ್ಲವಾಗಿಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಶೂನ್ಯತಾ ಭಾವದಲ್ಲಿ ನಿಮ್ಮ ಬದುಕು-ಬವಣೆ ನಿಮಗೆ ನೀಡಿದ ಸಿಹಿ-ಕಹಿ ಅನುಭವಗಳ ಕುರಿತಾಗಿ ಬರೆಯಿರಿ, ಸುಮ್ಮನೆ ಬರೆಯಿರಿ, ಸುಖಾಸುಮ್ಮನೆ ಬರೆಯಿರಿ, ಅದು ಗದ್ಯ ಪ್ರಕಾರವಾ..? ಪದ್ಯಪ್ರಕಾರವಾ..? ಪ್ರಾಸಗಳ ಬಗ್ಗೆ ತ್ರಾಸು ತೆಗೆದುಕೊಳ್ಳದೆ, ಹರಿಹರನು ರಳ ಕುಳ ಕ್ಷಳಗಳನ್ನು ತೊರೆದು ರಗಳೆ ಹುಟ್ಟುಹಾಕಿದಂತೆ, ಪ್ರಾಸಗಳನ್ನು ತೊಡೆದು ಕವಿತೆ ರಚಿಸಿದ ಮಂಜೇಶ್ವರ ಗೋವಿಂದ ಪೈರವರಂತೆ, ಅಂಕಣ ಬರಹಕ್ಕೆ ಬೆಲೆತಂದಿತ್ತ ಹಾರೋಗದ್ದೆ ಮಾನಪ್ಪ ನಾಯಕರಂತೆ ನೀವು ನಿಮ್ಮದೇ ಆದ ಶೈಲಿಯಲ್ಲಿ ಒಳಮನಸ್ಸಿನ ಬೇಗುದಿಯನ್ನು ಹೊರಹಾಕಿ ಹಗುರಾಗಿರಿ ಅಷ್ಟೇ..! ಮುಂದಿನದು ಸಹೃದಯರಿಗೆ ಬಿಟ್ಟುಬಿಡಿ, ಹೊಟ್ಟೆಹೊರೆದು ಬರೆದದ್ದನ್ನು ಮರೆತುಬಿಡಿ, ಆಗ ವಿಮರ್ಶಕರು ತರ್ಕಿಸಿ ನಿಮ್ಮನ್ನು ಎಡ-ಬಲ, ನವ್ಯ, ನವೋದಯ, ಪ್ರಗತಿಶೀಲ, ದಲಿತ ಬಂಡಾಯ, ಸ್ತಿçÃವಾದಿ ನೆಲೆಯ ಪೂರ್ವಗಣ್ಣಿನಲ್ಲಿ ಅಳೆದುತೂಗಿ ಯಾವುದಾದರೂ ಒಂದು ಹಣೆಪಟ್ಟಿಯನ್ನು ಕಟ್ಟಿಬಿಡುತ್ತಾರೆ. ಬದಲಾಗಿ ಯಾವುದೇ ಹಣೆಪಟ್ಟಿಯನ್ನು ನೀವಾಗಿಯೇ ಕಟ್ಟಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಬೇಡಿ. ಆಗ ಸಾಹಿತ್ಯಲೋಕದಲ್ಲಿ ನೀವೊಂದು ವಿಕ್ರಮವನ್ನೇ ಸಾಧಿಸಿ ಬಿಟ್ಟಿರುತ್ತೀರಿ. ಆಗ ಯಶಸ್ಸು, ಕೀರ್ತಿ ನಿಮ್ಮನ್ನರಸಿಕೊಂಡು ಬರುತ್ತದೆ. ಆ ಹಾದಿಯಲ್ಲಿ ಪಯಣಿಸುವವರಿಗೆ ನೀವೊಂದು ಮೈಲುಗಲ್ಲಾಗಿ ನಿಲ್ಲಬಹುದು..!
