ಕಾವ್ಯ ಸಂಗಾತಿ
ಮಾಲಾ ಹೆಗಡೆ
‘ಕಾಲದ ಕೈಗೊಂಬೆ ನಾವು’
ನಿನ್ನ ಕಪಿಮುಷ್ಟಿಯಲಿ ನಾ
ಬಂಧಿಯಾಗಿರುವೆ,
ಹಿಡಿಯಲಾಗದು ನಿನ್ನ ಓಡೋ
ಕುದುರೆಯಂತಿರುವೆ.
ಆಗೊಮ್ಮೆ ಅಳುವಿನoಗಿಯ
ತೊಡಿಸಿ ನೋಡುವೆ,
ಈಗೊಮ್ಮೆ ನಗುವಿನ
ನಗವನ್ನೇ ಕೊಡಿಸುವೆ.
ಸಂತಸದಲಿ ಸೊಕ್ಕಿದೆಡೆ
ಸೋಲತಂದೀಯುವೆ,
ಸಂಕಷ್ಟದ ಸೊರಗುವಿಕೆಗೆ
ಸಾಂತ್ವನವ ಬರಮಾಡುವೆ.
ಹರ್ಷದಲಿ ನೀನೇಕೋ
ಬಲುಬೇಗ ಚಲಿಸುವೆ,
ಯಾತನೆಯಲಿ ಮಂದ ನಡಿಗೆಯಂತೆ ಭಾಸವಾಗುವೆ.
ನಿತ್ಯ ಹೊಸತು ಪಾಠವ
ಕಲಿಸುತ್ತಲಿರೋ ಕಾಲವೇ,
ನಿನ್ನೇಟಿಗೆ ಜಗ್ಗದೇ
ಮುನ್ನುಗ್ಗುಬೇಕು ಬಿಟ್ಟೆಲ್ಲ ಗೊಡವೆ.
ಎಲ್ಲರನು ಕೈಗೊಂಬೆಯಾಗಿಸಿ
ಕುಣಿಸುವುದು ತರವೇ.?
ನಿನ್ನಾಟದ ದಾಳವಾಗಿ ದಿನ
ಉರುಳುವುದು ಅನಿವಾರ್ಯವೇ??
ಮಾಲಾ ಹೆಗಡೆ.