ಇತ್ತೀಚೆಗೆ ನಾನು ನನ್ನ ಗೆಳತಿಯೊಬ್ಬಳ ಮದುವೆ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿಗೆ ಆರ್ಕೆಸ್ಟಾç ತಂಡವೊAದನ್ನು ಕರೆತಂದಿದ್ದರು, ಆ ತಂಡದ ಸದಸ್ಯನೋರ್ವನು ಫೇಸ್ ಬುಕ್ ನಲ್ಲಿ ಪರಿಚಿತ ವ್ಯಕ್ತಿ, ಹವ್ಯಾಸಿ ಗಾಯಕನು ನನ್ನ ಗುರುತು ಹಿಡಿದು ಮಾತನಾಡಿಸಿ ನಾನೂ ಹಾಡುವ ಎರಡ್ಮೂರು ಹಾಡುಗಳನ್ನು ನೀವು ಕೇಳಿಯೇ ಹೋಗಬೇಕೆಂಬ ಹಕ್ಕೊತ್ತಾಯ ಮಂಡಿಸಿದ, ಸುಮ್ಮನೆ ಅವರಿಗೆ ಬೇಸರಿಸಬಾರದೆಂದು ಕೇಳುತ್ತಾ ಕೂತೆ. ಎಸ್.ಪಿ.ಬಿ, ಡಾ.ರಾಜಕುಮಾರ, ಪಿ.ಬಿ.ಶ್ರೀನಿವಾಸರಂತೆಯೇ ಹಾಡಿದ ನಿಜಕ್ಕೂ ಅದ್ಭುತ ಗಾಯನವೇ ಸರಿ. ಹಾಡು ಮುಗಿಸಿ ವೇದಿಕೆ ಇಳಿದು ಬಂದವನೆ ಹಾಡಿದ್ದು ಹೇಗಿತ್ತು ಮೇಡಂ ಅಂತ ಕೇಳ್ದ..? ನನಗೆ ಸಂಗೀತದ ಜ್ಞಾನ ಅಷ್ಟಾಗಿ ಇಲ್ಲವಾದ್ದರಿಂದ ಚೆನ್ನಾಗಿತ್ತು ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತೆ. ಮತ್ತೆ ಅವರು ನಾಲ್ಕಾರು ದಿನಗಳೆದಂತೆ ವ್ಯಾಟ್ಸ್ ಆಪ್ ನಲ್ಲಿ ಚಾಟ್ಗೆ ಸಿಕ್ಕು ಮತ್ತದೇ ಪ್ರಶ್ನೆ ಕೇಳ್ದ.., ನಾನು ಹಾಡಿದ್ದು ನಿಮಗೆ ಹೇಗನಿಸ್ತು ಮೇಡಂ..? ನಾನೂ ನೇರವಾಗಿ ಹೇಳಿದರೆ ಏನೂ ಅಂದುಕೊಳ್ಳಲ್ಲ ಅಂದರೆ ಒಂದು ಮಾತು ಹೇಳ್ತೀನಿ ವೃತಾ ನನ್ಮೇಲೆ ಕೋಪಿಸಿಕೊಳ್ಳಬಾರದು ಎಂದೆ, ಇಲ್ಲ ಮೇಡಂ ಹೇಳಿ ಅಂದ.., ನಾನು ನಿಮ್ಮ ಹಾಡನ್ನು ಕೇಳಲು ಕಾತರಸಿಕುಳಿತಿದ್ದೆ ನೀವು ಹಾಡಲೇ ಇಲ್ಲವಲ್ಲ ಎಂದೆ ; ಅವರು ಅವಾಕ್ಕಾಗಿ ನನ್ನನ್ನೇ ನೋಡುತ್ತಾ ಏನ್ ಮೇಡಂ ಹೀಗಂತೀರಿ..? ಮತ್ತೆ ಅಲ್ಲಿ ಎಸ್.ಪಿ.ಬಿ, ಡಾ.ರಾಜಕುಮಾರ, ಪಿ.ಬಿ.ಶ್ರೀನಿವಾಸರ ಹಾಡನ್ನು ಕೇಳಿದೆ ನೀವು ಹಾಡಲಿಲ್ಲ, ಅವರಂತೆ ಅನುಕರಿಸಿದರಿ, ನಿಜಕ್ಕೂ ಅವರನ್ನು ಮೀರಿಸುವಂತೆ ನೀವು ಹಾಡು ಹಾಡಿದಿರಿ ವಿಷಯ ಅದಲ್ಲ, ನೀವು ನಿಮ್ಮಂತೆ ಹಾಡಲಿಲ್ಲವಲ್ಲ ಎಂದೆ..! ಅವರುಗಳ ಹಾಡುಗಳನ್ನು ಕೇಳಬೇಕೆಂದಿದ್ದರೆ ಬಿಗ್ ಎಫ್ ಎಮ್ ೯೮.೩ ಮಿರ್ಚಿ ಮಸಾಲದಲ್ಲಿ, ಯೂ-ಟ್ಯೂಬ್ ನಲ್ಲಿ ಕೇಳುತ್ತಿದ್ದೆ ತಾನೇ..? ನಾನು ನಿಮ್ಮ ಹಾಡನ್ನು ಕೇಳಬಯಸಿದ್ದೆ ಎನ್ನುವುದರೊಳಗೆ ಅವರು ಸಾರಿ ಮೇಡಂ ನಮ್ಮ ಮುಂದಿನ ಭೇಟಿ ಎನ್ನುವಷ್ಟರಲ್ಲಿ ನಾನು ನನ್ನಂತೆ ಹಾಡುವುದನ್ನು ರೂಢಿಸಿಕೊಳ್ಳುತ್ತೇನೆ ಎಂಬ ಭರವಸೆಯನ್ನಿತ್ತನು.
ಅಂಕಣದ ಕೊನೆಯಲ್ಲಿ : ಅವರಿವರು ಬರೆದುದ್ದದನ್ನೇ ಓದಿ ಓದಿ, ಹಾಡಿದುದ್ದದನ್ನೇ ಹಾಡಿ, ಹಾಡಿ ಅವರಂತಾಗಬೇಡಿ, ನೀವು ನಿಮ್ಮಂತೆಯೇ ಇರಿ, ನಿಮ್ಮಂತೆಯೇ ಹಾಡಿ – ಇದನ್ನೇ ಬಸವಣ್ಣ ಹೇಳಿದ್ದು ಆನು ಒಲಿದಂತೆ ಹಾಡುವೆ.
-ಡಾ.ಯಲ್ಲಮ್ಮ ಕೆ
One thought on “ಅವರಿವರನ್ನು ಓದಿ ಅವರಂತಾಗದಿರಿ..! ಡಾ.ಯಲ್ಲಮ್ಮ ಅವರ ಲೇಖನ”